ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishweshwar Bhat Column: ಬಂದೇ ಬರುತಾನೆ ಶಮಿ ಬಂದೇ ಬರುತಾನೆ !

ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲೆಂದು ಶಮಿ ದುಬೈಗೆ ಆಗಮಿಸಿ ದ್ದರು. ದಿನವಿಡೀ ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡು, ಸಾಯಂಕಾಲ ದಣಿವು ಆರಿಸಿಕೊಳ್ಳಲು, ಪ್ರವೀಣ ಶೆಟ್ಟಿಯವರ ಆಹ್ವಾನದ ಮೇರೆಗೆ ಶಮಿ ಅಲ್ಲಿಗೆ ಬಂದಿದ್ದ. ಅದೇ ಅವಧಿಯಲ್ಲಿ ನಾನೂ ದುಬೈ ಯಲ್ಲಿದ್ದುದರಿಂದ, ಪ್ರವೀಣ ನನ್ನನ್ನೂ ಅಲ್ಲಿಗೆ ಆಮಂತ್ರಿಸಿ ದ್ದರು

ಬಂದೇ ಬರುತಾನೆ ಶಮಿ ಬಂದೇ ಬರುತಾನೆ !

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅಂಕಣ

ನೂರೆಂಟು ವಿಶ್ವ

vbhat@me.com

ಇತ್ತೀಚೆಗೆ ನಾನು ದುಬೈಗೆ ಹೋದಾಗ, ಭಾರತದ ವೇಗದ ಬೌಲರ್ ಮಹಮದ್ ಶಮಿ ಜತೆಗೆ ಒಟ್ಟಿಗೆ ಸುಮಾರು ಎರಡು ಗಂಟೆ ಊಟ ಮಾಡುವ ಮತ್ತು ಮಾತಾಡುವ ಅವಕಾಶ ಸಿಕ್ಕಿತ್ತು. ದುಬೈನಲ್ಲಿರುವ ಹೋಟೆಲ್ ಉದ್ಯಮಿ ಮತ್ತು ಸ್ನೇಹಿತರಾದ ಪ್ರವೀಣ ಶೆಟ್ಟಿ ಇದಕ್ಕೆ ಸಾಕ್ಷಿ ಯಾಗಿದ್ದರು. ಹಾಗೆ ನೋಡಿದರೆ, ನಾನು ಶಮಿಯನ್ನು ಭೇಟಿ ಮಾಡುತ್ತಿದ್ದುದು ಅದು ಮೊದಲ ಸಲ ಆಗಿರಲಿಲ್ಲ. ಹಿಂದಿನ ವರ್ಷ ಪ್ರವೀಣ ಶೆಟ್ಟಿಯವರು ತಮ್ಮ ಹೋಟೆಲ್ ನ ಕೊನೆ ಮಹಡಿ ಯಲ್ಲಿ ನಿರ್ಮಿಸಿದ ಪೂಲ್ ಸೈಡ್ ರೆಸ್ಟೋರೆಂಟ್ ಉದ್ಘಾಟನೆಗೆ ಶಮಿ ಯನ್ನು ಆಹ್ವಾನಿಸಿದ್ದರು. ಅದೇ ಜಾಗದಲ್ಲಿ ನಾವು ಮೊನ್ನೆ ಊಟಕ್ಕೆ ಕುಳಿತಿದ್ದೆವು.

ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲೆಂದು ಶಮಿ ದುಬೈಗೆ ಆಗಮಿಸಿ ದ್ದರು. ದಿನವಿಡೀ ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡು, ಸಾಯಂಕಾಲ ದಣಿವು ಆರಿಸಿ ಕೊಳ್ಳಲು, ಪ್ರವೀಣ ಶೆಟ್ಟಿಯವರ ಆಹ್ವಾನದ ಮೇರೆಗೆ ಶಮಿ ಅಲ್ಲಿಗೆ ಬಂದಿದ್ದ. ಅದೇ ಅವಧಿಯಲ್ಲಿ ನಾನೂ ದುಬೈಯಲ್ಲಿ ದ್ದುದರಿಂದ, ಪ್ರವೀಣ ನನ್ನನ್ನೂ ಅಲ್ಲಿಗೆ ಆಮಂತ್ರಿಸಿ ದ್ದರು.

