ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vitamin E: ವಿಟಮಿನ್‌ ಇ ನಮ್ಮ ಆರೋಗ್ಯಕ್ಕೆ ಏಕೆ ಮುಖ್ಯ ? ಹೇಗೆ ದೊರೆಯುತ್ತದೆ?

ನಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನು ಹೇಳುವಾಗಲೆಲ್ಲ ವಿಟಮಿನ್‌ ಇ ಅಂಶ ದೇಹಕ್ಕೆ ಬೇಕು ಎನ್ನುವುದು ಸಾಮಾನ್ಯ. ಆದರೆ ಉಳಿದೆಲ್ಲ ಜೀವಸತ್ವಗಳ ಬಗ್ಗೆ, ಅಂದರೆ ಎ, ಬಿ, ಸಿ, ಡಿ ವಿಟಮಿನ್‌ಗಳ ಬಗ್ಗೆ ಮಾತಾಡಿದಷ್ಟು ಇ ಜೀವಸತ್ವದ ಬಗ್ಗೆ ನಾವು ಗಮನ ನೀಡುವುದಿಲ್ಲ. ಹಾಗಾಗಿ ಇದರ ಮಹತ್ವ ನಮಗೆ ಸರಿಯಾಗಿ ಅರ್ಥವಾಗದೇ ಹೋಗಿರಬಹುದು.

ವಿಟಮಿನ್‌ ಇ ನಮ್ಮ ಆರೋಗ್ಯಕ್ಕೆ ಏಕೆ ಮುಖ್ಯ ?

Profile Vishakha Bhat Apr 13, 2025 7:05 AM

ಬೆಂಗಳೂರು: ನಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನು ಹೇಳುವಾಗಲೆಲ್ಲ ವಿಟಮಿನ್‌ ಇ ಅಂಶ ದೇಹಕ್ಕೆ ಬೇಕು ಎನ್ನುವುದು ಸಾಮಾನ್ಯ. ಆದರೆ ಉಳಿದೆಲ್ಲ ಜೀವಸತ್ವಗಳ ಬಗ್ಗೆ, ಅಂದರೆ ಎ, ಬಿ, ಸಿ, ಡಿ ವಿಟಮಿನ್‌ಗಳ ಬಗ್ಗೆ ಮಾತಾಡಿದಷ್ಟು ಇ ಜೀವಸತ್ವದ ಬಗ್ಗೆ ನಾವು ಗಮನ ನೀಡುವುದಿಲ್ಲ. ಹಾಗಾಗಿ ಇದರ ಮಹತ್ವ ನಮಗೆ ಸರಿಯಾಗಿ ಅರ್ಥವಾಗದೇ ಹೋಗಿರಬಹುದು. ಆದರೆ ಈ ಪೋಷಕಾಂಶದ ಮಹತ್ವವೇನು; ಇದು ದೊರೆಯದಿದ್ದರೆ ಆಗುವ ಸಮಸ್ಯೆಗಳೇನು; ಇವು ಯಾವೆಲ್ಲಾ ಆಹಾರಗಳಲ್ಲಿ ದೊರೆಯುತ್ತದೆ ಮುಂತಾದ ಮಾಹಿತಿಗಳು ಇಲ್ಲಿವೆ.

