Mahashivratri 2025: ಶ್ರೀ ಕಾಶಿ ವಿಶ್ವನಾಥ ದೇಗುಲದಲ್ಲಿ ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ
Mahashivratri 2025: ಕೋಲಾರ ತಾಲೂಕಿನ ಕೊರಗಂಡಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಅಭಿಷೇಕದ ವೇಳೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವ ಮೂಲಕ ಪ್ರಕೃತಿಯ ವಿಸ್ಮಯಕ್ಕೆ ದೇಗುಲ ಸಾಕ್ಷಿಯಾಯಿತು.


ಕೋಲಾರ: ಮಹಾ ಶಿವರಾತ್ರಿಯಂದು ಕೋಲಾರ ತಾಲೂಕಿನ ಕೊರಗಂಡಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಅಭಿಷೇಕದ ವೇಳೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವ ಮೂಲಕ ಪ್ರಕೃತಿಯ ವಿಸ್ಮಯಕ್ಕೆ ದೇಗುಲ ಸಾಕ್ಷಿಯಾಯಿತು.
ಉತ್ತರಾಯಣ ಮಾಘಮಾಸದ ಮಹಾ ಶಿವರಾತ್ರಿಯ ಪರ್ವ ಕಾಲದಲ್ಲಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಇಂದು ಬೆಳಗ್ಗೆ 6.28 ರಿಂದ 7.15 ರ ನಡುವೆ ಸೂರ್ಯನ ಕಿರಣಗಳು ಕಾಶಿ ವಿಶ್ವೇಶ್ವರ ಸ್ವಾಮಿಯನ್ನು ಸ್ಪರ್ಶಿಸಿದ್ದು, ಮೊದಲು ನಂದಿಯನ್ನು ಹಾದು ಹೋದ ಸೂರ್ಯನ ಕಿರಣಗಳು ನಂತರ ಶಿವಲಿಂಗದ ಮೇಲೆ ಪ್ರಕಾಶಮಾನವಾಗಿ ಬೆಳಗಿದವು.
ಪೂಜೆಯಲ್ಲಿ ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಮತ್ತಿತರರು ಭಾಗಿಯಾಗಿದ್ದರು. ಪ್ರಧಾನ ಅರ್ಚಕ ಶ್ರೀನಾಥ್ ದೀಕ್ಷಿತ್ ಅವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಂಗಳೂರಿನ ಶಿವಾಲಯಗಳಲ್ಲಿ ವಿಶೇಷ ಪೂಜೆ
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಶಿವಾಲಯಗಳಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರುತ್ತಿವೆ. ಬೆಂಗಳೂರಿನ ಹನುಮಂತನಗರದ ಗವಿಗಂಗಾಧರೇಶ್ವರ ದೇಗುಲ, ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಾಲಯ, ಎಚ್ಎಎಲ್ ರಸ್ತೆಯ ಮುರುಗೇಶಪಾಳ್ಯದಲ್ಲಿರುವ ಶಿವೋಹಮ್ ದೇವಾಲಯ ಸೇರಿ ವಿವಿಧೆಡೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಅರ್ಚನೆಗಳು ನಡೆಯುತ್ತಿವೆ. ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಂಜಾನೆಯೇ ಗವಿಗಂಗಾಧರೇಶ್ವರನಿಗೆ ರುದ್ರಾಭಿಷೇಕ ಮತ್ತು ಬಿಲ್ವಪತ್ರೆಯಿಂದ ವಿಶೇಷವಾದ ಅಭಿಷೇಕ ಮತ್ತು ಅರ್ಚನೆ ಮಾಡಲಾಗಿದೆ. ಇಂದು ಇಡೀ ದಿನ ಶಿವನಿಗೆ ರುದ್ರಾಭಿಷೇಕ, ರುದ್ರಪಾರಾಯಣ ವಿಶೇಷ ಅಲಂಕಾರ, ಪೂಜೆಗಳು ನೆರವೇರಲಿವೆ.
ಶಿವರಾತ್ರಿ ನಿಮಿತ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಬೆಂಗಳೂರು: ಮಹಾಶಿವರಾತ್ರಿ (Maha Shivaratri) ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ನಗರದಲ್ಲಿನ ಶಿವನ ದೇವಸ್ಥಾನಗಳಲ್ಲಿ (Shiva Temples) ವಿಶೇಷ ಪೂಜೆ, ಉತ್ಸವಗಳು ನಡೆಯುತ್ತಿವೆ. ಹೀಗಾಗಿ, ದೇವಸ್ಥಾನಕ್ಕೆ ಬರುವ ಭಕ್ತರ (devotees) ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ರಸ್ತೆಗಳಲ್ಲಿ ಸಂಚಾರ (Road traffic alert) ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು (Traffic Restrictions) ಮಾರ್ಗಬದಲಾವಣೆಯನ್ನು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ತಿಳಿಸಿದ್ದಾರೆ.
