ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಸ್ತ್ರ ತ್ಯಜಿಸಿ, ಶಾಸ್ತ್ರ ಹಿಡಿದು ಜಯಿಸಿದ ಭೀಮಾತೀರದ ಸಂತ

ಬ್ರಾಹ್ಮಣನಾಗಿದ್ದರೂ ಕತ್ತಿ ಹಿಡಿದು ಯುದ್ಧಮಾಡುವ ಕ್ಷಾತ್ರ ಪ್ರವೃತ್ತಿ ರಘುನಾಥನದು. ಇಪ್ಪತ್ತರ ಬಿಸಿಪ್ರಾಯ. ಮದುವೆಯಾಗಿದ್ದರೂ ಸೊಸೆಯನ್ನು ಇನ್ನೂ ಮನೆತುಂಬಿಸಿಕೊಂಡಿರಲಿಲ್ಲ. ಕಾರ್ಯ ನಿಮಿತ್ತ ಕುದುರೆಯೇರಿ ಸೈನ್ಯದೊಡನೆ ಭೀಮಾತೀರಕ್ಕೆ ರಘುನಾಥನ ಆಗಮನ. ಸುಡುಬಿಸಿಲಿನಿಂದ ಬಾಯಾರಿದ ಅವನಿಗೆ ಕುದುರೆಯಿಂದ ಇಳಿದು ತೃಷೆ ತಣಿಸಿಕೊಳ್ಳುವಷ್ಟೂ ವ್ಯವಧಾನವಿರಲಿಲ್ಲ.

ಶಸ್ತ್ರ ತ್ಯಜಿಸಿ, ಶಾಸ್ತ್ರ ಹಿಡಿದು ಜಯಿಸಿದ ಭೀಮಾತೀರದ ಸಂತ

Profile Ashok Nayak Jul 15, 2025 12:20 PM

ತನ್ನಿಮಿತ್ತ

ಶ್ರೀನಿವಾಸ ರಾಘವೇಂದ್ರ, ಮೈಸೂರು

ಅಸದೃಶ ಸಾಧನೆ ಮಾಡಿ ಲೋಕಪೂಜ್ಯರಾದ ಎಷ್ಟೋ ಮಂದಿ ಮೊದಲಿಗೆ ಎಲ್ಲರಂತೆ ಜನ ಸಾಮಾನ್ಯರೊಂದಿಗೆ ವ್ಯವಹರಿಸಿಕೊಂಡು ಇರುತ್ತಾರೆ. ಆದರೆ ಬದುಕಿನ ಒಂದು ಹಂತದಲ್ಲಿ ದೈವವು ತಿರುವು ಕೊಟ್ಟಾಗ, ಇದ್ದಕ್ಕಿದ್ದಂತೆ ಬದಲಾಗಿ ಅಲ್ಪಾವಧಿಯಲ್ಲಿ ಹೆಚ್ಚು ಸಾಧನೆ ಮಾಡಿ ಮೇರು ಶಿಖರವನ್ನೇರುತ್ತಾರೆ. ಇಂಥವರ ಸಾಲಿನಲ್ಲಿ ಬರುವವರು ಶ್ರೀ ಮಧ್ವಾಚಾರ್ಯರ ಪರಂಪರೆಯಲ್ಲಿ ಐದನೆಯವರಾಗಿ ಬಂದ ಶ್ರೀ ಜಯತೀರ್ಥರು.

ತತ್ವಶಾಸ್ತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯಿಂದಾಗಿ ಇವರನ್ನು ಟೀಕಾಚಾರ್ಯರೆಂದೂ ಕರೆಯುತ್ತಾರೆ. ಅಷಾಢ ಬಹುಳ ಪಂಚಮಿಯ ದಿನವಾದ ಇಂದು (ಜು.15) ಅವರ ಪುಣ್ಯಾರಾಧನೆ. 14ನೇ ಶತಮಾನದ ಮಧ್ಯಭಾಗ. ಮಹಾರಾಷ್ಟ್ರದ ಪಂಢರಪುರ ಸಮೀಪದ ಮಂಗಳವೇಡೆ ಗ್ರಾಮ ದಲ್ಲಿದ್ದರು ಧೋಂಡೋಪಂತ ನರಸಿಂಹರಾಯರು.

