ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಗ್ಯಾರಂಟಿ ವಿರೋಧಿಸಿದ ಬಿಜೆಪಿಯವರೇ ಗ್ಯಾರಂಟಿ ನೀಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

DK Shivakumar: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ನಮ್ಮ ಸರ್ಕಾರ ಬದ್ದತೆ ತೋರಿಸಿದೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇನೆ. ಬಿಜೆಪಿಯ ಸದಸ್ಯರು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಎಲ್ಲರೂ ಸೇರಿ ಯೋಜನೆ ಪೂರ್ಣಗೊಳಿಸಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಗ್ಯಾರಂಟಿ ವಿರೋಧಿಸಿದ ಬಿಜೆಪಿಯವರೇ ಗ್ಯಾರಂಟಿ ನೀಡುತ್ತಿದ್ದಾರೆ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy Mar 13, 2025 6:12 PM

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿಸಿದೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೂ (Central Government) ಮನವಿ ಸಲ್ಲಿಸಿದ್ದೇನೆ. ಬಿಜೆಪಿಯ ಸದಸ್ಯರು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಎಲ್ಲರೂ ಸೇರಿ ಯೋಜನೆ ಪೂರ್ಣಗೊಳಿಸಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಪ್ರಶ್ನೋತ್ತರ ಕಲಾಪದ ವೇಳೆ ವಿಧಾನಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ್ ಅವರು ಹಾಗೂ ಹನುಮಂತ ನಿರಾಣಿ ಅವರು, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಅನುಷ್ಠಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರಿಸಿದರು.

519.60 ಮೀ ಇಂದ 524.26 ಮೀ ವರೆಗೆ ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು ಎಂಬುದು ಸರ್ಕಾರದ ಮುಂದಿದೆ. ಅಣೆಕಟ್ಟನ್ನು ಎತ್ತರ ಮಾಡಿದರೆ ಸುಮಾರು 1 ಲಕ್ಷದ 36 ಸಾವಿರ ಎಕರೆ ಮುಳುಗಡೆಯಾಗುತ್ತದೆ. ಸಂತ್ರಸ್ತರು ಮುಳುಗಡೆ ಪರಿಹಾರವನ್ನು ಈಗಲೇ ನೀಡಿ ಎಂದು ಕೇಳುತ್ತಿದ್ದಾರೆ. ನನಗೆ ಈ ಬಗ್ಗೆ ಬೇರೆ ಅಭಿಪ್ರಾಯವಿತ್ತು. ಆದರೆ ಮುಖ್ಯಮಂತ್ರಿಗಳು ಸಭೆ ನಡೆಸಿ ಬೇರೆಯದೆ ತೀರ್ಮಾನ ಮಾಡಿದರು. ಕೇಂದ್ರ ಸರ್ಕಾರವೂ ಎರಡು ಹಂತದಲ್ಲಿ ಈ ಕಾಮಗಾರಿ ನಡೆಸಬೇಕು ಎಂದು ತಿಳಿಸಿತು. ಆದ ಕಾರಣಕ್ಕೆ ಈ ವಿಚಾರವನ್ನು ಕೇಂದ್ರದವರು ಸಹ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದೇ ಬಾರಿಗೆ ಆಗುವುದಿಲ್ಲ, ಹಂತ, ಹಂತವಾಗಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ಈ ವಿಚಾರವನ್ನು ಸಚಿವ ಸಂಪುಟಸಭೆಯಲ್ಲಿ ತೆಗೆದುಕೊಂಡು ಚರ್ಚೆ ಮಾಡಲಾಗುವುದು. ದೆಹಲಿಯವರ ಬಳಿಯೂ ಆದಷ್ಟು ಬೇಗ ಈ ಯೋಜನೆಗೆ ಅಧಿಸೂಚನೆ ಹೊರಡಿಸಲು ಒತ್ತಡ ಹಾಕಿ ಎಂದು ಮನವಿ ಮಾಡುತ್ತಿದ್ದೇವೆ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಆಗ ಸರ್ಕಾರ ಈ ಯೋಜನೆ ಜಾರಿಗೆ ಸಂಪನ್ಮೂಲ ಹುಡುಕಿ ಯೋಜನೆ ಪೂರ್ಣಗೊಳಿಸಬಹುದು ಎಂದರು.