ಇದನ್ನೂ ಓದಿ: Vishweshwar Bhat Column: ಬೇರೆಯವರಿಗೆ ಸಾಧ್ಯವಾಗದಿರುವುದು ಅವರಿಗೆ ಹೇಗೆ ಸಾಧ್ಯವಾಗುತ್ತದೆ ?

ಕ್ರಿಕೆಟ್ ಆಟಗಾರರ ಜತೆ ಕೃಷಿ, ಸಂಗೀತ, ಆಧ್ಯಾತ್ಮದ ಬಗ್ಗೆ ಮಾತಾಡಲು ಸಾಧ್ಯವಾ? ನಮ್ಮ ಮಾತುಕತೆ ಸಹಜವಾಗಿ ಕ್ರಿಕೆಟ್ ಕಡೆ ಮತ್ತು ಕ್ರಿಕೆಟ್ ಮೇಲೊಂದೇ ಕೇಂದ್ರೀಕೃತವಾಗಿತ್ತು. ಶಮಿ ಭಾರತದ ಅತ್ಯಂತ ವೇಗದ ಬೌಲರ್ ಗಳ ಪೈಕಿ ಒಬ್ಬರಾಗಿರಬಹುದು. ಆದರೆ ಆತನ ಮಾತು ತುಸು ನಿಧಾನ. ಸ್ವಭಾವವೂ ಮೃದು. ಹಾಗಂತ ಒಳ್ಳೆಯ ಹರಟೆಕೋರ.

ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರಿಗಿರುವ ಸಹಜವಾದ ಒಣಜಂಭ ಇಲ್ಲ. ಮಾಜಿ ಯಾದರೂ ಆಟಗಾರರ ಪೊಗರು ಕಮ್ಮಿಯಾಗಿರುವುದಿಲ್ಲ. ಹೀಗಿರುವಾಗ ಹಾಲಿ ತಂಡದ ಆಟಗಾರರಿಗೆ ಅದೆಷ್ಟಿರಬೇಡ? ಆದರೆ ಶಮಿಯಲ್ಲಿ ಆ ರೀತಿಯ ತಲೆಪ್ರತಿಷ್ಠೆ ಸ್ವಲ್ಪವೂ ಇರಲಿಲ್ಲ.

ಪ್ರಾಯಶಃ ಅದೊಂದೇ ಕಾರಣದಿಂದ ನಮ್ಮ ಮಾತುಕತೆಯಲ್ಲಿ ಯಾವ ಜಣುಕುಗಳಿಲ್ಲದೇ ಸಲೀಸು ಮತ್ತು ನಿರಾತಂಕವಾಗಿತ್ತು. ಊಟಕ್ಕೆ ಕುಳಿತಾಗ ಟೇಬಲ್ ಮ್ಯಾನರ್ಸ್ ಬಹಳ ಮುಖ್ಯ. ನಾನು ಶಮಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.

ಎರಡೆರಡು ಸಲ ವೇಟರ್ ಬಂದು, ಯಾವ ಡ್ರಿಂಕ್ಸ್ ಕೊಡಲಿ ಎಂದು ಕೇಳಿದರೂ, ಬೇಡ ಎಂದೇ ಹೇಳಿದ. ತಿನ್ನಲು ತರಕಾರಿಯನ್ನೇ ಆರ್ಡರ್ ಮಾಡಿದ. ಅಷ್ಟಾದರೂ ವೇಟರ್ ಗೆ ಸಮಾಧಾನವಾಗಲಿಲ್ಲ ಅನಿಸುತ್ತದೆ. ಅವನ ಸಮಾಧಾನಕ್ಕೆ ಕೋಲ್ಡ್ ವಾಟರ್ ನೀಡುವಂತೆ ಶಮಿ ಹೇಳಿದ. ‌

ಅದಾಗಿ ಎರಡು ದಿನಗಳ ಬಳಿಕ ಆತ ಬಾಂಗ್ಲಾದೇಶದ ವಿರುದ್ಧ ಆಡಬೇಕಿತ್ತು. ಫಿಟ್ನೆಸ್ ಕಾಪಾಡಿಕೊಳ್ಳಬೇಕಿದ್ದರಿಂದ, ನಿರ್ಧರಿತ ಆಹಾರದ ಹೊರತಾಗಿ ತಾನು ಮತ್ತೇನನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ. ಕೊನೆಯಲ್ಲಿ ಅನ್ನ ಮತ್ತು ತೊವೆ (ದಾಲ) ಹಾಗೂ ಎರಡು ಚಮಚ ಮೊಸರನ್ನು ಸೇವಿಸಿದ. ನಾವೆಲ್ಲ ಐಸ್ ಕ್ರೀಮ್ ಸೇವಿಸಿ ದರೂ ಶಮಿ ಒಲ್ಲೆ ಎಂದ.

