Laxman Gorlakatte Column: ಜೀವನಕ್ಕೆ ಅನ್ನವೊಂದೇ ಸಾಕೇ ?
ದೇವತೆಗಳೇ ಸ್ತುತಿಪ್ರಿಯರೆಂದ ಮೇಲೆ, ನಮ್ಮಂಥ ಹುಲುಮಾನವರು ‘ಇತರರು ನಮ್ಮನ್ನು ಗುರು ತಿಸಲಿ, ಪ್ರೀತಿಸಲಿ, ಪ್ರಶಂಸಿಸಲಿ’ ಎಂದು ಬಯಸುವುದು ಸಹಜವಲ್ಲವೇ? ಮನೆಯಲ್ಲಾಗಲೀ, ಕಚೇರಿಯಲ್ಲಾಗಲೀ ಯಾರಾದರೂ ಒಳ್ಳೆಯ ಕೆಲಸವನ್ನು ಮಾಡಿದಾಗ, ಅನೇಕರು ಅದನ್ನು ಗುರುತಿಸುವ ಗೋಜಿಗೇ ಹೋಗುವುದಿಲ್ಲ


ಕಿವಿಮಾತೊಂದ, ಹೇಳುವೆ ನಾನಿಂದು...
ಲಕ್ಷ್ಮಣ್ ಗೊರ್ಲಕಟ್ಟೆ, ಮೈಸೂರು
‘ಹಸಿವು’ ಎಂದಾಕ್ಷಣ ಅನ್ನದ ನೆನಪಾಗುವುದು ಸಹಜ. ಮನುಷ್ಯ ಸೇರಿದಂತೆ ಎಲ್ಲಾ ಜೀವಿಗಳಿಗೂ ಆಹಾರ-ನಿದ್ರೆ -ಮೈಥುನ ಮೂಲಭೂತ ಅವಶ್ಯಕತೆಗಳು. ಇವುಗಳಿಲ್ಲದೆ ಜೀವನವೇ ಇಲ್ಲ. ಹಾಗಂತ, ಇವುಗಳಿಂದ ಮಾತ್ರವೇ ಜೀವನ ಸಾಗದು. There is more hunger for love and appreciation in this world, than for bread ಎಂದಿದ್ದಾರೆ ಮದರ್ ತೆರೆಸಾ. ನಿಜ, ಮಾನವನಿಗೆ ಅನ್ನದ ಹಸಿವಿಗಿಂತ ತೀವ್ರತರ ಪ್ರೀತಿ ಮತ್ತು ಮೆಚ್ಚುಗೆಯ ಹಸಿವಿದೆ. ಅಬ್ರಹಾಂ ಮಾಸ್ಲೋ (1908- 1970) ಎಂಬ ಅಮೆರಿ ಕನ್ ಮನಶ್ಶಾಸ್ತ್ರಜ್ಞರು, “ಆಹಾರ-ನಿದ್ರೆ-ಮೈಥುನದಂಥ ಮೂಲಭೂತ ಅವಶ್ಯಕತೆಗಳನ್ನು ದಕ್ಕಿಸಿ ಕೊಂಡ ನಂತರ, ಮನುಷ್ಯನಿಗೆ ಸುರಕ್ಷತೆ, ಭದ್ರತೆ, ಪ್ರೀತ್ಯಾದರ, ಮೆಚ್ಚುಗೆ, ಸನ್ಮಾನಗಳು ದೊರಕಿದಾಗ ಮಾತ್ರ ಅವನ ಜೀವನ ಪರಿಪೂರ್ಣ ವಾದೀತು" ಎಂದು ಪ್ರತಿಪಾದಿಸಿದ್ದಾರೆ.
ಈ ಅವಶ್ಯಕತೆಗಳನ್ನು ಒಂದು ಪಿರಮಿಡ್ ರೀತಿ ಯಲ್ಲಿ ಗುರುತಿಸಲಾಗಿದ್ದು ಅದನ್ನು ‘ಮಾಸ್ಲೋ ಕೋಷ್ಟಕ’ ಎಂದು ಕರೆಯಲಾಗುತ್ತದೆ. ಈ ಪಿರಮಿಡ್‌ನ ತಳಹದಿಯಲ್ಲಿ ಮೂಲಭೂತ ಅವಶ್ಯಕತೆ ಗಳು, ಅವುಗಳ ಮೇಲೆ ಸುರಕ್ಷತೆ, ಭದ್ರತೆ, ಪ್ರೀತ್ಯಾದರ, ಸನ್ಮಾನ, ಪ್ರಶಂಸೆಗಳ ಅವಶ್ಯಕತೆಗಳನ್ನು ಗುರುತಿಸಿ, ಮಾನವನು ಜೀವನ ಸಾಫಲ್ಯದ ಈ ಮೆಟ್ಟಿಲುಗಳನ್ನು ಏರುವುದರ ಅಗತ್ಯವನ್ನು ಬಿಂಬಿಸಲಾಗಿದೆ.
