Vishweshwar Bhat Column: ಬೇರೆಯವರಿಗೆ ಸಾಧ್ಯವಾಗದಿರುವುದು ಅವರಿಗೆ ಹೇಗೆ ಸಾಧ್ಯವಾಗುತ್ತದೆ ?
ಮಹತ್ವಾಕಾಂಕ್ಷೆಯ ಗುರಿಗಳನ್ನು ಸಣ್ಣ, ನಿರ್ವಹಣಾ ಕ್ರಮಗಳಾಗಿ ವಿಭಜಿಸಲು ಕೈಜೆನ್ ಪ್ರೋತ್ಸಾಹಿಸುತ್ತದೆ. ಅವುಗಳನ್ನು ಸುಲಭವಾಗಿ ಸಾಧಿಸಲು ಅಣಿಗೊಳಿಸುತ್ತದೆ. ಪರಿಪೂ ರ್ಣತೆ ಸಾಧಿಸುವ ಮನಸ್ಸು ಸಾಮಾನ್ಯವಾಗಿ ಹೊಸದನ್ನು ಪ್ರಾರಂಭಿಸುವುದನ್ನು ತಡೆಯುತ್ತದೆ. ಪ್ರಗತಿಯು ಪರಿಪೂರ್ಣವಾಗಿರಬೇಕಾಗಿಲ್ಲ ಎಂದು ಕೈಜೆನ್ ತತ್ವ ಹೇಳುತ್ತದೆ

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಂಕಣ

ಇದೇ ಅಂತರಂಗ ಸುದ್ದಿ
vbhat@me.com
ಜೇಮ್ಸ್ ಕ್ಲಿಯರ್ ಬರೆದ ‘ಅಟಾಮಿಕ್ ಹ್ಯಾಬಿಟ್ಸ್’ ಪುಸ್ತಕ, ಕಳೆದ ಐದು ವರ್ಷಗಳಲ್ಲಿ ಜಗತ್ತಿ ನ ಎಲ್ಲ ದೇಶಗಳಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಂದು. ಪ್ರತಿದಿನ ನಾವು ನಮ್ಮ ಅಭ್ಯಾಸವನ್ನು ಸಣ್ಣ ಪ್ರಮಾಣದಲ್ಲಿ ಬದಲಿಸಿಕೊಂಡರೆ, ಮುಂದೊಂದು ದಿನ ಅಸಾ ಧಾರಣ ಬದಲಾವಣೆಗೆ ಕಾರಣವಾಗಿ, ಅಸಾಮಾನ್ಯ ಸಾಧನೆ ಮಾಡಬಹುದು ಎಂಬು ದನ್ನು ಜೇಮ್ಸ್ ಕ್ಲಿಯರ್ ಆ ಕೃತಿಯಲ್ಲಿ ಹತ್ತಾರು ನಿದರ್ಶನಗಳೊಂದಿಗೆ ವಿವರಿಸಿದ್ದಾನೆ. ಜೇಮ್ಸ್ ಕ್ಲಿಯರ್ ಈ ಪುಸ್ತಕವನ್ನು ಬರೆದಾಗ ಜಪಾನಿಯರು, “ಇದರಲ್ಲಿ ಹೊಸ ಸಂಗತಿ ಗಳೇನೂ ಇಲ್ಲ.
ಕ್ಲಿಯರ್ ನಮ್ಮ ಕೈಜೆನ್ ತತ್ವವನ್ನು ಎಗರಿಸಿ, ತನ್ನದೇ ಭಾಷೆಯಲ್ಲಿ ಬರೆದಿದ್ದಾನೆ. ಇದು ನಮ್ಮ ಕೈಜೆನ್ ತತ್ವವಲ್ಲದೇ ಬೇರೇನೂ ಅಲ್ಲ" ಎಂಬ ಉದ್ಗಾರ ತೆಗೆದಿದ್ದರು. ಆ ಕಾರಣ ದಿಂದ ಈ ಕೃತಿ ಜಪಾನಿನಲ್ಲಿ ಹೆಚ್ಚು ಮಾರಾಟವಾಗಲಿಲ್ಲ. ಜಪಾನಿನಲ್ಲಿ ಕೈಜೆನ್ ಎಂಬ ತತ್ವವಿದೆ. ಅದನ್ನು The Japanese Method for Transforming Habits, One Small Step at a Time ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ. ಜಪಾನಿ ಮೂಲದ ಟೊಯೋಟಾ ಕಂಪನಿ ಯ ಯಶಸ್ಸಿಗೆ ಕೈಜೆನ್ ತತ್ವವೇ ಕಾರಣ ಎಂದು ಆ ಕಂಪನಿಯು ಅಭಿಮಾನದಿಂದ ಹೇಳಿ ಕೊಳ್ಳುತ್ತದೆ.
