BJP Karnataka: ಬಣ ಬಡಿದಾಟಕ್ಕೆ ಕೇಸರಿ ವರಿಷ್ಠರೇ ಸುಸ್ತು; ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ರೂ ಕೆಲಸ ಮಾಡುವೆ ಎಂದ ಶ್ರೀರಾಮುಲು
BJP Karnataka: ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬದಲಾವಣೆಗೆ ರಾಜ್ಯದಲ್ಲಿ ತೀವ್ರ ವಿರೋಧದ ನಡುವೆಯೂ ಸದ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಯಾವುದೇ ರೀತಿಯ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ರಾಜ್ಯ ಘಟಕದ ಬಣ ಬಡಿದಾಟಕ್ಕೆ ಕೇಂದ್ರದ ಬಿಜೆಪಿ ವರಿಷ್ಠರೇ ಸುಸ್ತಾಗಿದ್ದು, ಸದ್ಯಕ್ಕೆ ಇನ್ನು ಒಂದು ತಿಂಗಳ ಕಾಲ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ವರಿಷ್ಠರ ಭೇಟಿಯಾಗಿ ರಾಜ್ಯಾಧ್ಯಕ್ಷರ ಹುದ್ದೆಗೆ (BJP Karnataka) ಯಾರು ಎಂಬುದು ನಿರ್ಣಯಿಸಲಾಗುವುದು ಎಂದು ಭಿನ್ನರ ಬಣ ಹೇಳಿರುವ ನಡುವೆಯೇ ಅರವಿಂದ ಲಿಂಬಾವಳಿ ಜೆ.ಪಿ.ನಡ್ಡಾ ಅವರ ಮಹತ್ವದ ಭೇಟಿ ನಡೆದಿದೆ. ಇದೆಲ್ಲದರ ನಡುವೆ ರಾಜ್ಯಾಧ್ಯಕ್ಷರ ಹುದ್ದೆ ನೀಡಿದರೂ ನಿಭಾಯಿಸಲು ಸಿದ್ಧ ಎಂದಿರುವ ಶ್ರೀರಾಮುಲು, ರಾಜ್ಯಸಭೆ ಸ್ಥಾನದ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಮುಂದಿನ ದಿನದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾದರೆ ಯಾರು ಸ್ಪರ್ಧಿಸಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಲು ಬೆಂಗಳೂರಿನಲ್ಲಿ ಭಿನ್ನರ ಸಭೆ ನಡೆಯುತ್ತಿರುವ ಸಮಯದಲ್ಲಿಯೇ, ಭಿನ್ನರ ಬಣದಲ್ಲಿ ಪ್ರಮುಖ ಎನಿಸಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ದೆಹಲಿಯಲ್ಲಿ ವರಿಷ್ಠರ ಮುಂದೆ ಕಾಣಿಕೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿರುವ ಅರವಿಂದ ಲಿಂಬಾವಣಿ ವಕ್ಫ್ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ವಕ್ಫ್ ಸಂಬಂಧಿಸಿದ ಭೇಟಿ ಎನಿಸಿದರೂ, ಈ ಭೇಟಿಯ ವೇಳೆ ರಾಜ್ಯ ರಾಜಕೀಯಕ್ಕೆೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬದಲಾವಣೆಗೆ ರಾಜ್ಯದಲ್ಲಿ ತೀವ್ರ ವಿರೋಧದ ನಡುವೆಯೂ ಸದ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಯಾವುದೇ ರೀತಿಯ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಪ್ರಮುಖವಾಗಿ ದೆಹಲಿ ಚುನಾವಣೆ ಹಾಗೂ ಕೇಂದ್ರದಲ್ಲಿ ಬಜೆಟ್ ಮಂಡನೆ ಹಾಗೂ ನಂತರದ ಸಂಸತ್ ಕಲಾಪಗಳಿಂದಾಗಿ ಇನ್ನು ಒಂದು ತಿಂಗಳು ಕೇಂದ್ರ ಬಿಜೆಪಿ ನಾಯಕರು ರಾಜ್ಯದ ಹಾಗೂ ಪಕ್ಷರ ಇತರೆ ಬೆಳವಣಿಗೆಗಳಿಗೆ ಗಮನ ಕೊಡಲು ಸಾಧ್ಯವಿಲ್ಲ. ಈ ವೇಳೆಯಲ್ಲಿ ಬಣ ಬಡಿದಾಟ ಮತ್ತಷ್ಟು ತೀವ್ರ ರೂಪ ಪಡೆದುಕೊಳ್ಳಲಿದೆ. ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಭಿನ್ನ ಬಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಇದರಲ್ಲಿ ಪಕ್ಷದ ಕೆಲ ಹಿರಿಯ ಶಾಸಕರೂ ಕೂಡ ಸಹಿ ಹಾಕಿ ಬದಲಾವಣೆಗೆ ಒತ್ತಾಯಿಸಿರುವುದು ವಿಜಯೇಂದ್ರ ಬಣದಲ್ಲಿ ತಳಮಳ ಆರಂಭವಾಗಿದೆ.
