Dr Jayashree Bhat Column: ಮಕ್ಕಳ ಜತೆ ನೀವೆಷ್ಟು ಮಾತನಾಡುತ್ತೀರಿ ?
ಮಕ್ಕಳಿಗೆ ಪ್ಲಾಸ್ಟಿಕ್ ಆಟದ ಸಾಮಾನುಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗಿಂತ ಮಿಗಿಲಾಗಿ ಹೆತ್ತವರ ಅಗತ್ಯವಿರುತ್ತದೆ ಎಂಬುದನ್ನು ಇಂಥ ಪೋಷಕರು ಇನ್ನಾದರೂ ಅರಿತುಕೊಳ್ಳಬೇಕು. ಮಕ್ಕಳು ಮಾತು ಕಲಿಯುವ ಹಂತವು, ಅವರ ಜೀವನದ ಬಹುಸೂಕ್ಷ್ಮ ಹಾಗೂ ಮುಖ್ಯವಾದ ಘಟ್ಟವಾಗಿರುತ್ತದೆ. ಈ ಹಂತದಲ್ಲಿ ಮಕ್ಕಳು ಪ್ರತಿಕ್ರಿಯಿಸುವ ಬಗ್ಗೆ, ಸಂದ ರ್ಭಕ್ಕೆ ತಕ್ಕಂಥ ಸ್ಪಂದನೆ ಮತ್ತು ನಡವಳಿಕೆಯನ್ನು ತೋರಿಸುವುದರ ಬಗ್ಗೆ ಕಲಿಯುತ್ತಾರೆ.
![ಮಕ್ಕಳ ಜತೆ ನೀವೆಷ್ಟು ಮಾತನಾಡುತ್ತೀರಿ ?](https://cdn-vishwavani-prod.hindverse.com/media/original_images/Dr_Jayashree_Bhat_180225.jpg)
![Profile](https://vishwavani.news/static/img/user.png)
ವೈದ್ಯರೊಂದಿಗೆ ಸಮಾಲೋಚಿಸಲು ಬರುವವರಲ್ಲಿ ವೈವಿಧ್ಯಗಳುಂಟು. “ಮಕ್ಕಳು ಖುಷಿ ಯಾಗಿರಬೇಕು ಅಂತ ಸಾಕಷ್ಟು ಆಟದ ಸಾಮಾನುಗಳನ್ನು ಕೊಡಿಸಿದ್ದೇವೆ. ಅವರು ವೀಕ್ಷಿಸ ಲೆಂದು ಟಿವಿಯಲ್ಲಿ ಬೇಕಾದಷ್ಟು ಕಾರ್ಟೂನ್ ಶೋಗಳು ಬರುತ್ತವೆ. ಆದರೂ ನಮ್ಮ ಮಕ್ಕಳು ಯಾವಾಗಲೂ ನಿರುತ್ಸಾಹದಿಂದ ಇರುತ್ತಾರೆ. ನಮ್ಮ ಮಾತನ್ನು ಕೇಳುವುದೇ ಇಲ್ಲ. ಹೊರಜಗತ್ತಿನ ಬಗೆಗೆ ಅವರಿಗೆ ಆಸಕ್ತಿಯೇ ಇಲ್ಲ"- ಇದು ಈಗಿನ ಬಹುತೇಕ ಪೋಷಕರ ದೂರು. ಆದರೆ, ತಮ್ಮ ಮಕ್ಕಳ ಸ್ವಭಾವ ಮತ್ತು ಸಂವಹನದ ಪರಿಯ ಬಗ್ಗೆ ಹೀಗೆ ದೂರುವ ಪೋಷಕರು, ದಿನದಲ್ಲಿ ಎಷ್ಟು ಬಾರಿ ಮತ್ತು ಎಷ್ಟು ಅವಧಿಯವರೆಗೆ ತಮ್ಮ ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡುತ್ತಾರೆ? ಈ ಕುರಿತು ಅವರು ಎಂದಾದರೂ ಯೋಚಿಸಿದ್ದುಂಟಾ? ಮಕ್ಕಳನ್ನು ದಿನಪೂರ್ತಿ ಆಟದ ಸಾಮಾನು ಗಳ ನಡುವೆ ಬಿಟ್ಟು ಸುಮ್ಮನಾಗಿಬಿಡುವ ಪೋಷಕರು ಒಂದು ಸತ್ಯವನ್ನು ಮನಗಾಣಬೇಕು.
