ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Congratulations Brother Movie: ವಿಭಿನ್ನ ಕಥಾಹಂದರವುಳ್ಳ ʼCongratulations ಬ್ರದರ್ʼ ಸಿನಿಮಾದ ಶೂಟಿಂಗ್ ಪೂರ್ಣ

Congratulations Brother Movie: ಪ್ರತಾಪ್ ಗಂಧರ್ವ ನಿರ್ದೇಶನದ ʼCongratulations ಬ್ರದರ್ʼ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.‌ ಮುಂದಿನ ತಿಂಗಳು ಚಿತ್ರದ ಮೊದಲ ಹಾಡು ದುಬೈನಲ್ಲಿ ಬಿಡುಗಡೆಯಾಗಲಿದೆ. ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ, ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ. ‌

ವಿಭಿನ್ನ ಕಥಾಹಂದರವುಳ್ಳ ʼCongratulations ಬ್ರದರ್ʼ ಶೂಟಿಂಗ್ ಪೂರ್ಣ

Profile Siddalinga Swamy Mar 19, 2025 8:30 PM

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ ʼCongratulations ಬ್ರದರ್ʼ (Congratulations Brother Movie). ಕಳೆದ ಮೂರು ತಿಂಗಳ ಹಿಂದೆ ಇದೇ ಹೆಸರಿನಲ್ಲಿ ಚಿತ್ರ ಆರಂಭವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈಗ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಶೂಟಿಂಗ್ ನಿಗದಿಯಂತೆ ಪೂರ್ಣವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.‌ ಮುಂದಿನ ತಿಂಗಳು ಚಿತ್ರದ ಮೊದಲ ಹಾಡು ದುಬೈನಲ್ಲಿ ಬಿಡುಗಡೆಯಾಗಲಿದೆ. ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ, ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ. ಚಿತ್ರೀಕರಣ ಪೂರ್ಣವಾದ ವಿಚಾರವನ್ನು ಹಾಗೂ ಚಿತ್ರದ ಕುರಿತು ಸಾಕಷ್ಟು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.‌

ಕಲ್ಲೂರ್ ಸಿನಿಮಾಸ್ & ಪೆನ್ ಎನ್ ಪೇಪರ್ ಸ್ಟುಡಿಯೋಸ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ. ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರದ ನಾಯಕನಾಗಿ ಯುವ ನಟ ರಕ್ಷಿತ್ ನಾಗ್ ಅಭಿನಯಿಸಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನುಶಾ ನಟಿಸಿದ್ದಾರೆ. ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಹಾಗೂ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಮೊದಲು ಮಾತನಾಡಿದ ನಿರ್ದೇಶಕ ಹರಿ ಸಂತೋಷ್, ಹುಡುಗರಿಗೆ ಹುಡುಗಿಯರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ಎಲ್ಲರೂ ʼCongratulations ಬ್ರದರ್ʼ ಎಂದು ಹೇಳುತ್ತಾರೆ. ಅಂತಹುದೇ ಕಥೆ ಚಿತ್ರದಲ್ಲಿದೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಸಂಸ್ಥೆಯ ಅನೇಕ ಸದಸ್ಯರು ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ. ನಾಯಕನಾಗಿ ರಕ್ಷಿತ್ ನಾಗ್ ಮತ್ತು ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನುಷಾ ನಟಿಸಿದ್ದಾರೆ. ಶಶಿಕುಮಾರ್ ಅವರು ನಾಯಕನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಗದಿತ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಿದೆ. ‌ಕಾರವಾರ, ಬೆಂಗಳೂರು ಸೇರಿದಂತೆ ಅನೇಕ ಕಡೆ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಥೆ ನಾನೇ ಬರೆದಿದ್ದೇನೆ. ನಿರ್ಮಾಪಕ ಪ್ರಶಾಂತ್ ಕಲ್ಲೂರು ನೀವು ನಮ್ಮ ಜತೆ ಇರಬೇಕು ಎಂದರು. ಹೀಗಾಗಿ ಚಿತ್ರತಂಡದ ಜತೆಗೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಮುಂದಿನ ತಿಂಗಳು ದುಬೈನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ಹಿರಿಯ ನಟ ಶಶಿಕುಮಾರ್ ಮಾತನಾಡಿ, ಚಿತ್ರ ಮಾಡುವಾಗ ಪಕ್ಕಾ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಅಂದುಕೊಂಡ ದಿನದಲ್ಲಿ ಹೆಚ್ಚು ಕಡಿಮೆ ಮುಗಿಸಿದರೆ ನಿರ್ಮಾಪಕರಿಗೂ ಅನುಕೂಲವಾಗಲಿದೆ. ನಾವೆಲ್ಲಾ ಚಿತ್ರರಂಗಕ್ಕೆ ಬಂದಾಗ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ಅಂತಹುದೇ ವಾತಾವರಣ ಚಿತ್ರರಂಗದಲ್ಲಿ ಬರಬೇಕು. ಈ ಚಿತ್ರದಲ್ಲಿ ನಾನು ನಾಯಕನ ತಂದೆಯ ಪಾತ್ರ ಮಾಡಿದ್ದೇನೆ. ಹರಿ ಸಂತೋಷ್ ನನಗೆ ಕಥೆ ಹೇಳಿದರು. ಕಥೆ ಚೆನ್ನಾಗಿದೆ. ಚಿತ್ರ ಕೂಡ ಎಲ್ಲರಿಗೂ ಪ್ರಿಯವಾಗಲಿದೆ ಎಂದರು.