ಬಿಎಸ್‌ವೈ ಪ್ರಸ್ತುತವಲ್ಲ
ಸಂಸತ್ತಿನ ಅಧಿವೇಶನ ಜಾರಿಯಲ್ಲಿರುವಾಗಲೇ ದೆಹಲಿಗೆ ಹೋಗಿ ರಾಜ್ಯದ ಬಿಜೆಪಿ ಸಂಸದರನ್ನು ಭೇಟಿಯಾಗಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂಬ ಎಂಬ ನಿರ್ಣಯ ಭಿನ್ನ ಬಣ ಕೈಗೊಂಡಿದೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ್ದ ಬಣ ಕೈಗೊಂಡ ನಿರ್ಣಯವನ್ನು ವರಿಷ್ಠರ ಗಮನಕ್ಕೆ ತರಲು ಸಿದ್ಧತೆ ನಡೆಸಿದೆ. ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಯಾರು ಸ್ಪರ್ಧಿಸಬೇಕೆಂದು ಅಲ್ಲೇ ನಿರ್ಣಯಿಸಲಾಗುವುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವಿಜಯೇಂದ್ರ ಅವರು ಕೇಂದ್ರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಪದಾಧಿಕಾರಿಗಳು ಆಯ್ಕೆ ಬಗ್ಗೆೆಯೂ ಯಾರೂ ಕೇಳಲಿಲ್ಲ. ಸ್ಟೇರಿಂಗ್ ಇಲ್ಲದ ಗಾಡಿಯಂತೆ ವಿಜಯೇಂದ್ರ ಅವರು ಮನಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಅನ್ನೋ ವಾತಾವರಣ ಸೃಷ್ಟಿ ಮಾಡಿಬಿಟ್ಟಿದ್ದರು. ಆದರೆ ಈಗಿನ ಸ್ಥಿತಿ ಹಾಗಿಲ್ಲ. ಯಡಿಯೂರಪ್ಪ ಅವರ ಕುಟುಂಬ ಇಲ್ಲದಿದ್ದರೂ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವ ಶಕ್ತಿ ನಮಗಿದೆ ಎಂದಿದ್ದಾರೆ.
ಶ್ರೀರಾಮುಲು ಚಿತ್ತ ಎತ್ತ?
