ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2nd PUC Result 2025: ದ್ವಿತೀಯ ಪಿಯುಸಿಯಲ್ಲಿ ಶೇ. 79 ಅಂಕ ಬಂದ್ರೂ ಕಡಿಮೆಯಾಯ್ತು ಎಂದು ವಿದ್ಯಾರ್ಥಿ ಆತ್ಮಹತ್ಯೆ!

2nd PUC Result 2025: ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ಘಟನೆ ನಡೆದಿದೆ. ಎಸ್​ಎಸ್​ಎಲ್​ಸಿಯಲ್ಲಿ ವಿದ್ಯಾರ್ಥಿ ಶೇ. 98 ಅಂಕ ಪಡೆದಿದ್ದ. ಆದರೆ, ದ್ವಿತೀಯ ಪಿಯುಸಿಯಲ್ಲಿ ಶೇ. 79 ಅಂಕ ಬಂದಿದೆ. ಇದರಿಂದ ತಾನು ನಿರೀಕ್ಷಿಸಿದಷ್ಟು ಮಾರ್ಕ್ಸ್‌ ಬರಲಿಲ್ಲ ಎಂದು ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.

ದ್ವಿತೀಯ ಪಿಯುಸಿಯಲ್ಲಿ ಶೇ. 79 ಅಂಕ ಬಂದ್ರೂ ವಿದ್ಯಾರ್ಥಿ ಆತ್ಮಹತ್ಯೆ!

Profile Prabhakara R Apr 9, 2025 3:46 PM

ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕ ಬಾರದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ಜಿಲ್ಲೆಯ ಅರಸೀಕೆರೆಯಲ್ಲಿ (Arasikere News) ನಡೆದಿದೆ. ಶೇ. 79 ಅಂಕ ಬಂದಿದ್ದರೂ ಕಡಿಮೆ ಎಂದು ವಿದ್ಯಾರ್ಥಿ ಪ್ರಾಣಬಿಟ್ಟಿದ್ದಾನೆ. ಶಿಕ್ಷಕ ಪ್ರಕಾಶ್ ಅವರ ಪುತ್ರ ಮನೋಜ್ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಫಲಿತಾಂಶ ನೋಡಿ ಬಂದ ಮನೋಜ್ ಮಂಗಳವಾರ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಅರಸೀಕೆರೆಯ ಅನಂತ ಪಿಯು ಕಾಲೇಜಿನಲ್ಲಿ ಮನೋಜ್​ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 79 ಅಂಕ ಬಂದಿತ್ತು. ಕನ್ನಡ-98, ಇಂಗ್ಲಿಷ್- 85, ಫಿಸಿಕ್ಸ್-71, ಕೆಮಿಸ್ಟ್ರಿ- 74, ಮ್ಯಾಥ್ಸ್- 82 ಮತ್ತು ಬಯಾಲಜಿ-64 ಒಟ್ಟು-474 ಅಂಕ ಪಡೆದುಕೊಂಡಿದ್ದ. ಆದರೆ, ತಾನು ಅಂದುಕೊಂಡಿದ್ದಕ್ಕಿಂತ ಕಡಿಮೆ ಅಂಕ ಬಂದಿದೆ ಎಂದು ಮನನೊಂದಿದ್ದ ಮನೋಜ್​ ರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.

ಎಸ್​ಎಸ್​ಎಲ್​ಸಿಯಲ್ಲಿ ಮನೋಜ್‌ ಶೇ. 98 ಅಂಕ ಪಡೆದಿದ್ದ. ಆದರೆ, ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮನೋಜ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ | 2nd PUC Result 2025: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಪಾಸ್ ಆಗದವರಿಗೆ ಇನ್ನೂ ಎರಡು ಅವಕಾಶ

ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ನಾಲ್ವರು ಆತ್ಮಹತ್ಯೆ

ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2nd puc exam) ಫೇಲ್ (fail) ಆದರೆ ಚಿಂತಿಸಬೇಕಿಲ್ಲ, ಇನ್ನು ಎರಡು ಪ್ರಯತ್ನಗಳಿವೆ ಎಂದು ತಿಳಿಸಿದ್ದಾಗ್ಯೂ, ಅನುತ್ತೀರ್ಣಗೊಂಡ ನಿರಾಶೆಯಿಂದ ನಾಲ್ವರು ವಿದ್ಯಾರ್ಥಿನಿಯರು ಆತ್ಮಹತ್ಯೆ (Students self harming) ಮಾಡಿಕೊಂಡ ದಾರುಣ ಘಟನೆ ರಾಜ್ಯದ ನಾನಾ ಕಡೆಗಳಲ್ಲಿ ನಡೆದಿದೆ. ಇವರು ನಾಲ್ವರೂ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾವಣಗೆರೆ ಖಾಸಗಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೃಪಾ(18), ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದ ಕಾವ್ಯ ಬಸಪ್ಪ ಲಮಾಣಿ , ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಮಲ್ಲಯ್ಯ- ನಾಗರತ್ನ ದಂಪತಿಯ ಪುತ್ರಿ ವಿಜಯಲಕ್ಷ್ಮಿ, ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ(17) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ದುರ್ಘಟನೆಗಳಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಫೇಲ್ ಆಗಿದ್ದಕ್ಕೆ ಮನನೊಂದ ಇವರು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸೂಚನೆ: ಮಕ್ಕಳೇ, ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದರೆ ಬೇಸರಿಸಬೇಡಿ. ಇನ್ನೂ ಎರಡು ಪ್ರಯತ್ನಗಳಿವೆ. ಇದರಲ್ಲಿ ಉತ್ತಮವಾಗಿ ಬರೆದು ಪಾಸ್‌ ಆಗಬಹುದು. ಮೊದಲ ಪರೀಕ್ಷೆಯಲ್ಲಿ ಅನುರ್ತೀಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಪರೀಕ್ಷೆ-2 ವೇಳಾಪಟ್ಟಿಯನ್ನು (Karnataka 2nd PUC Exam-2 Time Table) ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 24ರಿಂದ ಮೇ 8ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇವೆ ಎಂದು ಕೊರಗುವ ಬದಲು 2ನೇ ಪರೀಕ್ಷೆಗೆ ಅರ್ಜಿ ಹಾಕಿ ಬರೆದು ಉತ್ತೀರ್ಣರಾಗಬಹುದು. ವಿದ್ಯಾರ್ಥಿಗಳು ಪರೀಕ್ಷೆ 2ಕ್ಕೆ ದಿನಾಂಕ 08-04-2025 ರಿಂದ 17-04-2025 ರ ನೊಂದಾಯಿಸಿಕೊಳ್ಳಬೇಕು. ದಂಡ ಸಹಿತ – 16-04-2025 ರಿಂದ 17-04-2025. ಇನ್ನು ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನಲ್ಲಿ ಕೂಡ ನೋಂದಣಿ ಮಾಡಿಕೊಳ್ಳಬಹುದು.