Invest Karnataka: ಸೆಮಿಕಂಡಕ್ಟರ್ ಲಾಭ ನಮ್ಮದಾಗಲು ಗುಣಮಟ್ಟದ ಶಿಕ್ಷಣ, ಸಂಶೋಧನೆ ಅಗತ್ಯ: ಭಾರತೀಯ ಉದ್ಯಮಿಗಳ ಕಳಕಳಿ
Invest Karnataka: ಜಾಗತಿಕ ಹೂಡಿಕದಾರರ ಸಮಾವೇಶದಲ್ಲಿ ಬುಧವಾರ ನಡೆದ `ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ಕುರಿತು ನಡೆದ ಗೋಷ್ಠಿಯಲ್ಲಿ ವಿವಿಧ ಭಾರತೀಯ ಉದ್ಯಮ ಪರಿಣತರು ಮಾತನಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕದಾರರ ಸಮಾವೇಶ ʼಇನ್ವೆಸ್ಟ್ ಕರ್ನಾಟಕʼ ನಡೆಯುತ್ತಿದೆ.
![ಸೆಮಿಕಂಡಕ್ಟರ್ ಲಾಭ ನಮ್ಮದಾಗಲು ಗುಣಮಟ್ಟದ ಶಿಕ್ಷಣ, ಸಂಶೋಧನೆ ಅಗತ್ಯ](https://cdn-vishwavani-prod.hindverse.com/media/original_images/Invest_Karnataka_1.jpg)
![Profile](https://vishwavani.news/static/img/user.png)
ಬೆಂಗಳೂರು: `ನಾವು ಸೆಮಿಕಂಡಕ್ಟರ್ ಕ್ಷೇತ್ರದ ಸಹಿತ ಎಲ್ಲಾ ಕೈಗಾರಿಕಾ ವಲಯಗಳಿಗೆ ಸಂಬಂಧಿಸಿದಂತೆ ಬರೀ ಬಂಡವಾಳ ಆಕರ್ಷಿಸುವ ಬಗ್ಗೆ ಮಾತನಾಡುತ್ತಿರುತ್ತೇವೆ. ಆದರೆ, ವಾಸ್ತವವಾಗಿ ನಾವು ಪ್ರತಿಭೆ ಮತ್ತು ಸಾಮರ್ಥ್ಯ ಎರಡನ್ನೂ ಸೃಷ್ಟಿಸುವ ಜರೂರಿದೆ. ಇದು ಸಾಧ್ಯವಾದರೆ, ಬಂಡವಾಳದ ಹರಿವು ತನ್ನಿಂತಾನೇ ಆಗುತ್ತದೆ.’ ಇದು ಜಾಗತಿಕ ಹೂಡಿಕದಾರರ ಸಮಾವೇಶದಲ್ಲಿ ಬುಧವಾರ ನಡೆದ `ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಉದ್ಯಮ ಪರಿಣತರಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಿಇಒ ಸಂತೋಷಕುಮಾರ್, ಎನ್ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಉಪಾಧ್ಯಕ್ಷ ಹಿತೇಶ್ ಗಾರ್ಗ್ ಮತ್ತು ಗ್ಲೋಬಲ್ ಫ್ಯಾಬ್ ಎಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಛಡ್ಡಾ ಒಕ್ಕೊರಲಿನಿಂದ ವ್ಯಕ್ತಪಡಿಸಿದ ಕಳಕಳಿಯಾಗಿತ್ತು.
ಮೊದಲಿಗೆ ಮಾತನಾಡಿದ ಸಂತೋಷಕುಮಾರ್, `ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ ಹತ್ತು ವರ್ಷಗಳು ಭಾರತದ್ದಾಗಿವೆ. ಈ ಅವಧಿಯಲ್ಲಿ ಈ ಕ್ಷೇತ್ರದ ಈಗಿನ 40 ಬಿಲಿಯನ್ ಡಾಲರ್ ವಹಿವಾಟು 400 ಬಿಲಿಯನ್ ಡಾಲರ್ ಮೀರಲಿದೆ. ಆದರೆ, ನಮ್ಮ ಶಿಕ್ಷಣ ರಂಗದಲ್ಲಿ ಗುಣಮಟ್ಟದ ಬೋಧಕರು, ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆ ಮೂರರ ಕಡೆಗೂ ಆದ್ಯ ಗಮನ ಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರವು ರಾಷ್ಟ್ರೀಯ ಸಮಸ್ಯೆಗಳನ್ನು ಮುಂದಿಟ್ಟು, ಅವುಗಳಿಗೆ ದಕ್ಷ ಪರಿಹಾರ ಕಂಡುಹಿಡಿಯುವಂತಹ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾದ ಜರೂರಿದೆ’ ಎಂದು ವಾಸ್ತವ ಪರಿಸ್ಥಿತಿಯತ್ತ ಗಮನ ಸೆಳೆದರು.
