Fraud Case: ʼಲಕ್ಕಿ ಭಾಸ್ಕರ್ʼ ಚಿತ್ರದ ಮಾದರಿಯಲ್ಲಿ ವಂಚನೆ; ಕೋಟಿ ಕೋಟಿ ರೂ. ದೋಚಿ ಸಿಕ್ಕಿಬಿದ್ದ ಬ್ಯಾಂಕ್ ಮ್ಯಾನೇಜರ್
Raichur News: ʼಲಕ್ಕಿ ಭಾಸ್ಕರ್ʼ ಸಿನಿಮಾದಂತೆ ಕೋಟಿ ಕೋಟಿ ರೂ. ವಂಚಿಸಿದ್ದ ಬ್ಯಾಂಕ್ಮ್ಯಾನೇಜರ್ನನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆತನಿಗೆ ನೆರವಾದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಕಂಬಿ ಎಣಿಸುವಂತಾಗಿದೆ. ನರೇಂದ್ರ ರೆಡ್ಡಿ ಮತ್ತು ಅರುಣಾ ದೇವಿ ಬಂಧಿತರು.

ಅರುಣಾ ದೇವಿ ಮತ್ತು ನರೇಂದ್ರ ರೆಡ್ಡಿ.

ರಾಯಚೂರು: ಸಿನಿಮಾವನ್ನು ಶಕ್ತಿಶಾಲಿ ಮಾಧ್ಯಮ ಎಂದು ಕರೆಯಲಾಗುತ್ತದೆ. ಕೆಲವೊಂದು ಚಿತ್ರಗಳು ಸಾಧನೆ ಮಾಡಲು ಪ್ರೇರಣೆ ನೀಡಿದರೆ ಇನ್ನೊಂದಿಷ್ಟು ಸಿನಿಮಾಗಳು ಅಪರಾಧ ಕೃತ್ಯ ಎಸಗಲು ಕಾರಣವಾಗುತ್ತವೆ. ಎರಡನೇ ವಿಭಾಗಕ್ಕೆ ಉದಾಹರಣೆಯಾಗಬಲ್ಲ ಘಟನೆ ಇದು. ಕಳೆದ ವರ್ಷ ತೆಲುಗಿನಲ್ಲಿ ʼಲಕ್ಕಿ ಭಾಸ್ಕರ್ʼ (Lucky Bhaskar) ಎನ್ನುವ ಚಿತ್ರ ತೆರೆಕಂಡಿತ್ತು. ದುಲ್ಕಾರ್ ಸಲ್ಮಾನ್-ಮೀನಾಕ್ಷಿ ಚೌಧರಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಚಿತ್ರ ಬ್ಯಾಂಕ್ ವ್ಯವಸ್ಥೆಯನ್ನು ವಂಚಿಸಿ ಕೋಟಿ ಕೋಟಿ ರೂ. ದೋಚುವ ಕಥೆಯನ್ನು ಒಳಗೊಂಡಿತ್ತು. ಅದು ರೀಲ್ ಆಗಿದ್ದರೆ ಅದೇ ಮಾದರಿಯ ರಿಯಲ್ ಘಟನೆಯೊಂದು ರಾಯಚೂರಿನಲ್ಲಿ ನಡೆದಿದೆ (Raichur News). ಸಿನಿಮಾದಂತೆ ಕೋಟಿ ಕೋಟಿ ರೂ. ವಂಚಿಸಿದ್ದ ಬ್ಯಾಂಕ್ನ ಮ್ಯಾನೇಜರ್‌ನನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ (Fraud Case). ಜತೆಗೆ ಆತನಿಗೆ ನೆರವಾದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಕಂಬಿ ಎಣಿಸುವಂತಾಗಿದೆ.
ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ಮತ್ತು ಆಂಧ್ರ ಪ್ರದೇಶದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಅರುಣಾ ದೇವಿ ಬಂಧಿತರು.
ಈ ಸುದ್ದಿಯನ್ನೂ ಓದಿ: Gramin Banks merger: ಕರ್ನಾಟಕದ ಎರಡು ಗ್ರಾಮೀಣ ಬ್ಯಾಂಕ್ ವಿಲೀನ; ಯಾವುದು, ಯಾವಾಗ?
ಘಟನೆ ವಿವರ
ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ʼಲಕ್ಕಿ ಭಾಸ್ಕರ್ʼ ಸಿನಿಮಾದಂತೆ ಯಾಮಾರಿಸಿ ಬ್ಯಾಂಕ್‌ನಿಂದ ಕೋಟಿ ಕೋಟಿ ರೂ. ವಂಚಿಸಿ ಸಿಕ್ಕಿ ಬಿದ್ದಿದ್ದಾನೆ. 2022ರಲ್ಲಿಯೇ ವಂಚನೆಗೆ ಇಳಿದಿದ್ದ ನರೇಂದ್ರ ರೆಡ್ಡಿ 2025ರವರೆಗೆ ಸಣ್ಣ ಸುಳಿವೂ ಸಿಗದೇ ಇರುವ ಹಾಗೆ ತನ್ನ ವ್ಯಾಪ್ತಿಯಲ್ಲಿ ಅವ್ಯವಹಾರ ಎಸಗಿದ್ದ. ಬ್ಯಾಂಕ್ ಆಫ್ ಮಹಾರಾಷ್ಟ್ರ ದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ. ಆ ಪೈಕಿ 29 ಖಾತೆಗಳಿಗೆ ಹಣ ವರ್ಗಾವಣೆಯನ್ನೂ ಮಾಡಿ ಹಣ ಎಗರಿಸುತ್ತಲೇ ಇದ್ದ. ನಕಲಿ ಗೋಲ್ಡ್ ತಾನೇ ಇಟ್ಟು ಅಸಲಿ ಗೋಲ್ಡ್ ಲೋನ್ ಮಂಜೂರು ಮಾಡಿ ಆ ಹಣವನ್ನ ನಕಲಿ ಖಾತೆಗಳಿಗೆ ವರ್ಗಾಯಿಸುತ್ತಿದ್ದ. ಇದಲ್ಲದೇ ಅಸಲಿ ಗೋಲ್ಡ್ ಲೋನ್ ಹೊಂದಿದವರಿಗೂ ಮೋಸ ಮಾಡಿ ವಿವಿಧ ಮಾದರಿಯಲ್ಲಿ ಬರೋಬ್ಬರಿ 10.97 ಕೋಟಿ ರೂ. ವಂಚಿಸಿದ್ದ. ಆದರೆ ಆಡಿಟ್ ವೇಳೆ ಅದೃಷ್ಟ ಕೈಕೊಟ್ಟು ಸಿಕ್ಕಿಬಿದ್ದಿದ್ದಾನೆ.
ವಂಚನೆ ಪ್ರಕರಣ ಬೆಳಕಿಗೆ ಬರುತ್ತಲೇ ಬ್ಯಾಂಕ್ನ ಹಿರಿಯ ಅಧಿಕಾರಿಗಳು ರಾಯಚೂರಿನ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಪರಾರಿಯಾಗಿದ್ದ ನರೇಂದ್ರ ರೆಡ್ಡಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಸುಮಾರು 11 ಕೋಟಿ ರೂ. ವಂಚಿಸಿದ್ದ ನರೇಂದ್ರ ರೆಡ್ಡಿ ತನ್ನ ಗುರುತನ್ನೇ ಬದಲಿಸಿಕೊಂಡು ಓಡಾಡಿಕೊಂಡಿದ್ದ. ಆತನ ಮೊಬೈಲ್ ಲೊಕೋಷನ್ ಜಾಡು ಹಿಡಿದ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
ಆಂಧ್ರ ಮೂಲದ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡ್ತಿದ್ದ ಅರುಣಾ ದೇವಿ ಹಾಗೂ ನರೇಂದ್ರ ಇಬ್ಬರು ಆಂಧ್ರ ಪ್ರದೇಶದಲ್ಲಿ ಮಾಜಿ ಸಹೋದ್ಯೋಗಿಗಳು. ಅಲ್ಲಿನ ಪರಿಚಯದಿಂದ ಆಕೆ ನರೇಂದ್ರನ ಕೃತ್ಯಕ್ಕೆ ನೆರವಾಗಿದ್ದಳು. ಹೀಗಾಗಿ ಈಕೆಯನ್ನೂ ಬಂಧಿಸಲಾಗಿದೆ.