ಇದನ್ನೂ ಓದಿ: Roopa Gururaj Column: ಸಿಟ್ಟು ಎರಡು ಬದಿಯ ಗರಗಸದಂತೆ
ಮೆಚ್ಚುಗೆ-ಪ್ರಶಂಸೆಗಳು ಮನುಷ್ಯರಿಗಷ್ಟೇ ಅಲ್ಲದೆ ದೇವಾನುದೇವತೆಗಳಿಗೂ ಇಷ್ಟ (ಅಥವಾ ಹಾಗಂತ ನಮ್ಮ ನಂಬಿಕೆ!). ಅದಕ್ಕೆಂದೇ ಹಿಂದೂಗಳು ಗಣಪತಿ, ವಿಷ್ಣು, ಶಿವ, ಲಕ್ಷ್ಮಿ ಮುಂತಾದ ಇಷ್ಟದೈವಗಳನ್ನು ಅಷ್ಟೋತ್ತರ ನಾಮಾವಳಿ, ಸಹಸ್ರನಾಮಗಳಿಂದ ಸ್ತುತಿಮಾಡಿದರೆ, ಕ್ರೈಸ್ತರು Job Satisfaction ಅಂತಲೂ, ಮುಸಲ್ಮಾನರು ‘ಅಲ್ಲಾಹು ಅಕ್ಬರ್’ ಅಂತಲೂ ಪ್ರಾರ್ಥನೆ ಮಾಡುತ್ತಾರೆ.
ದೇವತೆಗಳೇ ಸ್ತುತಿಪ್ರಿಯರೆಂದ ಮೇಲೆ, ನಮ್ಮಂಥ ಹುಲುಮಾನವರು ‘ಇತರರು ನಮ್ಮನ್ನು ಗುರು ತಿಸಲಿ, ಪ್ರೀತಿಸಲಿ, ಪ್ರಶಂಸಿಸಲಿ’ ಎಂದು ಬಯಸುವುದು ಸಹಜವಲ್ಲವೇ? ಮನೆಯಲ್ಲಾಗಲೀ, ಕಚೇರಿ ಯಲ್ಲಾಗಲೀ ಯಾರಾದರೂ ಒಳ್ಳೆಯ ಕೆಲಸವನ್ನು ಮಾಡಿದಾಗ, ಅನೇಕರು ಅದನ್ನು ಗುರುತಿಸುವ ಗೋಜಿಗೇ ಹೋಗುವುದಿಲ್ಲ.
ಗುರುತಿಸಿದರೂ, ಸಂಬಂಧಿಸಿದವರಿಗೊಂದು ಮೆಚ್ಚುಗೆಯ ಮಾತನ್ನು ರವಾನಿಸುವುದಕ್ಕೆ ಜಿಪುಣತನ ತೋರುತ್ತಾರೆ. ಮತ್ತೊಂದೆಡೆ, ಮನಸ್ಸಿನಲ್ಲೇ ಮೆಚ್ಚಿಕೊಂಡು ಬಾಯಿಬಿಟ್ಟು ಹೇಳುವುದಕ್ಕೆ ಹಿಂದು-ಮುಂದು ನೋಡುವವರೂ ಸಾಕಷ್ಟಿದ್ದಾರೆ! ಮಡದಿ ಮಾಡಿ ಬಡಿಸಿದ ಅಡುಗೆಯನ್ನು, ಪತಿಯು ಕುಟುಂಬ ನಿರ್ವಹಣೆಗೆ ಪಡುವ ಶ್ರಮವನ್ನು, ಮಕ್ಕಳ ಸನ್ನಡತೆಯನ್ನು ಗುರುತಿಸಿ ಕಾಲಾನುಕಾಲಕ್ಕೆ ಒಂದೊಳ್ಳೆಯ ಮಾತನ್ನು ಆಡಬೇಕಲ್ಲವೇ? ನೌಕರರು ಮಾಡಿದ ಕೆಲಸ ತೃಪ್ತಿದಾಯಕ ವಾಗಿದ್ದಲ್ಲಿ ಅದನ್ನು ತತ್ಕ್ಷಣ ಗುರುತಿಸಿ ಎಲ್ಲರೆದುರು ಪ್ರಶಂಸಿಸುವುದು ಯಾವುದೇ ಕಚೇರಿ ಅಥವಾ ಕಾರ್ಯ ಕ್ಷೇತ್ರದಲ್ಲಿ ಮೇಲಧಿಕಾರಿಗಳು/ಧಣಿಗಳು ಎನಿಸಿಕೊಂಡ ವರು ಅನುಸರಿಸಬೇಕಾದ ಒಂದು ಉತ್ತಮ ವಾದ ಮೇಲ್ಪಂಕ್ತಿ.