ರಾಜ್ಯ ಉಸ್ತುವಾರಿ ನಡೆ ಹಾಗೂ ನಂತರ ಜನಾರ್ದನ ರೆಡ್ಡಿಯ ಮಾತಿನಿಂದ ಬೇಸರಗೊಂಡಿರುವ ಶ್ರೀರಾಮುಲುವಿಗೆ ಸದ್ಯಕ್ಕೆ ಕೋರ್ ಕಮಿಟಿ ಸದಸ್ಯ ಸ್ಥಾನ ಬಿಟ್ಟರೇ ಪಕ್ಷದ ಯಾವುದೇ ಹುದ್ದೆಯಲ್ಲಿಲ್ಲ. ಹೀಗಾಗಿ ಇದನ್ನೇ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯಸಭೆ ಸ್ಥಾನ ಪಡೆಯಲು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ ಕೋಟಾದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ವೈಎಸ್‌ಆರ್‌ಪಿ ವಿಜಯ ಸಾಯಿರೆಡ್ಡಿ ಕೆಲ ದಿನದ ಹಿಂದೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ ಸ್ಥಾನ ತೆರವಾಗಿ ಅವರ ಅವಧಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಹೀಗಾಗಿ ಆಂಧ್ರ ಕೋಟಾದಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಚಿತ್ರದುರ್ಗದಲ್ಲಿ ಮಾತನಾಡಿರುವ ಶ್ರೀರಾಮುಲು ದೆಹಲಿ ಚುನಾವಣೆ ಹಾಗೂ ಅಧಿವೇಶನ ಇರುವುದರಿಂದ ಹೈಕಮಾಂಡ್ ಭೇಟಿ ತಡವಾಗಿದೆ. ಸಮಯ ನೋಡಿಕೊಂಡು ಹೋಗಿ ಎಲ್ಲಾ ವಿಚಾರ ತಿಳಿಸುತ್ತೇನೆ. ಬಿಜೆಪಿಯಲ್ಲಿ ನಾನು ತುಂಬಾ ವರ್ಷ ಹಿರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ಸಣ್ಣ ಘಟನೆ ನಡೆದಾಗ ಕೂಡ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೂ ಬೆಂಬಲ ಸೂಚಿಸಿ, ರಾಮುಲು ಅವರು ಅಧಿಕಾರ ಇಲ್ಲ ಎಂಬ ಕಾರಣಕ್ಕೆ ಬಿಟ್ಟು ಕೊಡಬಾರದು ಎಂದು ಬೆಂಬಲಿಸಿದ್ದಾರೆ. ಒಬ್ಬರಿಗೆ ನೋವಾದಾಗ ಬೇರೆ ಪಕ್ಷದವರು ಕರೆಯೋದು ಸಹಜ, ಎಲ್ಲಾ ಸ್ನೇಹಿತರು ಕೂಡಾ ಆಹ್ವಾನಿಸಿದ್ದಾರೆ, ಅದು ಅವರ ದೊಡ್ಡ ಗುಣ. ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ರಾಮುಲು ಶಕ್ತಿ ಕೂಡ ಎಷ್ಟು ತೂಕ ಎಂದು ಫಿಕ್ಸ್ ಆಗಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಯತ್ನಾಳ್, ರಾಮುಲು, ವಿಜಯೇಂದ್ರ ಆಗಬೇಕು ಎಂದಿದ್ದಾರೆ. ಈ ಎಲ್ಲ ಶಕ್ತಿ ಕುರಿತು ಚರ್ಚೆ ನಡೆಯುತ್ತಿದೆ. ನಾನು ಹೈಕಮಾಂಡ್ ಮುಂದೆ ಹಲವು ವಿಚಾರ ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Mallikarjun Kharge: ಸೋನಿಯಾ ಗಾಂಧಿ ಹೇಳಿಕೆಯನ್ನು ತಿರುಚಲಾಗಿದೆ; ಇದು ಬಿಜೆಪಿ ಕುತಂತ್ರ-ಖರ್ಗೆ ವಾಗ್ದಾಳಿ!
ಈಗಾಗಲೇ ವಿಜಯೇಂದ್ರ ವಿರುದ್ಧ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಇದರಲ್ಲಿ ಯಾರೆಲ್ಲ ಸಹಿ ಹಾಕಿದ್ದಾರೆ ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಪಕ್ಷದ ಆಂತರಿಕ ವಿಚಾರವಾದ್ದರಿಂದ ತಮ್ಮ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ವಿಜಯೇಂದ್ರ ಅವರ ನಡೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು.
| ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಇವತ್ತು ನನಗೆ ಕೆಲಸ ಇಲ್ಲ. ಆದರೆ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಪಕ್ಷದಲ್ಲಿ ಯಾವುದೇ ಸ್ಥಾನ ಕೊಟ್ಟರೂ ಕೆಲಸ ಮಾಡುತ್ತೇನೆ. ಆಕಸ್ಮಿಕವಾಗಿ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕರೂ ಕೆಲಸ ಮಾಡುತ್ತೇನೆ. ರಾಜಕಾರಣದಲ್ಲಿ ಲೈಮ್‌ಲೈಟ್ ಅಲ್ಲಿ ಇರಬೇಕು. ನನಗೆ ಅವಕಾಶ ಇದ್ದರೆ ಕೆಲಸ ಕೊಡಿ ಎಂದು ಕೇಳುತ್ತೇನೆ.
| ಶ್ರೀರಾಮುಲು, ಮಾಜಿ ಸಚಿವ