ವಿಟಮಿನ್‌ ಸಿ ಎಂಬುದು ನೀರಿನಲ್ಲಿ ಕರಗಬಲ್ಲಂಥ ಸತ್ವವಾಗಿರುವಂತೆಯೇ, ಇ ಜೀವಸತ್ವವು ಕೊಬ್ಬಿನಲ್ಲಿ ಕರಗಬಲ್ಲಂಥ ಪೋಷಕಾಂಶ. ಮುಖ್ಯವಾಗಿ ನಮ್ಮ ಚರ್ಮ, ಕೂದಲಿನ ಯೋಗಕ್ಷೇಮಕ್ಕಾಗಿ ಇದನ್ನು ಅತಿ ಹೆಚ್ಚಾಗಿ ನೆಚ್ಚಿಕೊಳ್ಳಲಾಗುತ್ತದೆ. ಆದರೆ ಅದಷ್ಟಕ್ಕೆ ಮಾತ್ರವೇ ಇದು ಬೇಕಿರುವುದಲ್ಲ, ನಮ್ಮ ದೇಹದ ಕೋಶಗಳು ಅವಧಿಗೆ ಮುನ್ನವೇ ಸಾಯಬಾರದೆಂದರೆ ಇ ಜೀವಸತ್ವದ ಕೊರತೆ ಆಗಬಾರದು. ಗಾಯ ಬಹು ದಿನಗಳಿಂದ ಮಾಯುತ್ತಿಲ್ಲ ಎಂದಾದರೆ ಒಮ್ಮೆ ವಿಟಮಿನ್‌ ಇ ಮಟ್ಟವನ್ನು ಪರಿಶೀಲಿಸುವುದು ಸೂಕ್ತ. ಹಾಗಾದರೆ ಯಾವೆಲ್ಲ ಸಮಸ್ಯೆಗಳು ವಿಟಮಿನ್‌ ಇ ಕೊರತೆಯಿಂದಾಗಿ ಬರಬಹುದು?

ಶುಷ್ಕ ಚರ್ಮ: ಚರ್ಮಕ್ಕೆ ಅಗತ್ಯವಾದ ತೇವವನ್ನು ಕಾಪಾಡಿಕೊಳ್ಳುವಲ್ಲಿ ವಿಟಮಿನ್‌ ಇ ಮಹತ್ವದ ಕೆಲಸ ಮಾಡುತ್ತದೆ. ವಾತಾವರಣದ ಶುಷ್ಕತೆಗೆ ಪ್ರತಿಯಾಗಿ ಚರ್ಮದಲ್ಲಿರುವ ತೇವ ಆರದಂತೆ ತಡೆಗೋಡೆಯನ್ನು ಈ ಸತ್ವವು ನಿರ್ಮಿಸುತ್ತದೆ. ಇದರಿಂದ ಚರ್ಮ ಒಣಗದೆ, ಹುರುಪೆಯೇಳದೆ ಆರೋಗ್ಯಕರವಾಗಿ ಉಳಿಯಲು ಸಾಧ್ಯ. ಇದರಿಂದ ಎಕ್ಸಿಮಾದಂಥ ತೊಂದರೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಿದೆ. ಹಾಗಾಗಿ ಚರ್ಮ ಮತ್ತು ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಇ ಜೀವಸತ್ವ ಅಗತ್ಯವಾಗಿ ಬೇಕು.

ಉರಿಯೂತ ಶಾಮಕ: ಇದೊಂದು ಅತ್ತ್ಯುತ್ತಮ ಉತ್ಕರ್ಷಣ ನಿರೋಧಕ. ವಾತಾವರಣದ ಹೊಡೆತಕ್ಕೆ ಸಿಕ್ಕು ನಲುಗುವ ದೇಹವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಬಲ್ಲದು. ದೂಳು, ಹೊಗೆ, ಅತಿನೇರಳೆ ಕಿರಣಗಳು, ತೀಕ್ಷ್ಣ ಬಿಸಿಲು ಮುಂತಾದವೆಲ್ಲ ನಮ್ಮ ಚರ್ಮ, ಕೂದಲು, ಕಣ್ಣು ಮುಂತಾದವನ್ನು ಆಪತ್ತಿಗೆ ದೂಡುತ್ತವೆ. ಇದರಿಂದ ಚರ್ಮ ಸುಕ್ಕಾಗಿ, ಕೂದಲು ಒಣಗಿ, ಕಣ್ಣಿನ ದೃಷ್ಟಿಯೂ ಮಂದವಾಗಿ, ಅವಧಿಗೆ ಮುನ್ನವೇ ವೃದ್ಧಾಪ್ಯ ಆವರಿಸುತ್ತದೆ. ಈ ಅವಸ್ಥೆಯನ್ನು ದೂರ ಮಾಡುವುದಕ್ಕೆ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಇ ಇರಲೇಬೇಕು.

