Prithviraj Sukumaran: ಹೊಂಬಾಳೆ ಫಿಲ್ಮ್ಸ್-ಹೃತಿಕ್ ರೋಷನ್ ಚಿತ್ರಕ್ಕೆ ಪೃಥ್ವಿರಾಜ್ ಎಂಟ್ರಿ? ಆ್ಯಕ್ಷನ್ ಕಟ್ ಹೇಳ್ತಾರಾ ಮಲಯಾಳಂ ಸೂಪರ್ ಸ್ಟಾರ್?
Hombale Films: ʼಕೆಜಿಎಫ್ʼ ಸರಣಿ, 'ಕಾಂತಾರ' ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕಂಪು ಪಸರಿಸಿದ್ದ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ ಇದೀಗ ಬಾಲಿವುಡ್‌ಗೆ ಕಾಲಿಟ್ಟಿದೆ. ಹೃತಿಕ್ ರೋಷನ್ ಜತೆಗೆ ಚಿತ್ರ ಘೋಷಿಸಿದ್ದು, ಯಾರು ನಿರ್ದೇಶಿಸಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಪೃಥ್ವಿರಾಜ್ ಸುಕುಮಾರನ್-ಹೃತಿಕ್ ರೋಷನ್.

ಮುಂಬೈ: ಸ್ಯಾಂಡಲ್‌ವುಡ್‌ನ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು (Vijay Kiragandur) ನೇತೃತ್ವದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ಜಾಗತಿಕವಾಗಿ ಮತ್ತೊಮ್ಮೆ ಮಿಂಚಲು, ದಾಖಲೆ ಬರೆಯಲು ಸಜ್ಜಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಬಾಲಿವುಡ್‌ಗೂ ಕಾಲಿಟ್ಟಿದೆ. ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan) ಜತೆ ಚಿತ್ರವನ್ನು ಘೋಷಿಸಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು, ಹೆಚ್ಚಿನ ವಿವರ ಬಿಟ್ಟು ಕೊಡದೆ ಗುಟ್ಟು ಕಾಯ್ದುಕೊಂಡಿದೆ. ಈಗಾಗಲೇ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಈ ಚಿತ್ರದ ಬಗ್ಗೆ ಇದೀಗ ಮತ್ತೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಬಹುಭಾಷಾ ನಟ, ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಯಾರು ಈ ಸೂಪರ್ ಸ್ಟಾರ್? ಇಲ್ಲಿದೆ ವಿವರ.
ಎಲ್ಲೆಗಳನ್ನು ದಾಟಿ ಹೊಸ ಹೊಸ ಕಥೆಗಳನ್ನು ಜನರಿಗೆ ತಲುಪಿಸುವುದೇ ನಮ್ಮ ಗುರಿ ಎಂದು ವಿಜಯ್ ಕಿರಗಂದೂರು ಈಗಾಗಲೇ ಘೋಷಿಸಿದ್ದಾರೆ. ಜತೆಗೆ ಈ ಚಿತ್ರವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವುದಾಗಿಯೂ ತಿಳಿಸಿದ್ದಾರೆ. ಹೀಗಾಗಿ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ? ನಿರ್ದೇಶನ ಜವಾಬ್ದಾರಿ ಯಾರು ಹೊರಲಿದ್ದಾರೆ? ಮುಂತಾದ ಪ್ರಶ್ನೆ ಮೂಡಿದೆ.
ಹೊಂಬಾಳೆ ಫಿಲ್ಮ್ಸ್‌ನ ಎಕ್ಸ್ ಪೋಸ್ಟ್:
ಕರ್ನಾಟಕದ ಮಣ್ಣಿಂದ ಜಾಗತಿಕ ರಂಗದೆಡೆಗೆ ಸಾಗುವ ನಮ್ಮ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆ...✨#HRITHIKxHOMBALE @iHrithik @hombalefilms pic.twitter.com/THcDffThu6
— Hombale Films (@hombalefilms) May 28, 2025
ಈ ಸುದ್ದಿಯನ್ನೂ ಓದಿ: Hombale Films: ಬಿಗ್ ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್; ಹೃತಿಕ್ ರೋಷನ್ ಜತೆಗೆ ಬಾಲಿವುಡ್ ಚಿತ್ರ ಘೋಷಣೆ
ಪೃಥ್ವಿರಾಜ್ ನಿರ್ದೇಶನ?
