ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kayarga Column: ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ಪಕ್ಷ ನಾಯಕರ ಬೆಂಬಲ, ಜಾತಿ ಬೆಂಬಲ ಇಲ್ಲವೇ ಕ್ಷೇತ್ರದ ಮತದಾರರ ಬೆಂಬಲ ಈ ಮೂರರ ಪೈಕಿ ಒಂದೂ ಇಲ್ಲದೇ ಹೋದರೆ ಎಷ್ಟೇ ಪ್ರಭಾವಿ ನಾಯಕರಾದರೂ ರಾಜಕೀಯದಲ್ಲಿ ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ. ಪಕ್ಷ ನಿಷ್ಠೆ, ಮೌಲ್ಯ, ತತ್ವ-ಸಿದ್ದಾಂತ, ವೈಯಕ್ತಿಕ ವರ್ಚಸ್ಸು ಇವು ಗಳಿಂದ ಸದ್ಯದ ಚುನಾವಣೆ ರಾಜಕೀಯವನ್ನು ಗೆಲ್ಲಲು ಸಾಧ್ಯವಿಲ್ಲ. ರಾಜಕೀಯ ಮೌಲ್ಯಗಳಿಗೆ ಹೆಸ ರಾದ ಎ.ಟಿ.ರಾಮಸ್ವಾಮಿ. ವೈಎಸ್‌ವಿ ದತ್ತ ಮುಂತಾದವರು ಜೆಡಿಎಸ್ ಮಾತ್ರವಲ್ಲ ಈಗ ಯಾವ ಪಕ್ಷದಲ್ಲೂ ಪ್ರಸ್ತುತರಾಗಲು ಸಾಧ್ಯವಿಲ್ಲ.

ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ಲೋಕಮತ

ಲೋಕೇಶ್‌ ಕಾಯರ್ಗ

kaayarga@gmail.com

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತಿದೆ. ಇದಕ್ಕಿಂತ ರಾಜಕೀಯದಲ್ಲಿ ಏನಾದರೂ ಮಾಡಲು ಸಿದ್ಧವಿರಬೇಕು ಎನ್ನುವುದು ಹೆಚ್ಚು ಸೂಕ್ತ. ತಮ್ಮ ರಾಜಕೀಯ ಗುರಿಯನ್ನು ಸಾಽಸಲು ಏನು ಬೇಕಾದರೂ ಮಾಡಲು ಸಿದ್ಧ ಎನ್ನುವವರಿಂದಲೇ ರಾಜಕೀಯದಲ್ಲಿ ಅಸಂಭವ ಎನಿಸಿದ್ದು ಸಂಭವಿಸುತ್ತದೆ. ಮಿತ್ರರಾಗಿದ್ದವರು ಶತ್ರುಗಳಾಗುತ್ತಾರೆ. ಶತ್ರುಗಳಾಗಿದ್ದವರು ಮಿತ್ರ ರಾಗುತ್ತಾರೆ. ಆದರೆ ಇಲ್ಲಿ ಪಕ್ಷದ ಸಿದ್ಧಾಂತ, ಧೋರಣೆಗಳ ಹೊರತಾ ಗಿಯೂ ತಮ್ಮದೇ ನಿಲುವು, ಸಿದ್ಧಾಂತಗಳನ್ನು ಇಟ್ಟುಕೊಂಡವರು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಪಕ್ಷ ಭೇದವಿಲ್ಲದೆ ಸದ್ಯದ ರಾಜಕಾರಣವನ್ನು ಒಮ್ಮೆ ಗಮನಿಸಿ ನೋಡಿ. ಅಲ್ಲಿ ನಾಯಕರು ಮತ್ತು ಹಿಂಬಾಲಕರು ಎಂಬ ಎರಡೇ ವರ್ಗವಿದೆ.

