Anti Communal task force: ರಾಜ್ಯದಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ
ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚಿಸಲು ಪರಿಶೀಲನೆ ಮಾಡಿ, ತಕ್ಷಣ ಜಾರಿಗೆ ಬರುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಜಿ ಪರಮೇಶ್ವರ್

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ (Karnataka government) ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು (Anti Communal task force) ರಚಿಸಿದೆ. ಮಂಗಳೂರಿನಲ್ಲಿ (Mangaluru) ಕೋಮು ವಿದ್ವೇಷದ ಪರಿಣಾಮ ಎರಡು ಕೊಲೆಗಳು ನಡೆದ ನಂತರ ಚುರುಕಾಗಿರುವ ಗೃಹ ಇಲಾಖೆ, ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದೆ. ಈ ಕಾರ್ಯಪಡೆಗೆ ಉಪ ಮಹಾನಿರೀಕ್ಷಕ (ಡಿಐಜಿ) ಮಟ್ಟದ ಅಧಿಕಾರಿಯೊಬ್ಬರು ನೇತೃತ್ವ ವಹಿಸಲಿದ್ದು, ಮಂಗಳೂರು, ಉಡುಪಿ ಮತ್ತು ಶಿವಮೊಗ್ಗ ಮೂರು ಜಿಲ್ಲೆಗಳಲ್ಲಿ ಇದು ಕಾರ್ಯಾಚರಿಸಲಿದೆ.
ಇದೇ ತಿಂಗಳಲ್ಲಿ ಮಂಗಳೂರಿನಲ್ಲಿ ಎರಡು ಕೊಲೆಗಳು ವರದಿಯಾಗಿವೆ. ಈ ವಾರದ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಲಾಗಿದ್ದು, ಅವರಲ್ಲಿ ಅಬ್ದುಲ್ ರಹಿಮಾನ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮೇ 4ರಂದು, ರೌಡಿಶೀಟರ್ ಆಗಿದ್ದ ಸುಹಾಸ್ ಶೆಟ್ಟಿ ಎಂಬಾತನನ್ನು ಗುತ್ತಿಗೆ ಹಂತಕರು ಕೊಂದಿದ್ದರು. ಕನಿಷ್ಠ ಐದು ಜನ ಜನನಿಬಿಡ ರಸ್ತೆಯಲ್ಲಿ ಸುಹಾಸ್ ಮೇಲೆ ಮಾರಕಾಯುಧಗಳೊಂದಿಗೆ ಎರಗಿ ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಿ ವಿಚಾರಿಸಲಾಗುತ್ತಿದೆ.
ತಕ್ಷಣವೇ ಪಡೆ ರಚನೆ: ಪರಮೇಶ್ವರ್
ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸಿ, ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಲ್ಲಿ ನಡೆದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಸಾರಿ ಈ ರೀತಿ ಆಗುತ್ತಿದ್ದರೆ ಸುಮ್ಮನೆ ಕೂರಲು ಆಗುವುದಿಲ್ಲ. ಕಾನೂನನ್ನು ಮತ್ತಷ್ಟು ಬಿಗಿ ಮಾಡುತ್ತೇವೆ ಎಂದರು.
ಕಳೆದ ಬಾರಿ ಘಟನೆ ನಡೆದಾಗ ಪರಿಸ್ಥಿತಿ ಅರ್ಥೈಸಿಕೊಂಡು, ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚಿಸಲು ಪರಿಶೀಲನೆ ಮಾಡಿ, ತಕ್ಷಣ ಜಾರಿಗೆ ಬರುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕ್ರಮ ತೆಗೆದುಕೊಳ್ಳುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸುತ್ತೇವೆ. ಕೋಮು ಹಿಂಸೆಯನ್ನು ಹತ್ತಿಕ್ಕಲು ಸರ್ಕಾರ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ನಕ್ಸಲ್ ನಿಗ್ರಹ ಕಾರ್ಯಪಡೆಯಲ್ಲಿನ ಅರ್ಧ ಸಿಬ್ಬಂದಿಗಳನ್ನು ಕೋಮು ಹಿಂಸೆ ನಿಗ್ರಹ ಪಡೆಗೆ ನಿಯೋಜಿಸಲಾಗುವುದು. ಅವರಿಗೆ ಅಗತ್ಯ ಅಧಿಕಾರ, ಸವಲತ್ತುಗಳನ್ನು ನೀಡುತ್ತೇವೆ. ಮೂರು ಜಿಲ್ಲೆಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ ಎಂದು ಹೇಳಿದರು. ದ್ವೇಷ ಭಾವನೆ ಬಂದರೆ ಸಮಾಜ ಎಲ್ಲಿ ಉಳಿಯುತ್ತದೆ. ಜನರು ಅಲ್ಲಿ ಜೀವನ ಮಾಡಲು ಆಗುತ್ತದೆಯೇ? ಇದನ್ನು ಸರ್ಕಾರ ನೋಡಿಕೊಂಡು ಸುಮ್ಮನೆ ಇರುವುದಿಲ್ಲ ಎಂದರು.
ಮಂಗಳೂರಿನಲ್ಲಿ ನಡೆದ ಯುವಕನ ಹತ್ಯೆ ಪ್ರಕರಣದ ತನಿಖೆಯಲ್ಲಿ ಗಂಭೀರವಾದ ಮಾಹಿತಿ ಸಿಕ್ಕಿದೆ. ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಜನಪ್ರತಿನಿಧಿಗಳು ಶಾಂತಿ ನೆಲೆಸುವ ನಿಟ್ಟಿನಲ್ಲಿ ಸಹಕಾರ ಮಾಡಬೇಕು. ಪ್ರಚೋದನೆ ಮಾಡಲು ಹೋದರೆ ನಿಲ್ಲಿಸಲು ಹೇಗೆ ಸಾಧ್ಯ. ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆಗಳನ್ನು ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Abdul Rahiman Murder Case: ಬಂಟ್ವಾಳ ರಹಿಮಾನ್ ಕೊಲೆ ಕೇಸ್; ಮೂವರು ಆರೋಪಿಗಳು ಅರೆಸ್ಟ್