ಇದನ್ನೂ ಓದಿ: Vishweshwar Bhat Column: ಲಾಭ ಮತ್ತು ಮೌಲ್ಯ
ಸಣ್ಣ ಸಣ್ಣ ಬದಲಾವಣೆಗಳು ಕಾಲಾಂತರದಲ್ಲಿ ಆಳವಾದ ರೂಪಾಂತರಗಳಿಗೆ ಕಾರಣ ವಾಗಬಹುದು. ಅಷ್ಟೇ ಅಲ್ಲ, ಕೈಜೆನ್ ತತ್ವ ತಾಳ್ಮೆ, ಸ್ಥಿರತೆ ಮತ್ತು ಸಾವಧಾನತೆಯನ್ನು ಒತ್ತಿಹೇಳುವುದರಿಂದ ವ್ಯಕ್ತಿ ಮತ್ತು ಸಂಸ್ಥೆಯ ಬೆಳವಣಿಗೆಗೆ ಈ ತತ್ವ ಸಹಾಯಕವಾಗಲಿದೆ ಎಂಬುದು ಜಪಾನಿಯರ ಜೀವನ ದರ್ಶನ.
ಕೈಜೆನ್‌ನ ಕೇಂದ್ರ ಸಿದ್ಧಾಂತವೆಂದರೆ, ಯಾವುದನ್ನೇ ಆಗಲಿ ಸಣ್ಣದಾಗಿ ಆರಂಭಿಸುವುದು. ಗಮನಾರ್ಹ ಬದಲಾವಣೆಯು ಸಣ್ಣ ಹಂತಗಳೊಂದಿಗೆ ಪ್ರಾರಂಭವಾಗಿ, ಬೃಹತ್ ರೂಪ ಪಡೆಯುತ್ತದೆ. ನಿಮ್ಮ ಜೀವನವನ್ನು ಒಂದೇ ಬಾರಿಗೆ ಕೂಲಂಕಷವಾಗಿ ಪರಿಶೀಲಿಸುವ ಬದಲು, ಒಂದು ಸಣ್ಣ ಕ್ರಿಯೆಯೊಂದಿಗೆ ಪ್ರಾರಂಭಿಸುವುದು. ಇದು ಕಾಲಕ್ರಮೇಣ ಶಾಶ್ವತ ಬದಲಾವಣೆಯನ್ನು ಸೃಷ್ಟಿಸುತ್ತದೆ. ಕೈಜೆನ್ ತತ್ವದ ಪ್ರಕಾರ ವೇಗಕ್ಕಿಂತ ಸ್ಥಿರತೆಯು ಹೆಚ್ಚು ಮುಖ್ಯ.

ರಾತ್ರಿಯಲ್ಲಿ ಪ್ರಮುಖ ಬದಲಾವಣೆಯನ್ನು ಸಾಧಿಸಲು ಪ್ರಯತ್ನಿಸುವುದಕ್ಕಿಂತ, ಸಣ್ಣ, ಸ್ಥಿರವಾದ ಸುಧಾರಣೆಗಳನ್ನು ಮಾಡುವುದು ಹೆಚ್ಚು ಪರಿಣಾಮಕಾರಿ. ದೊಡ್ಡ ಗುರಿಗಳನ್ನು ಸಣ್ಣ ಹಂತಗಳಾಗಿ ಒಡೆಯಬೇಕು ಎಂದು ಈ ತತ್ವವು ಹೇಳುತ್ತದೆ. ದೊಡ್ಡ ಗುರಿಗಳನ್ನು ಸಾಧಿಸಲು ಅಗಾಧ ಶ್ರಮ, ಯೋಜನೆ ಅಗತ್ಯ. ಒಂದು ಹಂತದಲ್ಲಿ ಇದು ಅಸಾಧ್ಯ ಎಂದು ಅನಿಸಬಹುದು. ಈ ಕಾರಣಕ್ಕೆ ಕೈಚೆಲ್ಲಿಬಿಡಬಹುದು.
ಮಹತ್ವಾಕಾಂಕ್ಷೆಯ ಗುರಿಗಳನ್ನು ಸಣ್ಣ, ನಿರ್ವಹಣಾ ಕ್ರಮಗಳಾಗಿ ವಿಭಜಿಸಲು ಕೈಜೆನ್ ಪ್ರೋತ್ಸಾಹಿಸುತ್ತದೆ. ಅವುಗಳನ್ನು ಸುಲಭವಾಗಿ ಸಾಧಿಸಲು ಅಣಿಗೊಳಿಸುತ್ತದೆ. ಪರಿಪೂ ರ್ಣತೆ ಸಾಧಿಸುವ ಮನಸ್ಸು ಸಾಮಾನ್ಯವಾಗಿ ಹೊಸದನ್ನು ಪ್ರಾರಂಭಿಸುವುದನ್ನು ತಡೆ ಯುತ್ತದೆ. ಪ್ರಗತಿಯು ಪರಿಪೂರ್ಣವಾಗಿರಬೇಕಾಗಿಲ್ಲ ಎಂದು ಕೈಜೆನ್ ತತ್ವ ಹೇಳುತ್ತದೆ.