ಉದ್ಯೋಗಿಗಳು ಬರೀ ಸಂಬಳಕ್ಕಷ್ಟೇ ಕೆಲಸ ಮಾಡುವುದಿಲ್ಲ. Praise the Lord ಅಥವಾ ಉದ್ಯೋಗ ತೃಪ್ತಿಯೂ ಅವರಿಗೆ ಬಹುಮುಖ್ಯ. ತಾವು ಮಾಡಿದ ಉತ್ತಮ ಕೆಲಸಕ್ಕೆ ಮೇಲಿನವರಿಂದ ದಕ್ಕಿದ ಮೆಚ್ಚುಗೆಯ ಮಾತುಗಳು ಉದ್ಯೋಗಿ ಗಳಲ್ಲಿ ಹೊಸಶಕ್ತಿಯನ್ನು ತುಂಬುತ್ತವೆ. ಇದರಿಂದಾಗಿ ಅವರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇಂಥ ಅನುಭೂತಿಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ...ಮೆಚ್ಚುಗೆ ವ್ಯಕ್ತಪಡಿಸೋದು ಎಂದಾಕ್ಷಣ, “ನೀನೇ ಇಂದ್ರ, ನೀನೇ ಚಂದ್ರ" ಅಂತ ಬಹುಪರಾಕ್ ಹೇಳುವುದಲ್ಲ.
ವ್ಯಕ್ತಿಯನ್ನು ವಿಶೇಷಣಗಳಿಂದ ಹೊಗಳುವುದಕ್ಕಿಂತ, ಆತ ಮಾಡಿದ ಕೆಲಸ ಯಾವ ರೀತಿಯಲ್ಲಿ ಉತ್ತಮ ವಾಗಿದೆ ಎಂಬುದನ್ನು ವಿವರಿಸಬೇಕು. ಮೆಚ್ಚುಗೆ ಪ್ರಾಮಾಣಿಕವಾಗಿರಬೇಕು, ಅತಿಶಯೋಕ್ತಿ ಸಲ್ಲದು. ಹಾಗೆ ಮೆಚ್ಚುಗೆಗೆ ಒಳಗಾದ ವ್ಯಕ್ತಿಯು ನಮಗೆ ಆಪ್ತರಾಗಿದ್ದರೆ, ಪ್ರಶಂಸೆಯ ಜತೆಜತೆಗೆ ನ್ಯೂನತೆ ಏನಾದರೂ ಇದ್ದರೆ ಅದನ್ನೂ ನಯವಾಗಿ ತಿಳಿಹೇಳುವುದು ಅವಶ್ಯಕ.
ಉದಾಹರಣೆಗೆ, ಯಾರದ್ದಾದರೂ ಬರವಣಿಗೆ ಅಂದವಾಗಿದ್ದರೆ, “ನೀವು ತುಂಬಾ ದುಂಡಗೆ ಬರೀತೀರಿ ಕಣ್ರೀ, ನೋಡೋಕ್ಕೇ ಒಂಥರಾ ಖುಷಿಯಾಗುತ್ತೆ" ಅಂತ ಸಹಜ ದನಿಯಲ್ಲೇ ಶ್ಲಾಘಿಸಬೇಕು; ಜತೆಗೆ ನ್ಯೂನತೆ ಯೇನಾದರೂ ಇದ್ದಲ್ಲಿ, “ಆದರೆ, ಕಾಗುಣಿತದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ರೀ.." ಎಂದು ನಯವಾಗಿ ಹೇಳುವ ಮೂಲಕ ಅದನ್ನು ಅವರ ಗಮನಕ್ಕೆ ತರಬೇಕು.
