ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಪ್ರಪಂಚ ಆಗುತ್ತಿದೆಯೇ ಮನೆಯೊಂದು ಮೂರು ಬಾಗಿಲು ?!

ಮೊದಲಿಗೆ ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಗುದ್ದಾಟಕ್ಕೆ ಮತ್ತಷ್ಟು ಇಂಬು ಕೊಟ್ಟು, ಶತ್ರುವಿನ ಶತ್ರುವನ್ನು ಹತ್ತಿರ ಮಾಡಿಕೊಂಡು, ಹಣ ಮತ್ತು ಶಸಾಸಗಳ ನೆರವಿತ್ತು, ಪರ ಸ್ಪರ ಕಾದಾಡುವಂತಾಗುವ ಪರಿಸ್ಥಿತಿ ನಿರ್ಮಿಸುವುದು; ಕೆಲ ದಿನಗಳ ನಂತರ, ಮೂಲಭೂತ ಯೋಜನೆಯಾದ ‘ಶತ್ರುವಿನ ನಾಶ’ ಅಸಾಧ್ಯ ಮತ್ತು ತುಂಬಾ ದುಬಾರಿ ಎಂಬುದು ಮನವರಿಕೆ ಯಾದಾಗ, ‘ಶಾಂತಿಸ್ಥಾಪನೆ’, ‘ಕದನವಿರಾಮ’ ಎನ್ನುವ ಪ್ರಹಸನ.

ಪ್ರಪಂಚ ಆಗುತ್ತಿದೆಯೇ ಮನೆಯೊಂದು ಮೂರು ಬಾಗಿಲು ?!

Profile Ashok Nayak Mar 14, 2025 6:58 PM

ವಿಶ್ಲೇಷಣೆ

ರವೀ ಸಜಂಗದ್ದೆ

ಒಂದು ಕಾಲಕ್ಕೆ ಚೀನಾ ಮತ್ತು ಕೆಲ ಮಟ್ಟಿಗೆ ಭಾರತವನ್ನೂ ಗುರಿಯಾಗಿಸಿಕೊಂಡು, ಭಯೋತ್ಪಾದನೆಯ ನಿರ್ಮೂಲನೆಯ ನೆಪದಲ್ಲಿ ಅಫ್ಘಾನಿಸ್ತಾನದೊಳಗೆ ನುಸುಳಿ ಅಲ್ಲಿನ ಸರಕಾರವನ್ನು ಬೀಳಿಸಿ ತನ್ನ ಪಾರಮ್ಯ ಸ್ಥಾಪಿಸಿಕೊಂಡು ಏಷ್ಯಾದಲ್ಲಿ ನೆಲೆ ಕಂಡುಕೊಂಡಿದ್ದು ಅಮೆರಿಕ. ಅಫ್ಘಾನಿಸ್ತಾನಕ್ಕೆ ಬೃಹತ್ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವು ನೀಡುತ್ತಾ ಬಂದ ಅಮೆರಿಕ, ನೆರೆಯ ಚೀನಾ ಮತ್ತು ಭಾರತದ ವಿರೋಧದ ನಡುವೆಯೂ ತನ್ನ ನೆಲೆಯನ್ನು ಭದ್ರಮಾಡಿಕೊಂಡು, ಎರಡೂ ದೇಶಗಳ ಮೇಲೆ ಕಣ್ಣಿಡುತ್ತಾ ಪರಿಸ್ಥಿತಿಯನ್ನು ಪರೋಕ್ಷವಾಗಿ ನಿಯಂತ್ರಿಸಲು ಯತ್ನಿಸಿತು.

ಇಂಗ್ಲಿಷ್‌ನಲ್ಲಿ, ‘ಯುದ್ಧ ಮತ್ತು ಪ್ರೀತಿಯ ವಿಚಾರದಲ್ಲಿ ಏನೇ ಮಾಡಿದರೂ ಅದೆಲ್ಲವೂ ಸಮಂಜಸ’ ಎಂಬರ್ಥದ ನಾಣ್ನುಡಿಯೊಂದಿದೆ. ಪ್ರಪಂಚವನ್ನೇ ಗೆದ್ದು ಮೆರೆಯಬೇಕು, ಅದಾಗದಿದ್ದಲ್ಲಿ ಶತ್ರುವಿನ ಶತ್ರುವನ್ನು ಪೋಷಿಸಿ ಮೇಲುಗೈ ಸಾಧಿಸಬೇಕು ಎಂಬ ಉದ್ದೇಶ ದಿಂದ ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಕಳೆದ ಕೆಲ ದಶಕಗಳಿಂದ ಮುಸುಕಿ ನೊಳಗಿನ ಗುದ್ದಾಟ ನಡೆಸುತ್ತಿರುವುದು ವಿಶ್ವಕ್ಕೇ ಗೊತ್ತಿರುವ ಸಂಗತಿ.