ಎರಡು ಮೂರು ಚಿತ್ರಗಳಿಗೆ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ, ಇದು ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಮೊದಲ ಚಿತ್ರ. ಕನ್ನಡದ ಪ್ರತಿಭೆಗಳನ್ನು ಬೆಳಸಲು ನಿರ್ಮಾಪಕರು ಮುಂದೆ ಬರಬೇಕು. ನಿರ್ದೇಶಕ ಪ್ರತಾಪ್ ಗಂಧರ್ವ ಹಾಕಿಕೊಂಡ ಯೋಜನೆಯಂತೆ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದು ಖುಷಿಯ ವಿಚಾರ ಎಂದು ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಹೇಳಿದರು.

ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡಿ, ಹರಿ ಸಂತೋಷ್ ಕಥೆ ಬರೆದು ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಚಿತ್ರವನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಚಿತ್ರೀಕರಣ ಮುಕ್ತಾಯವಾಗಿದ್ದು, ಸಂಕಲನ ಕಾರ್ಯ ನಡೆಯುತ್ತಿದೆ. ಅಂದುಕೊಂಡ ಹಾಗೆ ಆದರೆ ಜೂನ್‌ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು.

ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನಾಯಕನಾಗಿ ಇದು ಮೊದಲ ಸಿನಿಮಾ. ಹರಿ ಸಂತೋಷ್ ಅವರ ಬರವಣಿಗೆ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದೇನೆ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು ಎಂದರು ನಾಯಕ ರಕ್ಷಿತ್ ನಾಗ್.

ನಾಯಕಿ ಸಂಜನಾ ದಾಸ್ ಮಾತನಾಡಿ, ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ, ಬೋಲ್ಡ್ ಮತ್ತು ಇಂಡಿಪೆಂಡೆಂಟ್ ಹುಡುಗಿ ಪಾತ್ರ ಎಂದರು.

ಇದು ನನ್ನ ಮೊದಲ ಚಿತ್ರ, ಆಡಿಷನ್ ಮೂಲಕ ಚಿತ್ರಕ್ಕೆ ಆಯ್ಕೆಯಾದೆ. ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಇದು. ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು ಮತ್ತೊಬ್ಬ‌ ನಾಯಕಿ ಅನುಶಾ.

ಈ ಸುದ್ದಿಯನ್ನೂ ಓದಿ | Celebrity Interview 2025: ಫಿಟ್ನೆಸ್ ದಿವಾ & ಉದ್ಯಮಿ ಶೀಲಾ ಯೋಗೇಶ್ವರ್ ಫ್ಯಾಷೆನಬಲ್ ಲೈಫ್‌ಸ್ಟೈಲ್ ಝಲಕ್!

ಚಿತ್ರದಲ್ಲಿ ನಟಿಸಿರುವ ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ, ಛಾಯಾಗ್ರಾಹಕ ಗುರು, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಕಶ್ಯಪ್ ಹಾಗೂ ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಚಿತ್ರದ ಕುರಿತು ಮಾತನಾಡಿದರು.