ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಪ್ರತಿಸ್ಪರ್ಧಿ ಮೇಲೆ ಹದ್ದಿನಗಣ್ಣು

ಯಾವುದೋ ಒಂದು ಕಂಪನಿ ಸಿದ್ಧಪಡಿಸುವ ವಸ್ತು ಅಥವಾ ಉತ್ಪನ್ನ, ಈಗಾಗಲೇ ಮಾರುಕಟ್ಟೆ ಯಲ್ಲಿ ರುವ ತನ್ನ ಪ್ರಾಡಕ್ಟನ್ನು ಹಿಂದಕ್ಕೆ ಹಾಕಬಹುದು ಎಂಬ ಆತಂಕ ಅದನ್ನು ಸದಾ ಕಾಡುತ್ತಿರುತ್ತದೆ. ಈ ಕಾರಣಕ್ಕಾಗಿ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಹದ್ದಿನಗಣ್ಣನ್ನು ನೆಟ್ಟಿರುತ್ತವೆ

Vishweshwar Bhat Column: ಪ್ರತಿಸ್ಪರ್ಧಿ ಮೇಲೆ ಹದ್ದಿನಗಣ್ಣು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಗತ್ತಿನ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ವಿಶ್ವದೆಡೆ ಇರುವ ಬೇರೆ ಕಂಪನಿಗಳು ಏನು ಮಾಡುತ್ತಿವೆ ಎಂಬ ಬಗ್ಗೆ ಮೈಯೆಲ್ಲ ಕಣ್ಣಾಗಿ ನೋಡುತ್ತಾ ಕುಳಿತಿರುತ್ತವೆ. ತಮ್ಮ ಪ್ರತಿಸ್ಪರ್ಧಿ ಕಂಪನಿಗಳಷ್ಟೇ ಅಲ್ಲ, ಸಣ್ಣ ಪುಟ್ಟ ಕಂಪನಿಗಳು ಸಹ ಏನು ಮಾಡುತ್ತಿವೆ ಎಂಬ ಬಗ್ಗೆ ಕಾಲಕಾಲಕ್ಕೆ ತಮ್ಮದೇ ಜಾಲಗಳನ್ನು ಬಳಸಿ, ಮಾಹಿತಿಯನ್ನು ಪಡೆಯುತ್ತಿರುತ್ತವೆ.

ಈ ರೀತಿ ಮಾಹಿತಿ ಪಡೆಯಲೆಂದೇ, ಸಾವಿರಾರು ಕೋಟಿ ರುಪಾಯಿ ಹಣವನ್ನು ವ್ಯಯಿಸುತ್ತವೆ. ಯಾವುದೋ ಒಂದು ಕಂಪನಿ ಸಿದ್ಧಪಡಿಸುವ ವಸ್ತು ಅಥವಾ ಉತ್ಪನ್ನ, ಈಗಾಗಲೇ ಮಾರುಕಟ್ಟೆ ಯಲ್ಲಿರುವ ತನ್ನ ಪ್ರಾಡಕ್ಟನ್ನು ಹಿಂದಕ್ಕೆ ಹಾಕಬಹುದು ಎಂಬ ಆತಂಕ ಅದನ್ನು ಸದಾ ಕಾಡು ತ್ತಿರುತ್ತದೆ. ಈ ಕಾರಣಕ್ಕಾಗಿ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಹದ್ದಿನಗಣ್ಣನ್ನು ನೆಟ್ಟಿರುತ್ತವೆ.

