Prakash Hegde Column: ಕತ್ತೆ, ಕತ್ತೆಯೆಂದು ಮೂದಲಿಸದಿರಿ
ಹೆಣ್ಣು ಕತ್ತೆ ದುಡಿಮೆಯೊಂದಿಗೆ ಸುಮಾರು ಎರಡು ವರ್ಷವಾದಾಗ ಸಂತಾನೋತ್ಪತ್ತಿಗೆ ಸಿದ್ಧವಾಗಿ ತನ್ನ 25 ವರ್ಷದವರೆಗೂ ಈ ಸಂತಾನ ಕ್ರಿಯೆಗೆ ಸ್ಪಂದಿಸುತ್ತದೆ. ದಡ್ಡ, ಸೋಮಾರಿ ಹಾಗೂ ಕನಿಷ್ಟ ಪ್ರಾಣಿ ಯೆಂದು ಕತ್ತೆಯೆಂದರೆ ಒಂದು ರೀತಿಯ ತಾತ್ಸಾರ ಭಾವನೆ ಸ್ವಾಭಾವಿಕವಾಗಿ ನಮ್ಮಲ್ಲಿ ಮನೆ ಯೂರಿದೆ. ಈ ಮನೋಭಾವನೆಗೆ ವಿರುದ್ಧವೆಂಬಂತೆ ಕತ್ತೆಯ ಹಾಲಿನ ಪೌಷ್ಟಿಕ ಮತ್ತು ಚಿಕಿತ್ಸಕ ಗುಣಲಕ್ಷಣಗಳು ಇತ್ತೀಜೆಗೆ ಎಲ್ಲ ಅರೋಗ್ಯಾಕಾಂಕ್ಷಿಗಳ ಗಮನ ಸೆಳೆಯುತ್ತಿದೆ
![NRCE J](https://cdn-vishwavani-prod.hindverse.com/media/images/NRCE_J.max-1280x720.jpg)
![Profile](https://vishwavani.news/static/img/user.5c7ca8245eec.png)
ಅಭಿಮತ
ಪ್ರಕಾಶ ಹೆಗಡೆ
ನಮಗೆ ತಿಳಿದಂತೆ ಕತ್ತೆಗಳನ್ನು ಸಾರಿಗೆ ಮತ್ತು ಕೃಷಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶತಮಾನ ಗಳಿಂದ ಬಳಸಿಕೊಳ್ಳಲಾಗುತ್ತಿದೆ. ಸುಮಾರು ಐವತ್ತು ವರ್ಷ ಜೀವಿಸುವ ಕತ್ತೆ, ತನ್ನ ಜೀವಿತಾವಧಿಯ 90 ಪ್ರತಿಶತ ಅವಧಿಯಲ್ಲಿ ದುಡಿಯುತ್ತಲೇ ಕಳೆಯುತ್ತದೆ. ಹೆಣ್ಣು ಕತ್ತೆ ದುಡಿಮೆಯೊಂದಿಗೆ ಸುಮಾರು ಎರಡು ವರ್ಷವಾದಾಗ ಸಂತಾನೋತ್ಪತ್ತಿಗೆ ಸಿದ್ಧವಾಗಿ ತನ್ನ 25 ವರ್ಷದವರೆಗೂ ಈ ಸಂತಾನ ಕ್ರಿಯೆಗೆ ಸ್ಪಂದಿಸುತ್ತದೆ. ದಡ್ಡ, ಸೋಮಾರಿ ಹಾಗೂ ಕನಿಷ್ಟ ಪ್ರಾಣಿಯೆಂದು ಕತ್ತೆಯೆಂದರೆ ಒಂದು ರೀತಿಯ ತಾತ್ಸಾರ ಭಾವನೆ ಸ್ವಾಭಾವಿಕವಾಗಿ ನಮ್ಮಲ್ಲಿ ಮನೆ ಯೂರಿದೆ. ಈ ಮನೋ ಭಾವನೆಗೆ ವಿರುದ್ಧವೆಂಬಂತೆ ಕತ್ತೆಯ ಹಾಲಿನ ಪೌಷ್ಟಿಕ ಮತ್ತು ಚಿಕಿತ್ಸಕ ಗುಣಲಕ್ಷಣಗಳು ಇತ್ತೀಜೆಗೆ ಎಲ್ಲ ಅರೋಗ್ಯಾಕಾಂಕ್ಷಿಗಳ ಗಮನ ಸೆಳೆಯುತ್ತಿದೆ.
