Sonu Nigam: ಸ್ಯಾಂಡಲ್ವುಡ್ನಿಂದ ಬ್ಯಾನ್ ಆದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಸೋನು ನಿಗಮ್ ಪೋಸ್ಟ್ ; ಹೇಳಿದ್ದೇನು?
ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ (Singer Sonu Nigam) ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಈ ಕುರಿತು ಇದೀಗ ಸೋನು ನಿಗಮ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ಅವರು ಕನ್ನಡಿಗರ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.



ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ (Singer Sonu Nigam) ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಸೋನು ನಿಗಮ್ ಅವರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿರ್ಧಾರವನ್ನು ಕೈಗೊಂಡಿದೆ. ನಿಷೇಧದ ಬಳಿಕ ಈ ಕುರಿತು ಸೋನು ನಿಗಮ್ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ನಮಸ್ಕಾರ. ನಾನು ಕರ್ನಾಟಕ ಮಾತ್ರವಲ್ಲದೇ ವಿಶ್ವದ ಅನೇಕ ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಭೂತಪೂರ್ವ ಪ್ರೀತಿಯನ್ನು ನೀಡಿದ್ದೇನೆ. ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು ನಾನು ಹೆಚ್ಚು ಗೌರವಿಸಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ 100 ಕ್ಕೂ ಹೆಚ್ಚು ವೀಡಿಯೊಗಳು ಪ್ರಸಾರವಾಗುತ್ತಿವೆ ಎಂದು ಬರೆದಿದ್ದಾರೆ.

ಕರ್ನಾಟಕದಲ್ಲಿ ಪ್ರತಿ ಸಂಗೀತ ಕಚೇರಿಗೆ ನಾನು ತಯಾರಿ ನಡೆಸುವಾಗ ನಾನು ಒಂದು ಗಂಟೆಗಳಿಗೂ ಅಧಿಕ ಕಾಲ ಕನ್ನಡದ ಹಾಡುಗಳನ್ನು ಹಾಡಿದ್ದೇನೆ. ಇಷ್ಟಾದರೂ ಅಲ್ಲಿ ನನಗೆ ಅವಮಾನವಾಯಿತು. ನನಗೀಗ 51 ಎವರ್ಷ. ನನಗಿಂತಲೂ ಚಿಕ್ಕ ಹುಡುಗ ಎಲ್ಲರ ಎದುರು ನನಗೆ ಅವಮಾನ ಮಾಡಿದ.

ಆತನ ಅಕ್ಕಪಕ್ಕ ಇದ್ದವರು ಆತನಿಗೆ ಸುಮ್ಮನಿರಲು ಹೇಳಿದರು ಆದರೆ ಆತ ಅದ್ಯಾವುದಕ್ಕೂ ಕಿವಿಗೊಡಲಿಲ್ಲ. ನಾನು ಅವರಿಗೆ ನಯವಾಗಿ ಮತ್ತು ಪ್ರೀತಿಯಿಂದ ಹೇಳಿದೆ, 'ಕಾರ್ಯಕ್ರಮ ಇದೀಗ ಪ್ರಾರಂಭವಾಗಿದೆ, ಇದು ನನ್ನ ಮೊದಲ ಹಾಡು ಹಾಡುತ್ತೇನೆ. ಆಮೇಲೆ ಎಲ್ಲ ಹಾಡುಗಳನ್ನು ಹಾಡುವೆ. ಪ್ರತಿಯೊಬ್ಬ ಕಲಾವಿದರು ಸಂಗೀತಗಾರರು ಮತ್ತು ತಂತ್ರಜ್ಞರು ಸಿಂಕ್ ಆಗುವಂತೆ ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ. ಹಾಗಾಗಿ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.

ನಾನು ದೇಶಭಕ್ತನಾಗಿರುವುದರಿಂದ, ವಿಶೇಷವಾಗಿ ಪಹಲ್ಗಾಮ್ನಲ್ಲಿ ನಡೆದ ಘಟನೆಯ ನಂತರ, ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುವವರನ್ನು ನಾನು ದ್ವೇಷಿಸುತ್ತೇನೆ. ಅಂದು ಅಷ್ಟೆಲ್ಲಾ ಘಟನೆ ನಡೆದರೂ ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದ್ದೇನೆ. ಅದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಇದೆ.

ಇಲ್ಲಿ ತಪ್ಪು ಯಾರದ್ದು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಡುತ್ತೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ಸಂಸ್ಥೆಗಳು ಮತ್ತು ಪೊಲೀಸರನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.