ಇದನ್ನೂ ಓದಿ: Vishweshwar Bhat Column: ಭೂಕಂಪದೊಂದಿಗಿನ ಬದುಕು

2003 ರ ಕೊನೆಯಲ್ಲಿ ಒಂದು ದಿನ ಅನಿರೀಕ್ಷಿತವಾಗಿ, ಇಸ್ರೇಲ್ ಮೂಲದ ವಾಜ್ ( Waze ) ಕಂಪನಿ ಯ ಸಂಸ್ಥಾಪಕರಬ್ಬನಾದ ಉರಿ ಲೆವಿನ್ ಗೆ ಗೂಗಲ್ ಕಂಪನಿಯಿಂದ ಒಂದು ಇಮೇಲ್ ಬಂದಿತು - ‘ನಾವು ನಿಮ್ಮನ್ನು ಇಸ್ರೇಲಿನ ನಿಮ್ಮ ಕಚೇರಿಯಲ್ಲಿ ಭೇಟಿ ಮಾಡಲು ಉತ್ಸುಕರಾಗಿದ್ದೇವೆ. ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸಿ. ಇನ್ನು ಮೂರು ದಿನಗಳೊಳಗೆ ಭೇಟಿ ಸಾಧ್ಯವಾಗುವುದಾದರೆ ಒಳ್ಳೆಯದು.’ ಆರು ವರ್ಷಗಳ ಹಿಂದಷ್ಟೇ ವಾಜ್ ಕಂಪನಿ ಆರಂಭವಾಗಿತ್ತು. ಆ ಹೆಸರಿನ ಕಂಪನಿ ಇದೆ ಎಂಬುದು ಹೊರ ಜಗತ್ತಿಗಲ್ಲ, ಇಸ್ರೇಲಿಗರಿಗೇ ಹೆಚ್ಚು ಜನರಿಗೆ ಗೊತ್ತಿರಲಿಲ್ಲ.

ಕಾರಣ ಆ ಸಂಸ್ಥೆಯಲ್ಲಿ ಕೇವಲ ಹನ್ನೆರಡು ಜನ ಮಾತ್ರ ಕೆಲಸ ಮಾಡುತ್ತಿದ್ದರು. ವಾಜ್ ನಲ್ಲಿ ಏನು ನಡೆಯುತ್ತಿದೆ ಎಂಬುದು ಅದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಇತರರಿಗೂ ಗೊತ್ತಿರಲಿಲ್ಲ. ‘ಫ್ರೀಮ್ಯಾಪ್ ಇಸ್ರೇಲ್’ ಎಂಬ ಹೆಸರಿನಲ್ಲಿ ಆರಂಭವಾದ ಸಂಸ್ಥೆ ನಂತರ ವಾಜ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡಿತು. ‌

ಸ್ಮಾರ್ಟ್ ಫೋನ್ ಮೂಲಕ ಸ್ಯಾಟಲೈಟ್ ನೇವಿಗೇಶನ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವುದರಲ್ಲಿ ನಿರತವಾದ ವಾಜ, ಜಿಪಿಎಸ್ ತಂತ್ರeನದಲ್ಲಿ ಅಸಾಧಾರಣ ಸಾಧನೆಯನ್ನು ಮಾಡುವುದರತ್ತ ದಾಪು ಗಾಲು ಹಾಕಿತ್ತು. ಈ ಸಂಗತಿ ಗೂಗಲ್ ಗೆ ಹೇಗೋ ಗೊತ್ತಾಗಿಬಿಟ್ಟಿತು. ವಾಜ್ ಅಭಿವೃದ್ಧಿ ಪಡಿಸುತ್ತಿ ರುವ ತಂತ್ರಜ್ಞಾನ, ತನ್ನ ಹಿಡಿತದಲ್ಲಿರುವ ಜಿಪಿಎಸ್ ಮಾರುಕಟ್ಟೆಯನ್ನು ಕಬಳಿಸಿ ಬಿಡಬಹುದು ಎಂದು ಗೂಗಲ್‌ಗೆ ಅನಿಸಿತು. ಈ ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಹಠಾತ್ ಎಚ್ಚರಗೊಂಡ ಗೂಗಲ, ವಾಜ್ ಸಂಸ್ಥಾಪಕರನ್ನು ಸಂಪರ್ಕಿಸಿತು.