ಇದನ್ನೂ ಓದಿ: Ravi Sajangadde Column: ದೆಹಲಿ ಗದ್ದುಗೆ ಎಂಬ ʼಗುಪ್ತʼಗಾಮಿನಿ !

ಮೊದಲಿಗೆ ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಗುದ್ದಾಟಕ್ಕೆ ಮತ್ತಷ್ಟು ಇಂಬು ಕೊಟ್ಟು, ಶತ್ರುವಿನ ಶತ್ರುವನ್ನು ಹತ್ತಿರ ಮಾಡಿಕೊಂಡು, ಹಣ ಮತ್ತು ಶಸಾಸಗಳ ನೆರವಿತ್ತು, ಪರಸ್ಪರ ಕಾದಾಡುವಂತಾಗುವ ಪರಿಸ್ಥಿತಿ ನಿರ್ಮಿಸುವುದು; ಕೆಲ ದಿನಗಳ ನಂತರ, ಮೂಲ ಭೂತ ಯೋಜನೆಯಾದ ‘ಶತ್ರುವಿನ ನಾಶ’ ಅಸಾಧ್ಯ ಮತ್ತು ತುಂಬಾ ದುಬಾರಿ ಎಂಬುದು ಮನವರಿಕೆಯಾದಾಗ, ‘ಶಾಂತಿಸ್ಥಾಪನೆ’, ‘ಕದನವಿರಾಮ’ ಎನ್ನುವ ಪ್ರಹಸನ.

ಮಧ್ಯಸ್ಥಿಕೆ-ಮಾತುಕತೆ ಮೂಲಕ ತಾನು ವಿಶ್ವದ ಶಾಂತಿಯ ಹರಿಕಾರ ಎಂದು ಬಿಂಬಿಸಿ ಕೊಂಡು ಮತ್ತಷ್ಟು ಮೈಲೇಜ್ ಪಡೆಯುವಿಕೆ. ಈ ಕೆಟ್ಟ ಚಾಳಿಗಳನ್ನು ಅಮೆರಿಕ ಇನ್ನೂ ಮುಂದುವರಿಸಿದೆ. ತನ್ಮೂಲಕ ಜಗತ್ತಿನೆದುರು ತನ್ನ ದ್ವಂದ್ವನೀತಿಯನ್ನು ಮತ್ತೊಮ್ಮೆ ತೋರಿಸಿದೆ.

ಇದೊಂಥರಾ ಯಾರಿಗೂ ಗೊತ್ತಾಗದಂತೆ ಮಗುವನ್ನು ಚಿವುಟಿ ಅಳುವಂತೆ ಮಾಡಿ, ನಂತರ ಆ ಮಗುವನ್ನು ಸಂತೈಸುವಂತೆ ಎಲ್ಲರೆದುರು ಪೋಸು ಕೊಡುವ ಗೀಳು! ರಷ್ಯಾ-ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿ ಅಮೆರಿಕ ಸದ್ಯ ನಿರ್ವಹಿಸುತ್ತಿರುವ ಪಾತ್ರ,

ತೋರುತ್ತಿರುವ ಧೋರಣೆ ಇದಕ್ಕೆ ತಾಜಾ ಉದಾಹರಣೆ! ಈ ಕುರಿತಾದ ಒಂದಿಷ್ಟು ವಿವರ ಗಳನ್ನು ಅರಿಯೋಣ. ಒಂದು ಕಾಲಕ್ಕೆ ಚೀನಾ ಮತ್ತು ಕೆಲ ಮಟ್ಟಿಗೆ ಭಾರತವನ್ನೂ ಗುರಿ ಯಾಗಿಸಿಕೊಂಡು, ಭಯೋತ್ಪಾದನೆಯ ನಿರ್ಮೂಲನೆಯ ನೆಪದಲ್ಲಿ ಅಫ್ಘಾನಿಸ್ತಾನದೊಳಗೆ ನುಸುಳಿ ಅಲ್ಲಿನ ಸರಕಾರವನ್ನು ಬೀಳಿಸಿ ತನ್ನ ಪಾರಮ್ಯ ಸ್ಥಾಪಿಸಿಕೊಂಡು ಏಷ್ಯಾದಲ್ಲಿ ನೆಲೆ ಕಂಡುಕೊಂಡಿದ್ದು ಇದೇ ಅಮೆರಿಕ.

