Israel-Iran Conflict: ಮೊದಲು ಶಕ್ತಿ, ನಂತರ ಶಾಂತಿ; ಬುದ್ಧಿ ಕಲಿಯದಿದ್ದರೆ ಇನ್ನೂ ಇದೆ; ಅಮೆರಿಕದ ಸಪೋರ್ಟ್‌ಗೆ ಧನ್ಯವಾದ ತಿಳಿಸಿದ ನೆತನ್ಯಾಹು
ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಶ್ಲಾಘಿಸಿದ್ದಾರೆ. ಬೇರೆ ಯಾವುದೇ ದೇಶ ಮಾಡದೆ ಇರುವ ಸಾಧನೆಯನ್ನು ಅಮೆರಿಕ ಮಾಡಿದೆ ಎಂದು ಅವರು ಹೇಳಿದ್ದಾರೆ.


ಟೆಲ್ ಅವೀವ್: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ (Israel-Iran Conflict) ಅಮೆರಿಕದ ಪಡೆಗಳು ದಾಳಿ ನಡೆಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಶ್ಲಾಘಿಸಿದ್ದಾರೆ. ಬೇರೆ ಯಾವುದೇ ದೇಶ ಮಾಡದೆ ಇರುವ ಸಾಧನೆಯನ್ನು ಅಮೆರಿಕ ಮಾಡಿದೆ. ಅಭಿನಂದನೆಗಳು, ಅಧ್ಯಕ್ಷ ಟ್ರಂಪ್, ಅಮೆರಿಕದ ಅದ್ಭುತ ಮತ್ತು ಶೌರ್ಯ ಪ್ರದರ್ಶನದಿಂದ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ನಿಮ್ಮ ದಿಟ್ಟ ನಿರ್ಧಾರವು ಇತಿಹಾಸವನ್ನು ಬದಲಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮುಂದುವರಿದು ಅಧ್ಯಕ್ಷ ಟ್ರಂಪ್ ಮತ್ತು ನಾನು ಆಗಾಗ್ಗೆ ಹೇಳುತ್ತೇವೆ: 'ಶಕ್ತಿಯ ಮೂಲಕ ಶಾಂತಿ'. ಮೊದಲು ಶಕ್ತಿ ಬರುತ್ತದೆ, ನಂತರ ಶಾಂತಿ ಬರುತ್ತದೆ. ಮತ್ತು ಇಂದು ರಾತ್ರಿ, ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಪಡೆಗಳು ತಮ್ಮ ಶಕ್ತಿಯ ಪ್ರದರ್ಶನವನ್ನು ಮಾಡಿವೆ ಎಂದು ನೆತನ್ಯಾಹು ಹೇಳಿದ್ದಾರೆ. ಇರಾನ್‌ನ ಮೂರು ಪ್ರಮುಖ ಪರಮಾಣು ತಾಣಗಳಾದ ನಟಾಂಜ್, ಎಸ್ಫಹಾನ್ ಮತ್ತು ಫೋರ್ಡೋವ್ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿವೆ ಎಂದು ಟ್ರಂಪ್ ಘೋಷಿಸಿದ ಕೆಲವೇ ನಿಮಿಷಗಳ ಬಳಿಕ ಇಸ್ರೇಲ್ ಪ್ರಧಾನಿಯಿಂದ ಈ ಹೇಳಿಕೆಗಳು ಬಂದಿವೆ.
ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾವು ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ತಾಣಗಳ ಮೇಲೆ ನಮ್ಮ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ". "ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಇವೆ. ಬಾಂಬ್‌ಗಳ ಸಂಪೂರ್ಣ ಪೇಲೋಡ್ ಅನ್ನು ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಬೀಳಿಸಲಾಯಿತು. ನಮ್ಮ ಸೈನಿಕರ ಶೌರ್ಯಕ್ಕೆ ದೊಡ್ಡ ಸಲಾಂ. ಜಗತ್ತಿನಲ್ಲಿ ಬೇರೆ ಯಾವುದೇ ಸೈನ್ಯವು ಇದನ್ನು ಮಾಡಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Israel-Iran Conflict: ಇಸ್ರೇಲ್ -ಇರಾನ್ ಯುದ್ಧಕ್ಕೆ ಎಂಟ್ರಿ ಕೊಟ್ಟೇ ಬಿಡ್ತು ಅಮೆರಿಕ; ಇರಾನ್‌ನ 3 ಪರಮಾಣು ನೆಲೆಗಳ ಮೇಲೆ ದಾಳಿ
ಪ್ರಾಥಮಿಕ ವರದಿಗಳ ಪ್ರಕಾರ, ದಾಳಿ ನಡೆಸಲು ಎರಡು ಬಿ2 ಬಾಂಬರ್ ವಿಮಾನಗಳನ್ನು ಬಳಸಲಾಗಿದೆ. ಇತ್ತೀಚಿನ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಇರಾನ್ ವಿರುದ್ಧ ಅಮೆರಿಕ ಈ ಮದ್ದುಗುಂಡುಗಳನ್ನು ಬಳಸುತ್ತಿರುವುದು ಇದೇ ಮೊದಲು.