DK Shivakumar: ಮಡಿವಾಳ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್
DK Shivakumar: ಮಡಿವಾಳ ಸಮುದಾಯ ಸದಾ ನಮ್ಮ ಬೆಂಬಲಕ್ಕೆ ನಿಂತಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಮಡಿವಾಳ ಸಮುದಾಯ ಸದಾ ನಮ್ಮ ಬೆಂಬಲಕ್ಕೆ ನಿಂತಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕೆಂಗೇರಿಯಲ್ಲಿ ಮಾಚಿದೇವ ಗುರುಪೀಠ ವಿಶ್ವಸ್ತ ಸಮಿತಿ ವತಿಯಿಂದ ಹೊಸದಾಗಿ ನಿರ್ಮಿಸಿರುವ ಕಲ್ಯಾಣ ಮಂಟಪ ‘ಕಲಿದೇವ ಕನ್ವೆನ್ಷನ್ ಹಾಲ್’ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ.
ಈ ಸಮಾಜದ ಜತೆಗಿನ ಒಡನಾಟದಲ್ಲಿ ನಿಮ್ಮ ಸಮಸ್ಯೆ, ಹೋರಾಟವನ್ನು ನಾನು ನೋಡಿದ್ದೇನೆ. ನಮ್ಮ ತಾಲೂಕು ಹಾಗೂ ಜಿಲ್ಲೆಯಲ್ಲಿ ಕೂಡ ಗಮನಿಸಿದ್ದೇನೆ. ಈ ಸಮುದಾಯದ ಜನ ನೂರಕ್ಕೆ 99 ರಷ್ಟು ಭಾಗ ನಮಗೆ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮೆಲ್ಲರ ಪರವಾಗಿ ತುಮಕೂರಿನಲ್ಲಿ ದೊಡ್ಡ ಸಮಾರಂಭ ಮಾಡಿದ್ದೆವು. ಏನಾದರೂ ಮಾಡಿ ವಿಧಾನಸಭೆಯಲ್ಲಿ ನಿಮಗೆ ಒಂದು ಸೀಟು ಅವಕಾಶ ಮಾಡಿಕೊಡಬೇಕು ಎಂಬ ಆಲೋಚನೆ ನಮ್ಮಲ್ಲಿತ್ತು. ಆದರೆ ಕಾರಣಾಂತರಗಳಿಂದ ಸಮೀಕ್ಷೆ ವರದಿ ಆಧರಿಸಿ ತೀರ್ಮಾನ ಮಾಡಬೇಕಾಯಿತು ಎಂದರು.
17 ರಾಜ್ಯಗಳಲ್ಲಿ ನಿಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ ಎಂದು ರವಿ ಕುಮಾರ್ ಅವರು ತಿಳಿಸಿದರು. ನಮ್ಮ ರಾಜ್ಯದಲ್ಲೂ ಸೇರಿಸಬೇಕು ಎಂದು ಕೇಳಿದ್ದೀರಿ. ಮುಖ್ಯಮಂತ್ರಿಗಳು ಹಾಗೂ ನಾವು ಮುಂದಿನ ದಿನಗಳಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಈ ಸಮುದಾಯದಿಂದ ಕೆಲವೇ ಕೆಲವರು ಮಾತ್ರ ಅಧಿಕಾರಿಗಳಿದ್ದಾರೆ. ನಿಮ್ಮಲ್ಲಿ ಬಹುತೇಕರು ಕುಲಕಸುಬು ಬಿಟ್ಟಿಲ್ಲ. ನಮ್ಮ ಸರ್ಕಾರ ನಿಮ್ಮ ಬೇಡಿಕೆಗೆ ಸ್ಪಂದಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ | Karnataka Weather: ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಸಚಿವರು ತಮ್ಮ ಸಲಹೆ ನೀಡಿದ್ದಾರೆ
ಕಾರ್ಯಕ್ರಮದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 'ಜಾತಿಗಣತಿ ವಿಚಾರವಾಗಿ ಸಚಿವ ಸಂಪುಟ ಸಭೆಯ ಚರ್ಚೆ ಬಗ್ಗೆ ಕೇಳಿದಾಗ, ʼಜಾತಿ ಗಣತಿ ವಿಚಾರವಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸುಳ್ಳು. ನಾವು ಏರು ಧ್ವನಿಯಲ್ಲೂ ಮಾತಾಡಿಲ್ಲ, ಕೆಳ ಧ್ವನಿಯಲ್ಲೂ ಮಾತಾಡಿಲ್ಲ. ವಿಚಾರ ವಿನಿಮಯ ಮಾಡಿದ್ದೇವೆ ಅಷ್ಟೇ. ಯಾವುದೇ ಪ್ರತಿರೋಧವಿಲ್ಲ. ಸಚಿವರು ತಮ್ಮ ಸಲಹೆ ನೀಡಿದ್ದಾರೆ. ಇದರ ಹೊರತಾಗಿ ಬೇರೆ ಯಾವುದೇ ತೀರ್ಮಾನವಾಗಿಲ್ಲʼ ಎಂದು ತಿಳಿಸಿದರು.