ಹಾಲಿ 223 ಶಾಸಕರ ಪಟ್ಟಿ ತೆಗೆದುಕೊಂಡು ನೋಡಿದರೆ ಕಾಂಗ್ರೆಸ್‌ನ ಅಷ್ಟೂ ಶಾಸಕರನ್ನು ಎರಡು ಅಥವಾ ಮೂರು ಬಣಗಳಲ್ಲಿ ವಿಂಗಡಿಸಬಹುದು. ಬಿಜೆಪಿಯಲ್ಲಿ ಪಕ್ಷದ ಹೆಸರಿನಲ್ಲಿ ಗೆದ್ದು ಬರುವ ಬೆರಳೆಣಿಕೆಯ ಶಾಸಕರನ್ನು ಹೊರತುಪಡಿಸಿ ಉಳಿದವರು ನಾಲ್ಕೈದು ಬಣಗಳಲ್ಲಿ ಹಂಚಿ ಹೋಗಿ ದ್ದಾರೆ. ಕೆಲವರು ಕಾಂಗ್ರೆಸ್ ಬಣದಲ್ಲಿದ್ದಾರೆ.

ಜೆಡಿಎಸ್‌ನಲ್ಲೂ ಅಪ್ಪ-ಮಕ್ಕಳ ಬಣ ಮತ್ತು ಕಾಂಗ್ರೆಸ್‌ನತ್ತ ವಾಲಿದ ಎರಡು ಬಣಗಳನ್ನು ಕಾಣಬಹುದು. ಇವೆಲ್ಲದರ ನಡುವೆ ಎಲ್ಲ ಪಕ್ಷಗಳಲ್ಲೂ ತಮ್ಮದೇ ಅಭಿಪ್ರಾಯ, ಸೈದ್ಧಾಂತಿಕ ನೀತಿ, ನಿಲುವುಗಳನ್ನು ಹೊಂದಿದ ಕೆಲವು ನಾಯಕರಿದ್ದಾರೆ. ಮಾಧ್ಯಮಗಳಲ್ಲಿ ಆಗಾಗ ಇವರ ಹೆಸರು ಬರುತ್ತಲೇ ಇರುತ್ತದೆ. ಆದರೆ ಚುನಾವಣಾ ರಾಜಕಾರಣದಲ್ಲಿ ಇಂಥವರ ರಾಜಕೀಯ ಜೀವನ ಅರ್ಧ ದಲ್ಲಿಯೇ ಕೊನೆಗೊಂಡಿದ್ದು ಹೆಚ್ಚು.

ಇದನ್ನೂ ಓದಿ: Lokesh Kayarga Column: ಆಯೋಗದ ಮೇಲೆ ಆಯೋಗ, ಸಂತ್ರಸ್ತರಿಗಿಲ್ಲ ಪರಿಹಾರ ಯೋಗ

ಆರಂಭದಲ್ಲಿ ಕಾಂಗ್ರೆಸ್ ಬಳಿಕ ಜೆಡಿಎಸ್ ನಾಯಕರಾಗಿ ಗುರುತಿಸಿಕೊಂಡು ವಿಧಾನಸಭೆಗೆ ಆಯ್ಕೆ ಯಾದ ಎ.ಟಿ. ರಾಮಸ್ವಾಮಿ ಅವರು ಕಳೆದ ಲೋಕಸಭಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ಈ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಲು ಅವರು ನೀಡಿರುವ ನೀಡಿರುವ ಕಾರಣಗಳನ್ನು ಗಮನಿಸಿದರೆ ರಾಜಕಾರಣದಿಂದ ಕಾಯಂ ಆಗಿ ದೂರವುಳಿ ಯುವ ಸುಳಿವು ನೀಡಿದ್ದಾರೆ.