ಇವರು ಸುತ್ತಮುತ್ತಲ ಪ್ರಾಂತ್ಯದ ಆಡಳಿತ ನಡೆಸುವ ಮಾಂಡಲೀಕರಾಗಿದ್ದರು. ಇವರಿಗೊಬ್ಬನೇ ಮಗ ರಘುನಾಥ ಧೋಂಡೋಪಂತ. ಮರಾಠಿಯಲ್ಲಿ ‘ಧೋಂಡೋ’ ಎಂದರೆ ಕಲ್ಲುಗುಂಡು ಎಂದರ್ಥ (ಹಳೇ ಮೈಸೂರು ಪ್ರಾಂತ್ಯದಲ್ಲಿ ಹುಟ್ಟುವ ಮಕ್ಕಳಿಗೆ ‘ಗುಂಡು’, ‘ಗುಂಡೂರಾಯ’ ಎನ್ನುವಂತೆ). ಮಕ್ಕಳು ಬದುಕಿನ ಕಷ್ಟಗಳನ್ನು ಎದುರಿಸಿಯೂ ಕಲ್ಲಿನಂತೆ ಸಹಿಷ್ಣುತೆ ಹೊಂದಿರಲಿ ಎಂಬ ಆಶಯ ಇದರ ಹಿನ್ನೆಲೆಯಲ್ಲಿದ್ದಿರಬಹುದು.

ಇದನ್ನೂ ಓದಿ: S L M Patil Column: ಹೀಗಿತ್ತು ಎ.ಕೆ.ರಾಮಾನುಜನ್‌ʼರ ಸೌಹಾರ್ದಮಯ ಒಡನಾಟ

ಬ್ರಾಹ್ಮಣನಾಗಿದ್ದರೂ ಕತ್ತಿ ಹಿಡಿದು ಯುದ್ಧ ಮಾಡುವ ಕ್ಷಾತ್ರ ಪ್ರವೃತ್ತಿ ರಘುನಾಥನದು. ಇಪ್ಪತ್ತರ ಬಿಸಿಪ್ರಾಯ. ಮದುವೆಯಾಗಿದ್ದರೂ ಸೊಸೆಯನ್ನು ಇನ್ನೂ ಮನೆತುಂಬಿಸಿಕೊಂಡಿರಲಿಲ್ಲ. ಕಾರ್ಯ ನಿಮಿತ್ತ ಕುದುರೆಯೇರಿ ಸೈನ್ಯದೊಡನೆ ಭೀಮಾತೀರಕ್ಕೆ ರಘುನಾಥನ ಆಗಮನ. ಸುಡು ಬಿಸಿಲಿನಿಂದ ಬಾಯಾರಿದ ಅವನಿಗೆ ಕುದುರೆಯಿಂದ ಇಳಿದು ತೃಷೆ ತಣಿಸಿಕೊಳ್ಳುವಷ್ಟೂ ವ್ಯವಧಾನ ವಿರಲಿಲ್ಲ. ಹೀಗಾಗಿ ಅದರ ಮೇಲಿದ್ದುಕೊಂಡೇ ನದಿಯ ಹರಿವಿಗೆ ಎದುರಾಗಿ ನೀರಿಗೆ ಬಾಯೊಡ್ಡಿದ. ದಡದಲ್ಲಿ ಕೂತು ಜಪಿಸುತ್ತಿದ್ದ ವೃದ್ಧಯತಿಗಳು ಇದನ್ನು ವೀಕ್ಷಿಸುತ್ತಿದ್ದರು.

ಅವರೇ ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ 4ನೇ ಯತಿಗಳಾದ ಅಕ್ಷೋಭ್ಯತೀರ್ಥರು. ಅಕ್ಷೋಭ್ಯರು ರಘುನಾಥನನ್ನು ‘ಕಿಂ ಪಶು ಪೂರ್ವದೇಹೇ?’ (ಹಿಂದಿನ ಜನ್ಮದಲ್ಲಿ ನಾಲ್ಕು ಕಾಲಿನ ಪ್ರಾಣಿಯಾಗಿದ್ದೆಯಾ?) ಎಂದು ಕೇಳಿಯೇ ಬಿಟ್ಟರು! ಆ ಮಾತು ಯುವಕನಿಗೆ ಬರಸಿಡಿಲಿನಂತೆ ಅಪ್ಪಳಿಸಿ, ಪೂರ್ವಜನ್ಮದ ಸ್ಮರಣೆಯನ್ನು ತಂದಿತ್ತು!

ಹಿಂದೆಲ್ಲಾ ವಾಹನಗಳಿರಲಿಲ್ಲವಾದ್ದರಿಂದ, ಮಧ್ವಾಚಾರ್ಯರು ತಮ್ಮ ಗ್ರಂಥಗಳನ್ನು ಎತ್ತಿನ ಬೆನ್ನ ಮೇಲೆ ಕೊಂಡೊಯ್ಯುತ್ತಿದ ರು. ಮಾರ್ಗ ಮಧ್ಯೆ ಶಿಷ್ಯರಿಗೆ ಪಾಠ ಹೇಳುವಾಗ ಈ ಎತ್ತು ಕೂಡ ಕೂತಿರುತ್ತಿತ್ತು. ಒಮ್ಮೆ ದುರದೃಷ್ಟವಶಾತ್ ಸರ್ಪದಂಶನವಾಗಿ ಎತ್ತು ಮೂರ್ಛೆ ಹೋಯಿತು.

ಮಧ್ವಾಚಾರ್ಯರು ಅದರ ಮೈದಡವಿ ಶುಶ್ರೂಷೆ ಮಾಡಿ ಕಿವಿಯಲ್ಲಿ ದ್ವಾದಶ ಸ್ತೋತ್ರವನ್ನು ಪಠಿಸಿದಾಗ ಎತ್ತಿಗೆ ಮರುಜೀವ ಬಂತು. ಇವುಗಳ ಸ್ಮರಣೆ ರಘುನಾಥನಿಗಾಗಿ ಗುರುಗಳ ಕಾಲಿಗೆರಗಿದ, ಸನ್ಯಾಸ ನೀಡುವಂತೆ ಪ್ರಾರ್ಥಿಸಿದ. ಉತ್ತರಾಧಿಕಾರಿಯ ನಿರೀಕ್ಷೆಯಲ್ಲಿದ್ದ ಅಕ್ಷೋಭ್ಯರಿಗೂ ಯೋಗ್ಯ ವ್ಯಕ್ತಿ ಸಿಗುವ ಸೂಚನೆ ದೊರಕಿತ್ತು. ಆದರೆ, ‘ಇವನಿಗೆ ಶಿರೋಮುಂಡನ ಮಾಡಿ ಸನ್ಯಾಸ ಕೊಟ್ಟರೆ ಮಾಂಡಲೀಕ ಅಪ್ಪ ಸುಮ್ಮನಿರುವನೇ?’ ಎಂದುಕೊಂಡರು ಶ್ರೀಗಳು.

ಆದರೆ ಯುವಕ ಆಗ್ರಹಿಸಿ ಇದು ತನ್ನ ಸ್ವಂತ ಜವಾಬ್ದಾರಿ ಎಂದಾಗ ಶ್ರೀಗಳು ಸನ್ಯಾಸವನ್ನು ಕೊಡ ಲೇಬೇಕಾಯಿತು. ಸುದ್ದಿ ಕೇಳಿದ ತಂದೆ, ಅಕ್ಷೋಭ್ಯರು ತನ್ನ ಮಗನ ಗೃಹಸ್ಥ ಧರ್ಮ, ಅಧಿಕಾರ ವನ್ನು ಕಸಿದುಕೊಂಡರೆಂದು ಕೋಪದಲ್ಲಿ ಹರಿಹಾಯ್ದ. ಮರುಮಾತಾಡದ ಅಕ್ಷೋಭ್ಯರು ರಘುನಾಥನನ್ನು ತಂದೆಯೊಂದಿಗೆ ಕಳಿಸಿಕೊಟ್ಟರು. ಮಗನು ತನ್ನ ಹೆಂಡತಿಯೊಂದಿಗೆ ಸೇರಿದರೆ ಸನ್ಯಾಸತ್ವದ ಬಯಕೆ ದೂರವಾದೀತೆಂದು ನಿಶ್ಚಯಿಸಿದ ತಂದೆ ‘ಮೊದಲರಾತ್ರಿ’ಯ ಸಿದ್ಧತೆ ಮಾಡಿಬಿಟ್ಟ!