ಮಲಯಾಳಂ ಸೂಪರ್ ಸ್ಟಾರ್, ಬಹುಭಾಷಾ ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಬಿಫಿಲ್ಮಿ ವೆಬ್‌ಸೈಟ್ ವರದಿ ಮಾಡಿದೆ. ನಾಯಕನಾಗಿ ಮಿಂಚಿರುವ ಪೃಥ್ವಿರಾಜ್ ನಿರ್ದೇಶಕನಾಗಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಈಗಾಗಲೇ ಅವರು 3 ಮಲಯಾಳಂ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂರೂ ಸಿನಿಮಾಗಳೂ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿವೆ. ಜತೆಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿವೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ತನ್ನ ಮೊದಲ ಹಿಂದಿ ಚಿತ್ರಕ್ಕೆ ಇವರಿಗೆ ಮಣೆ ಹಾಕಿದೆ ಎನ್ನಲಾಗಿದೆ. ಜತೆಗೆ ಈ ಹಿಂದೆ ಪೃಥ್ವಿರಾಜ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಸಲಾರ್: ಪಾರ್ಟ್ 1ʼ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕೆಜಿಎಫ್: ಚಾಪ್ಟರ್ 2ʼ, ʼಕಾಂತಾರʼ, ʼಸಲಾರ್: ಪಾರ್ಟ್ 1ʼ ಸಿನಿಮಾಗಳ ಮಲಯಾಳಂ ಆವೃತ್ತಿಯನ್ನು ಪೃಥ್ವಿರಾಜ್ ಕೇರಳದಲ್ಲಿ ರಿಲೀಸ್ ಮಾಡಿದ್ದರು. ಹೀಗೆ ಹೊಂಬಾಳೆ ಫಿಲ್ಮ್ಸ್ ಮತ್ತು ಪೃಥ್ವಿರಾಜ್ ನಡುವೆ ಉತ್ತಮ ಬಾಂಧ್ಯವವಿದ್ದು, ಅವರು ನಿರ್ದೇಶನಕ್ಕಿಳಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನುವ ಮಾತು ಕೇಳಿ ಬಂದಿದೆ.
ಇನ್ನೂ ನಿರ್ಧಾರವಾಗಿಲ್ಲ
ಅದಾಗ್ಯೂ ಪೃಥ್ವಿರಾಜ್‌ಗೆ ನಿರ್ದೇಶನದ ಜವಾಬ್ದಾರಿ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಚಿತ್ರತಂಡ ಹೇಳಿದ್ದಾಗಿ ಪಿಂಕಿವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ. ʼʼಹೃತಿಕ್ ರೋಷನ್ ಚಿತ್ರವನ್ನು ಯಾರು ನಿರ್ದೇಶಿಸಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈಗ ಹರಡಿರುವ ವದಂತಿಯನ್ನೂ ಯಾರೂ ನಂಬಬೇಡಿ. ಈ ಚಿತ್ರದ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ಅಧಿಕೃತವಾಗಿ ಹಂಚಿಕೊಳ್ಳುತ್ತೇವೆʼʼ ಎಂದು ಚಿತ್ರತಂಡದ ಮೂಲಗಳು ಹೇಳಿವೆ. ಆ ಮೂಲಕ ವದಂತಿಗೆ ಫುಲ್‌ಸ್ಟಾಪ್ ಇಡುವ ಪ್ರಯತ್ನ ಮಾಡಿವೆ.
ಪೃಥ್ವಿರಾಜ್ ಡೈರಕ್ಷನ್ ಕ್ಯಾಪ್ ತೊಡುತ್ತಾರಾ?
ಮೂಲಗಳ ಪ್ರಕಾರ ಪೃಥ್ವಿರಾಜ್ ನಿರ್ದೇಶನಕ್ಕಿಳಿವ ಸಾಧ್ಯತೆ ಹೆಚ್ಚೇ ಇದೆ. ಯಾಕೆಂದರೆ ಇದುವರೆಗೆ ಅವರು ನಿರ್ದೇಶಿಸಿದ ಎಲ್ಲ ಚಿತ್ರಗಳು ಹಿಟ್ ಎನಿಸಿಕೊಂಡಿವೆ. ಇತ್ತೀಚೆಗೆ ತೆರೆಕಂಡ ಪೃಥ್ವಿರಾಜ್ ಆ್ಯಕ್ಷನ್ ಕಟ್ ಹೇಳಿರುವ, ಮೋಹನ್‌ಲಾಲ್ ನಟಿಸಿರುವ ʼಎಲ್ 2: ಎಂಪುರಾನ್ʼ ಮಲಯಾಳಂ ಚಿತ್ರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದು ಪೃಥ್ವಿರಾಜ್ ನಿರ್ದೇಶನದ ʼಲೂಸಿಫರ್ʼ ಸಿನಿಮಾದ ಸೀಕ್ವೆಲ್. ಈ ಸಿನಿಮಾದಲ್ಲಿ ಬಲ ಪಂಥೀಯರನ್ನು ಕೀಳಾಗಿ ಚಿತ್ರಿಸಲಾಗಿದೆ ಎನ್ನುವ ಕಾರಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದಾಗ್ಯೂ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಗಡಿ ದಾಟಿತ್ತು. ಹೀಗಾಗಿ ಇದೀಗ ಹೃತಿಕ್ ರೋಷನ್‌ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.