CM Siddaramaiah: ಐಪಿಎಸ್ ಅಧಿಕಾರಿ ಅಮಾನತು ರದ್ದು; ಸಿಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದ ಸಿಎಂ
CM Siddaramaiah: ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.


ಬೆಂಗಳೂರು, ಜುಲೈ1: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿ ಅಮಾನತು ಆದೇಶವನ್ನು ರದ್ದು ಮಾಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ‘ವಾರ್ತಾ ಸೌಧ’ದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಅವರು ಮಾತನಾಡಿದರು.
ಅವಕಾಶ ದೊರೆತಿದ್ದರಿಂದ ಮುಖ್ಯಮಂತ್ರಿಯಾದೆ
ಸಿದ್ದರಾಮಯ್ಯ ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅವರ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದೆವು. ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ ಬಿ.ಆರ್.ಪಾಟೀಲ್ ಅವರು ಈ ರೀತಿ ಹೇಳಿಕೆ ನೀಡಿರಬಹುದು ಎಂದರು.
ಜಾತಿಗಣತಿ ವಿವರವನ್ನು ಆನ್‌ಲೈನ್‌ನಲ್ಲೂ ಸಲ್ಲಿಸಬಹುದು
ಜಾತಿಗಣತಿ ನಡೆಸಲಾಗಿದೆ ಎಂಬ ಚೀಟಿಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಜಾತಿಗಣತಿಯನ್ನು ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದರು.
ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅಮಾನತು ರದ್ದು
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ಗೆ ರಿಲೀಫ್ ಸಿಕ್ಕಿದೆ. ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಆದೇಶಿಸಿದೆ. ಇದೇ ವೇಳೆ ಇನ್ನಿಬ್ಬರು ಅಧಿಕಾರಿಗಳ ಅಮಾನತನ್ನು ವಾಪಸ್ ಪಡೆಯಬಹುದು ಎಂದು ಸಲಹೆ ನೀಡಿದೆ. ಇಬ್ಬರು ಅಧಿಕಾರಿಗಳು CATಗೆ ಹೋಗದಿದ್ದಕ್ಕೆ ಸರ್ಕಾರಕ್ಕೆ ಈ ಸಲಹೆ ನೀಡಿದೆ.
ಈ ಸುದ್ದಿಯನ್ನೂ ಓದಿ | Standard Operating Procedure: ಕಾಲ್ತುಳಿತ ದುರಂತ; ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ
ಜೂ.4 ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಮ್ಯಾಜಿಸ್ಟ್ರೇಟಿಯಲ್‌ಗೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು. ಪ್ರಕರಣದಲ್ಲಿ ಬೆಂಗಳೂರು ಕಮಿಷನರ್ ಆಗಿದ್ದ ದಯಾನಂದ್ ಸೇರಿದಂತೆ 6 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ತಮ್ಮ ಅಮಾನತು ಆದೇಶ ಪ್ರಶ್ನಿಸಿ ವಿಕಾಸ್ ಕುಮಾರ್ ಅವರನ್ನು ಸಿಎಟಿ ಮೆಟ್ಟಿಲೇರಿದ್ದರು.