Suchitra Sen: ಬೆಂಗಾಲಿ ಚಿತ್ರ ನಟಿ ಸುಚಿತ್ರಾ ಸೇನ್ 36 ವರ್ಷ ಒಬ್ಬಂಟಿಯಾಗಿ ಜೀವನ ನಡೆಸಿದ್ದೇಕೆ?
ʼದೇವದಾಸ್’ ಸಿನಿಮಾದ ‘ಪಾರು’ ಖ್ಯಾತಿಯ ನಟಿ ಸುಚಿತ್ರಾ ಸೇನ್ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. 52 ಬೆಂಗಾಲಿ, 7 ಹಿಂದಿ ಚಿತ್ರಗಳಲ್ಲಿ ಸೇನ್ ಅಭಿನಯಿಸಿದ್ದಾರೆ. ನಟನೆಯ ತರಬೇತಿ ಪಡೆಯದಿದ್ದರೂ, ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ನಟಿಯಾಗಿ ಗುರುತಿಸಿಕೊಂಡಿದ್ದ ರೀತಿಯೇ ಅದ್ಭುತ.

Suchitra Sen


ʼಚಂಪಾಕಲಿ’, ‘ಬೊಂಬಾಯಿ ಕಾ ಬಾಬು’ ಮತ್ತು ‘ಮಮ್ತಾ’ ಮುಂತಾದ ಹಿಂದಿ ಚಿತ್ರಗಳಲ್ಲಿನ ಸುಚಿತ್ರಾ ಸೇನ್ ಅವರ ಮನೋಜ್ಞ ಅಭಿನಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ. ಈ ಖ್ಯಾತ ನಟಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಂತರ ಸುಮಾರು 36 ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವನ ನಡೆಸಿದರು.

ಸುಚಿತ್ರಾ ಸೇನ್ 1931ರ ಏಪ್ರಿಲ್ 6ರಂದು ಬಂಗಾಳದ ಸಿರಾಜ್ಗಂಜ್ ಜಿಲ್ಲೆಯ ಭಂಗಾ ಬರಿ ಗ್ರಾಮದಲ್ಲಿ ಜನಿಸಿದರು. 1952ರಲ್ಲಿ ಬೆಂಗಾಳಿ ಸಿನಿಮಾ ‘ಶೇಷ ಕಥಾಯ್’ ಮೂಲಕ ಚಿತ್ರರಂಗ ಪ್ರವೇಶಿಸಿದರು. 1963ರಲ್ಲಿ ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ʼಸಾತ್ ಪಾಕೆ ಬಾಂಧಾʼ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಸಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟಿ ಎನಿಸಿಕೊಂಡರು.

ಬೆಂಗಾಲಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಂತರ ಸುಚಿತ್ರಾ ಸೇನ್ ಹಿಂದಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ʼದೇವದಾಸ್ʼ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ʼಆಂಧಿʼ, ʼಖಾಮೋಶಿʼ, ʼಮುಸಾಫಿರ್ʼ, ʼಬೊಂಬಾಯಿ ಕಾ ಬಾಬೂʼ ಮತ್ತು ಇನ್ನೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದರು. ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಸುಚಿತ್ರಾ ಸೇನ್ ಅವರಿಗೆ 1972ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

ಸುಚಿತ್ರಾ ಸೇನ್ ಕಿರಿಯ ವಯಸ್ಸಿನಲ್ಲಿಯೇ ದಿಬನಾಥ್ ಸೇನ್ ಎಂಬವರನ್ನು ವಿವಾಹವಾಗಿದ್ದರು. ಆರಂಭದಲ್ಲಿ ಕುಟುಂಬದ ಬೆಂಬಲ ದೊರೆಯಿತು. ಆರಂಭದಲ್ಲಿ ಪತಿ ದಿಬನಾಥ್ ಅವರು ಸುಚಿತ್ರಾ ಅವರ ನಟನೆಗೆ ಪ್ರೋತ್ಸಾಹಿಸಿದರು. ಆದರೆ ಖ್ಯಾತಿ ಹೆಚ್ಚಾದಂತೆ ವೈವಾಹಿಕ ಜೀವನದಲ್ಲಿ ಅಂತರ ಬೆಳೆಯಿತು. ಅವರ ಪತಿ ಕುಡಿತದ ಚಟಕ್ಕೆ ಒಳಗಾದ ನಂತರ ಅಮೆರಿಕಕ್ಕೆ ತೆರಳಿದರು.

ಇತ್ತ ಸುಚಿತ್ರಾ ಸೇನ್ ಸಿನಿಮಾ ರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸುತ್ತಿದಂತೆ ಅತ್ತ 1969ರಲ್ಲಿ ಅವರ ಪತಿ ದಿಬನಾಥ್ ಸೇನ್ ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ನಿಧನರಾದರು. ದಿಬಾನಾಥ್ ಅವರ ನಿಧನದ ನಂತರ ನಟಿ ಸುಚಿತ್ರಾ ಕೇವಲ ಹನ್ನೊಂದು ಚಿತ್ರಗಳಲ್ಲಿ ಕಾಣಿಸಿಕೊಂಡರು. 1978ರಲ್ಲಿ ಅವರು ನಟಿಸಿದ ಕೊನೆಯ ಚಿತ್ರ ʼಪ್ರಣಯ್ ಪಾಶಾʼ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಬಳಿಕ ಸುಚಿತ್ರಾ ಶಾಶ್ವತವಾಗಿ ನಟನೆಯನ್ನು ತೊರೆದರು.

ಸುಚಿತ್ರಾ ಸೇನ್ 1978ರಲ್ಲಿ ನಟನೆಯನ್ನು ತೊರೆದ ಬಳಿಕ ಎಲ್ಲೂ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ವರದಿಗಳ ಪ್ರಕಾರ, ಅವರು ರಾಮಕೃಷ್ಣ ಮಿಷನ್ಗೆ ಸೇರಿದ್ದರು. ತನ್ನ ಜೀವನದುದ್ದಕ್ಕೂ ತನ್ನ ಮುಖವನ್ನು ಮುಚ್ಚಿಕೊಂಡೇ ಓಡಾಡಿದರು ಎನ್ನಲಾಗಿದೆ.

ಕೆಲ ಮಾಧ್ಯಮಗಳ ವರದಿ ಪ್ರಕಾರ ಸುಚಿತ್ರಾ ಸೇನ್ ಜಗತ್ತಿಗೆ ಮುಖವನ್ನು ತೋರಿಸದಿರಲು ನಿರ್ಧರಿಸಿದ್ದರು. ಚಿತ್ರರಂಗದಿಂದ ದೂರ ಉಳಿದ ಬಳಿಕ 36 ವರ್ಷಗಳ ಕಾಲ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು. ಹೊರಗೆ ಹೋಗಬೇಕಾದರೆ ಮುಖ ಮುಚ್ಚಿಕೊಂಡು ತೆರಳುತ್ತಿದ್ದರು. ಸುಮಾರು ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ನಟಿ 2014ರ ಜನವರಿ 17ರಂದು ಹೃದಯಾಘಾತದಿಂದ ನಿಧನರಾದರು. ಸಾವಿರಾರು ಮಂದಿಯ ಹೃದಯ ಗೆದ್ದ ಅವರು 83ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.