ಹವಾಮಾನ ವೈಪರೀತ್ಯದ ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ರಾಜಕಾರಣಕ್ಕಿಂತ ಪ್ರಕೃತಿಯನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹೆಚ್ಚು ಅತ್ಯ ಗತ್ಯವಾಗಿದೆ ಎಂದು ರಾಮಸ್ವಾಮಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಅವರ ಕೊಟ್ಟ ಕಾರಣ ನಿಜಕ್ಕೂ ಗಂಭೀರ ವಿಷಯ. ಆದರೆ ಎರಡೂವರೆ ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡ ನಾಯಕರೊಬ್ಬರು ಇದ್ದಕ್ಕಿದ್ದಂತೆ ರಾಜಕೀಯ ಬಿಟ್ಟು ಪರಿಸರ ಚಳವಳಿಗೆ ಧುಮುಕುತ್ತೇನೆ ಎಂದರೆ ಜನರು ಅಷ್ಟು ಸುಲಭವಾಗಿ ನಂಬುವುದಿಲ್ಲ.

Kay ok

ಸ್ವತ: ಎಟಿಆರ್ ಅವರ ಅಂತರಂಗಕ್ಕೂ ಇದು ಸಕಾರಣವಾಗಿ ಕಂಡಿರಲಿಕ್ಕಿಲ್ಲ. “ಜಗತ್ತಿನಲ್ಲಿ ತಾಪ ಮಾನ ಏರಿಕೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿದೆ. ಪರಿಸರ ಅಸಮತೋಲನದಿಂದಾಗಿ ನೆರೆ, ಬರ, ಚಂಡಮಾರುತ, ಭೂಕಂಪನಗಳು ಸೃಷ್ಟಿಯಾಗುತ್ತಿವೆ. ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ಸಹ ವಿಷಪೂರಿತವಾಗಿವೆ.

ಬೆಟ್ಟ, ಗುಡ್ಡ, ಅರಣ್ಯಗಳ ನಾಶದಿಂದ ನದಿ, ತೊರೆಗಳೂ ಬತ್ತಿ ಹೋಗಿವೆ. ಅಂತರ್ಜಲ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಜೀವ ಸಂಕುಲಗಳಿಗೆ ಈ ಬೆಳವಣಿಗೆಯಿಂದ ಸಂಕಷ್ಟ ಬಂದೊದಗಿದೆ’ ಎಂದು ಎ.ಟಿ. ರಾಮಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಜಾಗತಿಕ ತಾಪಮಾನದ ಈ ಪರಿಸ್ಥಿತಿಯನ್ನು ಇಂದಿನ ರಾಜಕಾರಣಕ್ಕೂ ಅನ್ವಯಿಸಬಹುದು. ನಂಬಿಕೆ, ವಿಶ್ವಾಸ, ನೀತಿ, ಸಿದ್ದಾಂತಗಳ ಬರದಿಂದ ವಿಷಮಯವಾಗಿರುವ ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಸಂಕಷ್ಟ ಬಂದೊದಗಿದೆ. ರಾಜಕಾರಣ ಎಂದರೆ ವ್ಯಾಪಾರ ಎಂದುಕೊಂಡವರ ನಡುವೆ ಮೌಲ್ಯಗಳು ಗೌಣವಾಗಿದ್ದು, ಹಣದ ಥೈಲಿ ಹಿಡಿದು ಬಂದವರಿಗೆ ಮಾತ್ರ ಪಕ್ಷದ ಟಿಕೆಟ್ ಸಿಗುತ್ತಿದೆ ಎಂದು ಹೇಳಿದ್ದರೂ ಎಟಿಆರ್ ರಾಜೀನಾಮೆಗೆ ಸೂಕ್ತ ಕಾರಣಗಳಾಗುತ್ತಿತ್ತು.

ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಂದಲೂ ಪರಿತ್ಯಕ್ತರಾದ ಎಟಿಎಆರ್ ಮಾದರಿಯ ರಾಜಕಾರಣಿ ಗಳಿಗೆ ಇದನ್ನು ಬಿಟ್ಟು ಹೆಚ್ಚೇನೂ ಆಯ್ಕೆಗಳಿರುವುದಿಲ್ಲ. ಎಟಿಆರ್ ಅವರನ್ನು ಕರ್ನಾಟಕದ ಕ್ಷೇತ್ರದ ಜನರು ಜನರನ್ನು ನೆನಪಿಸಿಕೊಳ್ಳುವುದು ರಾಜಧಾನಿ ಬೆಂಗಳೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ಸಂಬಂಧ ಅವರು ನೀಡಿದ ವರದಿಗಾಗಿ. ಈಗಲೂ ವಿಧಾನಸಭೆಯಲ್ಲಿ ಒತ್ತುವರಿ ತೆರವು ಸಂಬಂಧ ಮಾತನಾಡುವಾಗ ಶಾಸಕರು, ಸಚಿವರು ಅವರು ನೀಡಿದ ವರದಿಯನ್ನು ನೆನಪಿಸಿಕೊಳ್ಳು ತ್ತಾರೆ.

ಈ ವರದಿ ಎಟಿಎಆರ್ ಅವರ ಪ್ರಾಮಾಣಿಕತೆ ಮತ್ತು ನೆಲ, ಜಲದ ಸಂರಕ್ಷಣೆ ವಿಷಯದಲ್ಲಿ ಅವರ ಪಕ್ಷಾತೀತ ನಿಲುವಿಗೂ ಉತ್ತಮ ಉದಾಹರಣೆ. ಆದರೆ ಸಮಾನ ಫಲಾನುಭವಿಗಳನ್ನು ಹೊಂದಿರುವ ಒತ್ತುವರಿ ವಿಚಾರದಲ್ಲಿ ಈ ವರದಿಗೆ ಯಾವ ಪಕ್ಷದ ಒತ್ತಾಸೆಯೂ ಸಿಗಲಿಲ್ಲ ಎನ್ನುವುದು ಬೇರೆ ಮಾತು. ರಾಮಸ್ವಾಮಿ ತಮ್ಮ ಸ್ವಂತದ ನಿಲುವಿಗೆ ಅಂಟಿಕೊಳ್ಳದೆ ನಾಯಕರ ಮರ್ಜಿ ನೋಡಿ ಕೊಂಡು ಮಾತನಾಡುತ್ತಿದ್ದರೆ ಅವರ ರಾಜಕೀಯ ಜೀವನ ಅಭದ್ರವಾಗುತ್ತಿರಲಿಲ್ಲ.

ಕನಿಷ್ಠ ಪಕ್ಷ ಎಚ್.ಡಿ. ರೇವಣ್ಣ ಅವರ ಬೆಂಬಲಿಗನಾಗಿ ಉಳಿದಿದ್ದರೂ ರಾಜಕೀಯದಲ್ಲಿ ಇನ್ನಷ್ಟು ಕಾಲ ಮುಂದುವರಿಯಬಹುದಿತ್ತು. ಆದರೆ ತನ್ನದೇ ಸ್ವಂತಿಕೆ ಹೊಂದಿರುವ ಯಾವ ನಾಯಕನೂ ಹೆಚ್ಚು ಕಾಲ ಸರ್ವಾಧಿಕಾರದಡಿಯಲ್ಲಿ ಇರಲು ಸಾಧ್ಯವಿಲ್ಲ. ತಮ್ಮ ಪ್ರತಿಸ್ಫರ್ಧಿ ಎ.ಮಂಜು ಅವರಂತೆ ‘ಹಿಂದಿನದೆಲ್ಲವನ್ನೂ ಮರೆತು ಬಿಡುವ’ ಸಂದರ್ಭೋಚಿತ ನಿರ್ಧಾರ ಕೈಗೊಂಡಿದ್ದರೂ ರಾಮಸ್ವಾಮಿ ಸಕ್ರಿಯ ರಾಜಕಾರಣಿಯಾಗಿ ಮುಂದುವರಿಯಬಹುದಿತ್ತು.