ಮಕ್ಕಳಿಗೆ ಪ್ಲಾಸ್ಟಿಕ್ ಆಟದ ಸಾಮಾನುಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗಿಂತ ಮಿಗಿಲಾಗಿ ಹೆತ್ತವರ ಅಗತ್ಯವಿರುತ್ತದೆ ಎಂಬುದನ್ನು ಇಂಥ ಪೋಷಕರು ಇನ್ನಾದರೂ ಅರಿತು ಕೊಳ್ಳ ಬೇಕು. ಮಕ್ಕಳು ಮಾತು ಕಲಿಯುವ ಹಂತವು, ಅವರ ಜೀವನದ ಬಹುಸೂಕ್ಷ್ಮ ಹಾಗೂ ಮುಖ್ಯವಾದ ಘಟ್ಟವಾಗಿರುತ್ತದೆ. ಈ ಹಂತದಲ್ಲಿ ಮಕ್ಕಳು ಪ್ರತಿಕ್ರಿಯಿಸುವ ಬಗ್ಗೆ, ಸಂದ ರ್ಭಕ್ಕೆ ತಕ್ಕಂಥ ಸ್ಪಂದನೆ ಮತ್ತು ನಡವಳಿಕೆಯನ್ನು ತೋರಿಸುವುದರ ಬಗ್ಗೆ ಕಲಿಯುತ್ತಾರೆ.
ಇದನ್ನೂ ಓದಿ: Ravi Hunj Column: ಸಂಸೃತಿ ಸಮ್ಮಿಲನ ಮತ್ತು ಸಮಯಭೇದದ ಸುತ್ತಮುತ್ತ ಒಂದು ಇಣುಕುನೋಟ
ಈ ಸಮಯದಲ್ಲಿ ಮನೆಯಲ್ಲಿನ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಸೋದರ-ಸೋದರಿಯರ ಮಾತು ಹಾಗೂ ನಡವಳಿಕೆಗಳು ಆ ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತವೆ. ಇಂಥ ದೊಡ್ಡವರು ಏನನ್ನು ಅಭಿವ್ಯಕ್ತಿಸುತ್ತಾರೋ ಅದನ್ನೇ ಮಕ್ಕಳೂ ಕಲಿಯಲು ಆರಂಭಿಸು ತ್ತಾರೆ. ಇಂಥ ಹಿರಿಯರು ಅಥವಾ ಮಗುವಿನ ಹೆತ್ತವರೇ ಮಗುವನ್ನು ಕಡೆಗಣಿಸಿದರೆ, ಮಗುವು ಕೂಡ ಅವರನ್ನು ಕಡೆಗಣಿಸಲು ಆರಂಭಿಸುತ್ತದೆ, ಎಚ್ಚರ!
ಮಗುವಿನ ಒಂಟಿತನಕ್ಕೆ ಕಾರಣ “ನನ್ನ ಮಗುವು ಸದಾ ಒಬ್ಬಂಟಿಯಾಗಿರುತ್ತದೆ" ಎಂಬುದು ಕೆಲವಷ್ಟು ಪೋಷಕರ ದೂರು. ಆದರೆ, ಮಗುವಿನ ಈ ಸ್ವಭಾವಕ್ಕೆ ತಾವೂ ಕಾರಣರಿರ ಬಹುದು ಎಂಬುದನ್ನು ಇಂಥ ಪೋಷಕರು ಯೋಚಿಸುತ್ತಾರಾ? ಎಂಬುದು ಪ್ರಶ್ನೆ. ಬದಲಾದ ಕಾಲಘಟ್ಟದಲ್ಲಿ, ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುವುದು ಮನೆಯ ನಿರ್ವಹಣೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂಬ ಮಾತನ್ನು ಒಪ್ಪಿಕೊಳ್ಳೋಣ.