ದೇಶವನ್ನು ಇನ್ನು ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಸುವ ಗುರಿ ನಮ್ಮ ಮುಂದಿದೆ. ಇದರಲ್ಲಿ 3 ಟ್ರಿಲಿಯನ್ ಡಾಲರ್ ಇಎಸ್ಡಿಎಂ ವಲಯದ ಕೊಡುಗೆಯೇ ಆಗಿರಲಿದೆ. ಆದರೆ, ಅವಕಾಶಗಳು ಕೇವಲ ಭಾರತಕ್ಕೆ ಮಾತ್ರ ಇರುವುದಿಲ್ಲ. ಬದಲಿಗೆ ಅವು ಎಲ್ಲ ದೇಶಗಳಿಗೂ ಲಭ್ಯವಿರುತ್ತವೆ. ಅವು ನಮ್ಮದಾಗಬೇಕೆಂದರೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯ ಕಡೆಗೆ ಗಮನ ಕೊಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Invest Karnataka 2025: ಇನ್ವೆಸ್ಟ್ ಕರ್ನಾಟಕದಲ್ಲಿ 5.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವ
ಜಿತೇಂದ್ರ ಛಡ್ಡಾ ಮಾತನಾಡಿ, ಸೆಮಿಕಂಡಕ್ಟರ್ ಕ್ಷೇತ್ರದ ಚಿಪ್ ವಿನ್ಯಾಸದಲ್ಲಿ ಭಾರತದ ಪಾಲು ಶೇಕಡ 25ರಷ್ಟಿದೆ. ಆದರೆ, ಉತ್ಪಾದನೆಯಲ್ಲಿ ನಾವು ಹಿಂದಿದ್ದೇವೆ. ಇನ್ನು 5-10 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳಲಿದೆ. ಆಗ 15-20 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ `ಪರ್ಸನಲ್ ಡಿಸೈನ್’ ಪರಿಣತಿಯು ಮುನ್ನೆಲೆಗೆ ಬರಲಿದೆ. ಜಗತ್ತಿನ ದೊಡ್ಡದೊಡ್ಡ ಆರ್ಥಿಕತೆಗಳೆಲ್ಲವೂ ಸೆಮಿಕಂಡಕ್ಟರ್ ಕ್ಷೇತ್ರವನ್ನೇ ನೆಚ್ಚಿಕೊಂಡಿವೆ. ಈಗ ತೈವಾನ್ ಮತ್ತು ಜಪಾನಿನಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಸಮೃದ್ಧವಾಗಿದೆ. ನಮ್ಮಲ್ಲಿನ್ನೂ ಸೆಮಿಕಂಡಕ್ಟರ್ ವಲಯಕ್ಕೆ ಇಂಬು ಕೊಡುವಂತಹ ಕಾರ್ಯ ಪರಿಸರ ಪೂರ್ಣ ಪ್ರಮಾಣದಲ್ಲಿ ಸೃಷ್ಟಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.
India is at the cusp of a #semiconductor revolution. With cutting-edge chip design and a strong software industry, the challenge now is to bridge the gap in manufacturing and establish a strong foothold in the global semiconductor supply chain.
— Invest Karnataka (@investkarnataka) February 12, 2025
Key Takeaways from 'Chips on the… pic.twitter.com/HF2HkPtV2f
ಹಿತೇಶ್ ಗಾರ್ಗ್ ಮಾತನಾಡಿ, `20 ವರ್ಷಗಳ ಹಿಂದೆ ನಮ್ಮಲ್ಲಿ ಎನ್.ಎಫ್.ಸಿ.(ನಿಯರ್ ಫೀಲ್ಡ್ ಕಮ್ಯುನಿಕೇಶನ್) ತಂತ್ರಜ್ಞಾನ ಬಂದಾಗ ಅದಕ್ಕೆ ಬಳಕೆದಾರರೇ ಇರಲಿಲ್ಲ. ಇದಕ್ಕಾಗಿ ನಾವು ಹತ್ತು ವರ್ಷ ಕಾಯಬೇಕಾಯಿತು. ಆದರೆ ಈಗ ಬೆಂಗಳೂರಿನಲ್ಲೇ ನ್ಯಾನೊ ಮೀಟರ್ ಲೆಕ್ಕದಲ್ಲಿ ಚಿಪ್ ವಿನ್ಯಾಸಗಳು ಸಿದ್ಧವಾಗುತ್ತಿವೆ. ಇದೇ ತಂತ್ರಜ್ಞಾನದ ಶಕ್ತಿ. ಕರ್ನಾಟಕದ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ನವೋದ್ಯಮಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಗೆ ಅಪಾರ ಅವಕಾಶಗಳಿವೆ ಎಂದು ನುಡಿದರು.
