IPL 2025: ಆರೆಂಜ್, ಪರ್ಪಲ್ ಕ್ಯಾಪ್ಗಾಗಿ ತೀವ್ರ ಪೈಪೋಟಿ
IPL 2025: ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 34 ಪಂದ್ಯಗಳು ಪೂರ್ಣಗೊಂಡಿದೆ. ಶನಿವಾರ ಡಬಲ್ ಹೆಡರ್ ಪಂದ್ಯ ನಡೆಯಲಿದೆ. ದಿನದ ಮೊದಲ ಪಂದ್ಯದಲ್ಲಿ ಅಗ್ರಸ್ಥಾನಿ ಡೆಲ್ಲಿ ಮತ್ತು ಗುಜರಾತ್ ಕಾದಾಟ ನಡೆಸಿದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಮತ್ತು ರಾಜಸ್ಥಾನ್ ಸೆಣಸಾಟ ನಡೆಸಲಿದೆ.



ಪ್ರಸಕ್ತ ಸಾಗುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ಗೆ ನೀಡುವ ಆರೆಂಜ್ ಕ್ಯಾಪ್ ಮತ್ತು ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗೆ ನೀಡುವ ಪರ್ಪಲ್ ಕ್ಯಾಪ್ ರೇಸ್ ಪೈಪೋಟಿ ತೀವ್ರಗೊಂಡಿದೆ. ಸದ್ಯ ಆರೆಂಜ್ ಕ್ಯಾಪ್ ನಿಕೋಲಸ್ ಪೂರನ್(357 ರನ್) ಬಳಿ ಇದ್ದರೆ, ಪರ್ಪಲ್ ಕ್ಯಾಪ್ ನೂರ್ ಅಹ್ಮದ್(12) ಬಳಿ ಇದೆ.

ಆರೆಂಜ್ ಕ್ಯಾಪ್ಗಾಗಿ ನಿಕೋಲಸ್ ಪೂರನ್ ಜತೆ ಗುಜರಾತ್ ಟೈಟಾನ್ಸ್ ತಂಡ ಸಾಯಿ ಸುದರ್ಶನ್ ತೀವ್ರ ಪೈಪೋಟಿಗೆ ಬಿದ್ದಿದ್ದಾರೆ. ಸದ್ಯ ಸಾಯಿ ಸದರ್ಶನ್ 329 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಂದು ಗುಜರಾತ್ಗೆ ಪಂದ್ಯ ಇರುವ ಕಾರಣ ಸಾಯಿ ಸದರ್ಶನ್ಗೆ ಪೂರನ್ ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆಯಬಹುದು. ಆದರೆ ಲಕ್ನೋ ತಂಡಕ್ಕೂ ಪಂದ್ಯ ಇರುವ ಕಾರಣ ಒಂದೊಮ್ಮೆ ಸಾಯಿ ಸದರ್ಶನ್ ಆರೆಂಜ್ ಕ್ಯಾಪ್ ಪಡೆದರೂ ಇದನ್ನು ಮತ್ತೆ ವಶಪಡಿಸಿಕೊಳ್ಳುವ ಅವಕಾಶ ಪೂರನ್ಗೂ ಇದೆ.

ಅತ್ಯಧಿಕ ವಿಕೆಟ್ ಕಿತ್ತ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್ ಮತ್ತು ಆರ್ಸಿಬಿ ತಂಡದ ಜೋಶ್ ಹ್ಯಾಜಲ್ವುಡ್ ತಲಾ 12 ವಿಕೆಟ್ ಕಿತ್ತರೂ ಉತ್ತಮ ಎಕಾನಮಿ ಹೊಂದಿರುವ ಕಾರಣ ಕ್ಯಾಪ್ ನೂರ್ ಅಹ್ಮದ್ಗೆ ನೀಡಲಾಗಿದೆ. 11 ವಿಕೆಟ್ ಕಿತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಇಂದು(ಶನಿವಾರ) ನಡೆಯುವ ಗುಜರಾತ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಕಿತ್ತರೆ ಪರ್ಪಲ್ ಕ್ಯಾಪ್ ವಶಪಡಿಸಿಕೊಳ್ಳಲಿದ್ದಾರೆ.

ಆಡಿರುವ 7 ಪಂದ್ಯಗಳಲ್ಲಿ 11 ವಿಕೆಟ್ ಕಿತ್ತರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಕೂಡ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಅವರು ಉತ್ತಮ ವಿಕೆಟ್ ಬೇಡೆಯಾಡಿದರೆ ಈ ಕ್ಯಾಪ್ ಪಡೆಯಬಹುದು.
ಇದನ್ನೂ ಓದಿ IPL 2025: ಕನ್ನಡಿಗ ಮನೀಶ್ ಪಾಂಡೆಗೆ ಅನ್ಯಾಯ ಮಾಡಿತೇ ಬಿಸಿಸಿಐ?

ತಂಡಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ ಅಗ್ರಸ್ಥಾನಿಯಾಗಿದೆ. ಪಂಜಾಬ್ ಕಿಂಗ್ಸ್ ದ್ವಿತೀಯ ಹಾಗೂ ಗುಜರಾತ್ ಟೈಟಾನ್ಸ್ ಮೂರನೇ ಸ್ಥಾನದಲ್ಲಿದೆ. ಆರ್ಸಿಬಿ ನಾಲ್ಕನೇ ಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಯ ಸ್ಥಾನದಲ್ಲಿದೆ.