ಆದರೆ, ಇದರ ನಡುವೆಯೇ, ಮಗುವಿನ ಬೆಳವಣಿಗೆಯು ಯಾವ ರೀತಿಯಲ್ಲಿದೆ ಎಂಬು ದನ್ನು ಗಮನಿಸಬೇಕಾದ್ದೂ ಅತಿಮುಖ್ಯ. ಇಂಥ ‘ದುಡಿಮೆಗಾರ ದಂಪತಿಗಳು’ ಮಗುವನ್ನು ಹಗಲಿನಲ್ಲಿ ಡೇ ಕೇರ್ ಸೆಂಟರ್‌ನಲ್ಲಿ ಬಿಟ್ಟುಹೋಗುವುದು ಅಥವಾ ದಾದಿಯ ಬಳಿ ಒಂದಷ್ಟು ಆಟದ ಸಾಮಾನುಗಳನ್ನು ಕೊಟ್ಟುಹೋಗುವುದು ಸಾಮಾನ್ಯ ಎಂಬಂತಾಗಿದೆ. ಹೋಗಲಿ, ಇಂಥ ದಂಪತಿಗಳು ದುಡಿಮೆಯನ್ನು ಮುಗಿಸಿಕೊಂಡು ಬಂದ ನಂತರವಾದರೂ ಮಕ್ಕಳ ಜತೆ ಮಾತನಾಡುತ್ತಾರಾ? ಮಕ್ಕಳನ್ನು ಪ್ರಶ್ನೆ ಕೇಳಿ ಗದರಿಸುವುದರ ಬದಲು ಅವ ರೊಂದಿಗೆ ಖುಷಿಯಿಂದ ಮಾತನಾಡುತ್ತಾರಾ, ಅವರ ಮಾತನ್ನು ಕೇಳುತ್ತಾರಾ? ಅವರ ತೊದಲುನುಡಿಯ ಮಾತನ್ನು ಉತ್ತೇಜಿಸುತ್ತಾರಾ? ಇವು ಇಂಥ ಪ್ರತಿ ಪೋಷಕರೂ ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಗಳು.
ನಿತ್ಯವೂ ದುಡಿಮೆಗೆಂದು ಮನೆಯಿಂದ ಹೊರಗೆ ತೆರಳಿದವರು, ಕೆಲಸ ಮುಗಿಸಿಕೊಂಡು ಬರುತ್ತಿದ್ದಂತೆ ಹೊರಜಗತ್ತಿನ ಒತ್ತಡ ಮತ್ತು ತಲ್ಲಣವನ್ನು ನಿಭಾಯಿಸುವ ಯತ್ನವಾಗಿ, “ಮಗು ಮಲಗಿಬಿಟ್ಟರೆ ಸಾಕು, ಗಲಾಟೆ ಮಾಡದಿದ್ದರೆ ಸಾಕು" ಎಂದು ನಿರೀಕ್ಷಿಸುವುದು ಸಹಜ. ಆದರೆ, ತಮ್ಮ ಮಗುವು ಏನನ್ನೋ ಕಲಿಯಲು ಬಯಸುತ್ತಿರುತ್ತದೆ,
ಅಪ್ಪ-ಅಮ್ಮನ ಜತೆ ಬೆರೆಯಲು ಪ್ರಯತ್ನಿಸುತ್ತಿರುತ್ತದೆ ಎಂಬ ಸೂಕ್ಷ್ಮವನ್ನು ಇಂಥವರು ಮರೆಯಬಾರದು. ಮಕ್ಕಳ ಮಾತಿಗೆ ದನಿಗೂಡಿಸದೇ ಹೋದಲ್ಲಿ, ಮಕ್ಕಳು ಒಬ್ಬಂಟಿಯಾಗಿ ರುವುದನ್ನು ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳುತ್ತಾರೆ ಎಂಬುದನ್ನು ಇಂಥ ಪೋಷಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ, ‘ಮಾತು’ ಮತ್ತು ‘ಸ್ವಭಾವ’ ಈ ಎರಡೂ ಪಾರಸ್ಪರಿಕ ಕ್ರಿಯೆಯಿಂದ ರೂಪುಗೊಳ್ಳುವಂಥವು.
ಸಂವಹನ ಎಂಬುದು ಒಂದು ಕಲಿಕಾಶಾಸ್ತ್ರ, ಒಂದು ಪಠ್ಯಕ್ರಮ. ಈ ವಿಷಯದಲ್ಲಿ ಪೋಷಕರೇ ತಮ್ಮ ಮಕ್ಕಳಿಗೆ ಗುರುಗಳಾಗಬೇಕು. ಮಗುವು ತನ್ನ 10-12ನೇ ತಿಂಗಳಲ್ಲಿ ನಿಧಾನವಾಗಿ ಒಂದೊಂದೇ ಮಾತನ್ನು ಕಲಿಯಲು ಆರಂಭಿಸುತ್ತದೆ. ಅದಕ್ಕೂ ಮೊದಲು, ತನ್ನ ಸುತ್ತಲಿನ ಮಾತುಕತೆಯನ್ನು ಕೇಳಿಸಿಕೊಳ್ಳಲು, ಹಾಗೆ ಕೇಳಿಸಿಕೊಂಡಿದ್ದನ್ನು ಪುನರಾವರ್ತಿಸಲು ಅದು ಪ್ರಯತ್ನಿಸುತ್ತದೆ.