ಮೆಚ್ಚುಗೆ ವ್ಯಕ್ತಪಡಿಸುವುದಕ್ಕಿರುವ ಒಂದಷ್ಟು ಮಾರ್ಗೋಪಾಯಗಳ ಕಡೆಗೆ ಈಗ ಕಣ್ಣು ಹಾಯಿ ಸೋಣ: ಹಸನ್ಮುಖಿಯಾಗಿದ್ದುಕೊಂಡು ವ್ಯಕ್ತಿಯನ್ನು ಅವರ ಹೆಸರು ಹಿಡಿದು ಕರೆಯಬೇಕಾದ್ದು ಮುಖ್ಯ; ಏಕೆಂದರೆ, ವ್ಯಕ್ತಿಯೊಬ್ಬರಿಗೆ ಅತ್ಯಂತ ಪ್ರಿಯವಾಗುವ ಮಾತೆಂದರೆ ಮತ್ತೊಬ್ಬರ ಬಾಯಲ್ಲಿ ತಮ್ಮ ಹೆಸರನ್ನು ಕೇಳಿಸಿ ಕೊಳ್ಳುವುದು!
ವ್ಯಕ್ತಿಯ ಜತೆ ಮಾತನಾಡುವಾಗ ಮುಖ ಕೊಟ್ಟು (Eye contact ) ಸಂವಹಿಸಬೇಕು. ಥ್ಯಾಂಕ್ಸ್/ಧನ್ಯವಾದ ಹೇಳುವಾಗ ನಮ್ಮ ಮಾತುಗಳು ಯಾಂತ್ರಿಕವಾಗಿರದೆ, ಅವಕ್ಕೆ ಜೀವತುಂಬಿಸಿ ಹೊಮ್ಮಿಸ ಬೇಕು. ಆ ಮಾತು ಕೇವಲ ತುಟಿಯಿಂದಷ್ಟೇ ಅಲ್ಲದೆ, ಹೃದಯಾಂತರಾಳದಿಂದ ಚಿಮ್ಮಬೇಕು. ಮಾತುಗಳಿಗೆ ತಕ್ಕಂಥ ಹಾವಭಾವಗಳೂ ( body language) ಅತ್ಯಗತ್ಯ. ಜತೆಗೆ, ಮಾತಿನಲ್ಲಿ ಅಗತ್ಯದ ಏರಿಳಿತಗಳೂ ( Voice modulation) ಇದ್ದಲ್ಲಿ ಮಾತು ಭಾವಪೂರ್ಣವಾಗುತ್ತದೆ.
ಕೈಜೋಡಿಸಿ ನಮಸ್ಕರಿಸುವುದು ಅಥವಾ ಹಸ್ತಲಾಘವ ನೀಡುವುದು ಮೆಚ್ಚುಗೆಯನ್ನು ಸೂಚಿಸುವ ಸರಳ ವಿಧಾನಗಳಲ್ಲಿ ಸೇರಿವೆ; ಈ ಪೈಕಿ ಯಾವುದನ್ನು ಅನುಸರಿಸಬೇಕು ಎಂಬುದು, ನಾವು ಭೇಟಿಯಾಗುವ ವ್ಯಕ್ತಿ ಯಾರು ಎಂಬುದನ್ನು ಅವಲಂಬಿಸಿರುತ್ತದೆ. ಕಿರಿಯರಿಗೆ ‘ಭೇಷ್’ ಎಂದು ಬೆನ್ನು ತಟ್ಟುವುದು ಪ್ರಶಂಸೆಯ ಇನ್ನೊಂದು ರೀತಿ; ಮಕ್ಕಳು ತೀರಾ ಹೆಚ್ಚಿನ ಅವಧಿಯವರೆಗೆ ಟಿವಿ ವೀಕ್ಷಣೆಯಲ್ಲಿ ತೊಡಗಿದ್ದಾಗ, “ಟಿವಿ ಆಫ್ ಮಾಡು, ಓದಿಕೋ ಹೋಗು" ಎಂದು ದೊಡ್ಡವರು ಗದರುವುದು ಸಾಮಾನ್ಯ. ಈ ಮಾತನ್ನು ಮಕ್ಕಳು ಅನುಸರಿಸುತ್ತಿದ್ದಂತೆ ಅದನ್ನೂ ಗುರುತಿಸಿ ಶ್ಲಾಘಿಸಬೇಕು.
