ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

‌Yagati Raghu Nadig Column: ಬಿತ್ತಿದಂತೆ ಬೆಳೆ !

ಆಲೂಪ್ರಸಾದ್ ಜಾಧವ್ ಒಬ್ಬ ಚೋರಶಿ ಖಾಮಣಿ. ಪಿಕ್‌ ಪಾಕೆಟ್ ಮಾಡೋದ್ರಲ್ಲಿ ಆತ ಬೆಂಗ ಳೂರಿನ ಕಲಾಸಿಪಾಳ್ಯದಲ್ಲಿಯೇ ‘ವರ್ಲ್ಡ್ ಫೇಮಸ್ಸು’. ಎರಡು ತಿಂಗಳ ಜೈಲುಶಿಕ್ಷೆಯನ್ನು ಮುಗಿಸಿಕೊಂಡು ಆಗಷ್ಟೇ ಹೊರ ಬಂದಿದ್ದ ಆಲೂ, ತನ್ನ ‘ಕೈಚಳಕ’ವನ್ನು ತೋರಿಸಲೆಂದು ಜನದಟ್ಟಣೆಯಿರುವ ಸ್ಥಳಗಳನ್ನು ಹುಡುಕಿಕೊಂಡು ಹೊರಟು ಕೆಂಪೇ ಗೌಡ ರಸ್ತೆಗೆ ಬಂದ. ಅಂದೇ ಸಂತೋಷ್ ಚಿತ್ರಮಂದಿರದಲ್ಲಿ ಸೂಪರ್‌ಸ್ಟಾರ್ ಒಬ್ಬರ ಸಿನಿಮಾ ರಿಲೀಸಾಗಿತ್ತು

‌Yagati Raghu Nadig Column: ಬಿತ್ತಿದಂತೆ ಬೆಳೆ !

Profile Ashok Nayak Feb 19, 2025 12:08 PM

ವಿವಿಧ ವಿನೋದಾವಳಿ...

ಯಗಟಿ ರಘು ನಾಡಿಗ್

ಆಲೂಪ್ರಸಾದ್ ಜಾಧವ್ ಒಬ್ಬ ಚೋರಶಿ ಖಾಮಣಿ. ಪಿಕ್‌ ಪಾಕೆಟ್ ಮಾಡೋದ್ರಲ್ಲಿ ಆತ ಬೆಂಗಳೂರಿನ ಕಲಾಸಿಪಾಳ್ಯದಲ್ಲಿಯೇ ‘ವರ್ಲ್ಡ್ ಫೇಮಸ್ಸು’. ಎರಡು ತಿಂಗಳ ಜೈಲುಶಿಕ್ಷೆ ಯನ್ನು ಮುಗಿಸಿಕೊಂಡು ಆಗಷ್ಟೇ ಹೊರ ಬಂದಿದ್ದ ಆಲೂ, ತನ್ನ ‘ಕೈಚಳಕ’ವನ್ನು ತೋರಿ ಸಲೆಂದು ಜನದಟ್ಟಣೆಯಿರುವ ಸ್ಥಳಗಳನ್ನು ಹುಡುಕಿಕೊಂಡು ಹೊರಟು ಕೆಂಪೇ ಗೌಡ ರಸ್ತೆಗೆ ಬಂದ. ಅಂದೇ ಸಂತೋಷ್ ಚಿತ್ರಮಂದಿರದಲ್ಲಿ ಸೂಪರ್‌ಸ್ಟಾರ್ ಒಬ್ಬರ ಸಿನಿಮಾ ರಿಲೀಸಾಗಿತ್ತು. ತನ್ನ ‘ಕೈಕೆಲಸ’ಕ್ಕೆ ಇದೇ ಸರಿಯಾದ ಜಾಗವೆಂದು ನಿರ್ಧರಿಸಿದ ಆಲೂ, ಬಾಲ್ಕನಿ ಟಿಕೆಟ್ ತೆಗೆದುಕೊಳ್ಳಲು ನಿಂತಿದ್ದವರ ಜತೆ ತಾನೂ ಕ್ಯೂನಲ್ಲಿ ನಿಂತ. ಆತ ಟಿಕೆಟ್ ತೆಗೆದುಕೊಳ್ಳು ವವನಂತೆ ನಾಟಕವಾಡಿ, ಸಿಕ್ಕಾಪಟ್ಟೆ ರಷ್‌ನಲ್ಲಿ ತಳ್ಳಾಟವಾಡಿ ಕ್ಯೂ ನಿಂದ ಹೊರಬರು ವಷ್ಟರಲ್ಲಿ ಸಾಕಷ್ಟು ಜೇಬುಗಳ ‘ಕಟಾವೂ’ ಆಗಿತ್ತು. ಎಣಿಸಿ ನೋಡಿದರೆ 1500 ರುಪಾಯಿ ಗಳ ಭರ್ಜರಿ ಇಳುವರಿ ಬಂದಿತ್ತು.

