ಒಳ ಮೀಸಲು ಸಂಬಂಧ ಸುಪ್ರೀಂ ತೀರ್ಪಿಗೆ ಆ.01ಕ್ಕೆ ಒಂದು ವರ್ಷ ಪೂರ್ಣ: ರಾಜ್ಯಾದ್ಯಂತ ಅರೆಬೆತ್ತಲೆ ಚಳುವಳಿ
ಒಳ ಮೀಸಲಾತಿ ಜಾರಿ ಮಾಡುವ ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿ ಆ.01ಕ್ಕೆ ಕೋರ್ಟಿನ ತೀರ್ಪು ಬಂದು ಒಂದು ವರ್ಷ ಆಗಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದ್ದು, ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆ.01ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಮಾದಿಗ ಸಮುದಾಯದಿಂದ ಅರೆಬೆತ್ತಲೆ ಚಳುವಳಿ ನಡೆಸ ಲಾಗುವುದು

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಮಾದಿಗ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಚಳುವಳಿ ನಡೆಸುತ್ತಾರೆ ಎಂದು ಮಾಜಿ ಸಂಸದ ಎ ನಾರಾಯಣಸ್ವಾಮಿ ತಿಳಿಸಿದರು.

ಚಿಕ್ಕಬಳ್ಳಾಪುರ : ಒಳ ಮೀಸಲು ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆ.01ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಎಲ್ಲಾ ಸಂಘಟನೆಗಳು ಐಕ್ಯತೆ ಯಿಂದ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಚಳುವಳಿ ಮೂಲಕ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಜಿ ಸಂಸದ ಎ ನಾರಾಯಣಸ್ವಾಮಿ ತಿಳಿಸಿ ದರು.
ಒಳ ಮೀಸಲಾತಿ ಜಾರಿ ಮಾಡುವ ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿ ಆ.01ಕ್ಕೆ ಕೋರ್ಟಿನ ತೀರ್ಪು ಬಂದು ಒಂದು ವರ್ಷ ಆಗಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದ್ದು, ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆ.01ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಮಾದಿಗ ಸಮುದಾಯದಿಂದ ಅರೆಬೆತ್ತಲೆ ಚಳುವಳಿ ನಡೆಸಲಾಗುವುದು ಎಂದು ಎ.ನಾರಾರಾಯಣಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತ ನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯ ವಿಚಾರದಲ್ಲಿ ಗೊಂದಲ ಮೂಡಿಸಿ, ಮಾದಿಗ ಸಮುದಾಯಕ್ಕೆ ಮೀಸಲಾತಿ ವಿಳಂಬ ಮಾಡುವ ಹುನ್ನಾರದೊಂದಿಗೆ ನ್ಯಾ.ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದೆಯೆಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.
ಈ ಹಿಂದೆ ಕಾಂತರಾಜು ವರದಿ 170 ಕೋಟಿ ವೆಚ್ಚದಲ್ಲಿ ನಡೆಸಿ, ಕಸದ ಬುಟ್ಟಿಗೆ ಹಾಕಿದರು. ಇದೀಗ ನಾಗಮೋಹನ ದಾಸ್ ಅವರೇ ಸರಿಯಾದ ಮಾಹಿತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಈವರೆಗೆ ಮೀಸಲಾತಿಯನ್ನು ಯಾವ ಸಮುದಾಯ ಹೆಚ್ಚು ಪಡೆದಿದೆ ಎಂಬ ಮಾಹಿತಿಯೇ ಈ ಸಮೀಕ್ಷೆ ನೀಡಿಲ್ಲ ಎಂದರು.