ಫಿಟ್ನೆಸ್ ಗೆ ಸಂಬಂಧಿಸಿದ ಹಾಗೆ ಒಂದು ಮಾತಿದೆ - Every pound lost is a victory. ಶಮಿ ಅದನ್ನು ಪಾಲಿಸಿಕೊಂಡು ಬರುತ್ತಿರುವುದು ಆತನ ಹ್ಯಾಬಿಟ್ಸ್‌ ಹೇಳು ತ್ತಿತ್ತು. ಊಟದ ಬಳಿಕ ಸ್ವೀಟ್ ಕೊಡಲಾ ಅಂತ ವೇಟರ್ ಕೇಳಿದಾಗ, Don't reward myself with food. I am not a dog ಎಂದು ತಮಾಷೆಯಿಂದ ನಗುತ್ತಾ ಟೇಬಲ್‌ನಿಂದ ಎದ್ದ. ಇದು ಒಬ್ಬ ಕ್ರೀಡಾ ಪಟುವಿನ ಶಿಸ್ತು ಮತ್ತು ನಿಯತ್ತು.

ಕ್ರೀಡಾಪಟುವಿಗೆ ಡಯಟ್ ಮುಖ್ಯ ಅಲ್ಲ. ಆತನಿಗೆ ಮುಖ್ಯವಾಗಿರುವುದು ಲೈಫ್ ಸ್ಟೈಲ್. ಮೊದಲಿನಿಂದಲೂ ಶಮಿ ಬಗ್ಗೆ ನನಗೆ ವಿಶೇಷ ಅಭಿಮಾನ. ಉತ್ತರಪ್ರದೇಶದ ಅಮ್ರೋಹಾ ದ ಸಹಸ್ಪುರ್ ಎಂಬ ಹಳ್ಳಿಯಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹಳ್ಳಿ ಹುಡುಗ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸಣ್ಣ ಮಾತಲ್ಲ. ‌

ಶಮಿಗೆ ಗಾಡ್ ಫಾದರ್ ಇರಲಿಲ್ಲ. ಮನೆಯಲ್ಲಿ ಹೇಳಿಕೊಳ್ಳುವಂಥ ಅನುಕೂಲವೂ ಇರ ಲಿಲ್ಲ. ನಮ್ಮ ದೇಶದ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಕನಸು ಕಾಣುವ ಇಂಥ ಕೋಟ್ಯಂತರ ಹುಡುಗರು ಹಳ್ಳಿಹಳ್ಳಿಗಳಲ್ಲಿ ಸಿಗುತ್ತಾರೆ. ಆ ಪೈಕಿ ಶೇ.ಒಂದರಷ್ಟು ಹುಡುಗರಿಗೆ ರಣಜಿ ತಂಡದಲ್ಲೂ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ದೂರವೇ ಉಳಿಯಿತು.