ಇದನ್ನೂ ಓದಿ: Yagati Raghu Nadig Column: ಖಳನಾಯಕನಾಗಲು ಕಥಾನಾಯಕನ ಕಸರತ್ತು.. !

‘ಶುಕ್ರವಾರ ಬೇರೇ... ಪರವಾಗಿಲ್ಲವೇ, ಲಕ್ಷ್ಮೀ ಕಟಾಕ್ಷ ಚೆನ್ನಾಗೇ ಇದೆ!’ ಅಂತ ಹೇಳಿಕೊಂಡು ತನಗೆ ತಾನೇ ಬೆನ್ನು ತಟ್ಟಿಕೊಂಡ ಆಲೂ, ‘ಜೈಲಿನಲ್ಲಿ ಮುದ್ದೆ ಮುರಿದೂ ಮುರಿದೂ ಬೇಜಾರಾಗಿದೆ. ಒಂದೆರಡು ಮಸಾಲೆ ದೋಸೆಯನ್ನಾದರೂ ಮೆತ್ತೋಣ’ ಎಂದುಕೊಂಡು ಹೋಟೆಲ್ ವಿಷ್ಣು ಭವನದತ್ತ ಹೆಜ್ಜೆ ಹಾಕಲು ಮನಸ್ಸು ಮಾಡಿದ.

ಯಾವುದಾದರೂ ‘ಅನುಭವಿ’ ಹದ್ದಿನ ಕಣ್ಣುಗಳು ತನ್ನನ್ನು ಗುರುತಿಸಿ ಹಿಡಿಯುವ ಮುಂಚೆ ಯೇ ಥಿಯೇಟರ್ ಆವರಣದಲ್ಲಿನ ಜನದಟ್ಟಣೆಯಿಂದ ಕಳಚಿಕೊಳ್ಳಬೇಕು ಎಂದು ಕೊಂಡು ಜನರನ್ನೆಲ್ಲಾ ತಳ್ಳಿಕೊಂಡೇ ಆಲೂ ನಡೆಯುತ್ತಿರುವಾಗ, ಅವನ ಪ್ಯಾಂಟಿನ ಜೇಬಿನ ಬಳಿ ಏನೋ ಸರಿದಾಡಿದಂತಾಯಿತು. ಎಷ್ಟೆಂದರೂ ಜೇಬಿನ ವಿಷಯದಲ್ಲಿ ಆತ ‘ಪಕ್ಕಾ ಪ್ರೊಫೆಷನಲ್’ ಅಲ್ಲವೇ?!

ಹೀಗಾಗಿ, ‘ನಾನೇ 420, ನನ್ನ ಜೇಬಿಗೇ ಕೈಹಾಕುವ 840 ಯಾರಪ್ಪಾ’ ಅಂದುಕೊಂಡು, ಕೈ ಸರಿದಾಡಿ ದಂತಾದ ಸ್ಥಳಕ್ಕೆ ‘ಲಪಕ್ಕನೇ’ ಕೈಹಾಕಿದ... ಎಸ್... ಅವನ ಊಹೆ ನಿಜವಾಗಿತ್ತು. ಅವನ ಜೇಬಿಗೂ ಕತ್ತರಿ ಬೀಳೋದ್ರಲ್ಲಿತ್ತು. ಆ ಇನ್ನೊಂದು ಕೈಯನ್ನು ಹಿಡಿದೆಳೆದಾಗ ಕಂಡಿದ್ದು ಒಬ್ಬಳು ಸುಂದರವಾದ ಹುಡುಗಿ!