ಭಾರತ ಮತ್ತು ಅದರಲ್ಲೂ ಕರ್ನಾಟಕ ಸಾಫ್ಟ್‌ವೇರ್ ಆಡುಂಬೊಲಗಳಾಗಿವೆ. ಬೆಂಗಳೂರಿನಲ್ಲಂತೂ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ತುಂಬಾ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇವುಗಳಿಗೆ ತಕ್ಕಂತಹ ಮಾರುಕಟ್ಟೆಯನ್ನು ಸೃಷ್ಟಿಸುವ ಅನ್ವಯಿಕತೆಯ ಕೊರತೆ ನಮ್ಮಲ್ಲಿ ಕಾಣುತ್ತಿದೆ. ಇದರ ಜೊತೆಗೆ ಹೆಚ್ಚುಹೆಚ್ಚು ಸಹಭಾಗಿತ್ವಕ್ಕೆ ಉತ್ತೇಜನ ಸಿಗುವಂತಾಗಬೇಕು. ಇದಿಲ್ಲದೆ ಹೋದರೆ, ಉದ್ಯಮದ ಬೆಳವಣಿಗೆ ಕುಂಟುತ್ತ ಸಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಲ್ಯಾಮ್ ರೀಸರ್ಚ್ ಉನ್ನತಾಧಿಕಾರಿ ರಂಗೇಶ್ ಗೋಷ್ಠಿಯನ್ನು ನಿರ್ವಹಿಸಿದರು.
ಸ್ವಯಂಚಾಲಿತ ಕಾರಿನ ಮೇಲೆ ವಾಹನೋದ್ಯಮದ ನಿರೀಕ್ಷೆ
ಬೆಂಗಳೂರು: ಸ್ವಯಂಚಾಲಿತ ಕಾರುಗಳು ಮುಂದಿನ ದಿನಗಳಲ್ಲಿ ಸಂಚಾರ ಕ್ಷೇತ್ರದಲ್ಲಿನ ಬಹುದೊಡ್ಡ ತಂತ್ರಜ್ಞಾನವಾಗಲಿದೆ ಎಂದು ‘ಮರ್ಸಿಡಿಸ್-ಬೆನ್ಜ್ ಇಂಡಿಯಾ’ದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಂತೋಷ್ ಅಯ್ಯರ್ ಬುಧವಾರ ಅಭಿಪ್ರಾಯಪಟ್ಟರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಜಾಗತಿಕ ಹೂಡಿಕೆ ಸಮಾವೇಶ’ದಲ್ಲಿ ನಡೆದ ‘ವೇಗದ ನಗರೀಕರಣದ ವೇಳೆ ಸಂಚಾರ ಕ್ಷೇತ್ರದ ಭವಿಷ್ಯ’ ಗೋಷ್ಠಿಯಲ್ಲಿ ಮಾತನಾಡಿದರು.
ಸರಕಾರ ಕಾರುಗಳ ಮೇಲೆ 68% ತೆರಿಗೆ ವಿಧಿಸುತ್ತಿದೆ. ಆದರೆ ಆ ಹಣ ಬೇರೆಡೆ ಬಳಕೆಯಾಗುತ್ತಿರುವುದು ಈ ಕ್ಷೇತ್ರದ ಸಮಸ್ಯೆಗಳು ಉಳಿಯಲು ಕಾರಣವಾಗಿದೆ. ದೇಶದ ಪ್ರತಿ ರಾಜ್ಯದಲ್ಲೂ ಸಾರಿಗೆ-ಸಂಚಾರ ಕ್ಷೇತ್ರಕ್ಕೆ ಸಂಬಂಧಿಸಿ ವಿಭಿನ್ನ ನಿಯಮಗಳು ಜಾರಿಯಲ್ಲಿರುವುದು ಸುಸ್ಥಿರತೆಯನ್ನು ವ್ಯಾಪಕಗೊಳಿಸುವಲ್ಲಿ ವಾಹನ ತಯಾರಕರಿಗೆ ತೊಡಕಾಗಿದೆ,” ಎಂದರು.