ಆದರೆ ನವವಧುವು ಶಯ್ಯಾಗೃಹವನ್ನು ಪ್ರವೇಶಿಸಿದಾಗ ಪತಿಯ ಬದಲಿಗೆ ಕಂಡಿದ್ದು ತೇಜೋ ಪುಂಜದ ಶೇಷ! ಅವಳಿಗೆ ಗಂಡನನ್ನು ಸಮೀಪಿಸಲು ಆಗದೆ, ಭಯದಿಂದ ಚೀರಿ ಹೊರಗೆ ಓಡಿ ಬಂದಳು. ತನ್ನ ಮಗ ಬಂದಿದ್ದು ಸಮಾಜಕ್ಕಾಗಿ, ಸಂಸಾರಕ್ಕಲ್ಲ ಎಂಬುದನ್ನರಿತ ಅಪ್ಪ, ಆತನನ್ನು ಮತ್ತೆ ಅಕ್ಷೋಭ್ಯರಲ್ಲಿಗೆ ಕರೆತಂದು ತನ್ನ ತಪ್ಪನ್ನು ಮನ್ನಿಸುವಂತೆ ಕೋರಿದ.

ರಘುನಾಥನಿಗೆ ‘ಜಯತೀರ್ಥ’ ಎಂಬ ಆಶ್ರಮನಾಮ ಕೊಟ್ಟ ಅಕ್ಷೋಭ್ಯರು ಅವನಿಗೆ ತಾವೇ ಪಾಠ ಹೇಳಲು ಪ್ರಾರಂಭಿಸಿದರು. ಪೂರ್ವಜನ್ಮದಲ್ಲಿ ಮಧ್ವಾಚಾರ್ಯರಿಂದ ಪಾಠ ಕೇಳಿದ್ದ ಜಯತೀರ್ಥ ರಿಗೆ ಶಾಸ್ತ್ರಗಳಲ್ಲಿ ಪ್ರೌಢಿಮೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಆದರೂ ಅಕ್ಷೋಭ್ಯರ ಪಾಠಕ್ರಮವನ್ನು ಅವರು ಗ್ರಂಥವೊಂದರಲ್ಲಿ ನೆನೆದು ‘ಶುಕವತ್ ಶಿಕ್ಷಿತಸ್ಯ ಮೇ’ (ಗಿಳಿಗೆ ಶಬ್ದ ಕಲಿಸು ವಂತೆ) ಎಂದು ಗುರುಗಳನ್ನು ಕೊಂಡಾಡಿದ್ದಾರೆ.

ಅಧ್ಯಯನ ಮುಗಿದ ನಂತರ ಕೆಲಕಾಲ ಪಂಢರಪುರ ಸಮೀಪದ ಸಂಧ್ಯಾವಳಿಯಲ್ಲಿ ತಪಸ್ಸನ್ನಾ ಚರಿಸಿದ ಜಯತೀರ್ಥರು ನಂತರ ಆಸೇತು ಹಿಮಾಚಲ ಪರ್ಯಂತ ಸಂಚಾರ ಕೈಗೊಂಡರು. ಪುಣ್ಯ ತೀರ್ಥಗಳಲ್ಲಿ ಮಿಂದು ಕ್ಷೇತ್ರ ದರ್ಶನ ಮಾಡಿದರು. ಪ್ರತಿವಾದಿಗಳನ್ನು ಎದುರಿಸಿ ಸಮರ್ಥವಾಗಿ ಮಧ್ವಶಾಸ್ತ್ರವನ್ನು ಮಂಡಿಸಿದರು. ಯಾತ್ರಾನಂತರ ಗುಲ್ಬರ್ಗಾ ಜಿಲ್ಲೆಯ ಯರಗೋಳ ಗ್ರಾಮದ ಬೆಟ್ಟದ ಗುಹೆಯೊಂದರಲ್ಲಿ ಆಶ್ರಯ ಪಡೆದು, ಅಲ್ಲಿನ ಏಕಾಂತವಾಸದಲ್ಲಿ ಶ್ರೀ ಮಧ್ವಾಚಾರ್ಯರ 18 ಗ್ರಂಥಗಳಿಗೆ ಅರ್ಥವಿಸ್ತಾರ ರೂಪದ ಟೀಕೆಗಳನ್ನು ರಚಿಸಿದ್ದಲ್ಲದೆ, ಮೂರು ಸ್ವತಂತ್ರ ಗ್ರಂಥ ಗಳನ್ನೂ ಬರೆದರು.