ಅವು ಅಪೂರ್ಣ ಅಥವಾ ಗೊಂದಲಮಯವಾಗಿದ್ದರೂ ಸಣ್ಣ ಹೆಜ್ಜೆಗಳನ್ನು ಇಡುತ್ತಾ ನಿಶ್ಚಿತ ಗುರಿ ಸಾಧಿಸಲು ಸಹಾಯ ಮಾಡುತ್ತವೆ. ನಿರಂತರವಾಗಿ ಪುನರಾವರ್ತನೆಯಾಗುವ ಸಣ್ಣ ಕ್ರಿಯೆಗಳು ಅಭ್ಯಾಸಗಳನ್ನು ರೂಪಿಸುತ್ತವೆ. ಒಂದು ಸಣ್ಣ, ಸಕಾರಾತ್ಮಕ ಬದಲಾವಣೆ ಯೊಂದಿಗೆ ಪ್ರಾರಂಭಿಸುವ ಮೂಲಕ, ನಿಮ್ಮ ಗುರಿಗಳು ಮತ್ತು ಮೌಲ್ಯಗಳನ್ನು ಬೆಂಬಲಿ ಸುವ ಅಭ್ಯಾಸಗಳನ್ನು ನೀವು ರೂಢಿಸಿಕೊಳ್ಳುತ್ತಾ ಹೋಗಬಹುದು. ಒಂದೇ ಸಲ ಅದ್ಭುತ ಗೆಲುವು ಸಾಧಿಸಿ ಬೀಗಬೇಕಿಲ್ಲ.
ಸಣ್ಣ-ಪುಟ್ಟ ಗೆಲುವುಗಳನ್ನು ಸಂಭ್ರಮಿಸುವುದನ್ನು ಕಲಿಯಬೇಕು ಎಂದು ಕೈಜೆನ್ ಹೇಳು ತ್ತದೆ. ಸಣ್ಣ ಗೆಲುವುಗಳು ಮತ್ತಷ್ಟು ಗೆಲುವು ಸಾಧಿಸಲು ನಮ್ಮನ್ನು ಪ್ರೇರೇಪಿಸುತ್ತವೆ. ಚಿಕ್ಕ ಚಿಕ್ಕ ಸಂಭ್ರಮಗಳು ನಮ್ಮನ್ನು ಸದಾ ಸಂತುಷ್ಟರನ್ನಾಗಿಡುತ್ತದೆ. ಇದು ದೊಡ್ಡ ಗೆಲುವು ಸಾಧಿಸಲು ಬೇಕಾದ ಸೂರ್ತಿಯನ್ನು ನೀಡುತ್ತದೆ.
ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿ, ಕೇವಲ ಫಲಿತಾಂಶವಲ್ಲ ಎಂಬುದು ಸಹ ಕೈಜೆನ್ ತತ್ವದ ಪ್ರಮುಖ ತಿರುಳು. ತಲುಪಬೇಕಾದ ಗಮ್ಯಸ್ಥಾನದ ಮೇಲೆ ಗಮನವನ್ನು ಕೇಂದ್ರೀ ಕರಿಸದೇ, ಪ್ರಯಾಣವನ್ನು ಆನಂದಿಸುವ ಮನೋಭಾವ ಮುಖ್ಯ. ಫಲಿತಾಂಶವನ್ನು ಲೆಕ್ಕಿ ಸದೇ ಸುಧಾರಣೆಯ ಪ್ರಕ್ರಿಯೆಯು ಸರಿಯಾಗಿದೆಯೇ ಎಂಬುದರತ್ತ ಲಕ್ಷ್ಯ ವಹಿಸಬೇಕು. ವೈಫಲ್ಯವನ್ನು ಕಲಿಕೆಯ ಅವಕಾಶವಾಗಿ ಸ್ವೀಕರಿಸಬೇಕು ಎಂಬುದೂ ಕೈಜೆನ್ ತತ್ವವೇ. ವೈಫಲ್ಯದ ಭಯಕ್ಕಿಂತ ಹೆಚ್ಚಾಗಿ, ಸೋಲು ಅಥವಾ ಹಿನ್ನಡೆಗಳಿಂದ ಕಲಿಯಲು ಮತ್ತು ಬೆಳೆಯಲು ಅವಕಾಶಗಳಾಗಿ ನೋಡುವುದನ್ನು ಕೈಜೆನ್ ತತ್ವ ಪ್ರೋತ್ಸಾಹಿಸುತ್ತದೆ.