ನಿಜ, ಶಮಿಯಂಥ ಹುಡುಗರು ಎಲ್ಲ ಊರುಗಳಲ್ಲೂ ಸಿಗುತ್ತಾರೆ. ಆದರೆ ಶಮಿಯಂಥವರು ಮಾತ್ರ ಸ್ಥಾನ ಪಡೆಯುತ್ತಾರೆ. ಶಮಿ ಊರಿಗೆ ಸನಿಹದಲ್ಲಿರುವ ಮೊರಾದಾಬಾದ್ ನಲ್ಲಿ ಬದ್ರುದ್ದೀನ್ ಸಿದ್ದಿಕಿ ಎಂಬ ಕ್ರಿಕೆಟ್ ಕೋಚ್ ಇದ್ದರಂತೆ. ’ನಿಮ್ಮ ಮಗ ಅವರನ್ನು ಭೇಟಿ ಯಾಗಲಿ’ ಎಂದು ಶಮಿ ತಂದೆಗೆ ಯಾರೋ ಹೇಳಿದರಂತೆ. ಶಮಿ ತಂದೆ ಕ್ರಿಕೆಟ್ ಪ್ರೇಮಿ. ಆದರೆ ರೈತಾಪಿ ಕೆಲಸ ಮಾಡಿಕೊಂಡಿದ್ದವ. ಶಮಿಯ ಬೌಲಿಂಗ್ ನೋಡಿದ ಸಿದ್ದಿಕಿಗೆ ಈ ಹುಡುಗ ಸಾಮಾನ್ಯ ಪೋರ ಅಲ್ಲ ಅನಿಸಿತಂತೆ. ಹದಿನೈದು ವರ್ಷದ ಶಮಿಗೆ ತರಬೇತಿ ನೀಡಲು ನಿರ್ಧರಿಸಿದನಂತೆ. ಶಮಿ ಒಂದು ದಿನವೂ ಪ್ರಾಕ್ಟೀಸ್ ಸೆಷನ್ ತಪ್ಪಿಸುತ್ತಿರಲಿಲ್ಲ ವಂತೆ.

ವೇಗದ ಬೌಲಿಂಗ್ ಜತೆಗೆ, ಚೆಂಡನ್ನು ಎರಡೂ ಕಡೆ ತಿರುಗಿಸುವ (ರಿವರ್ಸ್ ಸ್ವಿಂಗ್) ಶಮಿಯ ಅಪರೂಪ ಶೈಲಿ ಸಿದ್ದಿಕೆಗೆ ಬಹಳ ಹಿಡಿಸಿತಂತೆ. ಇಷ್ಟಾಗಿಯೂ ಉತ್ತರ ಪ್ರದೇಶದ 19 ವರ್ಷ ದ ಆಟಗಾರ ತಂಡದಲ್ಲಿ ರಾಜಕೀಯ ಮತ್ತು ಪ್ರಭಾವದ ಕಾರಣದಿಂದ ಶಮಿಗೆ ಸ್ಥಾನ ಸಿಗಲಿಲ್ಲ. ಇದೇ ರೀತಿ ಮೂರು ಸಲ ಶಮಿಗೆ ಅವಕಾಶ ತಪ್ಪಿ ಹೋಯಿತು.

ಇನ್ನೊಂದು ಅವಕಾಶ ತೆರೆದುಕೊಳ್ಳಲಿ ಎಂದು ಕೋಚ್ ಸಿದ್ದಿಕಿ ಕೋಲ್ಕತಾಕ್ಕೆ ಹೋಗಿ ನೆಲೆಸುವಂತೆ ಶಮಿಗೆ ಹೇಳಿದ. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ದೇಬಬ್ರತ ದಾಸ್ , ಶಮಿಯ ವೇಗದ ಬೌಲಿಂಗ್ ಮತ್ತು ಬೌಲಿಂಗ್ ವೈಖರಿ ನೋಡಿ ತನ್ನ ‘ಟೌನ್ ಕ್ಲಬ್’ ಗೆ ಆಯ್ಕೆ ಮಾಡಿದ. ಅಷ್ಟೇ ಅಲ್ಲ ತನ್ನ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ. ‌

ದಾಸ್ ಸಿಕ್ಕ ಸಿಕ್ಕವರ ಮುಂದೆ ಶಮಿ ಬಗ್ಗೆ ಗುಣಗಾನ ಮಾಡುತ್ತಿದ್ದ. ಈತ ಮುಂದೊಂದು ದಿನ ಭಾರತದ ಕ್ರಿಕೆಟ್ ತಂಡದ ಆಸ್ತಿ ಆಗ್ತಾನೆ ಎಂದು ಹೇಳುತ್ತಿದ್ದ. ಬಂಗಾಳ ಕ್ರಿಕೆಟ್ ಆಯ್ಕೆ ಮಂಡಳಿ ಸದಸ್ಯರಬ್ಬರಾದ ಸಂಬರಣ್ ಬ್ಯಾನರ್ಜಿ ಮನವೊಲಿಸಿ, ಒಮ್ಮೆ ಶಮಿಯ ಬೌಲಿಂಗ್ ನೋಡುವಂತೆ ಒತ್ತಾಯಿಸಿದ. ಶಮಿಯ ಬೌಲಿಂಗ್ ನೋಡಿ ಬಹಳ ಖುಷಿ ಪಟ್ಟ ಬ್ಯಾನರ್ಜಿ, ಬಂಗಾಳದ ಇಪ್ಪತ್ತೆರಡು ವರ್ಷ ವಯಸ್ಸಿನ ತಂಡಕ್ಕೆ ಆಯ್ಕೆ ಮಾಡಿದ.

