Roopa Gururaj Column: ಮನುಷ್ಯನ ಸಾರ್ಥ ಬುದ್ದಿ
ತಕ್ಷಣ ಅದನ್ನು ಮುರಿದುಕೊಂಡು ಮನೆಗೆ ಹೋಗಿ, ಅದನ್ನುತನ್ನ ಕೊಡಲಿಗೆ ಹಿಡಿ ಯನ್ನಾಗಿ ಮಾಡಿ ಹಾಕಿದ. ಮಾರನೇ ದಿನದಿಂದಲೇ ಅವನು ಆ ಕೊಡಲಿಯನ್ನು ಹೆಗಲ ಮೇಲಿಟ್ಟು ಕೊಂಡು, ಅದೇ ಕಾಡಿಗೆ ಹೋಗಿ ಮರಗಳನ್ನು ಕಡಿಯಲು ಶುರುಮಾಡಿದ. ಅವನು ಪ್ರತಿನಿತ್ಯ, ಕಾಡಿಗೆ ಬಂದು ದೊಡ್ಡದು, ಸಣ್ಣದು, ಒಣಗಿದ್ದು, ಹಸಿಯದು ಹೀಗೆ ಎಲ್ಲಾ ಮರಗಳನ್ನು ಕಡಿದು ಉರುಳಿಸಿ, ಪೇಟೆಯಲ್ಲಿ ಮಾರಿ ಹಣ ಸಂಪಾದನೆ ಮಾಡ ತೊಡಗಿದ


ಒಂದೊಳ್ಳೆ ಮಾತು
ಒಂದು ಸಣ್ಣ ಊರಿನಲ್ಲಿ ವಾಸಿಸುತ್ತಿದ್ದ ಮನುಷ್ಯನಿಗೆ, ಜೀವನೋಪಾಯಕ್ಕೆ ಯಾವ ಕೆಲಸವೂ ಇರಲಿಲ್ಲ. ಆತ ಜೀವನದಲ್ಲಿ ತುಂಬಾ ಬೇಸತ್ತಿದ್ದ. ಯಾವ ದಾರಿಯೂ ಕಾಣದೆ ಆತ ಕಾಡಿನಿಂದ ಸೌದೆ ತಂದು ಮಾರಾಟ ಮಾಡಲು ನಿರ್ಧರಿಸಿ, ಅಂಗಡಿಗೆ ಹೋಗಿ ಒಂದು ಕೊಡಲಿಯನ್ನು ಕೊಂಡು ತಂದ. ಆ ಕೊಡಲಿಗೆ ಕಾವು ಇರಲಿಲ್ಲ. ಹತ್ತಿರದಲ್ಲಿದ್ದ ಕಾಡಿಗೆ ಹೋಗಿ, ಆ ಕೊಡಲಿಯ ಕಾವಿಗಾಗಿ ಮರಗಳನ್ನು ಹುಡುಕುತ್ತಿದ್ದ. ಆ ಕಾಡಿನಲ್ಲಿ ಅನೇಕ ಜಾತಿಯ ಮರಗಳು ಒಂದಕ್ಕಿಂತ ಒಂದು ಸೊಗಸಾಗಿ ಬೆಳೆದು ನಿಂತಿ ದ್ದವು. ಈ ವ್ಯಕ್ತಿ ಮರಗಳ ಮುಂದೆ ನಿಂತು, ದೈನ್ಯತೆಯಿಂದ ‘ಹೇ ಪವಿತ್ರ ವೃಕ್ಷಗಳೇ ನಾನು ಬಹಳ ಬಡ ಮನುಷ್ಯ, ನನ್ನ ಜೀವನೋಪಾಯಕ್ಕೆ ಬಹಳ ಕಷ್ಟವಾಗಿದೆ. ನಿಮ್ಮಲ್ಲಿ ಯಾವು ದಾದರೂ ಒಂದು ಮರ ಒಂದು ತುಂಡು ಕೊಂಬೆಯನ್ನು ಕೊಟ್ಟರೆ, ನನಗೆ ತುಂಬಾ ಸಹಾಯ ವಾಗುತ್ತದೆ, ನಿಮ್ಮ ಹೆಸರು ಹೇಳಿಕೊಂಡು ಜೀವನ ನಡೆಸುತ್ತೇನೆ’ ಎಂದು ಬೇಡಿಕೊಂಡ.
