Thimmana Mottegalu Movie: ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ʼತಿಮ್ಮನ ಮೊಟ್ಟೆಗಳುʼ ಚಿತ್ರ ಜೂ.27ಕ್ಕೆ ರಿಲೀಸ್
Thimmana Mottegalu Movie: ರಕ್ಷಿತ್ ತೀರ್ಥಹಳ್ಳಿ ಅವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ʼತಿಮ್ಮನ ಮೊಟ್ಟೆಗಳುʼ ಚಿತ್ರ ಈ ವಾರ ಜೂನ್ 27ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ರಕ್ಷಿತ್ ತೀರ್ಥಹಳ್ಳಿ ಅವರೇ ಬರೆದ ʼಕಾಡಿನ ನೆಂಟರುʼ ಕಥಾ ಸಂಕಲನದಿಂದ ಆಯ್ದ ಒಂದು ಕಥೆ ʼತಿಮ್ಮನ ಮೊಟ್ಟೆಗಳುʼ ಸಿನಿಮಾವಾಗಿದೆ.


ಬೆಂಗಳೂರು: ರಕ್ಷಿತ್ ತೀರ್ಥಹಳ್ಳಿ ಅವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ʼತಿಮ್ಮನ ಮೊಟ್ಟೆಗಳುʼ ಚಿತ್ರ (Thimmana Mottegalu Movie) ಈ ವಾರ ಜೂನ್ 27ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಚೊಚ್ಚಲ ನಿರ್ಮಾಣದ ಹಾಗೂ ರಕ್ಷಿತ್ ತೀರ್ಥಹಳ್ಳಿ ಅವರೇ ಬರೆದ ʼಕಾಡಿನ ನೆಂಟರುʼ ಕಥಾ ಸಂಕಲನದಿಂದ ಆಯ್ದ ಒಂದು ಕಥೆ ʼತಿಮ್ಮನ ಮೊಟ್ಟೆಗಳುʼ ಸಿನಿಮಾವಾಗಿದೆ.
ಇತ್ತೀಚೆಗೆ ಅಮೆರಿಕದ ಡಲಾಸ್‌ನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಅಲ್ಲಿನ ಜನರು ʼತಿಮ್ಮನ ಮೊಟ್ಟೆಗಳುʼ ಚಿತ್ರ ನೋಡಿ ಫಿದಾ ಆಗಿದ್ದಾರೆ. ಇಲ್ಲೂ ಕೂಡ ನಮ್ಮ ಚಿತ್ರ ಯಶಸ್ವಿಯಾಗಲಿದೆ ಎಂಬ ಭರವಸೆ ಚಿತ್ರತಂಡದ್ದು. ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ʼತಿಮ್ಮನ ಮೊಟ್ಟೆಗಳುʼ ಪ್ರದರ್ಶನಗೊಂಡು ಪ್ರಶಂಸೆ ಹಾಗೂ ಪ್ರಶಸ್ತಿ ಗಳಿಸಿದೆ.

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಮುಂತಾದವರಿದ್ದಾರೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕೆಂಪರಾಜು ಬಿ.ಎಸ್. ಅವರ ಸಂಕಲನ ಹಾಗೂ ಹೇಮಂತ್ ಜೋಯಿಷ್ ಅವರ ಸಂಗೀತ ಸಂಯೋಜನೆ ʼತಿಮ್ಮನ ಮೊಟ್ಟೆಗಳುʼ ಚಿತ್ರಕ್ಕಿದೆ.

ಟ್ರೈಲರ್‌ನಲ್ಲೇ ಕುತೂಹಲ ಮೂಡಿಸಿದ್ದ ʼತಿಮ್ಮನ ಮೊಟ್ಟೆಗಳುʼ
ರಕ್ಷಿತ್ ತೀರ್ಥಹಳ್ಳಿ ಅವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ, ಆದರ್ಶ ಅಯ್ಯಂಗಾರ್ ನಿರ್ಮಾಣದ ʼತಿಮ್ಮನ ಮೊಟ್ಟೆಗಳುʼ ಚಿತ್ರದ (Thimmana Mottegalu Movie) ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಉರಗ ತಜ್ಞ ಗೌರಿ ಶಂಕರ್, ಪ್ರೆಸ್ ಕ್ಲಬ್ ಆಫ್ ಕೌನ್ಸಿಲ್‌ನ ಅಧ್ಯಕ್ಷ ಶಿವಕುಮಾರ್ ನಾಗರನವಿಲೆ ಹಾಗೂ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದರು.

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ್ದ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, ನಾನು ಈ ಚಿತ್ರವನ್ನು ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ್ದೇನೆ. ಈಗಿನ ಪರಿಸ್ಥಿತಿಗೆ ತಕ್ಕಂತಹ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದ್ದರು.
ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಮಾತನಾಡಿ, ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹಾಕಿದ್ದಾರೆ. ನಾನೇ ಬರೆದಿರುವ ʼಕಾಡಿನ ನೆಂಟರುʼ ಕಥಾ ಸಂಕಲನದಿಂದ ಆಯ್ದ ಒಂದು ಕಥೆ ʼತಿಮ್ಮನ ಮೊಟ್ಟೆಗಳುʼ ಸಿನಿಮಾವಾಗಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತು ಚಿತ್ರದ ಪ್ರಮುಖ ಕಥೆಯಿದ್ದು, ಮನುಷ್ಯನಲ್ಲಿರುವ ಹಾಗೆ ಪ್ರಾಣಿಗಳಲ್ಲೂ ಬಾಂಧವ್ಯವಿದೆ. ಈ ತರಹದ ವಿಚಾರಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕರು ಇತ್ತೀಚೆಗೆ ಅಮೇರಿಕಾದ ಡಾಲಸ್‌ನಲ್ಲಿ ಪ್ರಿಮೀಯರ್ ಶೋ ಸಹ ಆಯೋಜಿಸಿದ್ದರು. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಪ್ರಸಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಗಿರುವ ನಮ್ಮ ಚಿತ್ರ ಜೂನ್ 27 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಕೋರಿದ್ದರು.
ಹಿರಿಯ ನಟ ಸುಚೇಂದ್ರ ಪ್ರಸಾದ್ ಮಾತನಾಡಿ, ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ | Monsoon jewel Fashion 2025: ಮಾನ್ಸೂನ್ ಫ್ಯಾಷನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಗಳ ಹಂಗಾಮ!