ರಿವರ್ ಮೊಬಿಲಿಟಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಮಣಿ ಮಾತನಾಡಿ, “ಬೆಂಗಳೂರಿನಲ್ಲಿ ದಟ್ಟಣೆ ತಗ್ಗಿಸುವುದು ಎಷ್ಟು ಮುಖ್ಯವೋ, ಅಕ್ಕಪಕ್ಕದ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವುದೂ ಅಷ್ಟೇ ಮುಖ್ಯ. ಇದು ಅಭಿವೃದ್ಧಿಯನ್ನು ಬೆಂಗಳೂರಿನ ಆಚೆಗೂ ಕೊಂಡೊಯ್ಯಲು ನೆರವಾಗಲಿದೆ. ಅಲ್ಲದೆ, ನಗರದಲ್ಲಿ ವಾಹನಗಳ ಹೊಗೆಯನ್ನೂ ತಗ್ಗಿಸುವಲ್ಲಿ ಸಹಕಾರಿಯಾಗುತ್ತದೆ,” ಎಂದರು.
ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಸಂಚಾರ ಕ್ಷೇತ್ರದಲ್ಲಿ ನಾವೀನ್ಯತೆ ತರುವಾಗ ಎಚ್ಚರ ವಹಿಸಬೇಕು. ಇಲ್ಲವಾದರೆ ಸುಸ್ಥಿರತೆ ಹೆಸರಿನಲ್ಲಿ ಸಾವಿರಾರು ಜನರ ಉದ್ಯೋಗ ಕಸಿಯುವ ಅಪಾಯವಿರುತ್ತದೆ. ಸರಕಾರ ಎಲ್ಲಾ ರೀತಿಯ ವಾಹನಗಳ ಸಂಚಾರದ ಡೇಟಾ ಆಧರಿಸಿ ಮೊಬಿಲಿಟಿ ಕ್ಷೇತ್ರದ ಸುಧಾರಣೆಗೆ ಯೋಜನೆ ರೂಪಿಸಬೇಕು,’’ ಎಂದು ಸಿಇಇಡಬ್ಲ್ಯು ನಿರ್ದೇಶಕ ಕಾರ್ತಿಕ್ ಗಣೇಶನ್ ವಿವರಿಸಿದರು.
ಬೋಯಿಂಗ್‌ನ ‘ರಾಬರ್ಟ್ ಬಾಯ್ಡ್, “ವಿಮಾನಯಾನ ಕ್ಷೇತ್ರ ಹೆಚ್ಚು ಪಾಲುದಾರಿಕೆಯನ್ನು ಬಯಸುತ್ತದೆ. ಏರೋಸ್ಪೇಸ್, ಇಂಧನ, ಹಣಕಾಸು ಮತ್ತು ಸರಕಾರಗಳು ಪಾಲುದಾರಿಕೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಈ ಕ್ಷೇತ್ರ ಹೆಚ್ಚು ಪ್ರಗತಿ ಕಾಣಲು ಸಾಧ್ಯ. ಸುಸ್ಥಿರತೆ ಸಾಧಿಸುವಲ್ಲಿ ಬೇರೆಲ್ಲ ಕ್ಷೇತ್ರಕ್ಕಿಂತ ವಿಮಾನಯಾನ ಕ್ಷೇತ್ರ ಮುಂದಿದೆ,” ಎಂದರು.
ಈ ಸುದ್ದಿಯನ್ನೂ ಓದಿ | Invest Karnataka 2025: ಬೆಂಗಳೂರು ಜತೆಗೆ ಕರ್ನಾಟಕವನ್ನೂ ಜಾಗತಿಕ ಕೇಂದ್ರವನ್ನಾಗಿ ಮಾಡೋಣ: ಡಿ.ಕೆ. ಶಿವಕುಮಾರ್
ಇದೇವೇಳೆ, ಬೆಂಗಳೂರಿನ ಬೋಯಿಂಗ್ ಕೇಂದ್ರದಲ್ಲಿ ಸುಮಾರು 6 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಈ ತಂಡ ವಿಶ್ವದಲ್ಲೇ ಬೋಯಿಂಗ್‌ನ ಅತ್ಯುತ್ತಮ ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ದಿ ಎಕನಾಮಿಸ್ಟ್‌ನ ‘ಗ್ರಾಫಿಕ್ ವಿವರ’ ವಿಭಾಗದ ಸಂಪಾದಕಿ ಮಿಚೆಲ್ ಹೆನ್ನೆಸ್ಸಿ ಗೋಷ್ಠಿ ನಿರ್ವಹಿಸಿದರು.