18 ತಿಂಗಳ ಬಳಿಕ ಮಕ್ಕಳಲ್ಲಿ ಒಂದು ಸ್ವಭಾವದ ಮಾದರಿಯನ್ನು ಕಾಣಬಹುದು. ಮಗುವು ತನ್ನ ಮನೆಯವರ ಭಾಷೆ, ಮಾತಿನ ಶೈಲಿಯನ್ನು ಕಲಿತು ಪ್ರತಿಕ್ರಿಯಿಸಲು ಆರಂಭಿಸುತ್ತದೆ. ಸರಿ-ತಪ್ಪು ತಿಳಿಯದಿದ್ದರೂ, ತಾನು ಕೇಳಿದ್ದನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಎಂಬುದನ್ನು ಮಗುವು ಕಲಿಯುವ ಸಮಯವಿದು. ಮಕ್ಕಳ ಮಾತು ಹಾಗೂ ಸ್ವಭಾವ ಗಳೆಲ್ಲವೂ, ಅವುಗಳ ಜತೆಗಿರುವವರ ಮೇಲೆ ಅವಲಂಬಿತವಾಗಿರುತ್ತವೆ.
ಸಂವಹನದ ವಿಷಯದಲ್ಲಿ ಪೋಷಕರೇ ಪ್ರತಿ ಮಗುವಿಗೂ ಗುರುವಾಗುತ್ತಾರೆಯೇ ವಿನಾ, ಯಾವುದೇ ಟಿವಿ ಕಾರ್ಯಕ್ರಮಗಳಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಟಿವಿ ಮೂಲಕ ಬಿಂಬಿತವಾಗಿದ್ದನ್ನು/ಹೇಳಿದ್ದನ್ನು ಮಕ್ಕಳು ಕೇವಲ ಅನುಕರಿಸಬಲ್ಲರೇ ಹೊರ ತು, ಆ ಮಾಧ್ಯಮದಿಂದ ಮಕ್ಕಳಲ್ಲಿ ಉತ್ತಮ ಸಂವಹನ ಕಲೆಯು ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಪೋಷಕರು ಮರೆಯಬಾರದು.
ಮಾತಿನಲ್ಲಿ ಭಾವಶುದ್ಧಿ ಇರಬೇಕು ‘ಮಕ್ಕಳಿರುವ ಮನೆಯಲ್ಲಿ ಮಾತು ಚೆಂದವಿರಲಮ್ಮ’ ಎಂದು ಬಲ್ಲವರು ಹೇಳಿದ್ದಾರೆ. ಯಾಕೆಂದರೆ, ಮುಗ್ಧಮಗುವು ತಾನು ಕೇಳಿಸಿಕೊಂಡಿದ್ದನ್ನೇ ಕಲಿಯುವುದು ಹೆಚ್ಚು. ಕೆಟ್ಟ ಭಾಷೆ ಮತ್ತು ಕೆಟ್ಟ ನಡವಳಿಕೆಗಳು ಮಗುವಿನ ಮೇಲೆ ಬಹುಬೇಗ ಪರಿಣಾಮವನ್ನು ಬೀರುತ್ತವೆ. ಮಗುವೂ ಅದನ್ನೇ ಅನುಕರಿಸಲು ಆರಂಭಿ ಸುತ್ತದೆ.
ಎಷ್ಟೋ ಮಕ್ಕಳು ತೊದಲುನುಡಿಯಲ್ಲೇ ಕೆಟ್ಟಪದಗಳನ್ನು ನುಡಿಯುವುದನ್ನು ನೀವು ಕೇಳಿಲ್ಲವೇ? ಪೋಷಕರ ಮಾತು ಮತ್ತು ಅಭ್ಯಾಸ, ಹೊರಜಗತ್ತಿನ ಜತೆಗಿನ ಅವರ ನಡವ ಳಿಕೆ ಈ ಎಲ್ಲವೂ ಮಗುವಿನ ಪಾಲಿಕೆ ‘ಕಲಿಕಾ ಸಾಮಗ್ರಿ’ ಆಗಿಬಿಡಬಲ್ಲದು. ಹೀಗಾಗಿ ಮಕ್ಕಳು ಮನೆಯಲ್ಲಿರುವಾಗ ದೊಡ್ಡವರ ಮಾತು ಮತ್ತು ಸ್ವಭಾವದಲ್ಲಿ ಸೂಕ್ಷ್ಮತೆ ಅಡಗಿರಬೇಕು. ಅವುಗಳಿಂದ ಮಕ್ಕಳ ಸುತ್ತ ಉತ್ತಮ ವಾತಾವರಣ ನಿರ್ಮಾಣವಾಗುವಂತಿರಬೇಕು.