ಪುನರ್ವಸತಿಗೆ 6 ಸಾವಿರ ಎಕರೆಯಲ್ಲಿ 3,400 ಎಕರೆ ಅಂದರೆ ಶೇ.53 ರಷ್ಟು ಸೌಲಭ್ಯ ನೀಡಲಾಗಿದೆ. ಕಾಲುವೆ ನಿರ್ಮಾಣಕ್ಕೆ 51 ಸಾವಿರ ಎಕರೆ ಜಮೀನು ಬೇಕು, ಇಲ್ಲಿವರೆಗೆ 22 ಸಾವಿರ ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸಬ್ ಮರ್ಜ್‌ಗಾಗಿ 75 ಸಾವಿರ ಎಕರೆಯಲ್ಲಿ 2,504 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಬಾಂಡ್ ವಿಚಾರ ನನ್ನ ಬಾಯಿಂದ ಬಂದಿಲ್ಲ

ಚರ್ಚೆಯ ನಡುವೆ ಮಾತನಾಡಿದ ಸದಸ್ಯ ಪೂಜಾರ್ ಅವರು, ‘ಯೋಜನೆಗೆ ಹಣ ಮೀಸಲಿಟ್ಟಿಲ್ಲ, ನೀರಾವರಿ ಯೋಜನೆಗಳ ಬಾಂಡ್ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಇದು ನಿಮ್ಮ ಬಾಯಿಂದಲೇ ಬಂದಿದೆ ಎಂದಾಗ, ʼಹಣ ಮೀಸಲಿಡುವ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ ಬಾಂಡ್ ನೀಡುವ ವಿಚಾರ ನನ್ನ ಬಾಯಿಂದ ಬಂದಿಲ್ಲ. ಯಾರೋ ವರದಿ ಮಾಡಿದ್ದಾರೆʼ ಎಂದು ತಿಳಿಸಿದರು.

ನೀರಾವರಿ ಇಲಾಖೆ ದುಡ್ಡು ಇತರೆ ಕೆಲಸಗಳಿಗೆ ಬಳಕೆಯಾಗದಂತೆ ತೀರ್ಮಾನ

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ತಿಪ್ಪಣ್ಣ ಕಮಕನೂರ ಅವರು ಬೆಣ್ಣೆತೊರೆ ಜಲಾಶಯದಿಂದ ಮಲ್ಲಯ್ಯ ಮುತ್ತಯ್ಯ ಹಾಗೂ ಸುತ್ತಲಿನ ಕೆರೆಗಳನ್ನು ತುಂಬಿಸುವ ವಿಚಾರವಾಗಿ ಪ್ರಶ್ನೆ ಕೇಳಿದರು. ಉದ್ಭವ ಲಿಂಗವಾದ ಮಲ್ಲಯ್ಯ ಮುತ್ತಯ್ಯನ ದೇವಸ್ಥಾನಕ್ಕೆ ದೈವ ಭಕ್ತರಾದ ಡಿಸಿಎಂ ಅವರು ಭೇಟಿ ನೀಡಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ʼಯಡಿಯೂರಪ್ಪ ಅವರು, ಬೊಮ್ಮಾಯಿ ಅವರು ಹಾಗೂ ನಮ್ಮ ಕಾಲದಲ್ಲಿಯೂ ಕೆಲವು ಬಾರಿ ನೀರಾವರಿ ಇಲಾಖೆಯ ಶೇ.25 ರಷ್ಟು ಹಣವನ್ನು ದೇವಸ್ಥಾನ, ರಸ್ತೆ, ಸಮುದಾಯ, ರೈತರ ಭವನ ಸೇರಿದಂತೆ ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ಆದ ಕಾರಣ ಈಗಿನ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಮತ್ತು ಮುಖ್ಯಮಂತ್ರಿಗಳು ಮಾತನಾಡಿ ನೀರಾವರಿ ಇಲಾಖೆ ದುಡ್ಡು ನೀರಾವರಿ ಕೆಲಸಗಳಿಗೆ ಮಾತ್ರ ಬಳಸಬೇಕು ಎಂದು ತೀರ್ಮಾನ ಮಾಡಿದ್ದೇವೆʼ ಎಂದು ತಿಳಿಸಿದರು.

