ಇಂಗ್ಲೆಂಡ್ ಲಯನ್ಸ್ ಎದುರು ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಕರುಣ್ ನಾಯರ್!
Karun Nair Scored double hundred: ಇಂಗ್ಲೆಂಡ್ ಲಯನ್ಸ್ ವಿರುದ್ದ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ ಎ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ ಭರ್ಜರಿ ದ್ವಿಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕನ್ನಡಿಗ ಭರ್ಜರಿ ಲಯಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಸಿಡಿಸಿದ ಕರುಣ್ ನಾಯರ್.

ನವದೆಹಲಿ: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತ ಟೆಸ್ಟ್ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ (Karun Nair) ತಮ್ಮ ಅದ್ಭುತ ಲಯವನ್ನು ಮುಂದುವರಿಸಿದ್ದಾರೆ. ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ(INDA vs ENGA) ದ್ವಿಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಕರುಣ್ ನಾಯರ್ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. ಪಂದ್ಯದ ಮೊದಲನೇ ದಿನ ಕನ್ನಡಿಗ 186 ರನ್ಗಳನ್ನು ಕಲೆ ಹಾಕಿದ್ದರು. ಎರಡನೇ ದಿನವಾದ ಶನಿವಾರ 14 ರನ್ ಗಳಿಸಿದ ಬಳಿಕ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ನಾಲ್ಕನೇ ದ್ವಿಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ 204 ರನ್ಗಳಿಗೆ ತಮ್ಮ ದೀರ್ಘಾವಧಿ ಇನಿಂಗ್ಸ್ ಅನ್ನು ಮುಗಿಸಿದರು.
ಕರುಣ್ ನಾಯರ್ ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದ ವೈಯಕ್ತಿಕ ಗರಿಷ್ಠ ಮೊತ್ತ 328 ರನ್ಗಳು. ಅಬರು 2015-16ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಬಾರಿಸಿದ್ದರು. ಇನ್ನುಳಿದ ಮೂರು ದ್ವಿಶತಕಗಳ ಇನಿಂಗ್ಸ್ನಲ್ಲಿ ಕರುಣ್ ನಾಯರ್ ಎರಡು ಬಾರಿ ಅಜೇಯರಾಗಿ ಉಳಿದಿದ್ದಾರೆ. ಅಂದ ಹಾಗೆ ಕರುಣ್ ಪಾಲಿಗೆ ಇಂಗ್ಲೆಂಡ್ನಲ್ಲಿ ಇದು ಎರಡನೇ ಡಬಲ್ ಸೆಂಚುರಿಯಾಗಿದೆ. 2024ರಲ್ಲಿ ನಾರ್ಥ್ಹ್ಯಾಮ್ಟನ್ ಪರ ಅವರು ಅಜೇಯ 202 ರನ್ಗಳನ್ನು ಬಾರಿಸಿದ್ದರು.
INDA vs ENGA: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್!
ತ್ರಿಶತಕ ಸಿಡಿಸಿದ್ದ ಕರುಣ್ ನಾಯರ್
ಟಸ್ಟ್ ಕ್ರಿಕೆಟ್ನಲ್ಲಿ ಕರುಣ್ ನಾಯರ್ ತ್ರಿಶತಕ ಕೂಡ ಸಿಡಿಸಿದಾರೆ. 2017ರಲ್ಲಿ ಅವರು ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ತ್ರಿಶತಕವನ್ನು ಬಾರಿಸಿದ್ದರು. ಆ ಮೂಲಕ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕರುಣ್ ನಾಯರ್ ಬರೆದಿದ್ದರು. ಇದಕ್ಕೂ ಮುನ್ನ 2015ರಲ್ಲಿ ಅವರು ದಕ್ಷಿಣ ಆಫ್ರಿಕಾ ಎ ವಿರುದ್ಧ ಅಜೇಯ 114 ರನ್ಗಳನ್ನು ಬಾರಿಸಿದ್ದರು.
557 ರನ್ಗಳಿಗೆ ಭಾರತ ಎ ಆಲ್ಔಟ್
ಕರುಣ್ ನಾಯರ್ ದ್ವಿಶತಕದ ಜೊತೆಗೆ ಸರ್ಫರಾಝ್ ಖಾನ್ (92) ಹಾಗೂ ಧ್ರುವ್ ಜುರೆಲ್ (94) ಅವರ ಅರ್ಧಶತಕಗಳ ಬಲದಿಂದ ಭಾರತ ಎ ತಂಡ, 125.1 ಓವರ್ಗಳಿಗೆ 557 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಬೃಹತ್ ಮೊತ್ತವನ್ನು ಕಲೆ ಹಾಕಿತು. ಹರ್ಷ್ ದುಬೆ 32 ರನ್, ಶಾರ್ದುಲ್ ಠಾಕೂರ್ 27 ರನ್ ಹಾಗೂ ಅನ್ಷುಲ್ ಕಾಂಬೋಜ್ 23 ರನ್ಗಳನ್ನು ಕಲೆ ಹಾಕಿದರು.