ಪಕ್ಷ ನಾಯಕರ ಬೆಂಬಲ, ಜಾತಿ ಬೆಂಬಲ ಇಲ್ಲವೇ ಕ್ಷೇತ್ರದ ಮತದಾರರ ಬೆಂಬಲ ಈ ಮೂರರ ಪೈಕಿ ಒಂದೂ ಇಲ್ಲದೇ ಹೋದರೆ ಎಷ್ಟೇ ಪ್ರಭಾವಿ ನಾಯಕರಾದರೂ ರಾಜಕೀಯದಲ್ಲಿ ದೀರ್ಘ ಕಾಲ ಮುಂದುವರಿಯಲು ಸಾಧ್ಯವಿಲ್ಲ. ಪಕ್ಷ ನಿಷ್ಠೆ, ಮೌಲ್ಯ, ತತ್ವ -ಸಿದ್ದಾಂತ, ವೈಯಕ್ತಿಕ ವರ್ಚಸ್ಸು ಇವೆಲ್ಲವೂ ಸದ್ಯದ ಚುನಾವಣೆ ರಾಜಕೀಯವನ್ನು ಗೆಲ್ಲಲು ಸಾಧ್ಯವಿಲ್ಲ.

ಇದಕ್ಕೆ ಎಲ್ಲ ಪಕ್ಷಗಳಲ್ಲೂ ಹಲವು ಉದಾಹರಣೆಗಳು ಸಿಗುತ್ತವೆ. ಜೆಡಿಎಸ್‌ನಲ್ಲಿ ಎಲ್ಲ ಪಕ್ಷಗಳಿ ಗಿಂತಲೂ ಹೆಚ್ಚು ಉದಾಹರಣೆಗಳು ಸಿಗುತ್ತವೆ. ಜೆಡಿಎಸ್ ವರಿಷ್ಠ ದೇವೇಗೌಡರ ದತ್ತುಪುತ್ರ ಎಂದು ಕರೆಸಿಕೊಳ್ಳುತ್ತಿದ್ದ ವೈಎಸ್‌ವಿ ದತ್ತ ಅವರನ್ನು ಪಕ್ಷವು ಮೂಲೆಗುಂಪು ಮಾಡಿದ ರೀತಿ ಗಮನಿಸಿ ದವರಿಗೆ ಘಾತುಕ ರಾಜಕಾರಣದ ಒಳಮರ್ಮ ಅರ್ಥವಾಗಬಹುದು. ಒಂದು ಕಾಲದಲ್ಲಿ ಪಕ್ಷದ ಘಟಾನುಘಟಿ ನಾಯಕರಾಗಿದ್ದ, ಸದನದಲ್ಲೂ , ಹೊರಗೂ ಪಕ್ಷವನ್ನು ಬಲವಾಗಿ ಸಮರ್ಥಿಸಿ ಕೊಳ್ಳುತ್ತಿದ್ದ ಎಂ.ಸಿ. ನಾಣಯ್ಯ ಅವರಂತಹ ನಾಯಕರನ್ನು ಪಕ್ಷವು ನಡೆಸಿಕೊಂಡ ರೀತಿ ಯಾರಿ ಗಾದರೂ ಬೇಸರೆ ತರಿಸದೇ ಇರದು.

ಜನತಾ ಪರಿವಾರದ ನಾಯಕರಾಗಿದ್ದ ಪಿ.ಜಿ.ಆರ್ ಸಿಂಧ್ಯಾ, ಸೋಮಶೇಖರ್ ಮುಂತಾದ ನಾಯಕರು ಪಕ್ಷದಾಚೆಗೂ ವ್ಯಕ್ತಿತ್ವ ರೂಪಿಸಿಕೊಂಡವರು. ಆದರೆ ಚುನಾವಣೆ ರಾಜಕೀಯದಲ್ಲಿ ಗೆದ್ದು ಬರಲು ವ್ಯಕ್ತಿತ್ವಕ್ಕಿಂತಲೂ ಬೇರೆ ಹಾದಿಯಲ್ಲಿ ಸಾಗುವುದು ಅನಿವಾರ‍್ಯ. ಬಿಜೆಪಿಯ ಆರಂಭಿಕ ದಿನಗಳ ನಾಯಕ ಬಿ.ಬಿ. ಶಿವಪ್ಪ ಅವರ ರಾಜಕೀಯ ಜೀವನವೂ ರಾಜಕೀಯ ಸಂಚಿನಲ್ಲಿ ಕೊನೆಗೊಂಡಿದ್ದು ಇತಿಹಾಸ.

