Vishweshwar Bhat Column: ಅಲ್ಲಿ ಜನರೇ ಪ್ರೇಕ್ಷಣೀಯ !
ಹರಾಜುಕೂ ಜಪಾನಿನ ಯುವ ಸಂಸ್ಕೃತಿಯ ಹೃದಯ ಸಂಗಮ. ಫ್ಯಾಷನ್ ಪ್ರಿಯರ ಸ್ವರ್ಗ. ಹರಾಜು ಕೂ ಎನ್ನುವುದು ಕೇವಲ ವ್ಯಾಪಾರ ವಲಯವಲ್ಲ, ಅದು ಹೊಸ ಫ್ಯಾಷನ್ ಲೋಕದ ಪ್ರತಿನಿಧಿ. ಪ್ರವಾಸಿಗರ ಆಕರ್ಷಣೆಯ ಕೇಂದ್ರ ಮತ್ತು ನವೀನ ಆವಿಷ್ಕಾರಗಳ ಹಸಿರುಭೂಮಿ. ಹರಾಜುಕೂ ಅಂದ್ರೆ ಜಪಾನಿ ಭಾಷೆಯಲ್ಲಿ ‘ಮೂಲ ನಿಲ್ದಾಣ’ ಎಂದರ್ಥ


ಸಂಪಾದಕರ ಸದ್ಯಶೋಧನೆ
ಜಪಾನಿನ ಟೋಕಿಯೋಕ್ಕೆ ಹೋದವರು ಹರಾಜುಕೂ ಎಂಬ ಪ್ರದೇಶಕ್ಕೆ ಹೋಗದೇ ಬಂದರೆ, ಅಷ್ಟರ ಮಟ್ಟಿಗೆ ಏನೋ ಕಳೆದುಕೊಂಡಂತೆ. ಸಾಮಾನ್ಯವಾಗಿ ಯಾವುದೇ ಪ್ರದೇಶಕ್ಕೆ ಭೇಟಿ ನೀಡುವ ಜನ ಆ ಪ್ರದೇಶವನ್ನು ನೋಡಲು ಹೋಗುತ್ತಾರೆ ತಾನೇ? ಆದರೆ ಹರಾಜುಕೂಗೆ ಹೋಗು ವವರು ಅಲ್ಲಿಗೆ ಆಗಮಿಸುವ ಜನರನ್ನು ನೋಡಲು ಹೋಗುತ್ತಾರೆ. ಜನರೇ ಅಲ್ಲಿ ಪ್ರೇಕ್ಷಣೀಯರು! ಇವರೆಲ್ಲ ಜಗತ್ತಿನ ಯಾವ ಗ್ರಹದಲ್ಲಿದ್ದರು, ಎಲ್ಲಿಂದ ಅವತರಿಸಿ ಬಂದರು ಎಂದು ಅನಿಸಬೇಕು ಆ ರೀತಿ ಅವರ ವೇಷ-ಭೂಷಣಗಳಿರುತ್ತವೆ. ಒಬ್ಬರಂತೆ ಮತ್ತೊಬ್ಬರಿಲ್ಲ. ಎಲ್ಲರೂ ಚಿತ್ರ-ವಿಚಿತ್ರ. ಕೆಲವರು ಅನ್ಯ ಗ್ರಹಗಳಿಂದ ಬಂದವರಂತೆ ಕಂಡರೂ ಆಶ್ಚರ್ಯವಿಲ್ಲ.
ಹರಾಜುಕೂ ಜಪಾನಿನ ಯುವ ಸಂಸ್ಕೃತಿಯ ಹೃದಯ ಸಂಗಮ. ಫ್ಯಾಷನ್ ಪ್ರಿಯರ ಸ್ವರ್ಗ. ಹರಾಜುಕೂ ಎನ್ನುವುದು ಕೇವಲ ವ್ಯಾಪಾರ ವಲಯವಲ್ಲ, ಅದು ಹೊಸ ಫ್ಯಾಷನ್ ಲೋಕದ ಪ್ರತಿನಿಧಿ. ಪ್ರವಾಸಿಗರ ಆಕರ್ಷಣೆಯ ಕೇಂದ್ರ ಮತ್ತು ನವೀನ ಆವಿಷ್ಕಾರಗಳ ಹಸಿರುಭೂಮಿ. ಹರಾಜುಕೂ ಅಂದ್ರೆ ಜಪಾನಿ ಭಾಷೆಯಲ್ಲಿ ‘ಮೂಲ ನಿಲ್ದಾಣ’ ಎಂದರ್ಥ. ಆ ಪ್ರದೇಶ ಒಂದು ಕಾಲಕ್ಕೆ ಸಣ್ಣ ಹಳ್ಳಿಯಾಗಿತ್ತು. ಇದು ಪ್ರಮುಖ ವಾಣಿಜ್ಯ ಮಾರ್ಗಗಳ ಮಧ್ಯದಲ್ಲಿ ಇದ್ದ ಕಾರಣ, ವಿಶ್ರಾಂತಿ ತಾಣವನ್ನಾಗಿ ಬಳಸಲಾಗುತ್ತಿತ್ತು.