ಅಷ್ಟಕ್ಕೂ ಕೈಜೆನ್ ಒಂದು ಜೀವನಶೈಲಿ. ಅದು ಜೀವನದ ತಪ್ಪುಗಳನ್ನು ಸರಿಪಡಿಸುವ ಅಥವಾ ಫಿಕ್ಸ್ ಮಾಡುವ ಮ್ಯಾಜಿಕ್ ಅಲ್ಲ. ಕೈಜೆನ್ ಅಂದ್ರೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಿರಂತರ ಸುಧಾರಣೆಯ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದು. ಇದು ಒಂದು ಬಾರಿಯ ಪ್ರಯತ್ನವಲ್ಲ, ಆದರೆ ಇದು ನಿರಂತರ ಕಲಿಕೆ ಮತ್ತು ಪ್ರತಿದಿನವೂ ಸ್ವಲ್ಪ ಸ್ವಲ್ಪ ಉತ್ತಮವಾಗಲು ಶ್ರಮಿಸುವ ಜೀವಮಾನದ ಬದ್ಧತೆ. ಸ್ಥಿರತೆ, ಸಾವಧಾನತೆ ಮತ್ತು ತಾಳ್ಮೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವುದು ಕೈಜೆನ್ ತತ್ವದ ಪ್ರತಿಪಾದನೆ.
ಕೈಜೆನ್ ತತ್ವವು ಜಪಾನಿಯರ ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಅಲ್ಲಿನ ಜನ ಜೀವನದಲ್ಲಿ ಕಾಣಬಹುದು. ಜಪಾನಿಯರು ಯಾವತ್ತೂ ಒಂದೇ ಸಲ ದಾಪುಗಾಲು ಇಡುವ ಮನೋಭಾವದವರಲ್ಲ. ಅವರು ‘ಮನೆ ಗೆದ್ದು ಮಾರು ಗೆಲ್ಲು’ ಎಂಬ ತತ್ವದಲ್ಲಿ ನಂಬಿಕೆ ಯುಳ್ಳವರು. ಅವರು ಶ್ರೀರಾಮನ ಅಳಿಲಿನಂತೆ ಬೆಟ್ಟವನ್ನಾದರೂ ಮಟ್ಟಸ ಮಾಡ ಬಹುದು ಎಂಬುದನ್ನು ಒಪ್ಪುವವರು. ನಿತ್ಯಜೀವನದಲ್ಲಿ ಕೈಜೆನ್ ತತ್ವವನ್ನು ಅಳವಡಿಸಿ ಕೊಂಡರೆ, ಯಾವ ಸಾಧನೆಯನ್ನಾದರೂ ಸಾಧ್ಯವಾಗಿಸಬಹುದು ಎಂದು ಬಲವಾಗಿ ನಂಬಿರುವವರು.
ಹೀಗಾಗಿ ಅವರಿಗೆ ಬೇರೆ ಯಾರಿಗೂ ಸಾಧ್ಯವಾಗದೇ ಇರುವುದು ಸಾಧ್ಯವಾಗುತ್ತಿದೆ. ಜಪಾನಿ ಯರು ಎಲ್ಲವನ್ನೂ ಸಣ್ಣದಾಗಿಯೇ ನೋಡುತ್ತಾರೆ (ಅವರ ಕಣ್ಣುಗಳು ಸಣ್ಣಗಿರುವುದೂ ಇದಕ್ಕೆ ಕಾರಣವಾಗಬಹುದಾ? ಗೊತ್ತಿಲ್ಲ). ಅವರು ಸಣ್ಣದಕ್ಕೆ ಸಣ್ಣದನ್ನು ಸೇರಿಸುತ್ತಾ, ದೊಡ್ಡದು ದೊಡ್ಡವು ಮಾಡುತ್ತಾ ಹೋಗುತ್ತಾರೆ. ಸಣ್ಣದಿಂದ ದೊಡ್ಡದನ್ನು ಮಾಡುತ್ತಾರೆ. ಅಷ್ಟಕ್ಕೂ ಕೈಜೆನ್ ಹೇಳುವುದೂ ಅದನ್ನೇ ಅಲ್ಲವೇ? ಇದು ಗಂಟೆಗಳ ದೇಶ!
ಗೊತ್ತಾ, ಜಪಾನನ್ನು ‘ಗಂಟೆಗಳ ದೇಶ’ ಎಂದೂ ಕರೆಯುತ್ತಾರೆ. ಇದು ಕೇವಲ ಸಾಂಪ್ರ ದಾಯಿಕ ಹಾಗೂ ಧಾರ್ಮಿಕ ಆಚರಣೆಗಳ ಕಾರಣದಿಂದ ಅಲ್ಲ, ಇತಿಹಾಸ, ಕಲೆ ಮತ್ತು ಸಮಾಜಜೀವನದ ಹಲವು ಕಾರಣಗಳಿಂದ ಹಾಗೆ ಕರೆಯುತ್ತಾರೆ. ಈ ಗಂಟೆಗಳು ಜಪಾನ್ ದೇಶದ ವಿಶಿಷ್ಟ ಆಕರ್ಷಣೆ, ಜನರ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ಅವು ಪ್ರತಿಬಿಂಬಿಸುತ್ತವೆ.