ಮುಂದುವರಿದ ವಿಶೇಷತೆಯೆಂದರೆ ಕತ್ತೆಯ ಹಾಲು ನಮ್ಮ ದೇಹದ ಜೀವಾಣಗಳು ವಯಸ್ಸಿನ ವಿರೋಧಿ ಗುಣಗಳನ್ನು ಪಡೆದು ಪುನರುತ್ಪಾದಕ ಸಂಯುಕ್ತಗಳನ್ನು ಹೊಂದುವುದಷ್ಟೇ ಅಲ್ಲದೆ ಆಂಟಿ ಒಕ್ಸಿಡೆಂಟ್‌ನಂತೆ ಪರಿಣಾಮ ಬೀರುತ್ತದೆಂದು ಸೌಂದರ್ಯವರ್ಧಕ ವಿಜ್ಞಾನಿಗಳು ತಮ್ಮ ಸಂಶೋಧನಾ ಪ್ರಬಂಧಗಳಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Dr N Someshwara Column: ಜಿಬಿ ಸಿಂಡ್ರೋಮ್ ಮುನ್ನೆಚ್ಚರಿಕೆಯ ಮಂತ್ರ
ಕರುಳಿನ ಸೂಕ್ಷ್ಮಸಸ್ಯವರ್ಗವನ್ನು ನಿಯಂತ್ರಿಸುವ ಮತ್ತು ಕೆಲವು ಮಧುಮೇಹ ವಿರೋಧಿ ಗುಣ ಗಳೂ ಸಹ ಈ ಔಷಧಿಯ ಹಾಲಿನಲ್ಲಿದೆಯೆಂದು ವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ. ಕತ್ತೆಯ ಹಾಲು ಮಾನವನ ಹಾಲನ್ನು ಹೋಲುತ್ತದೆಯೆಂಬ ವಾದವೂ ಸಾಬೀತಾಗಿದೆ. ಆದ್ದರಿಂದ ಇದು ದನದ ಹಾಲಿನ ಅಲರ್ಜಿಯಿಂದ ಪೀಡೆಗೊಳಗಾಗಿರುವ ಶಿಶುಗಳಿಗೆ ಸೂಕ್ತವಾದ ಪರ್ಯಾಯ ವಾಗಿದೆ. ಸಹಸ್ರಾರು ವರ್ಷಗಳ ಹಿಂದಿನ ದಂತಕಥೆಗಳು ತಿಳಿಸುವಂತೆ, ಈಜಿಪ್ಟ್‌ನ ರಾಣಿ ಕ್ಲಿಯೋ ಪಾತ್ರ ಸೌಂದರ್ಯವನ್ನು ಕಾಪಾಡಿಕೊಳ್ಳಲು ನಿತ್ಯವೂ ಕತ್ತೆಯ ಹಾಲಿನಲ್ಲಿ ಮೀಯುತ್ತಿದ್ದಳಂತೆ. ಕತ್ತೆಯ ಹಾಲಿನಿಂದ ತಯಾರಿಸಿದ ಸೋಪ್, ವ್ಹೈಟನಿಂಗ್ ಸಿರಮ, ಕ್ರೀಮ, ಬಾಡಿ ವಾಷ್, ಮಜ್ಜಿಗೆ ಇತ್ಯಾದಿ ಸೌಂದರ್ಯವರ್ಧಕಗಳು ಈಗ ಮಾರ್ಕೆಟ್‌ನಲ್ಲಿ ನೂರಾರು ಲಭ್ಯವಾಗುತ್ತಿದೆ.
ಅಮೆಜಾನ್‌ನಲ್ಲಿ ಇವೆಲ್ಲವೂ ಸುಲಭವಾಗಿ ದೊರಕುತ್ತಿದ್ದರೂ ಬೆಲೆ ಮಾತ್ರ ಗಗನ ಚುಂಬಿಸುತ್ತವೆ - ಸೋಪ್ ಒಂದಕ್ಕೆ 750 ರೂಪಾಯಿ, ಮಜ್ಜಿಗೆ ಅರ್ಧ ಲೀಟರ್‌ಗೆ 800 ರೂಪಾಯಿ. ಇವಿಷ್ಟೆ ಸಾಕು ಕತ್ತೆಯ ಬಗೆಗಿನ ನಮ್ಮ ನಕಾರಾತ್ಮಕ ಅಭಿಪ್ರಾಯಗಳನ್ನು ಬದಲಿಸಿ ಗಾರ್ಧಭ ಗುಣಗಾನ ಮಾಡಲು. ಒಂದು ಸಾಧಾರಣ ಕತ್ತೆ, ಒಂದು ವರ್ಷದ ಬಸಿರನ್ನು ಮುಗಿಸಿ, ಪ್ರಸವವಾದಂದಿನಿಂದ ಏಳು ತಿಂಗಳ ವರೆಗೆ, ಒಂದು ದಿನಕ್ಕೆ ಸುಮಾರು ಒಂದು ಲೀಟರ್ ಹಾಲು ನೀಡುತ್ತದೆ.
