ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S L Bhyrappa: ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರಿಗೆ ಹುಟ್ಟೂರು ಸಂತೇಶಿವರದಲ್ಲಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನ

S L Bhyrappa: ಹುಟ್ಟೂರಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಗಣ್ಯರ ಸಮ್ಮುಖದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರಿಗೆ ಸನ್ಮಾನ ನಡೆಯಿತು. ಸಮಾರಂಭದ ಅಂಗವಾಗಿ ಬೆಳಗ್ಗೆೆ ಚಿಕ್ಕೋನಹಳ್ಳಿ ಗೇಟ್ ಬಳಿಯಿಂದ ಸಂತೇಶಿವರ ಗ್ರಾಮದವರೆಗೆ ಬೆಳ್ಳಿ ಸಾರೋಟಿನಲ್ಲಿ ಎಸ್‌.ಎಲ್‌.ಭೈರಪ್ಪ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಎಸ್‌.ಎಲ್‌.ಭೈರಪ್ಪ ಅವರಿಗೆ ಹುಟ್ಟೂರು ಸಂತೇಶಿವರದಲ್ಲಿ ಸಮ್ಮಾನ

Profile Prabhakara R Mar 9, 2025 10:27 PM

ವಿಶ್ವವಾಣಿ ಸುದ್ದಿಮನೆ, ಹಾಸನ: ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ (S L Bhyrappa) ಅವರಿಗೆ ಹುಟ್ಟೂರಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಗಣ್ಯರ ಸಮ್ಮುಖದಲ್ಲಿ ಭಾನುವಾರ ಸಮ್ಮಾನ ನೆರವೇರಿತು. ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಶಾಸಕ ಸಿ.ಎನ್‌. ಬಾಲಕೃಷ್ಣ, ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಸೇರಿ ವಿವಿಧ ಗಣ್ಯರ ಸಮ್ಮುಖದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜನರಿಗೆ ಕುಡಿಯುವ ನೀರು, ಭೂಮಿಗೆ ನೀರು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸೂರು, ಒಳ್ಳೆಯ ಗಾಳಿ, ದುಡಿಮೆಗೆ ಒಳ್ಳೆಯ ಬೆಲೆ, ಬದುಕಿನಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಳ್ಳದಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬದುಕಿನ ಸಾಕ್ಷಾತ್ಕಾರಕ್ಕೆ ಎರಡು ವಿಷಯ ಬಹಳ ಮುಖ್ಯ. ಒಂದು ಜ್ಞಾನ, ಇನ್ನೊಂದು ಧ್ಯಾನ. ಇವೆರಡನ್ನೂ ಭೈರಪ್ಪ ಒಲಿಸಿಕೊಂಡಿದ್ದಾರೆ. ದೊಡ್ಡವರಾದ ಮೇಲೆ ಆಕಾರ ವಿಕಾರ ಆಗಿರುತ್ತದೆ. ಆದರೆ ಭೈರಪ್ಪರ ಮುಗ್ಧತೆ ಈಗಲೂ ಇದೆ. ಅವರದು ಮಗುವಿನ ಮುಗ್ಧತೆ ಎಂದರು.

SL Bhyrappa (2)

ಭೈರಪ್ಪ ಅವರು ಬರಹದಿಂದ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡನಾಡು ಬಹಳ ಶ್ರೀಮಂತ ಅಂತ ನಾವು ಕರೆಯುತ್ತೇವೆ. ಆರ್ಥಿಕವಾಗಿ ಶ್ರೀಮಂತರಿದ್ದರೆ ಅವರು ಶ್ರೀಮಂತರಲ್ಲ. ಶ್ರೀಮಂತಿಕೆ ವ್ಯಕ್ತಿಯ ಸಿರಿತನದಿಂದ ಬರುವುದಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ನಾಡಿನ ಸಾತ್ವಿಕತೆ, ಕನ್ನಡಿಗರಂತಹ ಹೃದಯವಂತ ಜನರು ಜಗತ್ತಿನಲ್ಲಿ ಎಲ್ಲಿಯೂ ಸಿಗುವುದಿಲ್ಲ. ಕನ್ನಡನಾಡು ಶ್ರೀಮಂತವಾಗಿರುವುದು ನಮ್ಮನ್ನು ಆಳಿದ ಮೈಸೂರು ಮಹಾರಾಜರು, ಹೊಯ್ಸಳರು, ಕದಂಬರಿಂದ. ಅದನ್ನು ಉಳಿಸಿದವರು ಸಾಹಿತಿಗಳು, ಕಲಾವಿದರು, ಶಿಲ್ಪಿಗಳು. ಫಲವತ್ತಾದ ಮಣ್ಣು, ಅಮೃತದಂತಹ ನೀರು, ಶುದ್ಧ ಗಾಳಿ ಕನ್ನಡನಾಡನ್ನು ಶ್ರೀಮಂತವಾಗಿರಿಸಿದೆ ಎಂದು ಬೊಮ್ಮಾಯಿ ಬಣ್ಣಿಸಿದರು.