ಈಗಾಗಲೇ ಇಲಾಖೆಯಲ್ಲಿ ರೂ. 1.20 ಲಕ್ಷ ಕೋಟಿಯಷ್ಟು ಕಾಮಗಾರಿ ನಡೆಯುತ್ತಿದ್ದು, ಇಲಾಖೆಯಲ್ಲಿ ಇರುವುದು 16 ಸಾವಿರ ಕೋಟಿ ಹಣ ಮಾತ್ರ. ಸಣ್ಣ ನೀರಾವರಿ ಇಲಾಖೆಗೆ 2-3 ಸಾವಿರ ಕೋಟಿ ಮಾತ್ರ ಹಣವಿದೆ. ಇದರಲ್ಲಿ ಭೂ ಸ್ವಾಧೀನ, ಹಳೆಸಾಲ ಎಲ್ಲಾ ನೋಡಿದರೆ 5-6 ಸಾವಿರ ಕೋಟಿ ಯೋಜನೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಆದ್ಯತೆಯ ಆಧಾರದ ಮೇಲೆ ಈ ಕೆಲಸವನ್ನು ಮಾಡಲಾಗುವುದು. ರೂ. 64 ಕೋಟಿಯ ಹೊಸ ಪ್ರಸ್ತಾವನೆಯನ್ನು ನೀಡಿದ್ದಾರೆ ಇದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಮುಂದಿನ 15 ದಿನಗಳಲ್ಲಿ ಪರಿಹಾರ ವಿತರಣೆ

ಎಂ.ಜಿ.ಮುಳೆ ಅವರು ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಭೂಸ್ವಾಧೀನವಾಗಿದ್ದರೂ ಪರಿಹಾರ ಸಿಕ್ಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ʼಮಂಗಸೂಳಿ ಗ್ರಾಮದಲ್ಲಿ ಕಾಲುವೆ ನಿರ್ಮಾಣದ ವೇಳೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಮುಂದಿನ ಹದಿನೈದು ದಿನದ ಒಳಗಾಗಿ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಭರವಸೆ ನೀಡಿದರು.

2011 ರಿಂದ ಈ ಭಾಗದ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ 7,241 ಹೆಕ್ಟೇರ್ ಜಮೀನಿಗೆ ಉಪಯೋಗವಾಗುತ್ತಿದೆ. 136 ಎಕರೆ ಪ್ರದೇಶದಲ್ಲಿ ಜಾಕ್ ವೆಲ್ ಪಂಪ್ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. 134 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಅಂತಿಮಗೊಳಿಸಿದೆ. ಇದಕ್ಕೆ ರೂ. 6,665 ಸಾವಿರ ಕೋಟಿ ಅನುದಾನ ಅವಶ್ಯಕತೆಯಿದೆ. ನಿಗಮದಿಂದಲೂ ಈ ಹಣ ಲಭ್ಯವಿದೆ. 6 ಪ್ರಕರಣಗಳಲ್ಲಿ ಹೈ ಕೋರ್ಟ್ ತೀರ್ಪಿನಂತೆ ಕ್ರಮ ತೆಗೆದುಕೊಳ್ಳಲಾಗುವುದು. ಈಗ 37 (2) ರ ಅಡಿಯಲ್ಲಿ ನೊಟೀಸ್ ಸ್ವೀಕರಿಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ನೀರು ಬಳಕೆದಾರರ ಸಂಘಗಳಿಗೆ ರೂ.2 ಲಕ್ಷಕ್ಕಿಂತ ಅಧಿಕ ಅನುದಾನ ನೀಡಲು ಚಿಂತನೆ

ಸದಸ್ಯರಾದ ಮಧು ಜಿ ಮಾದೇಗೌಡ ಅವರು ನೀರು ಬಳಕೆದಾರರ ಸಂಘಗಳ ನಿಷ್ಕ್ರಿಯತೆ ಹಾಗೂ ಅನುದಾನದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ʼನೀರು ಬಳಕೆದಾರರ ಸಂಘಗಳಿಗೆ ಮರು ಚೈತನ್ಯ ನೀಡಲು ಎಲ್ಲಾ ರೈತರು ಮುಂದಾಗಬೇಕು. ಈ ಸಂಘಗಳಿಗೆ ರೂ. 2 ಲಕ್ಷಕ್ಕಿಂತ ಹೆಚ್ಚು ಅನುದಾನವನ್ನು ನೀಡಬೇಕು ಎಂದು ಯೋಚನೆ ಮಾಡಿದ್ದೇವೆʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕಾಡಾ ಮುಖಾಂತರ ಇದನ್ನು ಮುನ್ನಡೆಸಬೇಕು. ಬಜೆಟ್ ಅಲ್ಲಿಯೂ ಹಣ ಮೀಸಲು ಇಡಬೇಕು ಎಂದು ಚಿಂತನೆ ನಡೆಸಿದ್ದೇವೆ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಬೇಕು ಎನ್ನುವುದು ಎಲ್ಲರ ಆಸೆ. ಆದರೆ ಇದು ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲ ಎಂದರು.