ಅಫ್ಘಾನಿಸ್ತಾನಕ್ಕೆ ಬೃಹತ್ ಆರ್ಥಿಕ ಮತ್ತು ಶಸಾಸ ನೆರವು ನೀಡುತ್ತಾ ಬಂದ ಅಮೆರಿಕ, ನೆರೆಯ ಚೀನಾ ಮತ್ತು ಭಾರತದ ವಿರೋಧದ ನಡುವೆಯೂ ತನ್ನ ನೆಲೆಯನ್ನು ಭದ್ರ ಮಾಡಿಕೊಂಡು, ಎರಡೂ ದೇಶಗಳ ಮೇಲೆ ಕಣ್ಣಿಡುತ್ತಾ ಪರಿಸ್ಥಿತಿಯನ್ನು ಪರೋಕ್ಷವಾಗಿ ನಿಯಂತ್ರಿಸಲು ನಿರಂತರ ಯತ್ನಿಸಿತು. ಆದರೆ ಇವೆಲ್ಲಾ ಕಾರ್ಯಸಾಧುವಲ್ಲ ಎಂದು ಕ್ರಮೇಣ ಮನಗಂಡು, ತನ್ನ ಮಿಲಿಟರಿ ಪಡೆಯನ್ನು ವಾಪಸ್ ಕರೆಸಿಕೊಂಡಿತು. ಆಗ ನಡೆದ ಗಲಾಟೆಯಲ್ಲಿ ಅನೇಕರು ಹತರಾದರು.

ಶಾಂತಿಸ್ಥಾಪನೆಯ ಹೆಸರಲ್ಲಿ ಅಮೆರಿಕ ಮಾಡಿದ್ದು ಶುದ್ಧ ಅಪಸವ್ಯವನ್ನೇ. ಉಗ್ರವಾದ ನಿರ್ಮೂಲನೆಯ ಹೆಸರಲ್ಲಿ ದಶಕಗಳಷ್ಟು ಸಮಯ ಮತ್ತು ಹಣವನ್ನು ವ್ಯಯಿಸಿ, ಕೊನೆಗೆ ಅಫ್ಘಾನಿಸ್ತಾನದ ಅಧಿಕಾರವನ್ನು ಅದೇ ಭಯೋತ್ಪಾದಕರ ಕೈಗೆ ಕೊಟ್ಟು ಅಲ್ಲಿಂದ ಹೇಡಿಯಂತೆ ಓಡಿತು ಅಮೆರಿಕ. ಇದರ ವ್ಯತಿರಿಕ್ತ ಪರಿಣಾಮವನ್ನು ಅಲ್ಲಿನ ಜನ ಈಗಲೂ ಅನುಭವಿಸುತ್ತಿದ್ದಾರೆ.