ಇದರಿಂದ ಶಮಿಗೆ ಮುಂದೆ ಮೋಹನ್ ಬಾಗನ್ ಕ್ರಿಕೆಟ್ ಕ್ಲಬ್ ಸೇರಲು ಅನುಕೂಲ ವಾಯಿತು. ಅಲ್ಲಿ ಸೌರವ್ ಗಂಗೂಲಿ ಪರಿಚಯವಾಯಿತು. ಈಡನ್ ಗಾರ್ಡ ನಲ್ಲಿ ಗಂಗೂಲಿ ನೆಟ್ ಪ್ರಾಕ್ಟೀಸ್ ಮಾಡುವಾಗ, ಶಮಿ ಬೌಲ್ ಎಸೆಯುತ್ತಿದ್ದ. ಬಂಗಾಳದ ರಣಜಿ ತಂಡಕ್ಕೆ ಶಮಿಯನ್ನು ಸೇರಿಸಿಕೊಳ್ಳಿ ಎಂದು ಖುದ್ದು ಶಿಫಾರಸು ಮಾಡಿದ್ದು ಗಂಗೂಲಿ.

ಅಲ್ಲಿ ತನಕ ಕವಲುದಾರಿಯಲ್ಲಿದ್ದ ಶಮಿಯ ಕ್ರಿಕೆಟ್ ಬದುಕು ಮುಖ್ಯರಸ್ತೆಗೆ, ಹೆದ್ದಾರಿಗೆ ಹೊರಳುವಂತಾಯಿತು. 2010ರಲ್ಲಿ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಶಮಿ ಎಲ್ಲರ ಗಮನ ಸೆಳೆದ. ಮುಂದಿನ ವರ್ಷ ನಡೆದ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯದ ಪರವಾಗಿ ಆಡಿದ ಶಮಿ ಎಂಟು ವಿಕೆಟ್ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಗೆ ಬಂದ.

ಅದೇ ವರ್ಷ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಹ್ಯಾಟ್ರಿಕ್ ಸೇರಿದಂತೆ, ಹನ್ನೊಂದು ವಿಕೆಟ್ ಪಡೆದು, ಭಾರತ ತಂಡದ ಭವಿಷ್ಯದ ಆಟಗಾರ ಎಂಬ ಭರವಸೆ ಮೂಡಿಸಿದ. ಅದಾಗಿ ಮುಂದಿನ ವರ್ಷ (2013)ವೇ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕೊತಾದಲ್ಲಿ ನಡೆದ ಟೆಸ್ಟ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿದ. ಆ ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ಹಾಗೂ ಎರಡನೇ ಇನ್ನಿಂಗ್ಸ ನಲ್ಲಿ ಐದು ವಿಕೆಟ್ ಪಡೆದ. ಇದು ಭಾರತದ ವೇಗದ ಬೌಲರ್ ಮೊದಲ ಪಂದ್ಯದಲ್ಲಿ ಮಾಡಿದ ಅತ್ಯುತ್ತಮ ಸಾಧನೆ. (ಶಮಿ ಬಿಟ್ಟರೆ ಮುನಾಫ್ ಪಟೇಲ್ ಮೊದಲ ಪಂದ್ಯದಲ್ಲಿ ಏಳು ವಿಕೆಟ್ ಪಡೆದಿದ್ದು). ‌

ಇಲ್ಲಿ ತನಕ ಎಲ್ಲ -ರ್ಮಾಟ್ ಗಳ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಶಮಿ, 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ (ಆ ಪೈಕಿ ಆರು ಸಲ ಐದು ಮತ್ತು ಹೆಚ್ಚು ವಿಕೆಟ್ ) ಪಡೆದಿದ್ದಾ‌ ನೆ. ಹಾಗೆ 104 ಏಕದಿನದ ಪಂದ್ಯಗಳನ್ನು ಆಡಿರುವ ಶಮಿ, 202 ವಿಕೆಟ್ ಕಬಳಿಸಿದ್ದಾನೆ.