ನನ್ನೂರ ಕೆರೆ ತುಂಬಿಸಿ ಎಂದರು

ಭೈರಪ್ಪ ಅವರ ಪರ್ವ ಕಾದಂಬರಿಯನ್ನು ಕಾಲೇಜಿನಲ್ಲಿ ಇದ್ದಾಗ ಓದಿದ್ದೆ. ಆ ಕೃತಿಯಿಂದ ಪ್ರಭಾವಿತನಾಗಿದ್ದೇನೆ. ಪರ್ವ ಕಾದಂಬರಿ ಸಾರ್ವಕಾಲಿಕ ಕೃತಿ ಎಂದ ಬಸವರಾಜ ಬೊಮ್ಮಾಯಿ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ವಿಶ್ವೇಶ್ವರ ಭಟ್ಟರು ಭೈರಪ್ಪ ಅವರನ್ನು ಕರೆದುಕೊಂಡು ಬಂದರು. ಆಗ ಭೈರಪ್ಪ ಅವರು, ‘ನಮ್ಮೂರಿನ ಕೆರೆ ತುಂಬಿಸಿ’ ಎಂದಾಗ ಮನಸ್ಸಿಗೆ ನೋವಾಯಿತು. ಈ ಕೆಲಸವನ್ನು ಮಾಡಲೇಬೇಕು ಎಂದು ನಿಶ್ಚಯಿಸಿ ಮನಃಪೂರ್ವಕವಾಗಿ ಮಾಡಿದೆ. ಸಾಹಿತಿಗಳು, ರಾಜಕಾರಣಿಗಳನ್ನು ಭೇಟಿ ಮಾಡಿ ಬಿಡಿಎ ಸೈಟ್ ಕೇಳುತ್ತಾರೆ. ಆದರೆ ಭೈರಪ್ಪ ಅವರು ‘ನನ್ನೂರಿಗೆ ನೀರು ಕೊಡಿ ಸ್ವಾಮಿ’ ಎಂದು ಕೇಳಿದರೆಂದು ಮಾರ್ಮಿಕವಾಗಿ ನುಡಿದರು.

ಭೈರಪ್ಪನವರಿಗೆ ಅದ್ಧೂರಿ ಮೆರವಣಿಗೆ

ಸಮಾರಂಭದ ಅಂಗವಾಗಿ ಬೆಳಗ್ಗೆೆ ಚಿಕ್ಕೋನಹಳ್ಳಿ ಗೇಟ್ ಬಳಿಯಿಂದ ಸಂತೇಶಿವರ ಗ್ರಾಮದವರೆಗೆ ಬೆಳ್ಳಿ ಸಾರೋಟಿನಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಅದಕ್ಕೂ ಮೊದಲು ಪೂರ್ಣಕುಂಭ ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು ಊರಿನ ಕೆರೆಯಿಂದ ಗಂಗೆಯನ್ನು ಹೊತ್ತು ತಂದರು. ಭೈರಪ್ಪ ವಿರಚಿತ 27 ಕಾದಂಬರಿಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಭೈರಪ್ಪನವರ ಅಭಿನಂದನಾ ಸಮಾರಂಭ ಅಂಗವಾಗಿ ಸಂತೇಶಿವರ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ತಿಪಟೂರು ಶಾಸಕ ಷಡಕ್ಷರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸೋಮಶೇಖರ್, ನಗರ ಯೋಜನಾ ಪ್ರಾಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್ ಸೇರಿ ಹಲವರಿದ್ದರು.

SL Bhyrappa (3)

