ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ಕನ್ನಡಿಗ ರಾಹುಲ್; ಏನದು?
KL Rahul: ಆರಂಭಿಕ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದವರು ರಾಹುಲ್ ಆ ಬಳಿಕ ಮಧ್ಯಮ ಕ್ರಮಾಂಕ, ಫಿನಿಷರ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. 3 ಮಾದರಿಗಳಲ್ಲಿಯೂ ಶತಕ ಹೊಡೆದ ಕೆಲವೇ ಕೆಲವು ಭಾರತೀಯ ಆಟಗಾರರ ಪೈಕಿ ರಾಹುಲ್ ಕೂಡ ಒಬ್ಬರು.



ಕನ್ನಡಿಗ ಕೆ.ಎಲ್ ರಾಹುಲ್ ಅವರು ಐಪಿಎಲ್ನಲ್ಲಿ ಇತಿಹಾಸವೊಂದನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಇಂದು(ಶನಿವಾರ) ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 79 ರನ್ ಬಾರಿಸಿದರೆ ಐಪಿಎಲ್ನಲ್ಲಿ ಅತಿ ಕಡಿಮೆ ಇನಿಂಗ್ಸ್ನಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಸದ್ಯ ರಾಹುಲ್ 128* ಇನಿಂಗ್ಸ್ ಆಡಿ 4921 ರನ್ ಬಾರಿಸಿದ್ದಾರೆ. ರಾಹುಲ್ 79 ರನ್ ಬಾರಿಸಿದರೆ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಲ್ಲಿದ್ದಾರೆ. ವಾರ್ನರ್ 135 ಇನಿಂಗ್ಸ್ನಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದರು. ವಿರಾಟ್ ಕೊಹ್ಲಿ(157 ಇನಿಂಗ್ಸ್) ದ್ವಿತೀಯ ಸ್ಥಾನದಲ್ಲಿದ್ದಾರೆ.

2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ ರಾಹುಲ್, 2014 ಮತ್ತು 2015ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. 2016ರಲ್ಲಿ ಮತ್ತೆ ಆರ್ಸಿಬಿ ಸೇರಿದ್ದರು. 2017ರಲ್ಲಿ ಗಾಯದ ಕಾರಣ ಐಪಿಎಲ್ ಆಡಿರಲಿಲ್ಲ. 2018 ರ ಮೆಗಾ-ಹರಾಜಿನಲ್ಲಿ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡರು. 2022ರ ಮೆಗಾ-ಹರಾಜಿಗೆ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಆಯ್ಕೆ ಮಾಡಿತ್ತು.

2025 ರ ಮೆಗಾ-ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿರುವ ರಾಹುಲ್ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ಬ್ಯಾಟಿಂಗ್ ಜತೆಗೆ ಕೀಪಿಂಗ್ ನಿರ್ವಹಣೆ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹಾಲಿ ಆವೃತ್ತಿಯಲ್ಲಿ 5 ಪಂದ್ಯಗಳಿಂದ 238 ರನ್ ಬಾರಿಸಿದ್ದಾರೆ.

ಐಪಿಎಲ್ 2018 ರ ಋತುವಿನ ಬಳಿಕ ರಾಹುಲ್ ಉತ್ತಮ ರನ್ ಗಳಿಕೆ ಸುಧಾರಿಸಿದವು. 2018 ರ ಆವೃತ್ತಿಯಲ್ಲಿ 659 ರನ್ ಗಳಿಸಿದ್ದರು. 2019ರಲ್ಲಿ 593 ರನ್ ಬಾರಿಸಿದ್ದರು. ಐಪಿಎಲ್ 2020 ಮತ್ತು 2021 ರಲ್ಲಿ ಕ್ರಮವಾಗಿ 670 ಮತ್ತು 626 ರನ್ ಗಳಿಸಿದ್ದರು. ಈ ಬಾರಿ ಎಷ್ಟು ರನ್ ಬಾರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.