ಐದು ಸಲ ಪಂದ್ಯವೊಂದರಲ್ಲಿ ಐದು ವಿಕೆಟ್ ಪಡೆದಿರುವುದು ಗಮನಾರ್ಹ. ಟೆಸ್ಟ್‌ನಲ್ಲಿ ಎರಡು ಸಲ ಮಾತ್ರ ಅರ್ಧ ಶತಕ ಹೊಡೆದಿರುವುದು. ಉಮ್ರಾನ್ ಮಲಿಕ್, ಮಾಯಾಂಕ್ ಯಾದವ್, ಇರ್ಫಾನ್ ಪಠಾಣ್ ಬಿಟ್ಟರೆ ಭಾರತದ ವೇಗಿಗಳಲ್ಲಿ ನಂತರದ ಸ್ಥಾನ ಶಮಿಗೆ. ಉಮ್ರಾನ್ ಮಲಿಕ್ ಗಂಟೆಗೆ 157 ಕಿಮೀ, ಮಾಯಾಂಕ್ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲ್ ಎಸೆದರೆ, ಶಮಿ ಸಾಧನೆ 153.3 ಕಿಮೀ/ಗಂಟೆ. (ಕರ್ನಾಟಕದ ಜಾವಗಲ್ ಶ್ರೀನಾಥ್ ಅವರದು 154.5 ಕಿಮೀ/ಗಂಟೆ ಎಂಬುದು ಗಮನಾರ್ಹ). ಜಸ್ಪ್ರೀತ್ ಬುಮ್ರಾ (153.26 ಕಿಮೀ/ಗಂಟೆ) ಮತ್ತು ಶಮಿ ಇಬ್ಬರದೂ ಹೆಚ್ಚು-ಕಮ್ಮಿ ಒಂದೇ ವೇಗ. ಶಮಿ ಇಂದಿಗೂ ಅದೇ ವೇಗ, ಮೊನಚು ಕಾಪಾಡಿಕೊಂಡಿರುವುದು ಸಣ್ಣ ಮಾತಲ್ಲ.

ವೆಸ್ಟ್ ಇಂಡೀಸ್ ನ ಖ್ಯಾತ ವೇಗದ ಬೌಲರ್ ಮತ್ತು ವೀಕ್ಷಕ ವಿವರಣಕಾರ ಮೈಕೆಲ್ ಹೋಲ್ಡಿಂಗ್, ಶಮಿ ಬಗ್ಗೆ ಹೇಳಿರುವ ಮಾತುಗಳನ್ನು ಗಮನಿಸಬೇಕು - If you are consta ntly bowling in the right areas, attacking these batsmen, it creates more and more pressure, and they are more liable to make mistakes. So that is Shami's real strength . ವೇಗದ ಬೌಲರುಗಳು ಹೆಚ್ಚು ವರ್ಷ ತಾಳಿಕೆ ಬರುವುದಿಲ್ಲ ಎಂಬ ಮಾತಿದೆ. ಅವರು ಬಂದಷ್ಟೇ ಬೇಗ ಮಾಯವಾಗಿಬಿಡುತ್ತಾರೆ. ಆದರೆ ಶಮಿ ಕಳೆದ ಹನ್ನೆರಡು ವರ್ಷ ಗಳಿಂದ ಭಾರತ ತಂಡದಲ್ಲಿ ಆಡುತ್ತಿರುವುದು ಸಾಮಾನ್ಯ ಸಂಗತಿ ಅಲ್ಲ.