ಇದನ್ನೂ ಓದಿ: Roopa Gururaj Column: ಆಂಜನೇಯನ ಭಕ್ತರಿಗೆ ಶನಿಕಾಟವಿಲ್ಲ
ಆ ಕಾಡಿನ ಮರಗಳಿಗೆ ಅವನ ಕಷ್ಟವನ್ನು ನೋಡಿ ಬಹಳವಾಗಿ ಮರುಕ ಉಂಟಾಯಿತು. ಅವುಗಳು ಅವನ ಬಗ್ಗೆ ಕನಿಕರದಿಂದ ಅವನು ಕೇಳಿದ್ದನ್ನು ಕೊಡಲು ಒಪ್ಪಿಕೊಂಡವು. ಆದರೆ ಆ ವ್ಯಕ್ತಿ ರೆಂಬೆಯನ್ನು ಕೇಳಿದ ಉದ್ದೇಶ ಅವುಗಳಿಗೆ ತಿಳಿದಿರಲಿಲ್ಲ. ಅವನೇನು ಅಂಥಾ ಹೆಚ್ಚಿನದೇನನ್ನೂ ಕೇಳಿಲ್ಲ, ಕೇವಲ ಒಂದೇ ಒಂದು ರೆಂಬೆ ತಾನೇ ಎಂದು ಆ ಮರಗಳಿಗೆ ಅನ್ನಿಸಿತು. ಅವನಿಗೆ ಬೇಕಾದ ಮರದ ತುಂಡನ್ನು ಮುರಿದುಕೊಳ್ಳುವಂತೆ ಹೇಳಿದವು.
ಕೂಡಲೇ ಅವನು, ಕಾಡಿನ ಎಲ್ಲಾ ಮರಗಳ ಸುತ್ತ ಸ್ವಲ್ಪ ಸಮಯ ಸುತ್ತಾಡಿದ. ಎಲ್ಲಾ ಮರಗಳ ಮೇಲೆ ಕಣ್ಣು ಹಾಯಿಸಿ ನೋಡಿದ. ಒಂದು ಮರದಲ್ಲಿ ತೋಳು ಗಾತ್ರದ ದುಂಡಗಿನ ನೇರವಾದ ಒಂದು ರೆಂಬೆ ಅವನ ಕಣ್ಣಿಗೆ ಬಿತ್ತು. ಅದು ಇವನ ಕೊಡಲಿಯ ಹಿಡಿಗೆ ಸರಿ ಹೋಗುವಂತೆ ಕಾಣಿಸಿತು.
ತಕ್ಷಣ ಅದನ್ನು ಮುರಿದುಕೊಂಡು ಮನೆಗೆ ಹೋಗಿ, ಅದನ್ನುತನ್ನ ಕೊಡಲಿಗೆ ಹಿಡಿ ಯನ್ನಾಗಿ ಮಾಡಿ ಹಾಕಿದ. ಮಾರನೇ ದಿನದಿಂದಲೇ ಅವನು ಆ ಕೊಡಲಿಯನ್ನು ಹೆಗಲ ಮೇಲಿಟ್ಟುಕೊಂಡು, ಅದೇ ಕಾಡಿಗೆ ಹೋಗಿ ಮರಗಳನ್ನು ಕಡಿಯಲು ಶುರುಮಾಡಿದ. ಅವನು ಪ್ರತಿನಿತ್ಯ, ಕಾಡಿಗೆ ಬಂದು ದೊಡ್ಡದು, ಸಣ್ಣದು, ಒಣಗಿದ್ದು, ಹಸಿಯದು ಹೀಗೆ ಎಲ್ಲಾ ಮರಗಳನ್ನು ಕಡಿದು ಉರುಳಿಸಿ, ಪೇಟೆಯಲ್ಲಿ ಮಾರಿ ಹಣ ಸಂಪಾದನೆ ಮಾಡ ತೊಡಗಿದ. ದಿನ ಕಳೆದಂತೆ ದಟ್ಟ ಕಾಡು ಹೋಗಿ, ಬಯಲಾಗ ತೊಡಗಿತು. ಕೊನೆಯಲ್ಲಿ, ಒಂದು ಮುದಿ ಹುಣಸೆ ಮರ, ಒಂದು ಆಲದ ಮರ ಮಾತ್ರ ಉಳಿದವು. ಇನ್ನು ತಮ್ಮ ಸರದಿ ಯಾವಾಗ ಬರಬಹುದು ಎಂದು ದುಃಖಿಸುತ್ತಾ ಕಾಯುತ್ತಾ ನಿಂತಿದ್ದವು.