1965 ರಲ್ಲಿ ನೀರು ಬಳಕೆದಾರರ ಬಗ್ಗೆ ಚಿಂತನೆ ಬಂದಿತು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಈ ಸಂಘಗಳಿಗೆ ಚೈತನ್ಯ ನೀಡಲಾಗಿತ್ತು. ಇದಾದ ನಂತರ ಯಾರೂ ಸಹ ಇದರ ಬಗ್ಗೆ ಲಕ್ಷ್ಯ ತೋರಿಸಲಿಲ್ಲ ಎಂದು ಹೇಳಿದರು.

ನೀರು ಬಳಕೆದಾರರ ಸಹಕಾರ ಸಂಘ, ವಿತರಣಾ ಮಟ್ಟದ ಒಕ್ಕೂಟ, ಯೋಜನಾ ಮಟ್ಟದ ಒಕ್ಕೂಟ, ರಾಜ್ಯ ಮಟ್ಟದಲ್ಲಿ ಒಂದು ಶೃಂಗ ಸಭೆ ಮಾಡಬೇಕು ಎಂಬುದು ಆಲೋಚನೆಯಲ್ಲಿದೆ. ಇದಕ್ಕೆ ನೀರಾವರಿ ಸಚಿವರು ಅಧ್ಯಕ್ಷರು, ಸಣ್ಣ ನೀರಾವರಿ ಸಚಿವರು ಸಹ ಅಧ್ಯಕ್ಷರಾಗಿ ಇರುತ್ತಾರೆ ಎಂದು ತಿಳಿಸಿದರು.

ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳೇ ಗ್ಯಾರಂಟಿ ನೀಡುತ್ತಿವೆ

ʼಕಾಂಗ್ರೆಸ್ ಸರ್ಕಾರದ ಕೈಯಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗುವುದಿಲ್ಲ ಎಂದು ವಿಪಕ್ಷಗಳು ಹೇಳಿದವು. ಪ್ರಧಾನಿಗಳು ಸಹ ಕರ್ನಾಟಕ ಸರ್ಕಾರ ದಿವಾಳಿಯಾಗುತ್ತದೆ ಎಂದರು. ಆದರೆ ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳೇ ಗ್ಯಾರಂಟಿ ನೀಡುತ್ತಿವೆʼ ಎಂದು ಡಿಸಿಎಂ ಅವರು ವಿಪಕ್ಷಗಳ ಕಾಲೆಳೆದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲು ಸರ್ಕಾರ ರೈಟ್ ಪೀಪಲ್ ಸಂಸ್ಥೆಗೆ ರೂ. 9.25 ಕೋಟಿ ಪಾವತಿ ಮಾಡಿದೆ. ಆದರೆ ಇದಕ್ಕೆ ಸಂಬಂಧಿಸಿದ ಕಡತವನ್ನು ಬಹಿರಂಗಪಡಿಸುತ್ತಿಲ್ಲ. ಸದನದಲ್ಲಿ ನೀಡಿರುವ ಉತ್ತರದಲ್ಲಿಯೂ ಈ ಕಂಪನಿ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸದಸ್ಯ ಟಿ.ಎ.ಶರವಣ ಅವರು ಸಚಿವ ಬೋಸರಾಜು ಅವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಸಚಿವ ಬೋಸರಾಜು ಅವರಿಗೆ ಬೆಂಬಲವಾಗಿ ನಿಂತು ಉತ್ತರಿಸಿದ ಡಿಸಿಎಂ ಅವರು, ʼಬೆಲೆ ಏರಿಕೆಯಿಂದ ತತ್ತರಿಸಿದ ಜನರ ಅನುಕೂಲಕ್ಕೆ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಜಾರಿಗೆ ತಂದಿತು. ಆಗ ವಿಪಕ್ಷಗಳ ಸದಸ್ಯರು ತಕರಾರು ತೆಗೆದರು, ಅತ್ತೆ ಸೊಸೆಗೆ ಜಗಳ ತಂದಿಡುತ್ತಿದ್ದೀರಿ, ಒಂದು ಕಾಳು ಕಡಿಮೆ ಕೊಟ್ಟರು ಬಿಡುವುದಿಲ್ಲ ಎನ್ನುತ್ತಿದ್ದರು. ನಾವು ಇದರಲ್ಲಿ ಯಶಸ್ವಿಯಾಗಿದ್ದೇವೆʼ ಎಂದರು.

ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಜಾರಿಯಾದ ಮೇಲೆ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿಯಲ್ಲಿಯೂ ಗ್ಯಾರಂಟಿಗಳನ್ನು ನೀಡಲಾಯಿತು. ನಮ್ಮ ಯಾವ ಮಧ್ಯವರ್ತಿಗಳೂ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದೆ. ಬ್ಯಾಂಕ್‌ನಿಂದ ಫಲಾನುಭವಿಗಳ ಖಾತೆಗೆ ಹಣ ಸರಿಯಾಗಿ ಹೋಗುತ್ತಿದೆಯೇ ಎಂದು ಪರಿಶೀಲಿಸಲು ಎಂದು ಒಂದಷ್ಟು ಏಜೆನ್ಸಿಗಳಿಗೆ ಜವಾಬ್ದಾರಿಗಳನ್ನು ನೀಡಲಾಯಿತು. ಕೆಲವು ಏಜೆನ್ಸಿಗಳಿಗೆ ತುರ್ತು ಸಂದರ್ಭ ಎಂದು ಟೆಂಡರ್ ಇಲ್ಲದೆ ಜವಾಬ್ದಾರಿ ನೀಡಲಾಗಿದೆ. ಏಕೆಂದರೆ 52 ಸಾವಿರ ಕೋಟಿ ಮೊತ್ತದ ದೊಡ್ಡ ಬಜೆಟ್ ಇರುವ ಯೋಜನೆಗಳನ್ನು ಪರಿಶೀಲಿಸಲು ಇದರಲ್ಲಿ ಶೇ 1-2 ರಷ್ಟು ಹಣವನ್ನು ಬಳಸಿಕೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ | DK Shivakumar: ಬೆಂಗಳೂರು ನಾಗರಿಕರಿಗೆ ಗುಡ್‌ನ್ಯೂಸ್!‌ ಟ್ರಾಫಿಕ್‌ ಸಮಸ್ಯೆಗೆ ಬ್ರೇಕ್‌ ಹಾಕೋಕೆ ಸರ್ಕಾರ ಮಾಸ್ಟರ್‌ ಪ್ಲ್ಯಾನ್‌

ಜನರಿಗೆ ಸರಿಯಾಗಿ ಹಣ ತಲುಪಿದೆಯೇ ಇಲ್ಲವೇ ಎಂದು ತಿಳಿಯಲು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಮಾಹಿತಿ ಪಡೆದುಕೊಳ್ಳಿ ಎಂದು ಅವರಿಗೆ ಜವಾಬ್ಧಾರಿ ನೀಡಲಾಗಿದೆ. ಅವರು ಅರ್ಹರಿಗೆ ಯೋಜನೆಗಳು ತಲುಪುತ್ತಿದೆಯೇ, ದುರುಪಯೋಗವಾಗುತ್ತಿದೆಯೇ ಎಂದು ಪರಿಶೀಲನೆ ಮಾಡುತ್ತಾರೆ. ಇದೇ ವಿಚಾರವಾಗಿ ಕೆಳಮನೆಯಲ್ಲೂ ಗದ್ದಲ ಎಬ್ಬಿಸಿದರು. ನಿಮ್ಮ ರಾಜಕಾರಣ ನೀವು ಮಾಡಿ, ನಮ್ಮ ರಾಜಕಾರಣ ನಾವು ಮಾಡುತ್ತೇವೆ. ಈಗ ಲಭ್ಯವಿರುವ ಮಾಹಿತಿಯನ್ನು ನೀಡಲಾಗಿದೆ. ಇನ್ನೂ ಒಳಗೆ ಉತ್ತರ ಅಡಗಿದ್ದರೆ ಅದನ್ನು ತೆಗೆದು ನಿಮಗೆ ಲಿಖಿತ ರೂಪದಲ್ಲಿ ನೀಡಲಾಗುವುದು. ಈ ವಿಚಾರವಾಗಿ ಹೆಚ್ಚಿನ ಚರ್ಚೆ ಮಾಡಬೇಕಾದಲ್ಲಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿ, ಆಗ ಇದರ ಮೇಲೆ ಇನ್ನೂ ಹೆಚ್ಚಿನ ಚರ್ಚೆ ನಡೆಸೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.