ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: 176 ತರಬೇತುದಾರರ ನೇಮಕಾತಿಗೆ ಸೂಚಿಸಿ 1 ವರ್ಷವಾದರೂ ನೇಮಕಾತಿ ಆಗಿಲ್ಲ; ತರಾಟೆಗೆ ತೆಗೆದುಕೊಂಡ ಸಿಎಂ

ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರವಾದರೂ ಪ್ರಗತಿ ಕಂಡು ಬರುತ್ತಿಲ್ಲ. ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಇದನ್ನು ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಗದಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಂಬಳಕ್ಕೆ ಗ್ರಾಮೀಣ ಕ್ರೀಡೆಯ ಮಾನ್ಯತೆ ನೀಡಲು ಚಿಂತನೆ

Profile Siddalinga Swamy May 5, 2025 8:56 PM

ಬೆಂಗಳೂರು: 176 ತರಬೇತುದಾರರ ನೇಮಕಾತಿಗೆ ನಾನೇ ಸೂಚಿಸಿ ಒಂದು ವರ್ಷ ಆಗಿದೆ. ಆದರೂ ನೇಮಕಾತಿ ಪ್ರಕ್ರಿಯೆ ಚುರುಕು ಆಗಿಲ್ಲ ಏಕೆ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಪ್ರತೀ ಜಿಲ್ಲೆಯಲ್ಲೂ ಉಪ ನಿರ್ದೇಶಕರು ಕಡ್ಡಾಯವಾಗಿ ಇರಬೇಕು ಎಂದು ಸೂಚನೆ ನೀಡಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡ ಅವರು, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟರೂ ಅಗತ್ಯ ತರಬೇತುದಾರರ ನೇಮಕಾತಿ ಆಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರ ಆದರೂ ಪ್ರಗತಿ ಕಂಡುಬರುತ್ತಿಲ್ಲ. ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಇದನ್ನು ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಸಿಎಂ, ನಿಗದಿತ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಪ್ರತೀ ವರ್ಷ ಪ್ರಾಧಿಕಾರದ ಸಭೆ, ಪ್ರತೀ ವರ್ಷ ಆಡಿಟ್ ಆಗಬೇಕು. ಪ್ರತೀ ವರ್ಷ ನೇಮಕಾತಿ ನಡೆಯಬೇಕು. ತಪ್ಪಿದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಅನುದಾನ ನಿಗದಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸುವ ಮೊದಲು ಕನಿಷ್ಠ 15 ರಾಷ್ಟ್ರಗಳು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸರಿಯಾದ ಗೈಡ್‌ಲೈನ್ಸ್‌ಗಳನ್ನು ಸಿದ್ಧಪಡಿಸಿ ಎಂದು ಸೂಚನೆ ನೀಡಿದರು.

ಕೇವಲ ಲೆಟರ್ ಹೆಡ್‌ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟ ಎಂದು ಬರುವ ಸಂಸ್ಥೆಗಳಿಗೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕ್ರೀಡಾಕೂಟ ನಡೆಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಾರ್ಯ ಚಟುವಟಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದಕ್ಕಿಂತ ಉತ್ತಮ ರೀತಿಯಲ್ಲಿ ನಮ್ಮ ಮಿತಿಯೊಳಗೆ ಕ್ರೀಡಾ ಕಾರ್ಯ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕ್ರಮ ವಹಿಸಿ ಎಂದು ಹೇಳಿದರು.

ಮುಂದಿನ ಐದಾರು ತಿಂಗಳಲ್ಲಿ, ದಸರಾ ಕ್ರೀಡಾಕೂಟ ಆರಂಭವಾಗುವುದರೊಳಗೆ ಪ್ರಾಧಿಕಾರ ಕ್ರಿಯಾಶೀಲ ಆಗಬೇಕು. ಕ್ರೀಡಾಕೂಟಗಳಿಗೆ ಅನುದಾನ ನೀಡುವುದು ಆನ್‌ಲೈನ್‌ನಲ್ಲಿ ದಾಖಲಾಗಬೇಕು ಎಂದು ಸೂಚಿಸಿದರು. ಅಲ್ಲದೇ ಕಂಬಳವನ್ನು ಗ್ರಾಮೀಣ ಕ್ರೀಡೆ ಎಂದು ಮಾನ್ಯತೆ ನೀಡಿ ಪ್ರೋತ್ಸಾಹ ನೀಡುವ ಬಗ್ಗೆ ಚರ್ಚಿಸಲಾಯಿತು.

ಕಂಠೀರವ ಕ್ರೀಡಾಂಗಣ ಹವಾ ನಿಯಂತ್ರಿತ ವ್ಯವಸ್ಥೆ ಶೀಘ್ರದಲ್ಲಿ ಜಾರಿಗೊಳಿಸಬೇಕು. ಕಂಠೀರವ ಕ್ರೀಡಾಂಗಣ ನಿರ್ಮಾಣವಾಗಿ 29 ವರ್ಷಗಳಾಗಿರುವುದರಿಂದ ಪ್ರೇಕ್ಷಕರ ಸುರಕ್ಷತೆಗೆ ಗ್ಯಾಲರಿಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕಂಠೀರವ ಕ್ರೀಡಾಂಗಣದ ಜಿಮ್, ಶೌಚಾಲಯ, ಟ್ರ್ಯಾಕ್‌ಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.

ಕ್ರೀಡಾಪಟುಗಳಿಗೆ ಅಗತ್ಯವಾದಷ್ಟು ಪೌಷ್ಠಿಕಾಂಶ ಮತ್ತು ಪ್ರೋಟೀನ್‌ಯುಕ್ತ ಆಹಾರ ಕೊಡಬೇಕು. ಪದೇ ಪದೆ ಪರಿಶೀಲನೆ ನಡೆಸಿ, ಲೋಪ ಕಂಡರೆ ವಾರ್ಡನ್‌ಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ, ಕ್ರೀಡಾ ಹಾಸ್ಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲೇ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಲು ಸಿಎಂ ಸೂಚನೆ ನೀಡಿದರು.

ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನೆ ನಡೆಯುವ ವೇಳೆ ಚನ್ನಪಟ್ಟಣದಿಂದ ಆನ್‌ಲೈನ್ ಮೂಲಕ ವಿಡಿಯೊ ಕಾನ್ಪರೆನ್ಸ್‌ಗೆ ಬಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಚನ್ನಪಟ್ಟಣ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಮುಖ್ಯಮಂತ್ರಿ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಸೂಚಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕನ್ನಡದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಅನುವಾದಗೊಳಿಸಲು ಸಹಕಾರ: ಸಿದ್ದರಾಮಯ್ಯ

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.