ಯಾವುದೇ ದೇಗುಲಕ್ಕೆ ಹೋದರೂ ವಿವಿಧ ಆಕಾರದ ಗಂಟೆಗಳನ್ನು ನೋಡಬಹುದು. ಕೆಲವು ಗಂಟೆಗಳಂತೂ ಆನೆ ಗಾತ್ರದ್ದು. ಕ್ಯೋಟೋದ ದೇಗುಲದಲ್ಲಿ ಸಣ್ಣ ಗಂಟೆಯಿಂದ ಹಿಡಿದು ಹತ್ತು ಮೀಟರ್ ಎತ್ತರದ ಗಂಟೆಯವರೆಗೆ ವೈವಿಧ್ಯಮಯ ಗಂಟೆಗಳನ್ನು ನೋಡಿ ಸೋಜಿಗಗೊಂಡಿದ್ದೆ. ಅಲ್ಲಿ ಗಂಟೆಗಾಗಿಯೇ ಮೀಸಲಾದ ದೇಗುಲವೂ ಇದೆ. ಅಂದರೆ ಗಂಟೆಯೇ ಆ ದೇಗುಲದ ಆರಾಧ್ಯಮೂರ್ತಿ!
ಜಪಾನಿನಲ್ಲಿ ಗಂಟೆಗಳ ಬಳಕೆಯು ಶತಮಾನಗಳ ಇತಿಹಾಸ ಹೊಂದಿದೆ. ಮೊದಲು, ಚೀನಾದಿಂದ ಬೌದ್ಧ ಧರ್ಮದೊಂದಿಗೆ ಗಂಟೆಗಳು ಜಪಾನನ್ನು ಪ್ರವೇಶಿಸಿದವು. ಆರಂಭ ದಲ್ಲಿ ಬೌದ್ಧ ದೇಗುಲಗಳಲ್ಲಿ ಧಾರ್ಮಿಕ ಉತ್ಸವಗಳು ಮತ್ತು ಪೂಜಾವಿಧಿಗಳ ಸಂದರ್ಭ ದಲ್ಲಿ ಮಾತ್ರ ಗಂಟೆಗಳನ್ನು ಬಾರಿಸಲಾಗುತ್ತಿತ್ತು. ಅವು ಮಂಗಳವನ್ನು ಸೂಚಿಸುವ ಧ್ವನಿ ಎಂಬ ಭಾವನೆ ಅವರಲ್ಲಿ ಮನೆಮಾಡಿತ್ತು.
ಗಂಟೆಗಳ ಮೂಲ ಉದ್ದೇಶ ಪೂಜೆ ಮತ್ತು ಆಚರಣೆಗೆ ಸೀಮಿತವಾಗಿದ್ದರೂ ಕಾಲಕ್ರಮೇಣ ಅವು ಜಪಾನಿನ ಸಾಂಸ್ಕೃತಿಕ ಜೀವನದ ಪ್ರಮುಖ ಅಂಗವಾಗಿ ಮಾರ್ಪಟ್ಟವು. 16ನೇ ಶತಮಾನದಲ್ಲಿ ಜಪಾನ್ ದೇಶದ ಅನೇಕ ಸ್ಥಳಗಳಲ್ಲಿ ವಿಶಿಷ್ಟ ರೀತಿಯ ದೊಡ್ಡ ಕಂಚಿನ ಗಂಟೆಗಳನ್ನು ತಯಾರಿಸಲಾಯಿತು. ಈ ಗಂಟೆಗಳು ನಗುವ ದನಿ ಅಥವಾ ವಿಶಿಷ್ಟ ನಿನಾದ ಗಳಿಂದ ವಿಶ್ವದ ಗಮನ ಸೆಳೆದವು.
ಜಪಾನಿನ ಬೌದ್ಧ ದೇಗುಲಗಳಲ್ಲಿ ದೊಡ್ಡ ದೊಡ್ಡ ಕಂಚಿನ ಗಂಟೆಗಳಿದ್ದು ಅವುಗಳನ್ನು ‘ಕೋನೇ’ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ದೇಗುಲದ ಗಂಟೆಗಳು ವಿಭಿನ್ನ ಅರ್ಥ ವನ್ನು ಹೊಂದಿದ್ದು, ಅವುಗಳನ್ನು ವಿಶೇಷ ಆಚರಣೆಗಳಲ್ಲಿ ಮತ್ತು ಧಾರ್ಮಿಕ ಸಮಾರಂಭ ಗಳಲ್ಲಿ ಬಾರಿಸಲಾಗುತ್ತದೆ. ಹೊಸ ವರ್ಷದ ದಿನದಂದು (ಓಮಿಸೊಕಾ), ಗಂಟೆ ಬಾರಿಸುವ ವಿಶೇಷ ಆಚರಣೆ ಜಪಾನಿನ ಪ್ರಮುಖ ಆಕರ್ಷಣೆಗಳಂದು. ಈ ಸಂದರ್ಭದಲ್ಲಿ, ದೇಶದೆಡೆ ಇರುವ ದೇಗುಲಗಳಲ್ಲಿ 108 ಬಾರಿ ಗಂಟೆಗಳನ್ನು ಬಾರಿಸುತ್ತಾರೆ. ಇದು ಮಾನ ವನ ನೂರೆಂಟು ಕಾಮನೆಗಳ ಅಥವಾ ಪಾಪಗಳ ಸಂಕೇತವಾಗಿದೆ. ಪ್ರತಿ ಬಾರಿ ಗಂಟೆ ಮೊಳಗಿ ದಾಗ ಕೊಳೆ ಹೊರಹೋಗಿ, ಸುತ್ತಲಿನ ಪರಿಸರ ಶುದ್ಧವಾಗುತ್ತದೆ ಎಂದು ಜಪಾನಿಯರು ಪರಿಗಣಿಸುತ್ತಾರೆ.