ಈ ಪೈಕಿ ‘ಶ್ರೀಮನ್ಯಾಯಸುಧಾ’ ಮೇರುಕೃತಿ ಎನಿಸಿಕೊಂಡಿದೆ. ನಾಸ್ತಿಕರು, ವೇದವಿರೋಽಗಳು, ವೇದವಾದಿಗಳು, ಜೈನ-ಬೌದ್ಧವಾದಿಗಳು, ಅದ್ವೈತ-ವಿಶಿಷ್ಟಾದ್ವೈತ ವಾದಿಗಳಿಂದ ಮಾತ್ರವಲ್ಲದೆ ದ್ವೈತವಾದಿಗಳಲ್ಲೇ ಭಿನ್ನಪಂಥೀಯರಿಂದ ಎಷ್ಟು ವಾದ-ಪ್ರತಿವಾದಗಳು ಅಲ್ಲಿಯವರೆಗೆ ಬಂದಿದ್ದವೋ ಅವೆಲ್ಲವನ್ನೂ ವಿಮರ್ಶಿಸಿ ಕ್ರೋಡೀಕರಿಸಿ ಉತ್ತರಿಸಿದ ಗ್ರಂಥವೇ ‘ಶ್ರೀಮನ್ಯಾ ಯಸುಧಾ’.

ಈ ಕಾರಣದಿಂದಲೇ ಇದು ಮಾಧ್ವರಿಗೆ ಒಂದು ‘ನಿಧಿ’ ಎನಿಸಿದೆ. ‘ಸುಧಾ’ ಗ್ರಂಥವನ್ನು ಅಧ್ಯಯನ ಮಾಡುವುದು, ಜಗತ್ತನ್ನೆಲ್ಲಾ ಆಳುವುದು ಎರಡೂ ಸಮಾನಶ್ರಮದ ಕೆಲಸಗಳೇ. ಮಾಧ್ವ ಪೀಠಾಧಿ ಪತಿಗಳ ಸಾಧನೆಯ ಮಾನದಂಡ ‘ಶ್ರೀಮನ್ಯಾಯಸುಧಾ’. ಪೀಠಾಧಿಪತಿಗಳು ಎಷ್ಟು ಬಾರಿ ‘ಸುಧಾ ಮಂಗಳ’ ಮಾಡಿದ್ದಾರೆ ಎನ್ನುವ ಸಂಗತಿಯು ಈ ಗ್ರಂಥದ ಮಹತ್ವದ ದ್ಯೋತಕ.

ಜಯತೀರ್ಥರಿಗಿಂತ ಮುಂಚೆ ಬಂದ ಸಾಕಷ್ಟು ಯತಿಗಳು ಟೀಕೆ ಬರೆದಿರುವುದು ಹೌದಾದರೂ, ಜಯತೀರ್ಥರ ಟೀಕೆಗಳು ಅಸಾಮಾನ್ಯ ಎನಿಸಿ ಅವರಿಗೆ ‘ಟೀಕಾಚಾರ್ಯರು’ ಎಂಬ ಹೆಸರನ್ನು ತಂದುಕೊಟ್ಟವು. ಜಯತೀರ್ಥರು ವೈದುಷ್ಯದ ಪರಾಕಾಷ್ಠೆ ಹೊಂದಿದ್ದರೂ, ಅಷ್ಟೇ ವಿನಯ ವಂತರೂ ಆಗಿದ್ದರು ಎಂಬುದನ್ನು ಮರೆಯಲಾಗದು.