ಅಮೆರಿಕದ ದ್ವಂದ್ವನೀತಿ, ಅನೇಕ ವಿಚಾರಗಳಲ್ಲಿನ ‘ಡಬಲ್ ಸ್ಟಾಂಡರ್ಡ್’ಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ತನ್ನ ವ್ಯವಹಾರ ವ್ಯಾಪ್ತಿಗೆ ಹೊರತಾದ ಇತರ ಸಣ್ಣ, ಆರ್ಥಿಕವಾಗಿ ಅಷ್ಟೇನೂ ಬಲಾಢ್ಯವಲ್ಲದ ರಾಷ್ಟ್ರಗಳನ್ನು ಪೋಷಿಸಿ, ತನ್ಮೂಲಕ ತನ್ನ ಶತ್ರುರಾಷ್ಟ್ರಗಳ ಮೇಲೆ ಸವಾರಿ ಮಾಡಲೆತ್ನಿಸುವುದು ಅಮೆರಿಕದ ಚಾಳಿ; ಅಂತೆಯೇ, ಉಕ್ರೇನ್ ದೇಶಕ್ಕೆ ಕೆಲವು ವರ್ಷಗಳಿಂದ ನೆರವು ನೀಡುತ್ತಾ ಅದನ್ನು ರಷ್ಯಾದ ಎದುರು ಕಟ್ಟುವ ಕಸರತ್ತಿನಲ್ಲಿ ಅಮೆರಿಕ ವ್ಯಸ್ತವಾಗಿದೆ. ಈ ಗಾಳಕ್ಕೆ ಸಿಲುಕಿದ ಉಕ್ರೇನ್ ದೇಶವು ಅಮೆರಿಕ ಹೆಣೆದ ಬಲೆಯಲ್ಲಿ ಇರಲೂ ಆಗದೆ, ಹೊರಗೆ ಬರಲೂ ಆಗದೆ, ತನ್ನ ಗೋರಿ ಯನ್ನು ತಾನೇ ತೋಡಿಕೊಂಡು ಪತರಗುಟ್ಟುತ್ತಿದೆ.

ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ, ಅಫ್ಘಾನಿಸ್ತಾನದಂತೆ ಉಕ್ರೇನ್ ದೇಶವನ್ನೂ ನಡುನೀರಿನಲ್ಲಿ ಬಿಡಲು ಅಮೆರಿಕ ಅಣಿಯಾದಂತೆ ಭಾಸವಾಗುತ್ತಿದೆ. ಹಿಂದಿನ ಬೈಡೆನ್ ಸರಕಾರವು ರಷ್ಯಾವನ್ನು ಇಕ್ಕಟ್ಟಿಗೆ ಸಿಲುಕಿಸಲು, ಅಲ್ಲಿನ ತೈಲನಿಕ್ಷೇಪಗಳ ಉದ್ಯಮ ಮತ್ತು ಆದಾಯದ ಮೇಲೆ ಬರೆ ಎಳೆಯಲು, ತನ್ಮೂಲಕ ವಿಶ್ವದಲ್ಲಿನ ತನ್ನ ಸಾರ್ವಭೌಮತ್ವವನ್ನು ಹೆಚ್ಚಿಸಿಕೊಳ್ಳಲು ರಷ್ಯಾದೆದುರು ಉಕ್ರೇನ್ ದೇಶವನ್ನು ಎತ್ತಿಕಟ್ಟಿತು.

ಪರಸ್ಪರ ಯುದ್ಧಕ್ಕೂ ಪ್ರೇರೇಪಿಸಿ ಅದರಲ್ಲಿ ಯಶ ಕಂಡಿತು. ಕಳೆದ 3 ವರ್ಷದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಅಪಾರ ಸಾವು-ನೋವು, ಕಷ್ಟ-ನಷ್ಟಗಳು ಸಂಭವಿಸಿವೆ. ಅಮೆರಿಕವೇ ಈ ಎಲ್ಲ ದುರಂತಗಳ ನೇರ ಪ್ರಾಯೋಜಕ ಮತ್ತು ಏಕೈಕ ಹೊಣೆಗಾರ. ಆದರೆ, ‘ಊರು ಕೊಳ್ಳೆ ಹೊಡೆದ ಮೇಲೆ ಕೋಟೆಬಾಗಿಲು ಹಾಕಿದರು’ ಎಂಬ ಗಾದೆಯಂತೆ, ಎಲ್ಲವೂ ಧ್ವಂಸವಾದ ಮೇಲೆ ಈಗ ಕದನವಿರಾಮದ, ಶಾಂತಿಸ್ಥಾಪನೆಯ ಮಾತಾಡುತ್ತಿದೆ ಅಮೆರಿಕ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಶ್ವೇತಭವನಕ್ಕೆ ಕರೆಸಿ ಅಕ್ಷರಶಃ ಬೆದರಿಕೆ ಹಾಕಿ, ತಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಧಮಕಿ ಹಾಕಿದ್ದಾರೆ ಅಮೆರಿಕದ ಅಧ್ಯಕ್ಷ ಟ್ರಂಪ್!