ಚಿಯೋನ್‌ಇನ್ ಗಂಟೆ (ಕಿಯೋಟೊ) ಜಪಾನಿನ ಅತಿ ದೊಡ್ಡ ಬೌದ್ಧ ಗಂಟೆಗಳ ಪೈಕಿ ಒಂದಾಗಿದೆ. ಈ ಗಂಟೆ ಸುಮಾರು 70 ಟನ್ ತೂಕವಿದ್ದು, ಎಂಥವರನ್ನಾದರೂ ಆಕರ್ಷಿಸು ತ್ತದೆ. ಹಾಗೆಯೇ ಟೊಡಾಯ್ಜಿ ಎಂಬ ದೇವಸ್ಥಾನದ ಗಂಟೆ ಬೌದ್ಧ ಧರ್ಮದ ಪ್ರಮುಖ ಸಂಕೇತವಾಗಿದೆ. ಈ ಗಂಟೆಯಿಂದ ಹೊಮ್ಮುವ ಶಬ್ದ ಶಾಂತಿಯ ಸಂಕೇತವಂತೆ. ಜಪಾನಿನ ಹಬ್ಬಗಳಲ್ಲಿ ಮತ್ತು ಮೇಳಗಳಲ್ಲಿ ಗಂಟೆಗಳ ಬಳಕೆ ವಿಶೇಷ ಅರ್ಥವನ್ನು ಹೊಂದಿದೆ. ಗಂಟೆಯಿಲ್ಲದೇ ಯಾವ ಆಚರಣೆಗಳೂ ಆರಂಭವಾಗುವುದಿಲ್ಲ.
ಕೆಲವು ಗಂಟೆಗಳು ಹಬ್ಬದ ಮೆರವಣಿಗೆಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸು ತ್ತವೆ. ಅವು ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತವೆ. ಗಂಟೆ ಶಬ್ದ ವನ್ನು ಹೊಮ್ಮಿಸಿದರೂ, ಅದರ ನಂತರ ಸೃಷ್ಟಿಯಾಗುವ ಮೌನ ವಿಶೇಷ ಅರ್ಥ ವನ್ನು ಹೊಂದಿದೆ. ಆ ಮೌನ ಸೃಷ್ಟಿಯಾಗಲು ಗಂಟೆಯ ಸದ್ದೇ ಕಾರಣವೆಂಬುದು ಅವರ ನಂಬಿಕೆ.
ಗಂಟೆಗಳ ಧ್ವನಿಯು ಮನಸ್ಸಿನ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರುತ್ತದೆಂದು ಜಪಾನಿಯರು ಭಾವಿಸಿದ್ದಾರೆ. ಇದು ಜನರನ್ನು ಮೌನಕ್ಕೆ, ಆತ್ಮಾವಲೋಕನಕ್ಕೆ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಪ್ರೇರೇಪಿಸುತ್ತದೆ. ಜಪಾನಿನಲ್ಲಿ ಬೌದ್ಧ ಧರ್ಮ ಮತ್ತು ಶಿಂಟೊ ಧರ್ಮದ ಪ್ರಭಾವ ಹೆಚ್ಚು. ಈ ಧರ್ಮಗಳಲ್ಲಿ ಗಂಟೆಗಳ ಮಹತ್ವ ಬಹಳ ದೊಡ್ಡದು. ಗಂಟೆಗಳ ಉದ್ದ ಶಬ್ದವನ್ನು ‘ಅಂತಿಮ ಸತ್ಯ’ ಅಥವಾ ‘ಬೋಧಿಸತ್ವ’ ಎಂಬ ರೂಪದಲ್ಲಿ ವ್ಯಾಖ್ಯಾನ ಮಾಡಲಾಗುತ್ತದೆ.