ಶಮಿ ಬಗ್ಗೆ ಅಭಿಮಾನ ಪಡಲು ಇನ್ನೊಂದು ಕಾರಣವಿದೆ. ವೇಗದ ಬೌಲರುಗಳು ಬೌನ್ಸ್ ( bounce) ಎಸೆಯುವುದು ಸಾಮಾನ್ಯ. ಆದರೆ ನಿಜ ಜೀವನದಲ್ಲಿ bounce back ಆಗುವುದು ಬಹಳ ಕಷ್ಟ. ಶಮಿ ವಿಷಯದಲ್ಲಿ ಇದು ಅಕ್ಷರಶಃ ಸತ್ಯ. 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಾಲಿನ ಹಿಮ್ಮಡಕ್ಕೆ ಗಾಯವಾದಾಗ, ಶಮಿ ಇನ್ನು ಮುಂದೆ ಕ್ರಿಕೆಟ್ ಆಡುವುದು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು.

ಕಾರಣ ಹಿಮ್ಮಡದಲ್ಲಿನ ಮೂಳೆ ಎರಡು ಭಾಗವಾಗಿತ್ತು. ಒಂದು ವೇಳೆ ಗುಣಮುಖ ನಾದರೂ ಮೊದಲಿನ ಸ್ಥಿತಿಗೆ ಮರಳುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಇದರ ಪರಿಣಾಮ, ಶಮಿ ಆಸ್ಟ್ರೇಲಿಯಾ ಸರಣಿ, ದಕ್ಷಿಣ ಆಫ್ರಿಕಾ ಪ್ರವಾಸ, ಇಂಗ್ಲೆಂಡ್ ಪ್ರವಾಸ, ಐಪಿಎಲ್ ಸೇರಿದಂತೆ ಹಲವು ಪಂದ್ಯಗಳಿಂದ ಹೊರಗೆ ಉಳಿಯುವಂತಾಯಿತು.

ಒಬ್ಬ ಫಾರ್ಮ್ ನಲ್ಲಿರುವ ಕ್ರಿಕೆಟ್ ಆಟಗಾರನಿಗೆ ಗಾಯಾಳುವಾಗಿ ಹಾಸಿಗೆ ಮೇಲೆ ಬಿದ್ದು ಕೊಂಡಿರುವುದರಂಥ ದೊಡ್ಡ ಯಾತನೆ, ಹಿಂಸೆ ಅಥವಾ ಶಿಕ್ಷೆ ಇನ್ನೊಂದಿಲ್ಲ. ಹದಿನಾಲ್ಕು ತಿಂಗಳು ಶಮಿ ನಿಸ್ತೇಜನಾಗಿ ಬಿದ್ದಿದ್ದ. ಒಂದೊಂದು ಕ್ಷಣವೂ ಹರಿದು ತಿನ್ನುತ್ತಿತ್ತು.

ಈ ಮಧ್ಯೆ ವೈಯಕ್ತಿಕ ಜೀವನದಲ್ಲಿ ಎದ್ದ ಬಿರುಗಾಳಿ ಇನ್ನೊಂದೆಡೆ ಸುಡುತ್ತಿತ್ತು. ಕೈಹಿಡಿದ ಪತ್ನಿ ಮಾಧ್ಯಮದೆದುರು ಶಮಿಯ ಮಾನ-ಮರ್ಯಾದೆಯನ್ನು ಹರಾಜು ಹಾಕಿದ್ದಳು. ಶಮಿ ಮತ್ತು ಆತನ ತಂದೆ-ತಾಯಿ, ಕುಟುಂಬ ಸದಸ್ಯರ ವಿರುದ್ಧ ಆರೋಪ ಹೊರಿಸಿ, ತನ್ನ ಮಗಳೊಂದಿಗೆ ಮನೆಯಿಂದ ಹೊರ ನಡೆದಿದ್ದಳು. ಆತನ ವಿರುದ್ಧ ಎಫ್‌ ಐಆರ್ ದಾಖ ಲಾಗಿ ಪೊಲೀಸರು ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇದೊಂದೇ ಆತನ ಕ್ರಿಕೆಟ್ ವೃತ್ತಿಜೀವನ ಮೊಟಕಾಗಲು ಸಾಕಾಗಿತ್ತು. ಅದರ ಮೇಲೆ ಮತ್ತೊಂದು ಬರೆ ಎಂಬಂತೆ ಕಾಲಿಗಾದ ಗಾಯ ಶಮಿಯನ್ನು ಜರ್ಜರಿತಗೊಳಿಸಿತ್ತು.