ಹಾಗಂತ ಅವನು ಆಕೆಗೆ ತಪರಾಕಿ ಕೊಡುವಂತಿರಲಿಲ್ಲ. ಏಕೆಂದರೆ, ಆ ಹುಡುಗಿಯೂ ಅವನ ಕಸುಬಿನವಳೇ, ಜತೆಗೆ ಸುರಸುಂದರಿ ಬೇರೇ! ‘ನೀ ಏನಾದರೂ ನನ್ನ ಕಳ್ಳತನಕ್ಕೆ ಏಟು ಕೊಟ್ಟರೆ, ನಿನ್ನಿಂದ ಜೇಬು ಕಟಾವಿಗೆ ಒಳಗಾದ 15 ಮಂದಿಯನ್ನೂ ಕೂಗಿ ಕರೆದು ನಿನ್ನನ್ನು ಹಿಡಿಸಿಬಿಡುವೆ’ ಎಂಬಂತಿತ್ತು ಅವಳ ‘ಬ್ಲ್ಯಾಕ್‌ಮೇಲ್’ ಮುಖ ಭಾವ. ಹಾಗಂತ ಬಿಡುವ ಹಾಗೂ ಇಲ್ಲ... 1500 ರುಪಾಯಿಗಳ ಇಳುವರಿ!!

ಕಣ್ಸನ್ನೆಯಲ್ಲೇ ಅವಳನ್ನು ಥಿಯೇಟರ್ ಆವರಣ ದಿಂದ ಹೊರಗೆ ಕರೆದುಕೊಂಡು ಬಂದ ನಮ್ಮ ಕಥಾನಾಯಕ ಆಲೂಪ್ರಸಾದ್ ಜಾಧವ್, ಅವಳ ಇಂಗ್ಲಿಷ್ ಲುಕ್ಕು ಮತ್ತು ಚಮಕ್ಕ ನ್ನು ನೋಡಿ, What is your Name, honey? ಎಂದು ಕೇಳಿದ. ಅದಕ್ಕೆ ಅವಳು Robbery Devi ಎಂದು ಉತ್ತರಿಸಿದಳು. ‘ವಾಹ್, ಎಂಥಾ ಲಗತ್ತಾದ ಹೆಸರು...’ ಎಂದು ಗೊಣಗಿಕೊಂಡ ಆಲೂ, ಅವಳ ಮುಂದೆ ಒಂದು ಡೀಲ್ ಇಟ್ಟ- “ನೋಡು ರಾಬರಿ ದೇವಿ, ನಾನೂ ಜೇಬು ಗಳ್ಳ ನೀನೂ ಜೇಬುಗಳ್ಳಿ. ಜತೆಗೆ ನೀನು ಸುಂದರಿ ಬೇರೇ.

ನಾವಿಬ್ಬರೂ ಮದುವೆಯಾದರೆ ನಮಗೆ ಹುಟ್ಟುವ ಮಗು ನಮ್ಮಿಬ್ಬರ ಕೈಚಳಕವನ್ನೂ ಮೀರಿಸುವಂಥ ಪ್ರಳಯಾಂತಕನಾಗಿ, ನಮ್ಮಿಬ್ಬರ ಕೀರ್ತಿಯನ್ನು ಪರಪ್ಪನ ಅಗ್ರಹಾರದ ಜೈಲಿನಿಂದ ಹಿಡಿದು ಬಳ್ಳಾರಿ, ಹಿಂಡಲಗಾ ಜೈಲುಗಳವರೆಗೂ ಹಬ್ಬಿಸೋದು ಗ್ಯಾರಂಟಿ. ನಿನ್ನ ಅಭಿಪ್ರಾಯ ಹೇಳು" ಎಂದ ಆಲೂಪ್ರಸಾದ್. ರಾಬರಿ ದೇವಿಗೂ ಇದು ಒಪ್ಪಿಗೆ ಯಾಯಿತು.

ಅಲಸೂರು ಗೇಟ್ ಪೊಲೀಸ್ ಠಾಣೆಯ ಸಮೀಪವಿರುವ (!) ದೇವಾಲಯವೊಂದರಲ್ಲಿ ಅವರಿಬ್ಬರೂ ಮದುವೆಯಾದರು. ಕೆಲವು ತಿಂಗಳ ನಂತರ ರಾಬರಿ ದೇವಿ ಗರ್ಭಿಣಿ ಯಾದಳು. ಮಗುವು ಗರ್ಭಾವಸ್ಥೆಯಲ್ಲಿರುವಾಗಲೇ ‘ಕೈಕಸುಬಿನ’ ಎಲ್ಲಾ ಪ್ರಾವೀಣ್ಯವನ್ನೂ ರೂಢಿಸಿಕೊಳ್ಳುವಂತಾಗಲಿ ಎಂಬ ದೃಷ್ಟಿಯಿಂದ, ಚಾರ್ಲ್ಸ್ ಶೋಭರಾಜ್, ವೀರಪ್ಪನ್, ಕರೀಂಲಾಲಾ ತೆಲಗಿ ಮುಂತಾದವರ ಕಥೆಗಳನ್ನು ಪ್ರತಿ ರಾತ್ರಿ ಮಲಗುವಾಗ ರಾಬರಿ ದೇವಿಗೆ ಆಲೂಪ್ರಸಾದ್ ಹೇಳುತ್ತಿದ್ದ.

