ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ʼಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್ʼ ಪ್ರವೇಶ ಜೂನ್‌ನಿಂದ ಆರಂಭ

Ashwini Puneeth Rajkumar: ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಿತ್ರರಂಗದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಪ್ರವೇಶಿಸಿದ್ದಾರೆ. 'ಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್' ಅನ್ನು ಪ್ರಾರಂಭಿಸಿದ್ದಾರೆ. ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಮತ್ತು ಶೃತಿ ಕಿರಣ್‌ ಅವರೊಂದಿಗೆ ಈ ಕಾರ್ಯಕ್ಕಾಗಿ ಕೈ ಜೋಡಿಸಿದ್ದಾರೆ.

ಪ್ರಿಸ್ಕೂಲ್ ಆರಂಭಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

Profile Ramesh B Apr 27, 2025 1:58 PM

ಬೆಂಗಳೂರು: ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini Puneeth Rajkumar) ಚಿತ್ರರಂಗದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಪ್ರವೇಶಿಸಿದ್ದಾರೆ. 'ಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್' ಅನ್ನು ಪ್ರಾರಂಭಿಸಿದ್ದಾರೆ. ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಮತ್ತು ಶ್ರುತಿ ಕಿರಣ್‌ ಅವರೊಂದಿಗೆ ಈ ಕಾರ್ಯಕ್ಕಾಗಿ ಕೈ ಜೋಡಿಸಿದ್ದಾರೆ. 'ಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್'ನ ಟೀಸರ್‌ ಲಾಂಚ್‌ ಕಾರ್ಯಕ್ರಮ ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟೀಸರ್‌ ಲಾಂಚ್ ಮಾಡಿದರು. ವಿಶೇಷ ಅತಿಥಿಯಾಗಿ ನಟಿ ಮಿಲನಾ ನಾಗರಾಜ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುನೀತಾ ಗೌಡ, ಸ್ಫೂರ್ತಿ ವಿಶ್ವಾಸ್ ಉಪಸ್ಥಿತರಿದ್ದರು.

ಬಳಿಕ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮಾತನಾಡಿ, ʼʼನಾವು 'ಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್ʼನ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ ಒಂದು ಕೇಂದ್ರವಿದೆ.‌ ಈ ಕಲಿಕೆಯ ಗುರಿ ಜತೆಗೆ ಪ್ರತೀ ಮಗುವಿನ ಸಾಮರ್ಥ್ಯವನ್ನು ಪೋಷಿಸುವುದು ಮತ್ತು ನಾಯಕತ್ವವನ್ನೂ ನಿರ್ಮಿಸುವುದು ನಮ್ಮ ಉದ್ದೇಶʼʼ ಎಂದರು.

ಈ ಸುದ್ದಿಯನ್ನೂ ಓದಿ: Ashwini Puneeth Rajkumar: ಕಾಪು ಮಾರಿಯಮ್ಮ ದೇಗುಲಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

Preschool 2

ಉತ್ತಮ ಅವಕಾಶ

ನಟಿ ಮಿಲನಾ ನಾಗರಾಜ್‌ ಮಾತನಾಡಿ, 'ʼಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್ʼ ಹೆಸರು ಬಹಳ ಮುದ್ದಾಗಿದೆ. ಇಂದಿನ ಮಕ್ಕಳಿಗೆ ಇದು ಒಳ್ಳೆಯ ಅವಕಾಶ. ನಾವು ಮಕ್ಕಳಾಗಿದ್ದಾಗ ಏನಾಗಬೇಕು ಅಂದಾಗ ಹೇಳಲು ಗೊತ್ತಿರಲಿಲ್ಲ. ಆದರೆ ಇಂದಿನ ಮಕ್ಕಳು ಹಾಗಲ್ಲ. ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸುವುದು ಅತ್ಯುತ್ತಮ. ಇದು ಆರಂಭವಾಷ್ಟೇ. ಇಡೀ ತಂಡಕ್ಕೆ ಒಳ್ಳೆಯದಾಗಲಿʼʼ ಎಂದು ಹಾರೈಸಿದರು.

ಸ್ಫೂರ್ತಿ ವಿಶ್ವಾಸ್ ಮಾತನಾಡಿ, ʼʼಇದೊಂದು ದೊಡ್ಡ ಜವಾಬ್ದಾರಿ. ಅದಕ್ಕೆ ಕಾರಣ ಅಶ್ವಿನಿ ಪುನೀತ್ ರಾಜ್‍ಕುಮಾರ್. ದಿನ, ರಾತ್ರಿ ಇದಕ್ಕಾಗಿ ಕೆಲಸ ಮಾಡುತ್ತಿದ್ದೇವೆ. 'ಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್ ಹೆಸರಿಗಾಗಿ ಅಲ್ಲ. ಅಪ್ಪು ಸರ್‌ ಹೆಸರನ್ನು ಉಳಿಸಲು. ಆ ಜವಾಬ್ದಾರಿ ಇಟ್ಟುಕೊಂಡು ಇದನ್ನು ನಡೆಸಿಕೊಂಡು ಹೋಗುತ್ತವೆ. ಈ ಶಾಲೆ ಮಕ್ಕಳು ಅತ್ಯುತ್ತಮ ನಾಗರೀಕರಾಗುತ್ತಾರೆ ಎಂಬ ನಂಬಿಕೆ ಇದೆʼʼ ಎಂದು ಹೇಳಿದರು.

ಸುನೀತಾ ಗೌಡ ಮಾತನಾಡಿ, ʼʼನಮ್ಮ ಪ್ರಿಸ್ಕೂಲ್‌ ಕೇಂದ್ರಗಳು ಮಕ್ಕಳಿಗೆ ಕನಸು ಕಾಣಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ನೆರವಾಗಲಿದೆ. ನಾವು ಪ್ರತಿ ಮಗುವನ್ನು ಸಾಧಕನನ್ನಾಗಿ ಬೆಳೆಸುವತ್ತ ಗಮನ ಹರಿಸುತ್ತೇವೆʼʼ ಎಂದು ತಿಳಿಸಿದರು.

ಜೂನ್‌ನಿಂದ ಪ್ರವೇಶ ಪ್ರಕ್ರಿಯೆ

ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಶಿಕ್ಷಣ ತಜ್ಞೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಹಾಗೂ ಶ್ರುತಿ ಕಿರಣ್‌ ಸ್ಥಾಪಿಸಿರುವ ಈ ಶಾಲೆಯು ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಕಾರ್ಯಾಚರಿಸಲಿದೆ. ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಪ್ರಿಸ್ಕೂಲ್‌ನಲ್ಲಿ ಇರಲಿದೆ. ಮಕ್ಕಳಲ್ಲಿ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅವರ ಜತೆಗಾರರ ಕನಸು.

ಈ ಪ್ರಿಸ್ಕೂಲ್‌ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆರಂಭವಾಗಿದೆ. ಇದರಲ್ಲಿ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನವಾದ ಪಠ್ಯಕ್ರಮಗಳನ್ನು ಅಳವಡಿಸಲಾಗಿದೆ. ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆ ಇದೆ.