Tejasvi Surya: ಮದುಮಗ ತೇಜಸ್ವಿ ಸೂರ್ಯಗೆ ಮುಜುಗರ ತಂದಿಟ್ಟ ಹೂವಿನ ಬೊಕೆ
ಹೂವು ಬೆಳೆಗಾರರು ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ಹೂವಿನ ಬೊಕ್ಕೆಗಳನ್ನು ವೇಸ್ಟ್ ಎಂದಿರುವುದು ಸರಿಯಲ್ಲ. ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘ ಒತ್ತಾಯಿಸಿದೆ.

ತೇಜಸ್ವಿ ಸೂರ್ಯ- ಶಿವಶ್ರೀ ಸ್ಕಂದಪ್ರಸಾದ್

ಬೆಂಗಳೂರು: ಬಿಜೆಪಿ ಸಂಸದ ಹಾಗೂ ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ (Sivasri Skandaprasad) ಅವರ ವಿವಾಹ ಸಮಾರಂಭ (Marriage) ಇತ್ತೀಚೆಗೆ ನೆರವೇರಿದ್ದು, ಮದುವೆ ಹೊತ್ತಿನಲ್ಲಿ ನೀಡಿದ ಒಂದು ಹೇಳಿಕೆ ಇದೀಗ ಅವರನ್ನು ಮುಜುಗರಕ್ಕೆ ಸಿಕ್ಕಿಸುವಂತಾಗಿದೆ. ಹೂವಿನ ಬೊಕ್ಕೆಗಳನ್ನು (ವೇಸ್ಟ್ ಎಂದು ಕರೆದಿರುವ ಅವರ ಹೇಳಿಕೆಗೆ, ದಕ್ಷಿಣ ಭಾರತ ಹೂ ಬೆಳೆಗಾರರ ಸಂಘ ಖಂಡನೆ ವ್ಯಕ್ತಪಡಿಸಿದೆ.
ತೇಜಸ್ವಿ ಸೂರ್ಯ ಅವರು ಭಾನುವಾರ ನಡೆದ ಅದ್ಧೂರಿ ಆರತಕ್ಷತೆಗೂ ಮುನ್ನ ಒಂದು ವಿಶೇಷ ಮನವಿ ಮಾಡಿದ್ದರು. "ಆರತಕ್ಷತೆಗೆ ಬರುವವರು ದಯವಿಟ್ಟು ಹೂವಿನ ಬೊಕ್ಕೆಗಳು ಹಾಗೂ ಡ್ರೈಫ್ರೂಟ್ಸ್‌ಗಳನ್ನು ತರಬೇಡಿ. ಹೂವಿನ ಬೊಕ್ಕೆಗಳಿಗೆ ಸುಮ್ಮನೆ ದುಂದು ವೆಚ್ಚ ಮಾಡಬೇಡಿ. ಕೇವಲ ಒಂದು ನಿಮಿಷದಲ್ಲಿ ಆ ಹೂವನ್ನು ಸ್ವೀಕರಿಸಿ, ಪಕ್ಕಕ್ಕೆ ಇಡಲಾಗುತ್ತೆ. ಇದೆಲ್ಲ ಸುಮ್ಮನೆ ವೇಸ್ಟ್" ಎಂದಿದ್ದರು. ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಹೂವು ಬೆಳೆಗಾರರು ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ಹೂವಿನ ಬೊಕ್ಕೆಗಳನ್ನು ವೇಸ್ಟ್ ಎಂದಿರುವುದು ಸರಿಯಲ್ಲ. ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘ ಒತ್ತಾಯಿಸಿದೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೂವುಗಳಿಗೆ ವಿಶೇಷ ಸ್ಥಾನವಿದೆ. ದೇವರ ಪೂಜೆ ಸೇರಿದಂತೆ ಶುಭ ಸಂದರ್ಭಗಳಲ್ಲಿ ಹೂವುಗಳನ್ನು ಬಳಸುತ್ತೇವೆ. ಕಾರ್ಯಕ್ರಮಗಳಿಗೆ ಸಹಜವಾಗಿ ಹೂವುಗಳನ್ನು ಕೊಡುಗೆ ರೂಪದಲ್ಲಿ ನೀಡುತ್ತಾರೆ. ನೀವು ಉಡುಗೊರೆಗಳನ್ನು ನಿರಾಕರಿಸಿದ್ದು ಸರಿಯಾಗಿದೆ. ಆದರೆ ಹೂವಿನ ಬೊಕ್ಕೆಗಳನ್ನು ವೇಸ್ಟ್ ಎಂದಿರುವುದು ಸರಿಯಲ್ಲ. ಇದು ಹೂವು ಬೆಳೆಗಾರರಿಗೆ ಮಾಡಿರುವ ಅವಮಾನ ಮಾತ್ರವಲ್ಲದೆ, ಲಕ್ಷಾಂತರ ರೈತರ ಶ್ರಮದ ಫಲಕ್ಕೆ ಧಕ್ಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಪ್ರತಿವರ್ಷ ನಡೆಯುವ ಒಂದು ಕೋಟಿಗೂ ಅಧಿಕ ಮದುವೆ ಸಮಾರಂಭಗಳಲ್ಲಿ ಶೇ 85 ರಷ್ಟು ಹೂವುಗಳು ಹಾಗೂ ಬೊಕ್ಕೆಗಳು ಕೇವಲ 24 ಘಂಟೆಗಳಲ್ಲಿ ನಿಷ್ಕ್ರಿಯವಾಗುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ 300,000 ಕೆ.ಜಿ.ಯಷ್ಟು ಡ್ರೈಫ್ರೂಟ್ಸ್ ಮದುವೆ ನಡೆಯುವ ಸ್ಥಳದಲ್ಲೇ ಉಳಿದು ಹೋಗುತ್ತವೆ. ಇದರಿಂದ ವಾರ್ಷಿಕ 315 ಕೋಟಿ ಹಣ ಅನವಶ್ಯಕವಾಗಿ ವೆಚ್ಚವಾಗುತ್ತದೆ. ಹಾಗಾಗಿ ನಮ್ಮ ಆರತಕ್ಷತೆಗೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್‌ಗಳನ್ನ ದಯವಿಟ್ಟು ತರಬೇಡಿ ಎಂದು ವಿನಂತಿಸಿಕೊಂಡಿದ್ದರು.
ಇದನ್ನೂ ಓದಿ: Tejsvi Surya Marriage: ಸಪ್ತಪದಿ ತುಳಿದ ತೇಜಸ್ವಿ ಸೂರ್ಯ- ಶಿವಶ್ರೀ ಸ್ಕಂದಪ್ರಸಾದ್