ಇಮೇಲ್ ಕಳಿಸಿದ ಮೂರನೇ ದಿನ ಗೂಗಲ್ ಪ್ರತಿನಿಧಿಗಳು ಇಸ್ರೇಲಿನ ಟೆಲ್ ಅವಿವ್ ನಲ್ಲಿರುವ ವಾಜ್ ಕಚೇರಿಯಲ್ಲಿ ಹಾಜರಿದ್ದರು. ಗೂಗಲ್ ಪ್ರತಿನಿಧಿಗಳು ಒಂದು ಪುಟದ ಒಪ್ಪಂದ ಪತ್ರವನ್ನು ಹಿಡಿದಿದ್ದರು. ‘ನೀವು ಒಪ್ಪುವುದಾದರೆ, 1.15 ಶತಕೋಟಿ ಅಮೆರಿಕನ್ ಡಾಲರ್ ನಗದು ಹಣ ನೀಡಿ, ನಿಮ್ಮ ಕಂಪನಿಯನ್ನು ಖರೀದಿಸಲು ನಾವು ಸಿದ್ಧ. ನಿಮ್ಮ ಕಂಪನಿ ಹೆಸರನ್ನು ನಾವೇನೂ ಬದಲಿ ಸುವುದಿಲ್ಲ.

ಅದು ಹಾಗೇ ಇರಲಿ. ಇಡೀ ವ್ಯವಹಾರ ಒಂದು ವಾರದೊಳಗೆ ಮುಗಿಯುತ್ತದೆ’ ಎಂದು ಬರೆದಿತ್ತು. ‘ಯೋಚಿಸಲು ನಮಗೆ ಕಾಲಾವಕಾಶ ಬೇಕು’ ಎಂದು ವಾಜ್ ಸಂಸ್ಥಾಪಕರು ಹೇಳಿದರು. ಆದರೆ ಗೂಗಲ್ ಪ್ರತಿನಿಧಿಗಳು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ’ನಿಮಗೆ ಇನ್ನೂ ಹೆಚ್ಚಿನ ಹಣ ಬೇಕಾದರೆ ಹೇಳಿ. ನಾವು ಅದಕ್ಕೂ ಸಿದ್ಧರಿದ್ದೇವೆ’ ಎಂದು ಗೂಗಲ್ ಪ್ರತಿನಿಧಿಗಳು ಹೇಳಿದಾಗ, ಆ ಒಪ್ಪಂದದಿಂದ ಹೊರಬರುವ ಅಥವಾ ಕಾಲ ನೂಕುವ ಪ್ರಶ್ನೆಯೇ ಇರಲಿಲ್ಲ.

ಅತ್ಯಂತ ಪ್ರೀತಿಯಿಂದ ಕಟ್ಟಿದ ಆ ಕಂಪನಿಯನ್ನು ಗೂಗಲ್ ಗೆ ಮಾರಾಟ ಮಾಡಲು ಒಪ್ಪಿದರು. ಇಡೀ ವ್ಯವಹಾರ ಹತ್ತು ದಿನಗಳಲ್ಲಿ ಮುಗಿದು ಹೋಯಿತು. ಅಲ್ಲಿಗೆ ಗೂಗಲ್ ತನ್ನ ಜಿಪಿಎಸ್ ಮಾರುಕಟ್ಟೆಯನ್ನು ಸದ್ದಿಲ್ಲದೇ ಕಬಳಿಸಲು ಹೊರಟಿದ್ದ ವಾಜ್ ಕಂಪನಿಯನ್ನು ನುಂಗಿ ನೀರು ಕುಡಿಯಿತು. ಗೂಗಲ್ ಮ್ಯಾಪ್ ಎಲ್ಲರಿಗೂ ಗೊತ್ತು. ಆ ಹೆಸರನ್ನು ಕೇಳದವರಿಲ್ಲ. ವಾಜ್ ಹೆಸರು ನೂರರಲ್ಲಿ ನಾಲ್ಕೈದು ಮಂದಿಗೆ ಗೊತ್ತಿದ್ದಿರಬಹುದು. ಅಂದು ವಾಜ್ ನ್ನು ಖರೀದಿಸದಿದ್ದರೆ ಗೂಗಲ್ ಮ್ಯಾಪ್ ಕತೆ ಏನಾಗುತ್ತಿತ್ತೋ? ಚೀನಾದ ‘ಡೀಪ್ ಸೀಕ್’ ತಂತ್ರಜ್ಞಾನದ ಮೂಲಕ ಅಮೆರಿಕದ ಚಾಟ್ ಜಿಪಿಟಿಗೆ ಸಡ್ಡು ಹೊಡೆದ ಸುದ್ದಿ ಓದಿದಾಗ ಈ ಪ್ರಕರಣ ಮತ್ತೆ ನೆನಪಾಯಿತು.