ದ್ವಿತೀಯ ಮಹಾಯುದ್ಧದ ಬಳಿಕ, ಹರಾಜುಕೂ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಮೊದಲ ಕೆಲವು ಪ್ರದೇಶಗಳಲ್ಲಿ ಒಂದಾಗಿತ್ತು. ಯುದ್ಧದ ನಂತರ ಅಮೆರಿಕದ ಸೈನಿಕ ನೆಲೆಗಳು ಹರಾಜುಕೂ ಪ್ರದೇಶದ ಬಳಿ ನಿರ್ಮಾಣವಾದವು. ಇದರಿಂದ ಅಮೆರಿಕನ್ ಪಾಪ್ ಕಲ್ಚರ್ ಮತ್ತು ಫ್ಯಾಷನ್ ಹರಾಜುಕೂನಲ್ಲಿ ಬೇರೂರಿದವು.
ಇದನ್ನೂ ಓದಿ: Vishweshwar Bhat Column: ಮನೆಯಲ್ಲಿ ಪತಿಯೇ ಪರಾಧೀನ
ಹರಾಜುಕೂ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಎರಡು ಪ್ರಸಿದ್ಧ ಬೀದಿಗಳಿವೆ. ಯುವ -ಷನ್ ಮತ್ತು ಹೊಸ ಟ್ರೆಂಡ್ ಗಳ ಹೆಮ್ಮೆಯ ಬೀದಿ ಟಕೇಷಿತಾ ಸ್ಟ್ರೀಟ್ ಮತ್ತು ಫ್ಯಾಷನ್ ಬ್ರ್ಯಾಂಡ್ಗಳ ಮತ್ತು ನವೀನ ಶಾಪಿಂಗ್ ಕಾಂಪ್ಲೆಕ್ಸ್ಗಳ ಪ್ರದೇಶವಾದ ಓಮೋತೆಸಾಂದೋ ಅವೆನ್ಯೂ. ಹರಾಜುಕೂವನ್ನು ಜಪಾನಿನ ‘ಯುವ ಫ್ಯಾಷನ್ ಸ್ಫೋಟ ತಾಣ’ವೆಂದೂ ಕರೆಯುತ್ತಾರೆ.
ಜಗತ್ತಿನ ಹೊಸ ಫ್ಯಾಷನ್ ಗಳು ಇಲ್ಲಿಯೇ ಜನಿಸುತ್ತವೆಯೋ, ಜನಿಸಿದ ತಕ್ಷಣ ಇಲ್ಲಿಗೆ ಮೊದಲು ಬರುತ್ತವೆಯೋ ಗೊತ್ತಿಲ್ಲ. ಅಲ್ಲಿನ ಫ್ಯಾಷನ್ ಪಥಗಳು ವಿಭಿನ್ನ ಶೈಲಿಗಳ ಮಿಶ್ರಣವನ್ನು ಪ್ರತಿನಿಧಿಸುತ್ತವೆ. ಜಗತ್ತಿನ ಫ್ಯಾಷನ್ ಮಾದರಿಗಳೆಲ್ಲವನ್ನೂ ಅಲ್ಲಿ ಏಕಕಾಲದಲ್ಲಿ ನೋಡಬಹುದು. ಹರಾಜುಕೂ ಗರ್ಲ್ಸ್’ ಎಂಬ ಪದ ಜಪಾನಿನ ಬೌದ್ಧಿಕ ಆವಿಷ್ಕಾರವನ್ನು ಪ್ರಪಂಚಕ್ಕೆಲ್ಲ ಪರಿಚಯಿಸಿದ ಶಕ್ತಿಯಾಗಿದೆ.
ಗ್ವೆನ್ ಸ್ಟೆಫಾನಿ ಮುಂತಾದ ಪಾಶ್ಚಾತ್ಯ ಕಲಾವಿದರು ಹರಾಜುಕೂ ಶೈಲಿಗೆ ತಮ್ಮ ಸಂಗೀತ ಮತ್ತು ವಿಡಿಯೋಗಳಲ್ಲಿ ಸ್ಥಾನ ನೀಡಿದ ನಂತರ, ಹರಾಜುಕೂ ಫ್ಯಾಷನ್ ಜಾಗತಿಕ ಗಮನ ಸೆಳೆದಿತು. ಲೊಲಿಟಾ ಫ್ಯಾಷನ್, ಡೆಕೋರ, ಫೇರಿ, ಕಾಸ್ಪ್ಲೇ ಮುಂತಾದ ಶೈಲಿಗಳು ಹರಾಜುಕೂನಲ್ಲಿಯೇ ಜನ್ಮ ಪಡೆದಿದ್ದು. ಟೋಕಿಯೊಗೆ ಬಂದ ಪ್ರತಿ ಪ್ರವಾಸಿಗನೂ ಟೇಕೇಶಿತಾ ಬೀದಿಗೆ ಭೇಟಿ ನೀಡಲೇಬೇಕು. ಇದು ಹರಾಜುಕೂ ಪ್ರದೇಶದ ಯುವಜನರ ಹೃದಯ ಭಾಗ.