ಜಪಾನಿನಲ್ಲಿ ವ್ಯಾಪಕವಾಗಿರುವ ಝೆನ್ ನಂಬಿಕೆಯಲ್ಲೂ ಗಂಟೆಗಳಿಗೆ ಮಹತ್ವದ ಸ್ಥಾನ ವಿದೆ. ಗಂಟೆಗಳ ಧ್ವನಿ ಝೆನ್ ಧ್ಯಾನದ ಪ್ರಮುಖ ಭಾಗ. ಪ್ರತಿಯೊಂದು ಗಂಟೆಯ ಶಬ್ದವು ಜೀವಿಯ ಮನಸ್ಸನ್ನು ಶ್ರದ್ಧೆಯಿಂದ ತುಂಬಲು ಮತ್ತು ಪ್ರಜ್ಞಾಕೇಂದ್ರಕ್ಕೆ ಕರೆದೊಯ್ಯಲು ಪ್ರೇರಕ ಎಂಬ ನಂಬಿಕೆ ಅವರಲ್ಲಿದೆ. ಗಂಟೆಯ ಶಬ್ದವು ಸಮಯದ ಅನಿತ್ಯತೆಯನ್ನು ಮತ್ತು ಬದುಕಿನ ಸೌಂದರ್ಯವನ್ನು ನೆನಪಿಸಲು ಸಹಾಯಕವಾಗುವ ಲಕ್ಷಣಗಳೆಂದು ಝೆನ್ ತತ್ವಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಗಂಟೆಗಳ ಧ್ವನಿಯು ಕೇವಲ ಆಧ್ಯಾತ್ಮಿಕ ಮಾತ್ರ ಅಲ್ಲ, ಅದಕ್ಕೆ ವೈeನಿಕ ಅರ್ಥವೂ ಇದೆ ಯೆಂದು ಜಪಾನಿಯರು ಅರಿತುಕೊಂಡಿದ್ದಾರೆ. ಗಂಟೆಗಳ ಬಡಿತದ ಶಬ್ದವು ಮನಸ್ಸಿಗೆ ಶಾಂತಿಯನ್ನು ತರುವ ಕಂಪನಗಳನ್ನು ಹುಟ್ಟುಹಾಕುತ್ತವೆ. ಪ್ರಾಚೀನ ಯೋಗ ತತ್ವಗಳಲ್ಲಿ ಇದು ‘ಶಬ್ದ ಚಿಕಿತ್ಸಾ’ ( Sound Therapy) ತಂತ್ರಜ್ಞಾನಕ್ಕೆ ಕಾರಣವಾಗಿದೆ. ಗಂಟೆಗಳ ಘೋಷವು ಗಾಳಿ, ನೀರು ಮತ್ತು ಭೂಮಿಯೊಂದಿಗೆ ಪರಸ್ಪರ ಆವರಣವನ್ನು ಉಂಟು ಮಾಡುತ್ತದೆ ಎಂದು ಶಿಂಟೊ ತತ್ವವು ಹೇಳುತ್ತದೆ.
ಇದು ಪ್ರಕೃತಿಯೊಂದಿಗೆ ಜೀವಿಗಳ ಒಡನಾಟವನ್ನು ಬೆಸೆಯಲು ಸಹಾಯಕವಾಗಿದೆಯಂತೆ. ಆಧುನಿಕ ಜಪಾನಿನಲ್ಲಿ ಗಂಟೆಗಳು ಬಾಗಿಲಲ್ಲಿ ಅಥವಾ ಬಾಗಿಲು ಬಳಿಯ ಅಲಂಕಾರಿಕ ಸಾಮಗ್ರಿಯಾಗಿ, ನಗರಗಳಲ್ಲಿನ ಸಾರ್ವಜನಿಕ ಆಕರ್ಷಣೆಗಳಾಗಿ ಹಾಗೂ ಸಂಗೀತ ವಾದ್ಯೋ ಪಕರಣಗಳಾಗಿ ವಿವಿಧ ರೀತಿಯಲ್ಲಿ ಬಳಕೆಯಾಗಿಬಿಟ್ಟಿವೆ. ಬಹುರಾಷ್ಟ್ರೀಯ ಕಂಪನಿಗಳ ಆಧುನಿಕ ಆಫೀಸುಗಳಲ್ಲಿ ಅಥವಾ ಬೋರ್ಡ್ ರೂಮುಗಳಲ್ಲಿ ಸಹ ಗಂಟೆಗಳನ್ನು ಕಂಡರೆ ಆಶ್ಚರ್ಯಪಡಬೇಕಿಲ್ಲ.
