#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

PM Modi US Visit: ಟ್ರಂಪ್‌ ಜತೆ ಮೋದಿಯ ಮಹತ್ವದ ಮಾತುಕತೆ; ಗರಿಗೆದರಿದ ನಿರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಭೇಟಿಗಾಗಿ ಅಮೆರಿಕಕ್ಕೆ ತೆರಳಿದ್ದು, ವಾಷಿಂಗ್ಟನ್‌ ಡಿಸಿಗೆ ಬಂದಿಳಿದ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಈ ಭೇಟಿಯ ವೇಳೆ ಅವರು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಇಡೀ ಜಗತ್ತೇ ಈ ನಾಯಕರ ಮಾತುಕತೆಯನ್ನು ಕುತೂಹಲ ಕಣ್ಣಿನಿಂದ ನೋಡುತ್ತಿದೆ.

ಟ್ರಂಪ್‌ ಜತೆ ಮೋದಿಯ ಮಹತ್ವದ ಮಾತುಕತೆ

Profile Ramesh B Feb 13, 2025 10:14 PM

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2 ದಿನಗಳ ಭೇಟಿಗಾಗಿ ಅಮೆರಿಕಕ್ಕೆ ತೆರಳಿದ್ದು, ವಾಷಿಂಗ್ಟನ್‌ ಡಿಸಿಗೆ ಬಂದಿಳಿದ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಈ ಭೇಟಿಯ ವೇಳೆ ಅವರು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ (Donald Trump) ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ (PM Modi US Visit). ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ 2ನೇ ಬಾರಿ ಅಧಿಕಾರಕ್ಕೆ ಏರಿದ ಬಳಿಕ ಈ ಇಬ್ಬರು ನಾಯಕರ ಮೊದಲ ಭೇಟಿ ಇದಾಗಿದೆ. ಅಮೆರಿಕ ಹೃದಯ ಭಾಗ ವಾಷಿಂಗ್ಟನ್‌ನ ಅಧ್ಯಕ್ಷರ ಗೆಸ್ಟ್‌ ಹೌಸ್‌ನಲ್ಲಿ ಮೋದಿ ಉಳಿದುಕೊಳ್ಳಲಿದ್ದಾರೆ.

ಮೋದಿ ಅವರು ಟ್ರಂಪ್‌ ಜತೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಫೆ. 14ರ ಮುಂಜಾನೆ 3.40 (ಭಾರತೀಯ ಕಾಲಮಾನ)ಕ್ಕೆ ಇಬ್ಬರು ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ವ್ಯಾಪಾರ, ಭದ್ರತೆ, ರಕ್ಷಣಾ ಸಹಕಾರ, ಇಂಧನ ಮತ್ತು ವೀಸಾ ನೀತಿಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. 2 ದಿನಗಳ ಪ್ರವಾಸದ ವೇಳೆ ಮೋದಿ ಅವರು ಉದ್ಯಮಿ, ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರನ್ನೂ ಭೇಟಿಯಾಗಲಿದ್ದಾರೆ.



ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಗೂ ಮುನ್ನ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಯ ಬ್ಲೇರ್ ಹೌಸ್‌ನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಅವರನ್ನು ಭೇಟಿ ಮಾಡಿದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಅಮೆರಿಕದೊಂದಿಗಿನ ತನ್ನ ಸಂಬಂಧಗಳನ್ನು ಬಲಪಡಿಸಲು ಮುಂದಾಗಿದೆ. ಮೋದಿ ಮತ್ತು ಟ್ರಂಪ್ ವೈಯಕ್ತಿಕವಾಗಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಅದ್ಧೂರಿ ಸ್ವಾಗತ

ವಾಷಿಂಗ್ಟನ್‌ ಡಿಸಿಗೆ ಬಂದಿಳಿದ ಮೋದಿ ಅವರನ್ನು ಅಲ್ಲಿನ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಾರತೀಯರು ಜಮಾಯಿಸಿ ಪ್ರಧಾನಿಯನ್ನು ಎರಡೂ ಕೈ ಚಾಚಿ ಬರಮಾಡಿಕೊಂಡರು. ಅವರು ಆಗಮಿಸುತ್ತಿದ್ದಂತೆ ʼʼಭಾರತ್‌ ಮಾತಾಕಿ ಜೈʼʼ, ʼʼವಂದೇ ಮಾತರಂʼʼ ಮತ್ತುʼʼ ಮೋದಿ ಮೋದಿʼʼ ಕೂಗಿದರು.

ತಮಗೆ ಸಿಕ್ಕ ಹೃದಯಸ್ಪರ್ಶಿ ಸ್ವಾಗತದಿಂದ ಭಾವುಕರಾಗಿ ಮೋದಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ʼʼಮೈ ಕೊರೆಯುವ ಚಳಿಯಲ್ಲಿ ಬೆಚ್ಚನೆಯ ಸ್ವಾಗತ ಸಿಕ್ಕಿದೆ. ಚಳಿಯನ್ನೂ ಲೆಕ್ಕಿಸದೆ ಭಾರತೀಯ ಮೂಲದವರು ಕಾದು ನಿಂತು ಸ್ವಾಗತ ಕೋರಿದ್ದಾರೆ. ಎಲ್ಲರಿಗೂ ಧನ್ಯವಾದʼʼ ಎಂದು ಬರೆದುಕೊಂಡಿದ್ದಾರೆ.

ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ (ಡಿಎನ್‌ಐ) ತುಳಸಿ ಗಬ್ಬಾರ್ಡ್ ಅವರನ್ನು ಈಗಾಗಲೇ ಮೋದಿ ಭೇಟಿ ಮಾಡಿದ್ದು, ಈ ವೇಳೆ ಭಾರತ–ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: PM Modi-Trump Meet: ಟ್ರಂಪ್‌ ಜೊತೆಗೆ ಔತಣಕೂಟದಲ್ಲಿ ಭಾಗಿಯಾಗಲಿರುವ ಮೋದಿ- ಸಂಜೆ ಉಭಯ ನಾಯಕರ ಜಂಟಿ ಸುದ್ದಿಗೋಷ್ಠಿ

2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್‌ ಅವರನ್ನು ಈಗಾಗಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್‌ನ ಶಿಗೇರು ಇಶಿಬಾ ಮತ್ತು ಜೋರ್ಡಾನ್‌ನ ರಾಜ ಅಬ್ದುಲ್ಲಾ II ಭೇಟಿ ಮಾಡಿದ್ದಾರೆ.