ಆಲದ ಮರ ಹುಣಸೆ ಮರದ ಬಳಿ, ‘ಬಡವ ಪಾಪ, ಹೇಗಾದರೂ ಬದುಕಿಕೊಳ್ಳಲಿ ಎಂದು ನಾವು ಮಾಡಿದ ದಾನವೇ ನಮ್ಮ ಕುಲಕ್ಕೆ ಮೃತ್ಯುವಾಗಿಬಿಟ್ಟಿತಲ್ಲ!’ ಎಂದು ನಿಟ್ಟಿಸಿರು ಬಿಡುತ್ತಾ ಹೇಳಿತು. ‘ಹೌದು, ನಾವು ಅವನನ್ನು ನಂಬಿ ಮೋಸ ಹೋದೆವು. ಅಪಾತ್ರರಿಗೆ ದಾನ ಮಾಡಿದರೆ, ಅದರಿಂದ ನಮಗೇ ಕೇಡು ಉಂಟಾಗುವುದೆಂದು ನಮಗೆ ಆಗ ಹೊಳೆ ಯಲೇ ಇಲ್ಲ ಎಂದಿತು ಹುಣಸೆ ಮರ.
ಯಾರಿಗಾದರೂ ಸಹಾಯ ಮಾಡುವ ಮೊದಲು, ಉಪಕಾರ ಮಾಡುವ ಮೊದಲು ಅವರು ಅದಕ್ಕೆ ನಿಜಕ್ಕೂ ಅರ್ಹರೆ ಎಂದು ಯೋಚಿಸಬೇಕು. ಅವರಿಗೆ ಉಪಕಾರ ಸ್ಮರಣೆ ಇಲ್ಲದಿ ದ್ದರೂ ಪರವಾಗಿಲ್ಲ, ಆದರೆ ಉಪಕಾರ ಮಾಡಿದವರನ್ನೇ ಅವರು ತಮ್ಮ ಸ್ವಾರ್ಥಕ್ಕಾಗಿ ಮುಂದೆ ವಂಚಿಸಿದರೆ ಮನುಷ್ಯತ್ವದ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಅನೇಕ ಬಾರಿ ಯಾವುದೋ ಕೆಲಸಕ್ಕಾಗಿ ಅವಕಾಶಕ್ಕಾಗಿ ಪರಿತಪಿಸುತ್ತಿರುವ ಸ್ನೇಹಿತರಿಗೆ ನಾವೇ ಮುಂದೆ ನಿಂತು ಸಹಾಯ ಮಾಡಿ ಅವಕಾಶ ಒದಗಿಸಿಕೊಡುತ್ತೇವೆ. ಆದರೆ ನಂತರ ಅವರು ನಮ್ಮ ಕೆಲಸಕ್ಕೆ ಸಂಚಕಾರ ತರುವ ಸ್ಥಿತಿಗೆ ತಲುಪುತ್ತಾರೆ.
ಅತಿ ಆಸೆ ಹೆಚ್ಚಾದರೆ ಸ್ನೇಹ ಬಾಂಧವ್ಯ ಎಲ್ಲವನ್ನೂ ಮರೆಯುವ ಇಂದಿನ ಕಾಲದಲ್ಲಿ ಮತ್ತೊಬ್ಬರಿಗೆ ಏಣಿ ಹಾಕುವ ಮುಂಚೆ ನಾವು ಗಟ್ಟಿಯಾಗಿ ನಿಲ್ಲಬೇಕು.