ನನ್ನ ಸಾಧನೆಗೆ ತಾಯಿಯೇ ಸ್ಫೂರ್ತಿ: ಭೈರಪ್ಪ

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು, ನನಗೆ ನನ್ನ ತಾಯಿಯೇ ಸರ್ವಸ್ವ. ನನ್ನೂರು ನನಗೆ ಸ್ವರ್ಗವಿದ್ದಂತೆ. ನನಗೆ ಬರವಣಿಗೆ ಹುಟ್ಟಿನಿಂದಲೇ ಬಂದದ್ದು. ಇದಕ್ಕೆೆ ತಾಯಿಯೇ ಸ್ಫೂರ್ತಿ. ಬಾಲ್ಯದಲ್ಲಿ ತುಂಟನಾಗಿದ್ದ ನಾನು ಒಮ್ಮೆ ಪಕ್ಕದ ಹಿರೀಸಾವೆಗೆ ನಾಟಕ ನೋಡಲು ಹೋಗಿ ಮನೆಗೆ ಬರುವುದು ತಡವಾದಾಗ ನನ್ನ ತಾಯಿ ಊರಿನ ಕೆರೆಗಳಲ್ಲಿ ನನ್ನನ್ನು ಹುಡುಕಿಸಿದ್ದರು ಎಂದು ಬಾಲ್ಯದ ದಿನಗಳ ಮೆಲುಕುಹಾಕಿದರು. ತಾಯಿ ನನಗೆ ದೇವರ ಸಮಾನ ಎಂದರು.

ನಾನು ಬರೆಯುವ ಕಥೆ, ಕಾದಂಬರಿ ಹಾಗೂ ಎಲ್ಲವನ್ನೂ ತಾಯಿ ಒಪ್ಪಿಕೊಂಡು ಕೊಂಡಾಡುತ್ತಿದ್ದಳು. ಆಕೆ ಪ್ರೋತ್ಸಾಹ ನೀಡುತ್ತಿದ್ದರಿಂದ ನಾನು ಉತ್ಸುಕನಾಗಿ ಬರೆಯುವುದನ್ನು ಮುಂದುವರಿಸಿದೆ. ಅದರ ಫಲವಾಗಿ ಇಂದು ಹುಟ್ಟೂರಿನಲ್ಲಿ ಪುರಸ್ಕಾರ ಸಿಕ್ಕಿದ್ದು ಇದನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ ಎಂದು ತಾಯಿಯನ್ನು ನೆನೆದರು.

ನಾನು ಮದುವೆಯಾದ ದಿನದಿಂದ ಇದೂವರೆಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಯಾವ ಕಾರ್ಯಕ್ರಮದಲ್ಲಿಯೂ ನನ್ನ ಪತ್ನಿ ಭಾಗಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅದೂ ನನ್ನ ಹುಟ್ಟೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಕೆಯೂ ಭಾಗವಹಿಸಿದ್ದಾಳೆ ಎಂದು ಭೈರಪ್ಪ ಅವರು ಭಾವುಕರಾಗಿ ನುಡಿದರು.

S L Bhyrappa

ದೇಗುಲ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿ

ದೇವಸ್ಥಾನವಿರುವ ಊರು ಸ್ವರ್ಗದಂತೆ ಇರಲಿದೆ. ಗ್ರಾಮದ ದೇಗುಲ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದೇನೆ. ಯಾವುದೇ ಗ್ರಾಮವಾಗಲಿ ದೇಗುಲ ನಿರ್ಮಾಣ ಇಲ್ಲವೇ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಬೇಕು. ಊರಿನ ಗಂಗಾಧರೇಶ್ವರ ದೇವಾಲಯ 800 ವರ್ಷಗಳಷ್ಟು ಹಳೆಯದಾಗಿದ್ದು, ಅದರ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರು. ನೀಡಿದ್ದೇನೆ. ನೀವೆಲ್ಲರೂ ಹೆಚ್ಚು ನೆರವು ನೀಡಿ ಈ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.



ಸನ್ಮಾನಕ್ಕಿಂತ, ಊರಿಗೆ ನೀರು ಬೇಕೆಂದವರು ಭೈರಪ್ಪ : ವಿಶ್ವೇಶ್ವರ ಭಟ್

ಕಾರ್ಯಕ್ರಮದಲ್ಲಿ ಮಾತನಾಡಿದ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು, ಭೈರಪ್ಪ ಅವರಿಗೆ ತಮ್ಮ ಹುಟ್ಟೂರಿನ ಬಗ್ಗೆೆ ಅಪಾರ ಕಾಳಜಿಯಿದೆ. ಸಂತೇಶಿವರ ಮೇಲೆ ಭೈರಪ್ಪ ಅವರಿಗೆ ಇರುವ ಕಾಳಜಿ ಬಗ್ಗೆ ಹೇಳುವುದಕ್ಕೆ ಸಾಕಷ್ಟು ವಿಷಯಗಳಿವೆ. ವಿಶ್ವವಿಖ್ಯಾತ ಮೈಸೂರು ದಸರಾದ ಉದ್ಘಾಟನೆ ಮಾಡುವ ಅವಕಾಶ ಹಾಗೂ ಸನ್ಮಾನವನ್ನು ಲೆಕ್ಕಿಸದೇ ಮೊದಲು ನನ್ನೂರಿನ ಕೆರೆಗೆ ನೀರು ಬೇಕು ಎಂದು ಕೇಳಿದ ಮಹಾನ್ ವ್ಯಕ್ತಿ ಎಂದು ಅಭಿಪ್ರಾಯಪಟ್ಟರು.