ಯಮಲೂರು ಮುಖ್ಯರಸ್ತೆಯಲ್ಲಿರುವ ಶಿವನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬ ಮತ್ತು ಊರು ಹಬ್ಬದ ಪ್ರಯುಕ್ತ ಪೂಜಾ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ. ಬುಧವಾರ ಬೆಳಗ್ಗೆ 06.00 ಗಂಟೆಯಿಂದ ಗುರುವಾರ ಮಧ್ಯಾಹ್ನ 03.00 ಗಂಟೆಯವರೆಗೆ ಯಮಲೂರು ಮುಖ್ಯ ರಸ್ತೆ, (ಯಮಲೂರು ಕೋಡಿ ಜಂಕ್ಷನ್‌ನಿಂದ ಗ್ಲೋರಿ ಜ್ಯೂಸ್ ಸೆಂಟರ್‌ವರೆಗೆ) ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ಯಮಲೂರು ಕೋಡಿ ಕಡೆಯಿಂದ ವರ್ತೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಕೆಂಪಾಪುರ ಮುಖ್ಯರಸ್ತೆ ಮುಖಾಂತರ ಸಾಗಿ ರೋಹನ್ ಅಪಾರ್ಟ್ ಮೆಂಟ್ ಪಕ್ಕದ ರಸ್ತೆಗೆ ತಿರುವು ಪಡೆದು ವರ್ತೂರು ರಸ್ತೆ ಕಡೆಗೆ ಸಂಚರಿಸಬಹುದಾಗಿದೆ. ವರ್ತೂರು ರಸ್ತೆ ಕಡೆಯಿಂದ ಯಮಲೂರು ಕೋಡಿ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ರೋಹನ್ ಅಪಾರ್ಟ್‌ಮೆಂಟ್ ಪಕ್ಕದ ರಸ್ತೆ ಮುಖಾಂತರ ಸಂಚರಿಸಿ ಕೆಂಪಾಪುರ ಮುಖ್ಯ ರಸ್ತೆಯ ಮೂಲಕ ಸಾಗಿ ಯಮಲೂರು ಕೋಡಿ ಕಡೆಗೆ ಸಂಚರಿಸಬಹುದಾಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವೋಹಂ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿದೆ. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಬುಧವಾರ ಬೆಳಗ್ಗೆ 05.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಂಭವ ಇರುವುದರಿಂದ ಈ ರಸ್ತೆಯ ಬದಲಾಗಿ ಪರ್ಯಾಯ ರಸ್ತೆಗಳಾದ ಸುರಂಜನ್ ದಾಸ್ ರಸ್ತೆ, ಹಳೇ ಮದ್ರಾಸ್ ರಸ್ತೆ ಮತ್ತು ಜೆ.ಬಿ.ನಗರ ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡಬಹುದಾಗಿದೆ.
ವಾಹನ ನಿಲುಗಡೆ ನಿಷೇಧಿತ ಸ್ಥಳಗಳು: ಹಳೇ ವಿಮಾನ ನಿಲ್ದಾಣ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ವಾಹನ ನಿಲುಗಡೆ ಸ್ಥಳಗಳು: ದೇವಸ್ಥಾನಕ್ಕೆ ವಾಹನಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನ. ಹಳೇ ವಿಮಾನ ನಿಲ್ದಾಣ ರಸ್ತೆ ಇಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾಡುಬೀಸನಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ, ಶುಕ್ರವಾರ (ಫೆ.28) ರಿಂದ ಮಾರ್ಚ್ 7ರವರೆಗೆ ಕಾಡುಬೀಸನಹಳ್ಳಿ ಜಂಕ್ಷನ್ ಕಡೆಯಿಂದ ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Maha Shivaratri: ಲಯಕರ್ತ ಮಹಾದೇವನ ಜನನದ ಬಗ್ಗೆ ಪುರಾಣಗಳು ಏನು ಹೇಳುತ್ತವೆ?
ಪರ್ಯಾಯ ಮಾರ್ಗ: ಕಾಡುಬೀಸನಹಳ್ಳಿ ಜಂಕ್ಷನ್ ಕಡೆಯಿಂದ ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸುವ ವಾಹನಗಳು ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸಿ ಯು ಟರ್ನ್ ಪಡೆದು ಸಕ್ರಾ ಆಸ್ಪತ್ರೆ ಮುಖ್ಯ ರಸ್ತೆ ಮೂಲಕ ಕರಿಯಮ್ಮನ ಅಗ್ರಹಾರ ಕಡೆಗೆ ಸಂಚರಿಸಬಹುದಾಗಿದೆ.