ದಿನಕ್ಕೆ ಮೂರು ಬಾರಿ ಕತ್ತೆಯ ಹಾಲನ್ನು ಕರೆದರೆ ಇಳುವರಿ ಹೆಚ್ಚಾಗುತ್ತಂತೆ. ಗುಜರಾತ್ನ ಹಲಾರ ಪ್ರದೇಶದ ನಾಶದ ಹಂತದಲ್ಲಿರುವ ಹಲಾರಿ ತಳಿಯ ಕತ್ತೆಯ ಹಾಲು ಔಷದೀಯ ಗುಣಗಳಿಗೆ ಉತ್ಕೃಷ್ಟವೆಂದು ಅತೀ ಬೇಡಿಕೆಯಲ್ಲಿದೆ. ಹಲಾರಿ ಹಾಲು ಒಂದು ಲೀಟರ್‌ಗೆ 5000 ರೂಪಾಯಿಗೂ ಮೇಲ್ಪಟ್ಟ ದರಕ್ಕೆ ವ್ಯಾಪಾರವಾಗುತ್ತಿದೆ. ಐದು ಕತ್ತೆಗಳ ಒಡೆಯ ದಿನಕ್ಕೆ ಸುಮಾರು 1500 ರುಪಾಯಿ ದುಡಿಯಬಹುದು.
ಭಾರತದಲ್ಲಿ ಕತ್ತೆಗಳ ಸಂತತಿ ಆತಂಕದ ಗತಿಯಲ್ಲಿ ಕಡಿಮೆಯಾಗುತ್ತಿದೆ. ನಲವತ್ತು ವರ್ಷದ ಹಿಂದೆ ಸುಮಾರು ಹತ್ತು ಲಕ್ಷದಷ್ಟಿದ್ದ ಸಂಖ್ಯೆ 2020ರಲ್ಲಿ ಒಂದು ಲಕ್ಷಕ್ಕಿಳಿದಿದೆ. ಮೇಲೆ ತಿಳಿಸಿದ ಹಲಾರಿ ತಳಿಯಂತೂ ಅಳಿವಿನಂಚಿನಲ್ಲಿದೆ. ಸಂರಕ್ಷಣೆಯ ತುರ್ತು ಅಗತ್ಯವನ್ನು ಗುರುತಿಸಿ, ರಾಜಸ್ತಾನದ ಬಿಕಾನೇರ್‌ನಲ್ಲಿರುವ ರಾಷ್ಟ್ರೀಯ ಕುದುರೆ ಸಂಶೋಧನಾ ಕೇಂದ್ರವು ( NRCE) ಈ ಪ್ರಾಣಿಗಳನ್ನು ರಕ್ಷಿಸಲು ಮೀಸಲಾದ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಕತ್ತೆಗಳ ಸಂತತಿ ಕಾಪಾಡುವುದರೊಂದಿಗೆ, ಅವುಗಳ ಹಾಲಿನ ಇಳುವರಿ ಹೆಚ್ಚಿಸುವ ಸಂಶೋಧನೆ ನಡೆಸಿದೆ. ಹಾಗೆಯೇ NRCE ಹಾಲಿನ ಪ್ರಾಮುಖ್ಯತೆಯ ಬಗೆಗೆ ಜನರಲ್ಲಿ ತಿಳಿವಳಿಕೆ ನೀಡುವ ನಿಟ್ಟಿ ನಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ದೇಶಗಳಲ್ಲಿ ಕತ್ತೆಗಳ ಬಗೆಗೆ ತಾತ್ಸಾರದ ಭಾವನೆ ಯಿಲ್ಲ. ಹಲವರು ಕತ್ತೆಯನ್ನು ಸಾಕುಪ್ರಾಣಿಯಂತೆ ಮನೆಯಲ್ಲಿ ಪೋಷಿಸುತ್ತಾರೆ. ಕತ್ತೆಯೆಂದರೆ ನಿಸ್ವಾರ್ಥದಿಂದ ದುಡಿಯುವ ಶ್ರಮ ಜೀವಿಯೆಂದು ಪ್ರತೀತಿ. ಬಹುಶಃ ಆದುದರಿಂದಲೆ ಕತ್ತೆಯನ್ನು ಅಮೇರಿಕದ ಡೆಮೊಕ್ರಾಟಿಕ್ ರಾಜಕೀಯ ಪಕ್ಷದ ಚಿನ್ಹೆಯಾಗಿ ಸಮರ್ಪಕವಾಗಿ ಬಳಸ ಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಾವೂ ಈ ಬಹು ಉಪಯೋಗಿ ಜೀವಿಯ ಬಗೆಗೆ ಒಳ್ಳೆಯ ಭಾವನೆ ಬೆಳೆಸಿ ಕೊಳ್ಳಬಹುದೇನೊ!!!