ಸಂವಹನವನ್ನು ಚೆಂದಗೊಳಿಸುವ ಪರಿ ಮಕ್ಕಳಲ್ಲಿ ಸಂವಹನ ಕ್ರಮವು ಉತ್ತಮವಾಗಲು ಏನು ಮಾಡಬೇಕು? ಎಂಬುದು ಬಹುತೇಕ ಪೋಷಕರನ್ನು ಕಾಡುವ ಪ್ರಶ್ನೆಯೇ ಸರಿ. ಮನೆಯಲ್ಲಿರುವ ಮಗುವು ಚಂದದ ಮಾತನ್ನು ಕಲಿಯಬೇಕು, ಉತ್ತಮ ಸ್ವಭಾವವನ್ನೂ, ಹೊಂದಾಣಿಕೆಯ ಗುಣವನ್ನೂ ರೂಢಿಸಿಕೊಳ್ಳಬೇಕು ಎಂದರೆ, ಪೋಷಕರೆನಿಸಿಕೊಂಡವರು ಮೊದಲು ಅವನ್ನು ಸ್ವತಃ ರೂಢಿಸಿಕೊಳ್ಳಬೇಕು, ಮನೆಯಲ್ಲೂ ರೂಢಿಗೆ ತರಬೇಕು.
ಅಂಥ ಕೆಲವು ಸಂಗತಿಗಳು ಹೀಗಿವೆ: ಮಕ್ಕಳ ಮಾತನ್ನು ಪೋಷಕರು ನಿರ್ಲಕ್ಷಿಸದೆ ಗಮನ ವಿಟ್ಟು ಕೇಳಿಸಿಕೊಳ್ಳಬೇಕು. ತಮಗನಿಸಿದ್ದನ್ನು ಹೇಳುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡ ಬೇಕು. ಪೋಷಕರು ತಮ್ಮ ಮಗುವಿಗೆ ಸ್ವತಃ ಹೊರಜಗತ್ತನ್ನು ತೋರಿಸಬೇಕು, ನೆರೆಹೊರೆ ಯವರ ಪರಿಚಯ ಮಾಡಿಸಬೇಕು.
ಸ್ಪೂರ್ತಿದಾಯಕ ಮತ್ತು ನೀತಿಬೋಧಕ ಕಥೆಗಳನ್ನು ಓದಿ ಹೇಳುವ/ಓದಿಸುವ ಅಭ್ಯಾಸ ಮನೆಯಲ್ಲಿ ರೂಢಿಗೊಳ್ಳಬೇಕು. ಮಕ್ಕಳು ಒಂದೊಮ್ಮೆ ತಪ್ಪು ತಪ್ಪಾಗಿ ಮಾತನಾಡಿದರೆ ಪೋಷಕರು ಗದರಬಾರದು. ಸಂಯಮವನ್ನು ಕಾಪಿಟ್ಟುಕೊಂಡು, ಅಂಥ ಮಾತನ್ನು ತಿದ್ದುವ ಪ್ರಯತ್ನ ಮಾಡ ಬೇಕು.
ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಭಾಷೆಯನ್ನು ಕಲಿಸುವ ಪ್ರಯತ್ನ ಬೇಡ, ಅವರ ಮುಂದೆ ಜೋರುದನಿಯ ಗಲಾಟೆ ಬೇಡವೇ ಬೇಡ. ಮಕ್ಕಳ ಜತೆಗಿನ ಪೋಷಕರ ಸಂವಹನೆ ಯು ಏಕಮುಖ ವಾಗಿರದೆ, ದ್ವಿಮುಖವಾಗಿರಬೇಕು. ತಮ್ಮ ಪ್ರತಿಯೊಂದು ಮಾತಿಗೂ ಮಕ್ಕಳಿಂದ ಪ್ರತಿಕ್ರಿಯೆ ಹೊಮ್ಮುವಂತೆ ಪೋಷಕರು ನೋಡಿಕೊಳ್ಳಬೇಕು.
(ಲೇಖಕಿ ಸ್ಪೀಚ್ ಲಾಂಗ್ವೇಜ್ ಪೆಥಾಲಜಿ)