ಒಂಬತ್ತು ತಿಂಗಳು ತುಂಬಿದ ನಂತರ ರಾಬರಿ ದೇವಿಗೆ ಹೆರಿಗೆ ನೋವು ಶುರುವಾದಾಗ, ಪೊಲೀಸ್ ಕಮಿಷನರ್ ಕಚೇರಿಯ ಎದುರು ಇರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಆಕೆ ಯನ್ನು ಸೇರಿಸಿದ ಆಲೂಪ್ರಸಾದ್, ಪಡಸಾಲೆಯಲ್ಲಿ ಟೆನ್ಷನ್‌ನಿಂದ ಹೆಜ್ಜೆಹಾಕತೊಡಗಿದ. ಕೆಲ ಹೊತ್ತಿನ ನಂತರ ಹೆರಿಗೆ ಕೋಣೆಯಿಂದ ಹೊರಬಂದ ದಾದಿಯು, “ಕಂಗ್ರಾಟ್ಸ್, ನಿಮಗೆ ಗಂಡು ಮಗು ಹುಟ್ಟಿತು" ಎಂದು ಸುದ್ದಿ ಮುಟ್ಟಿಸಿ, “ಆದರೇ...." ಎಂದು ರಾಗವೆಳೆದು ತಡವರಿಸಿದಳು.

ಹೆರಿಗೆಯ ವೇಳೆ ರಾಬರಿ ದೇವಿಗೆ ಏನಾಯಿತೋ ಎಂದು ಗಾಬರಿಗೊಂಡು ವಾರ್ಡಿನೊಳಗೆ ಓಡಿದ ಆಲೂಪ್ರಸಾದ್, “ನನ್ನ ಹೆಂಡತಿ ಕ್ಷೇಮವಾಗಿದ್ದಾಳೆ ತಾನೇ?" ಎಂದು ಅಲ್ಲಿದ್ದ ವೈದ್ಯರನ್ನು ಪ್ರಶ್ನಿಸಿದ. ಅದಕ್ಕೆ ವೈದ್ಯರು, “ತಾಯಿ ಮತ್ತು ಮಗು ಇಬ್ರೂ ಆರೋಗ್ಯ ವಾಗಿದ್ದಾರೆ ಕಣ್ರೀ; ಆದರೆ ನಿಮ್ಮ ಮಗುವಿನ ಬಲಗೈ ಬೆರಳುಗಳು ಇನ್ನೂ ಬಿಡಿಸಿ ಕೊಂಡಿಲ್ಲ" ಎಂದು ಹೇಳಿ, ದಬ್ಬಳ, ಸ್ಕ್ರೂಡ್ರೈವರ್, ನೈಲ್ ಕಟರ್, ಬಾಚಣಿಗೆ ಮುಂತಾ ದವನ್ನು ಬಳಸಿ, ಮಗುವಿನ ಬೆರಳುಗಳನ್ನು ಬಿಡಿಸಲು ಹರಸಾಹಸ ಪಟ್ಟರು.

ಆದರೆ ಆ ಮಗು ಮಾತ್ರ ಮುಷ್ಟಿಯನ್ನು ಬಿಗಿಯಾಗೇ ಹಿಡಿದುಕೊಂಡಿತ್ತು. ಇದನ್ನು ಕಂಡು ಆಲೂಪ್ರಸಾದ್‌ಗೆ ತುಂಬಾ ಬೇಸರವಾಯಿತು. “ಛೇ, ನನ್ನ ಮಗ ನನಗಿಂತ ದೊಡ್ಡ ಪಿಕ್‌ ಪಾಕೆಟರ್ ಆಗ್ತಾನೇಂತ ಎಷ್ಟೆಲ್ಲಾ ಕನಸು ಕಂಡಿದ್ದೆ. ಮುಂದೆ ಚಕ್ರವ್ಯೂಹವನ್ನು ಭೇದಿಸಲು ಅನುಕೂಲವಾಗಲಿ ಅಂತ, ಮಗು ಗರ್ಭದಲ್ಲಿದ್ದಾಗಲೇ ಎಲ್ಲಾ ಕಿಲಾಡಿ-ಖದೀಮರ ಕಥೆಗಳನ್ನೂ ಹೇಳಿದ್ದೆ.

