Karnataka Bandh: ಕರ್ನಾಟಕ ಬಂದ್; ವಾಟಾಳ್ ನಾಗರಾಜ್ ಸೇರಿ ಹಲವು ಕನ್ನಡಪರ ಹೋರಾಟಗಾರರು ವಶಕ್ಕೆ
Karnataka Bandh: ನಾವು ಟೌನ್ ಹಾಲ್ ಮುಂದೆ ಶಾಂತಿಯುತವಾಗಿ ನಡೆಸುತ್ತಿದ್ದೆವು. ನಾವು ಯಾವುದೇ ಹಿಂಸಾಚಾರಕ್ಕೆ ಮುಂದಾಗುತ್ತಿರಲಿಲ್ಲ. ಆದರೂ, ನಮ್ಮನ್ನು ಪ್ರತಿಭಟನೆ ಮಾಡುವುದರಿಂದ ತಡೆಯಲಾಗಿದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಆಕ್ರೋಶ ಹೊರಹಾಕಿದ್ದಾರೆ.


ಬೆಂಗಳೂರು: ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನಾ ಮೆರವಣಿಗೆಗೆ ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ ಗೋವಿಂದು ಸೇರಿ ಅನೇಕ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದಿದ್ದಾರೆ.
ಟೌನ್ ಹಾಲ್ ಬಳಿಯಿಂದ ಹೋರಾಟಗಾರರನ್ನು ಕರೆದೊಯ್ದು ಫ್ರೀಡಂ ಪಾರ್ಕ್‌ನಲ್ಲಿ ಬಿಡಲು ಮುಂದಾದಾಗ ದೊಡ್ಡ ಹೈಡ್ರಾಮವೇ ನಡೆದಿದೆ. ಬಸ್‌ನಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದ ವಾಟಾಳ್ ನಾಗರಾಜ್, ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ಆದರೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಈ ಸರ್ಕಾರ, ಸರ್ಕಾರದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ನಾವು ಟೌನ್ ಹಾಲ್ ಮುಂದೆ ಶಾಂತಿಯುತವಾಗಿ ನಡೆಸುತ್ತಿದ್ದೆವು. ನಾವು ಯಾವುದೇ ಹಿಂಸಾಚಾರಕ್ಕೆ ಮುಂದಾಗುತ್ತಿರಲಿಲ್ಲ. ಆದರೂ, ನಮ್ಮನ್ನು ಪ್ರತಿಭಟನೆ ಮಾಡುವುದರಿಂದ ತಡೆಯಲಾಗಿದೆ. ಸರ್ಕಾರದ ಹಾಗೂ ಪೊಲೀಸರ ಇಂತಹ ಗೂಂಡಾಗಿರಿಗೆ ನಾವು ಬಗ್ಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಟೌನ್ ಹಾಲ್ ಬಳಿ ಮಾತ್ರ ಪ್ರತಿಭಟನೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಸ್‌ನಿಂದ ಇಳಿಯುವುದಿಲ್ಲ. ರಾಜ್ಯ ನೆಲ, ಜಲ, ಭಾಷೆ ಪರ ನಮ್ಮ ಹೋರಾಟ ನಿರಂತರವಾದದ್ದು ಎಂದು ಹೇಳಿದರು.
ಇದಕ್ಕೂ ಮುನ್ನಾ ವಾಟಾಳ್ ನಾಗರಾಜ್ ಅವರ ಮನೆಯಲ್ಲಿ ಸಭೆ ನಡೆಸಿದ ಮುಖಂಡರು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲಾ ಜಿಲ್ಲೆಗಳಲ್ಲಿ ಬಂದ್ ನಡೆದಿದ್ದು, ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿ ಆಗಿದೆ. ಬಂದ್‌ನ ಬೇಡಿಕೆ ಎಲ್ಲವನ್ನೂ ಜನರ ಮುಂದೆ ಸರ್ಕಾರದ ಮುಂದೆ ಇಟ್ಟಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಕಮಿಷನರ್ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಭಾಸ್ಕರ್ ರಾವ್ ರೀತಿ ಇವರು ರಾಜಕೀಯಕ್ಕೆ ಬರುತ್ತಾರೋ ಏನೋ ಗೊತ್ತಿಲ್ಲ. ನನಗೂ ನೊಟೀಸ್ ಕೊಟ್ಟಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಹೋರಾಟ ಮಾಡಿ ಅಂದಿದ್ದಾರೆ. ಟೌನ್ ಹಾಲ್‌ನಲ್ಲಿ ಪರ್ಮಿಷನ್ ಇಲ್ಲ ಅಂದಿದ್ದಾರೆ. ಬಂದ್ ಹತ್ತಿಕ್ಕೋ ಕೆಲಸ ಮಾಡಬಾರದಿತ್ತು ಎಂದು ವಾಗ್ದಾಳಿ ನಡೆಸಿದರು.
Karnataka Bandh: ಇತ್ತ ಕರ್ನಾಟಕ ಬಂದ್, ಅತ್ತ ಕನ್ನಡಿಗರನ್ನು ಬೆದರಿಸಿದವನಿಗೆ ಎಂಇಎಸ್ ಸನ್ಮಾನ!
ನಾವು ಮಾಡಿರೋ ಹೋರಾಟದಲ್ಲಿ ಒಂದು ಹನಿ ನೀರು ಸಿಗದ ರೀತಿ ಆಗಬೇಕಿತ್ತು. ಆದರೂ ಯಶಸ್ಸು ಸಿಕ್ಕಿದೆ. ಹೋಟೆಲ್‌ನವರಿಗೆ ಭಾರಿ ದುರಹಂಕಾರ ಬಂದಿದೆ. ಎಲ್ಲವೂ ಪೊಲೀಸ್ ಕೈಯಲ್ಲೇ ಇದೆ. ತೀರ ಹತ್ತಿಕ್ಕುವ ಮಟ್ಟಕ್ಕೆ ಹೋಗಬಾರದಿತ್ತು. ಆದರೂ ಬಂದ್ ಯಶಸ್ವಿ ಆಗಿದೆ ಎಂದರು.