ಅಲ್ಲದೇ, ಕೆಲವು ಹೋಟೆಲ್‌ಗಳು ಮತ್ತು ಸಾರ್ವಜನಿಕ ತಾಣಗಳು ತಮ್ಮ ಆಕರ್ಷಣೆಯ ಭಾಗವಾಗಿ ಪುರಾತನ ಶೈಲಿಯ ಗಂಟೆಗಳನ್ನು ಪ್ರದರ್ಶಿಸುವುದನ್ನು ಎಡೆ ಗಮನಿಸಬಹುದು. ಹಿರೋಷಿಮಾದ ಶಾಂತಿ ಗಂಟೆ (Peace Bell) ಜಗತ್ತಿನಲ್ಲಿ ಪ್ರಸಿದ್ಧ. 1945ರಲ್ಲಿ ಪರ ಮಾಣು ಬಾಂಬ್ ದಾಳಿಯಿಂದ ಪ್ರೇರಿತವಾಗಿ ಶಾಂತಿಯನ್ನು ಪ್ರತಿನಿಧಿಸಲು ಆ ಗಂಟೆ ಯನ್ನು ನಿರ್ಮಿಸಲಾಯಿತು. ಇದನ್ನು ಪ್ರತಿ ವರ್ಷದ ಆಗ 6ರಂದು ಶ್ರದ್ಧೆಯಿಂದ ಬಡಿಯಲಾಗು ತ್ತದೆ. ಇದು ಜಗತ್ತಿಗೆ ಶಾಂತಿ ಮತ್ತು ಸಹಾನುಭೂತಿಯನ್ನು ಸಾರುವ ಸಂಕೇತ ವಾಗಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಗಂಟೆಗಳನ್ನು ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಜಪಾನ್ ಕೂಡ ಒಂದು. ಅಂದರೆ ಅವರಿಗೆ ಅದು ಮಾರಾಟದ ಸರಕೂ ಆಗಿದೆ. ಜಪಾನಿಯರು ಗಂಟೆ ಗಳನ್ನು ರಫ್ತು ಮಾಡಿ ಹಣವನ್ನೂ ಗಳಿಸುತ್ತಾರೆ. ಮೂರ್ಖತನ: ಜಪಾನಿಯರ ಧೋರಣೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಅಲ್ಲಿನ ಕೋಚ್ ಯಾವತ್ತೂ ಒಂದು ಮಾತು ಹೇಳುತ್ತಾ ನಂತೆ- No dickheads please. ಅಂದ್ರೆ ಯಾರೂ ಯಾರ ತಲೆಯನ್ನೂ ತಿನ್ನಬೇಡಿ. ಅಂದರೆ ನಿಮ್ಮ ಕೆಲಸವನ್ನು ನೀವು ನಿಯತ್ತಾಗಿ ಮಾಡುತ್ತಾ ಹೋಗಿ, ತಂಡ ಅದರ ಪಾಡಿಗೆ ಗೆಲುವು ಸಾಧಿಸುತ್ತದೆ.
ಆದರೆ ಜಪಾನಿಯರು ಹೇಳುವುದು- No Idiots Please. ಜಪಾನಿಯರಿಗೆ ವ್ಯಕ್ತಿಗಿಂತ ಸಮು ದಾಯ, ಸಮಾಜ ಅಥವಾ ದೇಶ ಮುಖ್ಯ. ಅವರು ಮೂರ್ಖತನವನ್ನು ಸಹಿಸಿಕೊಳ್ಳುವು ದಿಲ್ಲ. ಒಂದು ವೇಳೆ ನೀವು ಮೂರ್ಖರೇ ಆಗಿದ್ದರೂ ಪರವಾಗಿಲ್ಲ ಅಂತಾರೆ ಜಪಾನಿಯರು. ಅಷ್ಟರಮಟ್ಟಿಗೆ ಅವರು ಮೂರ್ಖರನ್ನು ಸಹಿಸಿಕೊಳ್ಳುತ್ತಾರೆ. ನಿಮ್ಮಲ್ಲಿ ಆ ಸ್ವಭಾವವಿದೆ ಎಂಬುದನ್ನು ಅರ್ಥಮಾಡಿಕೊಂಡರೆ ಸಾಕು. ಯಾವ ಕ್ಷಣದಲ್ಲಿ ನೀವು ಮೂರ್ಖರು ಎಂಬುದು ನಿಮಗೆ ಅರಿವಾಗುತ್ತದೋ, ಆಗ ನೀವು ಮೂರ್ಖರಲ್ಲ ಎಂಬುದು ಜಪಾನಿಯರ ನಂಬಿಕೆ.
ನೀವು ಮೂರ್ಖರಾದರೂ ಪರವಾಗಿಲ್ಲ, ಬೇರೆಯವರಿಗೆ ಒಳ್ಳೆ ಯದನ್ನು ಮಾಡಿ, ಅಪರಿಚಿತ ರಿಗೆ ದಯಾಳುಗಳಾಗಿ, ಹಿರಿಯರನ್ನು ಗೌರವಿಸಿ, ಬೇರೆಯವರರು ಎಸೆದ ಕಸಗಳನ್ನು ಆಯ್ದು ಕಸದ ಬುಟ್ಟಿಗೆ ಹಾಕಿ, ನಿಮ್ಮಿಂದ ಬೇರೆಯವರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿ. ಇಷ್ಟೆ ಮಾಡಿಯೂ ಮೂರ್ಖರಾಗಿದ್ದರೆ ಪರವಾಗಿಲ್ಲ. ಇದು ಜಪಾನಿಯರ ಧೋರಣೆ.