ಹೀಗೆ ಮಾಡಿದಲ್ಲಿ, ಮಕ್ಕಳು ಸನ್ನಡತೆಯನ್ನು ಮುಂದುವರಿಸುತ್ತಾರೆ, ತನ್ಮೂಲಕ ಮತ್ತಷ್ಟು ಮೆಚ್ಚುಗೆ ಗಳಿಸಲು ತವಕಿಸುತ್ತಾರೆ. ಮೆಚ್ಚುಗೆಯ ಮಾತುಗಳನ್ನು ಎಲ್ಲರೆದುರೇ ಆಡಿಬಿಡಿ, ಆದರೆ ಟೀಕೆ-ಟಿಪ್ಪಣಿ ಮಾತ್ರ ಗೋಪ್ಯವಾಗಿರಲಿ, ಖಾಸಗಿ ನೆಲೆಗಟ್ಟಿನಲ್ಲಿರಲಿ. ನೆನಪಿಡಿ, ದೊಡ್ಡ ವ್ಯಕ್ತಿ ಗಳಿಗೂ, ಯಶಸ್ಸು ಗಳಿಸಿದವರಿಗೂ ಮೆಚ್ಚುಗೆಯ ಮಾತುಗಳು ಅವಶ್ಯಕ. ಅವರೇನೂ ದೇವರಿಗಿಂತ ದೊಡ್ಡವರಲ್ಲ, ಅಲ್ಲವೇ?! ನಿತ್ಯವೂ ನಮ್ಮೊಂದಿಗೆ ಕೆಲಸ ಮಾಡುವ ಅಥವಾ ವ್ಯವಹರಿಸುವ ವ್ಯಕ್ತಿಗಳಲ್ಲಿನ ಏನಾದರೊಂದು ಒಳ್ಳೆಯ ಅಂಶವನ್ನು ಹೆಕ್ಕಿ ತೆಗೆದು, ಅದನ್ನು ಮೆಚ್ಚಿಕೊಂಡು, ಅವರಿಗೆ ಅಚ್ಚರಿ- ಸಂತಸ ಆಗುವ ರೀತಿಯಲ್ಲಿ ಅದನ್ನು ವ್ಯಕ್ತಪಡಿಸುವ ಅಭ್ಯಾಸವನ್ನು ರೂಢಿಸಿ ಕೊಳ್ಳಬೇಕು.
ಯಾವುದೇ ಕಚೇರಿ, ವ್ಯಾಪಾರ-ವ್ಯವಹಾರದ ತಾಣವನ್ನು ಪ್ರವೇಶಿಸುವ ಮುನ್ನ, ದ್ವಾರದಲ್ಲಿ ನಿಂತಿರಬಹುದಾದ ದ್ವಾರಪಾಲಕ/ಸಿಬ್ಬಂದಿಯೆಡೆಗೂ ಒಂದು ಹೂನಗೆ ಚೆಲ್ಲಿ, ಇಗೊ ಅಥವಾ ಬಿಗುಮಾನವನ್ನು ಬಿಟ್ಟು ‘ನಮಸ್ತೆ’ ಎನ್ನಿ. ವಯಸ್ಸಿನಲ್ಲಿ ತುಂಬಾ ಚಿಕ್ಕವರಾದರೆ ಒಮ್ಮೆ ಮುಗು ಳ್ನಕ್ಕು ‘ಹಾಯ್, ಹಲೋ’ ಎನ್ನಲಡ್ಡಿಯಿಲ್ಲ. ಈ ಸೂತ್ರಗಳು ಸೇರಿದಂತೆ, ನಿಮ್ಮ ಗ್ರಹಿಕೆಗೆ ಬರುವ ಇನ್ನಾವುದೇ ಸಕಾರಾತ್ಮಕ ವರ್ತನೆಯನ್ನು ರೂಢಿಸಿಕೊಂಡು ಪಾಲಿಸಿದರೆ ಬದುಕು ಸೊಗಸು, ಎದುರಿರುವವರಿಗೂ ಪುಳಕ. ಏಕೆಂದರೆ, ಜೀವಿಸಲು ಅನ್ನವೊಂದೇ ಸಾಲದು, ಅಲ್ಲವೇ?!
(ಲೇಖಕರು ಹವ್ಯಾಸಿ ಬರಹಗಾರರು)