ಬಿಜೆಪಿಯಲ್ಲಿ ನಾಲ್ಕೈದು ಬಾರಿ ಶಾಸಕರಾಗಿದ್ದ ಯೋಗೀಶ್ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದ ನಾಯಕರ ಬಗ್ಗೆ ಎಲ್ಲ ಪಕ್ಷಗಳಲ್ಲೂ ಸದಭಿಪ್ರಾಯವಿತ್ತು. ಆದರೆ ರಾಜಕೀಯದಲ್ಲಿ ಸದಭಿಪ್ರಾಯ, ಚಾರಿತ್ರ್ಯ, ಪ್ರಾಮಾಣಿಕತೆಗಿಂತಲೂ ನಾಯಕರ ಕೃಪಾಶೀರ್ವಾದ ಮುಖ್ಯ. ಜನತಾ ಪರಿವಾರದಲ್ಲಿದ್ದು ಈಗ ಕಾಂಗ್ರೆಸ್‌ನಲ್ಲಿರುವ ಬಿ.ಎಲ್ ಶಂಕರ್ ಮುಂತಾದ ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸಿನ ಹೊರತಾಗಿಯೂ ರಾಜಕೀಯವಾಗಿ ಮೇಲೇರಲು ಸಾಧ್ಯವಾಗುತ್ತಿಲ್ಲ.

ಇಲ್ಲಿ ಸಕಾರಣಕ್ಕೆ ಸದ್ದು ಮಾಡದೇ ವಿನಾ ಕಾರಣ ಸದ್ದು ಮಾಡುವವರಿಗೆ, ನಾಯಕರ ಹೊಗಳು ಭಟರಿಗೆ, ಸೂಟ್‌ಕೇಸ್ ವ್ಯವಸ್ಥೆ ಮಾಡುವವರಿಗೆ ಹೆಚ್ಚು ಬೆಲೆ, ಮನ್ನಣೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ಇತ್ತೀಚಿನ ವರದಿಯ ಪ್ರಕಾರ, ಕೋಟ್ಯಧಿಪತಿ ಶಾಸಕರ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಅಗ್ರ 10 ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದ ನಾಲ್ವರು ಸ್ಥಾನ ಪಡೆದಿದ್ದಾರೆ. ಕರ್ನಾಟಕದ 223 ಶಾಸಕರ ಒಟ್ಟು ಘೋಷಿತ ಆಸ್ತಿ ಮೊತ್ತ 14,179 ಕೋಟಿ ರು. ಕರ್ನಾಟಕದ 31 ಶಾಸಕರು 100 ಕೋಟಿ ರೂ. ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಕರ್ನಾಟಕದ ರಾಜಕಾರಣ ಯಾವ ದಿಕ್ಕನ್ನು ಹಿಡಿದಿದೆ ಎನ್ನುವುದಕ್ಕೆ ಈ ಅಂಕಿ ಅಂಶಗಳೇ ಸ್ಪಷ್ಟಪಡಿಸುತ್ತವೆ. ಎ.ಟಿ. ರಾಮಸ್ವಾಮಿ, ವೈಎಸ್‌ವಿ ದತ್ತ ಮುಂತಾದವರು ಈ ರಾಜಕೀಯದಲ್ಲಿ ಪ್ರಸ್ತುತರಾಗಲು ಸಾಧ್ಯವೇ ಇಲ್ಲ.