ಭೈರಪ್ಪ ಅವರು ಜಿಲ್ಲೆ, ರಾಜ್ಯ ಹಾಗೂ ದೇಶಕ್ಕಷ್ಟೇ ಅಲ್ಲದೆ ವಿಶ್ವ ವ್ಯಾಪಿ ಗುರುತಿಸಿಕೊಂಡಿರುವ ಹಿರಿಯ ಸಾಹಿತಿ. ಇವರ ಕಾದಂಬರಿಗಳನ್ನು ಓದುತ್ತಿದ್ದರೆ ಕಣ್ಣ ಮುಂದೆಯೇ ದೃಶ್ಯ ಹಾಗೂ ಚಿತ್ರಣಗಳು ಮೂಡಿಬಂದಂತೆ ಭಾಸವಾಗುತ್ತದೆ. ಕೆಲ ವರ್ಷಗಳ ಹಿಂದೆ ಜರ್ಮನಿಯಲ್ಲಿ ನಡೆದ ಪುಸ್ತಕ ಮೇಳದಲ್ಲಿ ಎಸ್.ಎಲ್.ಭೈರಪ್ಪ ಅವರ ಕಾದಂಬರಿಯನ್ನು ನೋಡಿದ್ದೆ. ಅವರ ಕಾದಂಬರಿ ಭಾರತ ದೇಶವನ್ನು ಪ್ರತಿನಿಧಿಸಿತ್ತು. ಇವರ ಹೆಸರು ವಿಶ್ವ ಸಾಹಿತ್ಯ ನಕಾಶೆಯಲ್ಲಿದೆ. ಭೈರಪ್ಪ ಅವರು ರಚಿಸಿರುವ ಬಹುತೇಕ ಕೃತಿಗಳು 30ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿರುವುದು ಹೆಮ್ಮೆಯ ಸಂಗತಿ ವಿಶ್ವೇಶ್ವರ ಭಟ್ ಶ್ವಾಘಿಸಿದರು.

ಈ ಸುದ್ದಿಯನ್ನೂ ಓದಿ | S L Bhyrappa: ಪ್ರತಿ ಗ್ರಾಮದಲ್ಲಿ ಎಸ್.ಎಲ್.ಭೈರಪ್ಪರಂಥವರು ಹುಟ್ಟಿದರೆ, ನಾಡು ಶ್ರೀಮಂತವಾಗುತ್ತದೆ: ಬೊಮ್ಮಾಯಿ

image

ಸಾಹಿತ್ಯ ಹಾಗೂ ಬರವಣಿಗೆಗೆ ಎಂದಿಗೂ ಕೊನೆಯಿಲ್ಲ. ನಾನು ಉತ್ತರದಿಂದ ದಕ್ಷಿಣ ಧ್ರುವದವರೆಗೂ ಓದಿದ್ದೇನೆ. ಸಾಕಷ್ಟು ದೇಶಗಳನ್ನು ಸುತ್ತಿದ್ದೇನೆ. ಎಲ್ಲ ಭಾಷೆಗಳಲ್ಲಿಯೂ ಸಾಹಿತ್ಯವಿದೆ. ಆದರೆ ನಮ್ಮ ಕನ್ನಡ ಭಾಷೆಯಷ್ಟು ಸುಂದರ ಹಾಗೂ ಸುಲಲಿತ ಭಾಷೆ ಮತ್ತೊಂದಿಲ್ಲ.

ಎಸ್.ಎಲ್. ಭೈರಪ್ಪ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ
image

ಭೈರಪ್ಪನವರು ತಮ್ಮ ಬೇರನ್ನು ಎಂದೂ ಮರೆತಿಲ್ಲ. ತಮ್ಮ ಊರಿನ ಜನರು, ತಂದೆ-ತಾಯಿಯನ್ನು ಮರೆತಿಲ್ಲ. ಊರಿನ ಕೆರೆಯನ್ನೂ ಮರೆತಿಲ್ಲ ಎನ್ನುವುದಕ್ಕೆೆ ಇದೇ ಸಾಕ್ಷಿ. ಕನ್ನಡನಾಡಿನ ಪ್ರತಿಯೊಂದು ಗ್ರಾಮದಲ್ಲಿ ಭೈರಪ್ಪನಂಥವರು ಹುಟ್ಟಿದ್ದಿದ್ದರೆ, ನಾಡು ಇನ್ನಷ್ಟು ಆಗರ್ಭ ಶ್ರೀಮಂತವಾಗುತ್ತಿತ್ತು.

ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಸಂಸದ