Air India: ಅಹಮದಾಬಾದ್ ದುರಂತ ನಡೆದ 2 ದಿನದಲ್ಲೇ 900 ಅಡಿಯಿಂದ ಕುಸಿದಿತ್ತು ಮತ್ತೊಂದು ಏರ್ ಇಂಡಿಯಾ ವಿಮಾನ!
Ahmedabad Plane Crash: 260ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ದುರಂತ ನಡೆದ 38 ಗಂಟೆಗಳಲ್ಲೇ ಮತ್ತೊಂದು ಏರ್ ಇಂಡಿಯಾ ವಿಮಾನ 900 ಅಡಿ ಎತ್ತರದಿಂದ ಕುಸಿದಿತ್ತು. ಕೂಡಲೇ ಪೈಲಟ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಿ ಸುರಕ್ಷಿತವಾಗಿ ವಿಮಾನ ಚಲಾಯಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಜೂ. 12ರಂದು ದೇಶದ 2ನೇ ಅತಿದೊಡ್ಡ ವಿಮಾನ ದುರಂತ ನಡೆದಿತ್ತು (Ahmedabad Plane Crash). ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿ 260ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದರು. ಈ ಘಟನೆ ನಡೆದ 38 ಗಂಟೆ ಕಳೆಯುವಷ್ಟರಲ್ಲಿ ಮತ್ತೊಂದು ಏರ್ ಇಂಡಿಯಾ ವಿಮಾನ 900 ಅಡಿ ಎತ್ತರದಿಂದ ಕುಸಿದಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜೂ. 14ರಂದು ದಿಲ್ಲಿಯಿಂದ ವಿಯೆನ್ನಾಗೆ ಹೊರಟಿದ್ದ AI 187 ಬೋಯಿಂಗ್ 777 ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ 900 ಅಡಿ ಎತ್ತರದಿಂದ ಕುಸಿಯಿತು. ಅದಾಗ್ಯೂ ಪೈಲಟ್‌ಗಳು ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ವಿಯೆನ್ನಾಗೆ ಕೊಂಡೊಯ್ದರು. ಹೀಗೆ ಬಹುದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತು.
ಈ ಸುದ್ದಿಯನ್ನೂ ಓದಿ: Ahmedabad Plane Crash: ನಿನ್ನ ಬಗ್ಗೆ ಹೆಮ್ಮೆ ಇದೆ ...ಮಗನಿಗೆ ಕಣ್ಣೀರ ವಿದಾಯ ಹೇಳಿದ ಕ್ಯಾ. ಸಭರ್ವಾಲ್ ತಂದೆ
ಘಟನೆ ವಿವರ
ಜೂ. 14ರ ಮುಂಜಾನೆ 2:56ಕ್ಕೆ ಬಿ777 (VT-ALJ) ವಿಮಾನ ದಿಲ್ಲಿಯಿಂದ ವಿಯೆನ್ನಾದತ್ತ ಹಾರಿತು. ಅದುವರೆಗೆ ಚೆನ್ನಾಗೇ ಇದ್ದ ವಾತಾವರಣ ಇದ್ದಕ್ಕಿದ್ದಂತೆ ಪ್ರಕ್ಷುಬ್ದವಾಯಿತು. ದಿಲ್ಲಿಯಲ್ಲಿ ಬೀಸಿದ ಬಲವಾದ ಗಾಳಿ ಮತ್ತು ಕೆಟ್ಟ ಹವಾಮಾನದಿಂದಾಗಿ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಸುಮಾರು 900 ಅಡಿಗಳಷ್ಟು ಕೆಳಗೆ ಕುಸಿಯಿತು. ಕೂಡಲೇ ಕಾಕ್‌ಪಿಟ್ ಒಳಗೆ ಸ್ಟಿಕ್ ಶೇಕರ್ ಅಲರಾಂ ಮೊಳಗಿತು ಮತ್ತು ಜಿಪಿಡಬ್ಲ್ಯುಎಸ್ (Ground Proximity Warning System) ಮುಳುಗಡೆ ಎಚ್ಚರಿಕೆ ಪಡೆಯಲು ಆರಂಭಿಸಿತು. ಇದರಿಂದ ಪೈಲಟ್ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು. ವಿಮಾನವನ್ನು ಸರಿಯಾದ ಎತ್ತರಕ್ಕೆ ತಂದು ಪ್ರಯಾಣ ಮುಂದುವರಿಸಿದರು ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.
ಸುಮಾರು 9 ಗಂಟೆ 8 ನಿಮಿಷಗಳ ಪ್ರಯಾಣದ ಬಳಿಕ ವಿಮಾನ ಸುರಕ್ಷಿತವಾಗಿ ವಿಯೆನ್ನಾದಲ್ಲಿ ಇಳಿಯಿತು. ಬಳಿಕ ಅಲ್ಲಿಂದ ಬೇರೆ ಸಿಬ್ಬಂದಿ ವಿಮಾನವನ್ನು ಟೊರೊಂಟೊಗೆ ಕೊಂಡೊಯ್ದರು. ಪೈಲಟ್ ನೀಡಿದ ವರದಿಯಲ್ಲಿ ಟೇಕ್ ಆಫ್ ಆದ ನಂತರ ಪ್ರಕ್ಷುಬ್ದತೆಯಿಂದಾಗಿ (Turbulence) ಸ್ಟಿಕ್ ಶೇಕ್ ಸಕ್ರಿಯವಾಯಿತು ಎಂದಷ್ಟೇ ಉಲ್ಲೇಖಿಸಲಾಗಿದೆ. ಅದುಬಿಟ್ಟರೆ ಬೇರೆ ಯಾವುದೇ ವಿವರಗಳಿಲ್ಲ. ಸದ್ಯ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ. ಡಿಜಿಸಿಎ (Directorate General of Civil Aviation) ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರು ಪೈಲಟ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಜೂ. 12ರ ದುರಂತ
ಏರ್ ಇಂಡಿಯಾದ AI171 ವಿಮಾನವು ಜೂ. 12ರಂದು ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದರು. ಓರ್ವ ಪ್ರಯಾಣಿಕ ಮಾತ್ರ ಈ ಭೀಕರ ಅಪಘಾತದಿಂದ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ.