Operation Sindoor: ಭಾರತದಲ್ಲಿ 'ಕರಾಚಿ ಬೇಕರಿʼ ಹೆಸರಿನ ಮಳಿಗೆಗೆ ಪ್ರತಿರೋಧ; ಏನಿದರ ಹಿನ್ನೆಲೆ?
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ (Operation Sindoor) ನಡುವೆ ಕರಾಚಿ ಬೇಕರಿ (Karachi Bakery) ಪ್ರತಿಭಟನೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ, ಪುಲ್ವಾಮಾ ದಾಳಿಯ ನಂತರ ಹೆಸರು ಬದಲಾಯಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಹೈದರಾಬಾದ್ ಮೂಲದ ಬೇಕರಿ ಸರಪಳಿಯ ಅಂಗಡಿಗೆ ಜನರು ನುಗ್ಗಿದ್ದರು.

ಕರಾಚಿ ಬೇಕರಿ

ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಗೆ (Pahalgam terror attack) ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಒಳಗಿನ 9 ಭಯೋತ್ಪಾದಕ ನೆಲೆಗಳನ್ನು ನಾಶ ಮಾಡಿರುವ ಆಪರೇಷನ್ ಸಿಂದೂರ್ (Operation Sindoor) ಇದೀಗ ಮುಂದುವರಿದಿದ್ದು, ಭಾರತದಲ್ಲಿ ಪಾಕಿಸ್ತಾನದ ಕುರಿತ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ʼಕರಾಚಿ ಬೇಕರಿʼ (Karachi Bakery) ಎಂಬ ಬ್ರಾಂಡ್ ಹೆಸರಿನ ಬೇಕರಿ ಸರಪಳಿಯ ಔಟ್ಲೆಟ್‌ಗಳ ಮೇಲೆ ಕೆಲವು ಹಿಂದೂ ಕಾರ್ಯಕರ್ತರು ದಾಳಿ ಮಾಡಿದ್ದು, ಈ ಹೆಸರನ್ನು ತೆಗೆಯಬೇಕೆಂದು ಒತ್ತಾಯಿಸಿದ ಘಟನೆ ನಡೆದಿದೆ.
ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆದರೆ ತಮ್ಮ ಬೇಕರಿ ಪಾಕ್ ಮೂಲದ್ದಲ್ಲ ಎಂದು ಬೇಕರಿ ಮಾಲಿಕರು ಸ್ಪಷ್ಟಪಡಿಸಿದ್ದಾರೆ. ʼಕರಾಚಿ ಬೇಕರಿʼ ಮೂಲತಃ ಹೈದರಾಬಾದ್ ಮೂಲದ್ದಾಗಿದ್ದು, ಹಿಂದೂಗಳದೇ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ, ಕೆಲ ಕಾರ್ಯಕರ್ತರ ಗುಂಪುಗಳು ಬೇಕರಿ ಸರಪಳಿಯ ಔಟ್ಲೆಟ್ ಮೇಲೆ ದಾಳಿ ಮಾಡಿ ಅದರ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸುತ್ತಿರುವುದನ್ನು ತೋರಿಸಿವೆ. ಭಾರತದ ಅಂಗಡಿಯಲ್ಲಿ ಪಾಕಿಸ್ತಾನದ ನಗರದ ಹೆಸರನ್ನು ಇಡಬಾರದು ಎಂದು ಈ ಕಾರ್ಯಕರ್ತರು ವಾದಿಸಿದರು.
ಈ ಘಟನೆಯ ಬಳಿಕ ಬೇಕರಿಯ ಮಾಲೀಕರು ಅಂಗಡಿಯ ಹೆಸರಿನ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. 1947ರ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಖಾನ್ಚಂದ್ ರಾಮನಾನಿ ಎಂಬವರು 1953ರಲ್ಲಿ ಈ ಬೇಕರಿಯನ್ನು ಸ್ಥಾಪಿಸಿದರು. ಅವರು ತಮ್ಮ ಅಜ್ಜ ಎಂದು ಅಂಗಡಿ ಎಂದು ಮಾಲೀಕರಾದ ರಾಜೇಶ್ ಮತ್ತು ಹರೀಶ್ ರಮಾನಾನಿ ತಿಳಿಸಿದ್ದಾರೆ. ಇದಾಗಿ 73 ವರ್ಷಗಳಾಗಿವೆ. ನಮ್ಮ ಅಜ್ಜ ವಿಭಜನೆಯ ನಂತರ ಭಾರತಕ್ಕೆ ಬಂದ ಕಾರಣ ಅದಕ್ಕೆ ಕರಾಚಿ ಎಂದು ಹೆಸರಿಟ್ಟರು ಎಂದು ಅವರು ತಿಳಿಸಿದರು.
ಹೆಸರಿನಲ್ಲಿ ಯಾವುದೇ ಬದಲಾವಣೆ ಮಾಡಿಸದಂತೆ ತಡೆಯಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಆಡಳಿತದ ಹಿರಿಯ ಅಧಿಕಾರಿಗಳನ್ನು ನಾವು ವಿನಂತಿಸುತ್ತೇವೆ. ನಗರದಾದ್ಯಂತ ಜನರು ನಮ್ಮ ಬೇಕರಿಯ ಅಂಗಡಿಗಳಲ್ಲಿ ತ್ರಿವರ್ಣ ಧ್ವಜವನ್ನು ಹಾಕುತ್ತಿದ್ದಾರೆ. ನಾವು ಭಾರತೀಯ ಬ್ರ್ಯಾಂಡ್ ಆಗಿರುವುದರಿಂದ ದಯವಿಟ್ಟು ನಮ್ಮನ್ನು ಬೆಂಬಲಿಸಿ. ನಾವು ಪಾಕಿಸ್ತಾನಿ ಬ್ರ್ಯಾಂಡ್ ಅಲ್ಲ- ಎಂದು ಮಾಲೀಕರು ಒತ್ತಿ ಹೇಳಿದರು.
ಸೋಶಿಯಲ್ ಮೀಡಿಯಾ ಬಳಕೆದಾರರು ಸಹ ಮಾಲೀಕರಿಗೆ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. "ಮಾಲೀಕರು ಕರಾಚಿಯಿಂದ ಭಾರತಕ್ಕೆ ಬಂದ ಸಿಂಧಿ. ದಯವಿಟ್ಟು ವಿರೋಧ ಮಾಡಬೇಡಿ" ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, "ಇದು ಮೂರ್ಖತನ. ವಿಭಜನೆಯ ಸಮಯದಲ್ಲಿ ಕರಾಚಿಯಿಂದ ಹೊರಬಂದ ಸಿಂಧಿಗಳು, ಪಾರ್ಸಿಗಳು ಇಲ್ಲಿ ಇದ್ದಾರೆ. ವಾಸ್ತವವಾಗಿ, ಕರಾಚಿವಾಲಾ ಉಪನಾಮಗಳನ್ನು ಹೊಂದಿರುವ ಜನರಿದ್ದಾರೆ. ನೀವು ಜನರ ಮೇಲೆ ದಾಳಿ ಮಾಡುವುದಲ್ಲ. ನಮ್ಮ ಸಶಸ್ತ್ರ ಪಡೆಗಳು ಗಡಿಯಲ್ಲಿ ನಮ್ಮ ಶತ್ರುಗಳೊಂದಿಗೆ ವ್ಯವಹರಿಸಲಿ ಮತ್ತು ಅವರಿಗಾಗಿ ಪ್ರಾರ್ಥಿಸಲಿ" ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕರಾಚಿ ಬೇಕರಿ ಪ್ರತಿಭಟನೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ, ಪುಲ್ವಾಮಾ ದಾಳಿಯ ನಂತರ ಹೆಸರು ಬದಲಾಯಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಹೈದರಾಬಾದ್ ಮೂಲದ ಬೇಕರಿ ಸರಪಳಿಯ ಅಂಗಡಿಗೆ ಜನರು ನುಗ್ಗಿದ್ದರು.
ಆ ಸಮಯದಲ್ಲಿ, ಬೇಕರಿಯು ತನ್ನ ಮೂಲವನ್ನು ಸ್ಪಷ್ಟಪಡಿಸುವ ಹೇಳಿಕೆ ನೀಡಿತು. "ಕರಾಚಿ ಬೇಕರಿಯ ಸಾರವು ಸಂಪೂರ್ಣವಾಗಿ ಭಾರತೀಯವಾಗಿದೆ ಮತ್ತು ಅದು ಹಾಗೆಯೇ ಇರುತ್ತದೆ. ಯಾವುದೇ ರೀತಿಯ ತಪ್ಪು ಕಲ್ಪನೆಗಳಿಂದ ದೂರವಿರಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ" ಎಂದು ಒತ್ತಿ ಹೇಳಿತು.
ಇದನ್ನೂ ಓದಿ: Operation Sindoor: ಕಾಶ್ಮೀರದ ಉರಿಯಲ್ಲಿ ಪಾಕ್ ಶೆಲ್ ದಾಳಿ, ಮಹಿಳೆ ಸಾವು