ತನ್ನ ಕ್ರಿಕೆಟ್ ಜೀವನ ಉತ್ತುಂಗದಲ್ಲಿದ್ದಾಗ, ಆದ ಈ ಎರಡು ದುರಂತಗಳು ಆತನನ್ನು ಸಂಪೂರ್ಣ ಘಾಸಿ ಮಾಡಿತ್ತು. ಟಿವಿಯಲ್ಲಿ ಕ್ರಿಕೆಟ್ ನೋಡುವಾಗ, ಮರಳಿ ತಾನು ಮೈದಾನ ಕ್ಕಿಳಿಯುವ ಸಾಧ್ಯತೆ ಕ್ಷೀಣಿಸಿದಂತೆನಿಸಿ ಹೃದಯ ಛಿದ್ರವಾದಂತೆನಿಸುತ್ತಿತ್ತು. ಸರ್ಜರಿಯಾದ ಬಳಿಕ ಬೆಂಗಳೂರಿನ ಸದಾಶಿವನಗರದ ಮನೆಯೊಂದರಲ್ಲಿ ಶಮಿ ಏಕಾಂಗಿಯಾಗಿ ವಿಶ್ರಾಂತಿ ಪಡೆದು ಹೊಸ ಕನಸಿಗೆ ಮೊಟ್ಟೆಯಿಟ್ಟು ಕಾವು ಕೊಡುತ್ತಿದ್ದ.

ತಾನು ಮರಳಿ ಮೈದಾನಕ್ಕಿಳಿದೇ ಇಳಿಯುತ್ತೇನೆ ಎಂದು ಮಾನಸಿಕವಾಗಿ ಗಟ್ಟಿಯಾಗುತ್ತಿದ್ದ. ಶಮಿ ಜಾಗದಲ್ಲಿ ಬೇರೆ ಯಾರೇ ಇದ್ದರೂ ಕೈಚೆಲ್ಲಿ ನಿವೃತ್ತರಾಗಿ ಬಿಡುತ್ತಿದ್ದರೇನೋ? If it was easy, everyone would do it ಎಂಬ ಮಾತಿದೆ. ಆದರೆ ಶಮಿ ಬಾಹುಬಲಿಯಂತೆ ಎದ್ದು ಬಂದ!

ಮೊನ್ನೆ ದುಬೈಯಲ್ಲಿ ನಡೆದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ ಕಬಳಿಸಿ, ತನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ ಎಂಬುದನ್ನು ಸಾಬೀತು ಮಾಡಿದ. ಆ ಪಂದ್ಯ ಮುಗಿದ ಬಳಿಕ It felt like I was starting over, like a toddler (ಅಂಬೆಗಾಲಿಡುವವ) learning how to walk ಎಂದು ಹೇಳಿದ ಮಾತು ಕೇಳಿ ಮನಸ್ಸು ಭಾರವಾಯಿತು. ಅದಕ್ಕೂ ನಾಲ್ಕು ದಿನಗಳ ಮುನ್ನ, ಆ ಬೆಳದಿಂಗಳ ರಾತ್ರಿ ಯಲ್ಲಿ, ಆ ಹದಿನಾರು ತಿಂಗಳು ತಾನು ಅನುಭವಿಸಿದ ಮಾನಸಿಕ ತೊಳಲಾಟ, ವೇದನೆ, ತುಮುಲ ಗಳನ್ನು ಶಮಿ ನಮ್ಮ ಮುಂದೆ ನಿವೇದಿಸಿಕೊಂಡಿದ್ದು ನೆನಪಾಗಿ ಮನಸ್ಸು ತುಂಬಿ ಬಂದಿತು.

ಮೊನ್ನೆ ಪಾಕಿಸ್ತಾನದ ವಿರುದ್ಧ ಮೂರು ಓವರ್ ಎಸೆದ ಬಳಿಕ, ಮುಂದೆ ಬೌಲ್ ಮಾಡ ಲಾಗದೇ ಕಾಲುನೋವಿನಿಂದ ಪೆವಿಲಿಯನ್‌ಗೆ ಮರಳುವಾಗ ಆತ ಹೇಳಿದ If it doesn't challenge you, it won't change you ಎಂಬ ಮಾತು ನೆನಪಾಯಿತು. ಶಮಿ ಬಂದೇ ಬರು ತ್ತಾನೆ!