ಅಲ್ಲಿ ಕ್ಯಾಫೆಗಳು, ಕ್ರೆಪ್ ಸ್ಟಾಲ್ಗಳು, ಯುವಜನರ ಫ್ಯಾಷನ್ ಸ್ಟೋರ್ಗಳು, ಡಿಆರ್ಐ ವೈಶಿಷ್ಟ್ಯ ಮಯ ಡಿಪಾರ್ಟ್ಮೆಂಟ್ಗಳು, ಫೋಟೋ ಬೂತ್ಗಳು ಆವರಿಸಿಬಿಟ್ಟಿವೆ. ಅಲ್ಲಿನ ಬೀದಿಗಳು ತುಂಬಾ ಕಿರಿದಾಗಿದ್ದು, ಪ್ರತಿದಿನ ಕನಿಷ್ಠ ಇಪ್ಪತ್ತೈದರಿಂದ ಐವತ್ತು ಸಾವಿರ ಮಂದಿ ಭೇಟಿ ನೀಡು ತ್ತಾರೆ. ರಾಜಾ ದಿನಗಳಲ್ಲಿ ಈ ಸಂಖ್ಯೆ ಲಕ್ಷವನ್ನು ದಾಟಬಹುದು.
ಓಮೋತೆಸಾಂದೋ ಅವೆನ್ಯೂದಲ್ಲಿ ಜಾಗತಿಕ ಬ್ರಾಂಡ್ ಗಳಾದ ಲೂಯಿ ವಿತಾನ್, ಡಿಯೋರ್, ಪ್ರಾಡಾ, ಶನಾಲ್ ಮುಂತಾದ ಮಳಿಗೆಗಳಿವೆ. ಇಲ್ಲಿನ ಕಟ್ಟ ವಿನ್ಯಾಸಗಳು ಆಧುನಿಕ ಶಿಲ್ಪಶಾಸ್ತ್ರದ ಮಾದರಿಯಾಗಿವೆ. ಓಮೋತೆಸಾಂದೋ ಹಿಲ್ಸ್ ಎನ್ನುವ ಶಾಪಿಂಗ್ ಕಾಂಪ್ಲೆಕ್ಸ್ ಕೇಂಝೋ ಟಂಗೆ’ ಶಿಲ್ಪದೃಷ್ಟಿಯ ಪ್ರತಿಬಿಂಬವಾಗಿದೆ. ಆ ಪ್ರದೇಶದ ಆಹಾರ ಮತ್ತು ಕಾಫಿ ಸಂಸ್ಕೃತಿಯೂ ವಿಭಿನ್ನ. ಬೆಕ್ಕು, ಗೂಬೆ, ಹಾವು, ಪಕ್ಷಿಗಳ ಥೀಮ್ಡ್ ಕೆಫೆಗಳು ಜನಪ್ರಿಯ ತಾಣಗಳು.
ಸಂಪೂರ್ಣ ಬಣ್ಣಗಳಿಂದ ತುಂಬಿರುವ ಕಲ್ಪನೆಗಳ ಲೋಕವನ್ನು ನೆನಪಿಸುವ ಮೋಹಕ ತಾಣ ವದು. ವಿಶ್ವದ ಅನೇಕ ದೇಶಗಳಲ್ಲಿ ಹರಾಜುಕೂ ಶೈಲಿಯ ಪ್ರಭಾವ ದಟ್ಟವಾಗಿದೆ. ಅನಿಮೆ, ಮಾಂಗಾ, ಜೆ-ಪಾಪ್ ಶೈಲಿಗಳು ಹರಾಜುಕೂ ಸಂಸ್ಕೃತಿಯ ಪಡಿಯಚ್ಚು. ಯುವಕರು ತಮ್ಮ ವಿಶಿಷ್ಟ ವೇಷ ಭೂಷಣಗಳಿಂದ ರಸ್ತೆಮಧ್ಯದಲ್ಲಿಯೇ ಅಭಿನಯಿಸುತ್ತಾರೆ.
ಇದು ಪ್ರವಾಸಿಗರ ಕಣ್ಣಿಗೆ ಹಬ್ಬದಂತಿರುತ್ತದೆ. ಇಂದು ಹರಾಜುಕೂ ಕೇವಲ ಒಂದು ಪ್ರದೇಶವಾಗಿ ಉಳಿದಿಲ್ಲ. ಅದು ಜಪಾನಿನ ಯುವ ಮನಸ್ಸುಗಳ ಕಲ್ಪನೆ, ಅಭಿವ್ಯಕ್ತಿಯ ವೇದಿಕೆ ಮತ್ತು ಅಭಿವ್ಯಕ್ತಿಯ ತಾಣ ಮತ್ತು ಭಿನ್ನತೆಯ ಸಂಭ್ರಮವಾಗಿದೆ.