ಮೀಸಲಾತಿಯ ಪಾಲು ಸರಿಯಾಗಿ ದೊರೆಯದ ಕಾರಣ 70 ವರ್ಷದಲ್ಲಿ ಮಾದಿಗ ಸಮುದಾಯ ಮುಂದುವರಿದೇ ಇಲ್ಲ. ಶೇ.6 ರಷ್ಟು ಮಾದಿಗ ಸಮುದಾಯಕ್ಕೆ, ಶೇ.5.5 ಬಲಗೈ ಸಮುದಾಯಕ್ಕೆ, ಶೇ.4.5 ರಷ್ಟು ಬೋವಿ ಮತ್ತು ಲಂಬಾಣಿ ಸಮುದಾಯಕ್ಕೆ, ಶೇ.1 ರಷ್ಟು ಅಲೆಮಾರಿ ಸಮುದಾಯಕ್ಕೆ ನೀಡಬೇಕೆಂದು ಈಗಾಗಲೇ ಸದಾಶಿವ ಆಯೋಗ ವರದಿ ನೀಡಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೊಂದಲ ಮುಂದುವರಿಸಿ ನ್ಯಾ.ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದೆಯೆಂದು ಕಿಡಿಕಾರಿದರು.
ಮೊದಲಿಗೆ 3 ತಿಂಗಳು, ನಂತರ ತಿಂಗಳು ಸೇರಿ 4 ತಿಂಗಳು ಸಮಯ ಸಮಿತಿ ಪಡೆಯಿತು. ರಾಜ್ಯದಲ್ಲಿ ಶೇ.91 ರಷ್ಟು ಮತ್ತು ಬೆಂಗಳೂರು ನಗರದಲ್ಲಿ ಶೇ.52ರಷ್ಟು ಸಮೀಕ್ಷೆ ನಡೆದಿರುವುದಾಗಿ ಹೇಳಲಾ ಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯವರ ದೌರ್ಜನ್ಯ, ಗೊಂದಲ, ಚೀಟಿ ಅಂಟಿಸಿದ ಆರೋಪಗಳಿವೆ, ಜು.6ರಂದು ಒಳಮೀಸಲಾತಿ ಗಣತಿ ಮುಗಿದಿದೆ. ಆದರೂ ಸಮಿತಿ ಇನ್ನೂ ವರದಿ ನೀಡಿಲ್ಲ. 101 ಜಾತಿಗಳು ಒಳಮೀಸಲಾತಿ ಕೇಳಲಿಲ್ಲ, ಮೀಸಲಾತಿಯಿಂದ ವಂಚಿತರಾಗಿದ್ದೇವೆ ಒಳಮೀಸಲಾತಿ ಬೇಕು ಎಂದು ಮಾದಿಗ ಮತ್ತು ಉಪ ಜಾತಿಗಳು ಮಾತ್ರ ಹೋರಾಟ ಮಾಡಿವೆ ಎಂದು ಹೇಳಿದರು.
ಒಳಮೀಸಲಾತಿ ಜಾರಿಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಸುಪ್ರೀಕೋರ್ಟ್ ಆದೇಶ ನೀಡಿದೆ. ಆದೇಶ ನೀಡಿದ ಕೂಡಲೇ ತೆಲಂಗಾಣ ರಾಜ್ಯದಲ್ಲಿ ಒಳ ಮೀಸಲಾತಿ ಜಾ ರಿಗೊಳಿಸಲಾಗಿದೆ. ಆಂಧ್ರಪ್ರದೇಶದಲ್ಲಿಯೂ ಒಳಮೀಸಲಾತಿ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಒಳಮೀಸಲಾತಿ ಜಾರಿಗೊಳಿಸುವ ಬದಲು ಮೀನಾಮೇಷ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿರುಮಳಪ್ಪ, ಬಾಲಕುಂಟಹಳ್ಳಿ ಗಂಗಾಧರ್, ಕೃಷ್ಣಮೂರ್ತಿ, ರಾಜಪ್ಪ, ಮುನಿಕೃಷ್ಣಪ್ಪ ಇದ್ದರು.
*
ಒಂದು ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಗೂ ಜಗ್ಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.