ಉಕ್ರೇನನ್ನು ತಾನೇ ಪುಸಲಾಯಿಸಿ, ರಷ್ಯಾದೊಂದಿಗೆ ಯುದ್ಧಮಾಡಲು ಪ್ರೇರೇಪಿಸಿದ ಅಮೆರಿಕವು, ಈಗ ಯುದ್ಧ ನಿಲ್ಲಿಸುವಂತೆ ಉಕ್ರೇನ್ ಮೇಲೆ ಒತ್ತಡ ಹೇರಿ ರಷ್ಯಾವನ್ನು ಒಂದ ಷ್ಟು ಹತ್ತಿರ ಮಾಡಿಕೊಳ್ಳುವ, ಆ ಮೂಲಕ ಚೀನಾಕ್ಕೆ ಸೆಡ್ಡು ಹೊಡೆಯುವ ಆಲೋಚನೆ ಮಾಡಿರುವುದು ಮೇಲ್ನೋಟಕ್ಕೆ ತೋರುತ್ತದೆ.

ಉಕ್ರೇನ್ ಮೇಲೆ ಹತೋಟಿ ಸಾಧಿಸಲು ಅಮೆರಿಕ ಕಸರತ್ತು ಮಾಡುತ್ತಿರುವುದರ ಹಿಂದಿನ ಪ್ರಮುಖ ಕಾರಣವೆಂದರೆ, ಉಕ್ರೇನ್‌ನ ಉದ್ದಗಲಕ್ಕೂ ಇರುವ 37 ವಿಶಿಷ್ಟ ಮತ್ತು ಅಪರೂಪದ ಖನಿಜ ನಿಕ್ಷೇಪಗಳು. ಅಲ್ಲಿ ಲೀಥಿಯಂ, ಟೈಟಾನಿಯಂ, ಗ್ರಾಫೈಟ್, ಲಾಂಥನಂ, ಸೆರಿಯಂ, ಎರ್ಬಿಯಂ ಖನಿಜ ನಿಕ್ಷೇಪಗಳು ಹೇರಳವಾಗಿವೆ. ಆದರೆ ಈ ಪೈಕಿ ಹೆಚ್ಚಿನವು ಮತ್ತು ಅವುಗಳಿಂದಾಗುವ ಸರಬರಾಜು ಸದ್ಯಕ್ಕೆ ಚೀನಾದ ನಿಯಂತ್ರಣದಲ್ಲಿವೆ!

‘ರಷ್ಯಾ ಜತೆಗಿನ ಯುದ್ಧ ಸ್ಥಗಿತ ಮತ್ತು ಉಕ್ರೇನಿನ ಖನಿಜಗಳನ್ನು ಕೊಳ್ಳುವ ಸಂಬಂಧದ ಒಪ್ಪಂದ’ಕ್ಕೆ ಸಹಿ ಮಾಡುವ ಸಂಬಂಧ ಝೆಲೆನ್ಸ್ಕಿ ಅವರನ್ನು ಟ್ರಂಪ್ ಸರಕಾರ ಶ್ವೇತ ಭವನಕ್ಕೆ ಆಹ್ವಾನಿಸಿತ್ತು. ಆದರೆ ಅಲ್ಲಿ ಒಂದಷ್ಟು ಏರುದನಿಯ ಮಾತುಕತೆ ನಡೆದು ವೈಮನಸ್ಸಿನಲ್ಲಿ ಪ್ರಹಸನ ಮುಗಿಯಿತು. ಟ್ರಂಪ್ ತಮ್ಮ ಕಚೇರಿಗೆ ಮತ್ತೊಂದು ದೇಶದ ಮುಖ್ಯಸ್ಥರನ್ನು ಆಹ್ವಾನಿಸಿ ಹೀಗೆ ನಡೆಸಿಕೊಂಡಿದ್ದು ರಾಜತಾಂತ್ರಿಕ ನೀತಿಯಡಿ ಸಮಂಜಸವಲ್ಲ.

ಚುನಾವಣಾ ವೇಳೆಯ ವಾಗ್ದಾನಗಳನ್ನು ಈಡೇರಿಸುವ ನಿಟ್ಟಿನಲ್ಲಿ ಟ್ರಂಪ್ ಕಾರ್ಯಪ್ರವೃತ್ತ ರಾದಂತೆ ಭಾಸವಾಗುತ್ತಿದೆ. ಎಲ್ಲಾ ವಾಗ್ದಾನಗಳು ಕಾರ್ಯಸಾಧ್ಯವಲ್ಲ ಎಂಬ ಅರಿವಿದ್ದರೂ, ಎಲ್ಲವನ್ನೂ ನೆರವೇರಿಸಿಯೇ ಸಿದ್ಧ ಎಂಬ ಧೋರಣೆಯನ್ನು ತಳೆದಿದೆ ಟ್ರಂಪ್ ಸರಕಾರ. ‘ಅಮೆರಿಕದ ದುಡ್ಡು ಅನ್ಯದೇಶಗಳ ಉದ್ಧಾರಕ್ಕೆ ವಿನಿಯೋಗವಾಗುವುದು ನಿಲ್ಲಬೇಕು ಮತ್ತು ಪರದೇಶಗಳಿಗೆ ನೀಡಿದ ಆರ್ಥಿಕ ನೆರವನ್ನು ಅವುಗಳಿಂದ ವಸೂಲು ಮಾಡಬೇಕು’, ‘ಅಮೆರಿಕದಲ್ಲಿ ಅಮೆರಿಕನ್ನರಿಗೆ ಮೊದಲ ಆದ್ಯತೆಯ ಮೇಲೆ ಉದ್ಯೋಗ ಸಿಗಬೇಕು’, ‘ಪ್ರಪಂಚದೆಲ್ಲೆಡೆಯ ಯುದ್ಧಗಳನ್ನು ನಿಲ್ಲಿಸಬೇಕು’, ‘ನ್ಯಾಟೋ ಶಾಂತಿ ಒಪ್ಪಂದದ ವಿಸ ರ್ಜನೆ’ ಹೀಗೆ ತಮ್ಮ ವಾಗ್ದಾನಗಳ ಜಾರಿಗೆ ಟ್ರಂಪ್ ಕಾರ್ಯಪ್ರವೃತ್ತರಾಗಿರುವುದರಿಂದ, ಇತರ ದೇಶಗಳಿಂದ ಒಂದಷ್ಟು ಸದ್ದು, ಪರ-ವಿರೋಧದ ನಿಲುವುಗಳು ವ್ಯಕ್ತವಾಗುತ್ತಿವೆ.

ಇತರ ದೇಶಗಳ ನಡುವಿನ ಭೂರಾಜಕೀಯದ ವಿಷಯದಲ್ಲಿ ಮೂಗು ತೂರಿಸಿ, ಒಂದು ಕಾಲಕ್ಕೆ ತಾನೇ ರೂಪಿಸಿದ್ದ ಒಪ್ಪಂದ ಮತ್ತು ನಿಲುವುಗಳಿಗೆ ಸಂಪೂರ್ಣ ವ್ಯತಿರಿಕ್ತ ರೀತಿ ಯಲ್ಲಿ ಟ್ರಂಪ್ ಸರಕಾರ ನಡೆದುಕೊಳ್ಳುತ್ತಿರುವುದರಿಂದಾಗಿ, ಅಂತಾರಾಷ್ಟ್ರೀಯ ಮಟ್ಟ ದಲ್ಲಿ ರಾಜತಾಂತ್ರಿಕ ಸಮನ್ವಯ ಮತ್ತು ಬಾಂಧವ್ಯ ಹದಗೆಡುತ್ತಿದೆ.

ಉಕ್ರೇನ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ, ತನ್ನ ವ್ಯಾಪ್ತಿಯಲ್ಲಿ ಅನೇಕ ಕಸರತ್ತುಗಳನ್ನು ನಡೆಸುತ್ತಿದೆ, ಅಮೆರಿಕದ ಜತೆಗಿನ ಸಂಬಂಧ ಒಂದಷ್ಟು ಹಳಸುತ್ತಿದ್ದಂತೆ ಇತರ ದೇಶಗಳ ನೆರವನ್ನು ಯಾಚಿಸುತ್ತಿದೆ. ಇದಕ್ಕೆ ಸ್ಪಂದಿಸಿರುವ ಬ್ರಿಟನ್ ದೇಶವು ಉಕ್ರೇ ನ್‌ಗೆ 2 ಮಿಲಿಯನ್ ಡಾಲರ್ ನೆರವನ್ನು ಘೋಷಿಸಿದೆ. ಈ ಅನುದಾನದಿಂದ 5000 ರಕ್ಷಣಾ ಕ್ಷಿಪಣಿಗಳನ್ನು ಉಕ್ರೇನ್ ಖರೀದಿಸಬಹುದು!

