ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSLC Exam 2025: ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ವಿದ್ಯಾರ್ಥಿಗಳೇ ಈ ನಿಯಮ ತಿಳಿದಿರಲಿ

ವಿದ್ಯಾರ್ಥಿಗಳ ಜೀವನಕ್ಕೆ ತಿರುವು ನೀಡುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರ (ಮಾ. 21) ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ರಾಜ್ಯಾದ್ಯಂತ 8,96,447 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 8,42,817 ಹೊಸಬರು, 38,091 ಪುನರಾವರ್ತಿತರು ಹಾಗೂ 15,539 ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ. ಏ. 4ರ ತನಕ ಪರೀಕ್ಷೆ ನಡೆಯಲಿದೆ.

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್‌

ಸಾಂದರ್ಭಿಕ ಚಿತ್ರ.

Profile Ramesh B Mar 21, 2025 5:00 AM

ಬೆಂಗಳೂರು: ಈ ಸಾಲಿನ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam 2025) ಶುಕ್ರವಾರ (ಮಾ. 21) ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈಗಾಗಲೇ ಕರ್ನಾಟಕ ಪರೀಕ್ಷಾ ಮಂಡಳಿ (Karnataka Examination Board) ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಹೆಚ್ಚಿನ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಬಾರಿ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಒಟ್ಟು 8,96,447 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 8,42,817 ಹೊಸಬರು, 38,091 ಪುನರಾವರ್ತಿತರು ಹಾಗೂ 15,539 ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.

ಮಾ. 21ರಿಂದ ಏ. 4ನೇ ತಾರೀಕಿನ ತನಕ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯವ್ಯಾಪಿ 15,881 ಶಿಕ್ಷಣ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲ 2,818 ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್‌ ಅಳವಡಿಸಲಾಗಿದೆ. ಇಡೀ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಇದನ್ನು ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: SSLC Exam 2025: ಮಾರ್ಚ್‌ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಈ ನಿಯಮಗಳ ಪಾಲನೆ ಕಡ್ಡಾಯ

ಅರ್ಧ ಗಂಟೆ ಮೊದಲೇ ಹಾಜರಾಗಿ

ಪರೀಕ್ಷೆ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 1.15ರವರೆಗೆ ಇರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ 30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಬೇಕು. ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆ.ಟಿ.ಎಸ್. ವಿಷಯಗಳ ಪರೀಕ್ಷೆ ಬರೆಯಲು 3 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ. ಇನ್ನು ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು 3 ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, 2 ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 30 ನಿಮಿಷಗಳನ್ನು ನೀಡಲಾಗುತ್ತದೆ.

ಟೈಮ್‌ ಟೇಬಲ್‌

ಮಾ. 21: ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ.

ಮಾ. 24: ಗಣಿತ.

ಮಾ. 26: ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ.

ಮಾ. 29: ಸಮಾಜ ವಿಜ್ಞಾನ.

ಏ. 1: ಅರ್ಥಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳು

ಏ. 2: ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ

ಏ. 4: ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್‌ಎಸ್‌ಕ್ಯೂಎಫ್ ವಿಷಯಗಳು.

ಇವನ್ನು ಗಮನಿಸಿ

* ಮೊಬೈಲ್ ಫೋನ್, ಎಲೆಕ್ಟ್ರಿಕಲ್ ಉಪಕರಣಗಳ ಬಳಕೆ ನಿಷೇಧ.

* ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್‌ಗಳನ್ನು ಮಾತ್ರ ಬಳಸಲು ಅವಕಾಶ.

* ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯ.

* ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.