ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plastic Water Bottles: ಖಾಲಿ ಪ್ಲಾಸ್ಟಿಕ್‌ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಗೆ ಸರ್ಕಾರ ನಿಯಮ

Plastic Water Bottles: ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಗಾಗಿ ನೀರು ಮಾರಾಟ ಮಾಡುವ ಕಂಪನಿಗಳಿಗೆ ಖಾಲಿ ಬಾಟಲಿಗಳನ್ನು ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡುವಂತೆ ನಿಯಮವನ್ನು ರೂಪಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಖಾಲಿ ಪ್ಲಾಸ್ಟಿಕ್‌ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಗೆ ಸರ್ಕಾರ ನಿಯಮ

Profile Prabhakara R Mar 22, 2025 5:03 PM

ಬೆಂಗಳೂರು: ನೀರಿನ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಪ್ಲಾಸ್ಟಿಕ್‌ ಬಾಟಲಿಗೆ (Plastic Water Bottles) ಕನಿಷ್ಠ ಬೆಲೆ ನೀಡಿ ಮರುಖರೀದಿಸುವಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು (Eshwar Khandre) ಮಾಹಿತಿ ನೀಡಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕ್ರಮದಿಂದ ರಸ್ತೆ, ನದಿ, ಕೆರೆ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಗಾಗಿ ನೀರು ಮಾರಾಟ ಮಾಡುವ ಕಂಪನಿಗಳಿಗೆ ಖಾಲಿ ಬಾಟಲಿಗಳನ್ನು ಹಿಂಪಡೆದು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡುವಂತೆ ಈ ನಿಯಮವನ್ನು ರೂಪಿಸಲಾಗುತ್ತದೆ. ಉತ್ಪಾದಕರ ವಿಸ್ತರಿತ ಜವಾಬ್ದಾರಿ (EPR) ಅಡಿಯಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳಿಂದ ಪರಿಸರಕ್ಕೆ ಆಗುವ ಪರಿಣಾಮಗಳನ್ನು ನಿರ್ವಹಿಸಬೇಕಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.



ಅಗತ್ಯ ಕ್ರಮಕ್ಕೆ ಸಚಿವರ ಸೂಚನೆ

ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಸುಟ್ಟರೆ ಪ್ರಾಣವಾಯುವಿಗೆ ವಿಷಕಾರಿ ಅಂಶಗಳನ್ನು ಸೇರ್ಪಡೆ ಮಾಡುವ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಅಷ್ಟೇ ಅಲ್ಲದೆ ಜನ, ಜಾನುವಾರಗಳ ಆರೋಗ್ಯಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಮೊದಲಿಗೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ಖನಿಜಯುಕ್ತ ನೀರಿನ ಬಾಟಲಿ (ಮಿನರಲ್ ವಾಟರ್ ಬಾಟಲ್ಸ್)ಗೆ ಕಡಿವಾಣ ಹಾಕಬೇಕಾಗಿದೆ. ಕುಡಿಯುವ ನೀರನ್ನು ಬಾಟಲಿಗಳ ಮೂಲಕ ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನೂ ಓದಿ | ದೇವನಹಳ್ಳಿ ಪಟ್ಟಣ ಪುರಸಭೆಯಲ್ಲಿ ಪರಿಸರ ಹಬ್ಬ ನೀರು, ತ್ಯಾಜ್ಯ ಮತ್ತು ಜೈವಿಕ ವೈವಿಧ್ಯತೆಯ ಪ್ರದರ್ಶನ

ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚನೆ ನೀಡಿದ್ದಾರೆ.