ಕೊಲಾಜಿನ್‌ ಉತ್ಪಾದನೆ: ನಮ್ಮ ಚರ್ಮ, ಕೀಲು ಮುಂತಾದವುಗಳ ಸ್ವಾಸ್ಥ್ಯ ರಕ್ಷಣೆಗೆ ಕೊಲಾಜಿನ್‌ ಮಟ್ಟ ಸಾಕಷ್ಟು ಇರಬೇಕು. ಅದಿಲ್ಲದಿದ್ದರೆ, ಚರ್ಮದ ಮೇಲೆ ನೆರಿಗೆಗಳು ಮೂಡಿ ಸುಕ್ಕಾಗುವುದು, ಅಂದರೆ ವಯಸ್ಸಾದಂತೆ ಕಾಣುವುದು, ಹಲವು ಬಗೆಯ ಚರ್ಮದ ಅಲರ್ಜಿಗಳು, ಕೀಲುಗಳ ಆರೋಗ್ಯ ಕುಂಠಿತವಾಗುವುದು, ಇದರಿಂದ ಮಂಡಿ ಸಹಿತವಾಗಿ ಹಲವು ಕೀಲುಗಳ ನೋವು- ಇಂಥವುಗಳನ್ನು ದೂರ ಇರಿಸಬೇಕೆಂದರೆ ವಿಟಮಿನ್‌ ಇ ಕೊರತೆಯಾಗಬಾರದು.

ನರ ದೌರ್ಬಲ್ಯ: ಕೈಕಾಲು ಮರಗಟ್ಟುವುದು, ʻಜುಂʼ ಎನ್ನುವ ಅನುಭವ, ಸ್ನಾಯುಗಳ ಆರೋಗ್ಯ ಕ್ಷೀಣಿಸುವುದು, ಮಾಂಸಪೇಶಿಗಳ ಸೆಳೆತ, ದೈಹಿಕ ಆಯಾಸ ಮುಂತಾದವೆಲ್ಲ ವಿಟಮಿನ್‌ ಇ ಕೊರತೆಯನ್ನೇ ಸೂಚಿಸುತ್ತವೆ. ಇವುಗಳನ್ನೆಲ್ಲ ದೂರ ಇರಿಸಬೇಕೆಂದರೆ ಆಹಾರದಲ್ಲಿ ವಿಟಮಿನ್‌ ಇ ಪ್ರಮಾಣ ಸಾಕಷ್ಟು ಇರುವಂತೆ ನೋಡಿಕೊಳ್ಳಬೇಕು. ಯಾವ ಆಹಾರದಲ್ಲಿ ಈ ಸತ್ವ ದೊರೆಯುತ್ತದೆ?

ಈ ಸುದ್ದಿಯನ್ನೂ ಓದಿ: ನಕಲಿ, ಕಲಬೆರಕೆ ಪನೀರ್‌ ಮಾರಾಟ; ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವರಿಗೆ ಪ್ರಲ್ಹಾದ್‌ ಜೋಶಿ ಪತ್ರ‌

ಆಹಾರಗಳು ಯಾವುವು?: ಕೆಲವು ಹಣ್ಣು, ಬೀಜಗಳು ಮತ್ತು ಧಾನ್ಯಗಳಲ್ಲಿ ಈ ಸತ್ವವನ್ನು ನಾವು ಸಾಕಾಗುವಷ್ಟು ಪಡೆಯಬಹುದು.

  • ಬಾದಾಮಿ, ಸೂರ್ಯಕಾಂತಿ ಬೀಜಗಳು, ಕಡಲೆಕಾಯಿ ಮುಂತಾದ
    ಬೀಜಗಳು
  • ಸೂರ್ಯಕಾಂತಿ ಮತ್ತು ಆಲಿವ್‌ ಎಣ್ಣೆಗಳು
  • ಪಾಲಕ್‌, ಮೆಂತ್ಯ, ಅಮರಾಂತ್‌ ರೀತಿಯ ಹಸಿರು ಸೊಪ್ಪುಗಳು
  • ಮಾವು ಮತ್ತು ಅವಕಾಡೊನಂಥ ಹಣ್ಣುಗಳು
  • ಸಜ್ಜೆ, ಜೋಳದಂಥ ಸಿರಿಧಾನ್ಯಗಳು