ನಮ್ಮ ಕಸುಬಿಗೆ ಬೇಕಿರೋದೇ ‘ಕೈಚಳಕ’. ಈಗ ನೋಡಿದರೆ ಅದು ಮುಷ್ಟಿ ಬಿಗಿಹಿಡಿದಿದೆ. ಎಲಾ ವಿಧಿಯೇ!" ಎಂದು ಆಲೂಪ್ರಸಾದ್ ಮನಸ್ಸಿನಲ್ಲೇ ಕೊರಗಿದ. ಇದ್ದಕ್ಕಿದ್ದಂತೆಯೇ ಆ ಡಾಕ್ಟರ್‌ಗೆ ಅದೇನು ಹೊಳೆಯಿತೋ ಏನೋ... ತಮ್ಮ ಕೊರಳಲ್ಲಿದ್ದ ಬಂಗಾರದ ಚೈನನ್ನು ಬಿಚ್ಚಿ, ಆಟವಾಡುತ್ತಾ ಮಲಗಿದ್ದ ಆ ಮಗುವಿನ ಮುಖದೆದುರು ಹಿಡಿದು, “ಛೀ ತುಂಟಾ... ಛೀ ಪೋಲೀ... ಛೀ ಕಳ್ಳಾ..." ಎಂದು ಬಾಲಭಾಷೆಯಲ್ಲಿ ಹೇಳುತ್ತಾ, ಆ ಸರವನ್ನು ಆಡಿಸ ತೊಡಗಿದರು.

ಏನಾಶ್ಚರ್ಯ! ಬಿಗಿಹಿಡಿದಿದ್ದ ಮಗುವಿನ ಮುಷ್ಟಿ ನಿಧಾನವಾಗಿ ಸಡಿಲಗೊಂಡಿತು.... ಕೈಬೆರಳುಗಳು ತೆರೆದುಕೊಳ್ಳತೊಡಗಿದವು. ವೈದ್ಯರು ತನ್ನ ಮುಖದೆದುರು ಆಡಿಸುತ್ತಿದ್ದ ಚಿನ್ನದ ಸರವನ್ನು ತೆಗೆದುಕೊಳ್ಳುವ ಯತ್ನವಾಗಿ ಮಗುವು ತನ್ನ ಬಲಗೈಯನ್ನು ಮುಂದು ಮಾಡಿ ಪೂರ್ತಿ ಬಿಡಿಸಿತು. ನೋಡಿದರೆ, ಆ ಕೈಯೊಳಗೊಂದು ‘ಚಿನ್ನದ ಉಂಗುರ’ ಇತ್ತು! ಅದನ್ನು ನೋಡುತ್ತಲೇ ಅಲ್ಲಿ ನಿಂತಿದ್ದ ದಾದಿ ಕಿಟಾರನೆ ಕಿರುಚಿದಳು.

ಕಾರಣ, ಹೆರಿಗೆ ಮಾಡಿಸಿದ ಆ ದಾದಿಯ ಕೈಯಲ್ಲಿದ್ದ ಉಂಗುರವನ್ನು ಈ ‘ಬಾಲಪ್ರತಿಭೆ’ ತಾನು ಹುಟ್ಟುವಾಗಲೇ ಲಪಟಾಯಿಸಿತ್ತು..!! ಇದನ್ನು ಕಂಡು ಆನಂದಾತಿರೇಕಗೊಂಡ ಆಲೂಪ್ರಸಾದ್ ಜಾಧವ್ ಮತ್ತು ರಾಬರಿ ದೇವಿ ತಮ್ಮ ತಮ್ಮಲ್ಲೇ ಪ್ರತ್ಯೇಕವಾಗಿ ಹೀಗೆ ಗೊಣಗಿ ಕೊಂಡರು: “ಎಲಾ ಕಳ್ ನನ್ ಮಗನೇ...!"