‘ನ್ಯಾಯಸುಧಾ ಮಂಗಳ’ದಲ್ಲಿ ಅವರು ಉಲ್ಲೇಖಿಸಿರುವ ಸಾಲುಗಳು ಇದಕ್ಕೆ ಸಾಕ್ಷಿಯಾಗಿವೆ. ಅದರ ಅರ್ಥ ಹೀಗಿದೆ: “ನನಗೆ ವ್ಯಾಕರಣಶಾಸ್ತ್ರದ ಸಮುದ್ರದಲ್ಲಿ ಈಜಿ ಗೊತ್ತಿಲ್ಲ, ವೇದಮಂತ್ರಗಳಿಗೆ ನಿರುಕ್ತದ ಬಲದಿಂದ ಹೇಳುವ ಚಾತುರ್ಯ ಇಲ್ಲ. ನ್ಯಾಯಶಾಸದಲ್ಲೂ ಪ್ರಾಗಲ್ಭ್ಯವಿಲ್ಲ. ತಿಳಿದು ಕೊಳ್ಳಬೇಕಾದ್ದನ್ನು (ದೇವರನ್ನು) ಏನೂ ತಿಳಿದುಕೊಂಡಿಲ್ಲ. (ಹಾಗಾದರೆ ನೀವು ಹೇಗೆ ನ್ಯಾಯ ಸುಧಾ ರಚಿಸಿದಿರಿ? ಎಂದು ಪ್ರಶ್ನಿಸಿದಾಗ) ನಮ್ಮ ಮೇಲಿರುವ ಏಕೈಕ ಶಕ್ತಿಯೆಂದರೆ ಶ್ರೀ ಮಧ್ವಾ ಚಾರ್ಯರ ಅನುಗ್ರಹ.

ಆದ್ದರಿಂದ ನಮಗೆ ಸಮಾಜದಲ್ಲಿ ಮನ್ನಣೆ. ನಾವು ಏನು ಹೇಳಿದರೂ ಅದು ಮಾನ್ಯವಾಗುತ್ತದೆ". ಜಯತೀರ್ಥರು ಯರಗೋಳದಲ್ಲಿದ್ದಾಗ ಅಲ್ಲೊಂದು ಕೆರೆ ನಿರ್ಮಾಣವಾಗುತ್ತಿತ್ತು. ದುರಂತವೆಂದರೆ, ಅದರಲ್ಲಿ ತುಂಬಿದ ನೀರು ಸೋರಿ ಹೋಗಿ ಸಂಗ್ರಹವು ಖಾಲಿಯಾಗುತ್ತಿತ್ತು. ಊರ ಗೌಡನು ಶ್ರೀಗಳ ಮೊರೆಹೋದಾಗ, ಜಯರ್ತೀಥರು ಒಂದು ಹಿಡಿ ಮಣ್ಣುಕೊಟ್ಟು ಕೆರೆ ಜಾಗದಲ್ಲಿ ಹಾಕುವಂತೆ ಸೂಚಿಸಿದರು.

ಅಂತೆಯೇ ಮಾಡಿದಾಗ, ನೀರು ಸೋರಿಹೋಗುವುದು ನಿಂತಿತು. ಈ ಕೆರೆಯನ್ನು ಮತ್ತು ಯತೀರ್ಥರ ಗ್ರಂಥನಿರ್ಮಾಣದ ಗುಹೆಯ ಜಾಗವನ್ನು ಈಗಲೂ ನೋಡಬಹುದು. ಸರ್ವಶಾಸ್ತ್ರಗಳಲ್ಲೂ ತಲಸ್ಪರ್ಶಿ ಪಾಂಡಿತ್ಯವಿದ್ದ ಶ್ರೀ ಜಯತೀರ್ಥರು ಪೀಠ ದಲ್ಲಿದ್ದುದು ಸರಿಸು ಮಾರು 20 ವರ್ಷ ಗಳವರೆಗಷ್ಟೇ. ಅವರು ಶ್ರೀ ವಿದ್ಯಾಧಿರಾಜ ತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿ ಮಳಖೇಡದಲ್ಲಿ 1388ರಲ್ಲಿ ವೃಂದಾವನಸ್ಥರಾದರು.

ಶ್ರೀ ಜಯತೀರ್ಥರ ಈ ಪುಣ್ಯದಿನದಂದು, ಅವರು ಬಿಟ್ಟುಹೋಗಿರುವ ಜ್ಞಾನ ಪರಂಪರೆಯನ್ನು ಯಥಾಶಕ್ತಿ ಅಧ್ಯಯನ ಮಾಡಿ, ಉಳಿಸಿ-ಬೆಳೆಸುವ ಸಂಕಲ್ಪ ತೊಡುವುದೇ ನಾವು ಅವರಿಗೆ ಸಲ್ಲಿಸ ಬಹುದಾದ ಗೌರವ.

(ಲೇಖಕರು ಹವ್ಯಾಸಿ ಬರಹಗಾರರು)