ಶ್ವೇತಭವನದಲ್ಲಿ ಝೆಲೆನ್ಸ್ಕಿ ಅವರನ್ನು ಟ್ರಂಪ್ ಸರಕಾರ ಅವಮಾನಿಸಿದ ಬಳಿಕ ಉಕ್ರೇನ್ ಬೆನ್ನಿಗೆ ನಿಂತಿರುವ ಬ್ರಿಟನ್ ಮತ್ತು ಐರೋಪ್ಯ ರಾಷ್ಟ್ರಗಳ ನಾಯಕರು, ಅಮೆರಿಕ ಮತ್ತು ರಷ್ಯಾಕ್ಕೆ ಒಂದಷ್ಟು ಎಚ್ಚರಿಕೆ ಸಂದೇಶಗಳನ್ನು ರವಾನಿಸಿದ್ದಾರೆ. ಒಂದೊಮ್ಮೆ ಸದ್ಯದ ಕದನವಿರಾಮ ಒಪ್ಪಂದವನ್ನು ರಷ್ಯಾ ಕಡೆಗಣಿಸಿ ದಾಳಿಗೆ ಮುಂದಾದರೆ, ತಕ್ಕ ಪ್ರತಿದಾಳಿ ನಡೆಸಲು ಉಕ್ರೇನ್ ದೇಶವನ್ನು ಸನ್ನದ್ಧವಾಗಿಸುವುದು ಈ ರಾಷ್ಟ್ರಗಳ ಅಜೆಂಡಾ!

ಒಟ್ಟಿನಲ್ಲಿ, ಪಕ್ಕದ ಮನೆಗೆ ಬಿದ್ದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಬ್ರಿಟನ್ ಮತ್ತು ಐರೋಪ್ಯ ರಾಷ್ಟ್ರಗಳೂ ಅಖಾಡಕ್ಕಿಳಿದಿವೆ! ‘ಅಪ್ಪ-ಅಮ್ಮನ ಜಗಳದಲಿ ಕೂಸು ಬಡವಾ ಯಿತು’ ಎಂಬ ಮಾತಿನಂತೆ, ಸಬಲರ ಮೇಲಾಟದ ಪಟ್ಟುಗಳು, ವ್ಯೂಹಾತ್ಮಕ ತಂತ್ರ-ಪ್ರತಿ ತಂತ್ರಗಳ ಆಟಾಟೋಪಗಳ ನಡುವೆ ಶಾಂತಿ-ಸಂಯಮ-ಮಾನವೀಯತೆಗಳು ಬಡಕಲಾಗು ತ್ತಿರುವುದು ಈ ಶತಮಾನದ ದುರಂತ.

ಯಾವುದೇ ದೇಶದ ಜನಸಾಮಾನ್ಯರಿಗೆ ಯುದ್ಧ ಬೇಡವೇ ಬೇಡ, ಅದು ಅಯಾಚಿತ ಹೇರಿಕೆ. ರಾಜತಾಂತ್ರಿಕ ಬಾಂಧವ್ಯಗಳ ಸಮತೋಲನ ಹದಗೆಟ್ಟು ಇಡೀ ಪ್ರಪಂಚವೇ ವಿಕ್ಷಿಪ್ತ ಕಾಲ ಘಟ್ಟದೆಡೆಗೆ ಅಡಿಯಿಡುತ್ತಿರುವಂತೆ ಸದ್ಯಕ್ಕೆ ಭಾಸವಾಗುತ್ತಿದೆ. ಈ ಮೇಲಾಟದ ಹೋರಾಟ ಜಗದಗಲ ಆತಂಕ ಮೂಡಿಸಿದೆ. ಭಾರತವು ‘ವಿಶ್ವದೆಲ್ಲೆಡೆ ಶಾಂತಿ ನೆಲೆಸುವಂತೆ ಮಾಡುವ’ ಏಕೈಕ ಕಾರ್ಯಸೂಚಿಯೊಂದಿಗೆ ಮುಂದಾಳತ್ವ ವಹಿಸಿಕೊಂಡು, ಈ ಕಲುಷಿತ ವಾತಾ ವರಣವನ್ನು ತಿಳಿಗೊಳಿಸಲು ಇದು ಸುಸಮಯ! ಅದು ಆದಷ್ಟು ಬೇಗ ಕೈಗೂಡಲಿ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)