ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಸುನಾಮಿಯ ಹಾಗೆ ಹರಿದು ಬಂದ ಹಿಂದೂ ಹೆದ್ದೆರೆ...

144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳವು ಸಮಸ್ತ ಹಿಂದೂ ಸಮಾಜದಲ್ಲಿ ಅದ್ಭುತ ಸಂಚಲನ ಸೃಷ್ಟಿಸಿ, ಊಹೆಗೂ ನಿಲುಕದ ಯಶಸ್ಸನ್ನು ಸಾಧಿಸಿತು. ಜಾತಿ-ಮತ-ಪಂಥ-ವರ್ಗ ಎಂಬ ಭೇದವಿಲ್ಲದೆ ಪ್ರಯಾಗ್‌ರಾಜ್‌ನೆಡೆಗೆ ಧಾವಿಸಿ ಬಂದ ಜನರು ಸಂಗಮ ದಲ್ಲಿ ಮಿಂದು ಪಾವನರಾದರು. ಒಟ್ಟಿನಲ್ಲಿ, ಹಿಂದೂ ಸಮಾಜವು ಒಮ್ಮೆಗೇ ತನ್ನ ‘ವಿರಾಟ್ ರೂಪ’ವನ್ನು ಜಗತ್ತಿನೆದುರು ಪ್ರಕಟಿಸಿ, ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.

ಸುನಾಮಿಯ ಹಾಗೆ ಹರಿದು ಬಂದ ಹಿಂದೂ ಹೆದ್ದೆರೆ...

Profile Ashok Nayak Mar 14, 2025 7:36 PM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ನಮ್ಮ ಪೂರ್ವಜರು, ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದಿದ್ದಾರೆ. ನಮ್ಮ ನದಿಗಳಿಗಿರುವ ಮಹತ್ವ, ಪಾವಿ ತ್ರ್ಯ ಅಂಥದ್ದು. ಸಮುದ್ರಕ್ಕೆ ಹೋಲಿಕೆಯು ಸಮುದ್ರದಿಂದ ಮಾತ್ರವೇ ಸಾಧ್ಯ. ಅದೇ ರೀತಿ ಯಲ್ಲಿ, ಮಹಾಕುಂಭಮೇಳದ ಹೋಲಿಕೆಯನ್ನು ಮತ್ತೊಂದು ಮಹಾಕುಂಭ ಮೇಳದಿಂದ ಮಾತ್ರ ಮಾಡಲು ಸಾಧ್ಯ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಮಹಾಕುಂಭಮೇಳವು ಫೆಬ್ರವರಿ 26ರ ಶಿವರಾತ್ರಿಯಂದು ಸಂಪನ್ನಗೊಂಡಿದೆ. ಈ ಪರ್ವ ಕಾಲದಲ್ಲಿ 66 ಕೋಟಿಗೂ ಹೆಚ್ಚು ಜನ ಶ್ರದ್ಧಾವಂತರು ಇಲ್ಲಿನ ‘ಗಂಗಾ-ಯಮುನಾ- ಸರಸ್ವತೀ’ ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.

144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳವು ಸಮಸ್ತ ಹಿಂದೂ ಸಮಾಜದಲ್ಲಿ ಅದ್ಭುತ ಸಂಚಲನ ಸೃಷ್ಟಿಸಿ, ಊಹೆಗೂ ನಿಲುಕದ ಯಶಸ್ಸನ್ನು ಸಾಧಿಸಿತು. ಜಾತಿ-ಮತ-ಪಂಥ-ವರ್ಗ ಎಂಬ ಭೇದವಿಲ್ಲದೆ ಪ್ರಯಾಗ್‌ರಾಜ್‌ನೆಡೆಗೆ ಧಾವಿಸಿ ಬಂದ ಜನರು ಸಂಗಮ ದಲ್ಲಿ ಮಿಂದು ಪಾವನರಾದರು. ಒಟ್ಟಿನಲ್ಲಿ, ಹಿಂದೂ ಸಮಾಜವು ಒಮ್ಮೆಗೇ ತನ್ನ ‘ವಿರಾಟ್ ರೂಪ’ವನ್ನು ಜಗತ್ತಿನೆದುರು ಪ್ರಕಟಿಸಿ, ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.

ಇದನ್ನೂ ಓದಿ: Prakash Shesharaghavachar Column: ರಣಹದ್ದುಗಳಿಗೆ ಕಂಡಿದ್ದು ಶವಗಳು, ಹಂದಿಗಳಿಗೆ ಕಂಡಿದ್ದು ಹೊಲಸು..!

ಮಹಾಕುಂಭಮೇಳದಲ್ಲಿ ಭಾಗವಹಿಸಿದಷ್ಟು ಸಂಖ್ಯೆಯ ಜನರು ಮತ್ತೊಂದು ಕಾರ್ಯ ಕ್ರಮದಲ್ಲಿ ಭಾಗವಹಿಸಿರುವ ನಿದರ್ಶನ ಜಗತ್ತಿನ ಇತಿಹಾಸದಲ್ಲಿಯೇ ಇಲ್ಲವೆನ್ನಬೇಕು. 2024ರ ಹಜ್ ವಾರ್ಷಿಕ ಯಾತ್ರೆಯಲ್ಲಿ ಭಾಗಿಯಾಗಿದ್ದವರ ಸಂಖ್ಯೆ ಕೇವಲ 18 ಲಕ್ಷ. 2019ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದಿದ್ದ ಅರ್ಧಕುಂಭದಲ್ಲಿಯೇ 24 ಕೋಟಿ ಸನಾತನಿಗಳು ಪಾಲ್ಗೊಂಡಿದ್ದರು.

2025ರ ಮಹಾಕುಂಭವು ಈ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ಇತಿಹಾಸ ರಚಿಸಿದೆ. ಉತ್ತರ ಪ್ರದೇಶ ಸರಕಾರವು ಆರಂಭದಲ್ಲಿ, 40 ಕೋಟಿ ಜನರು ಭಾಗವಹಿಸ ಬಹುದು ಎಂದು ನಿರೀಕ್ಷಿಸಿತ್ತು. ಆದರೆ ಮಹಾಕುಂಭ ಶುರುವಾಗಿದ್ದೇ ಆಗಿದ್ದು, ಜನಸಾಗರದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗಿ, ಸರಕಾರದ ನಿರೀಕ್ಷೆಯನ್ನೂ ಅದು ದಾಟಿಕೊಂಡುಹೋಯಿತು!

ಶತಮಾನದ ಈ ಅಂತಿಮ ಮಹಾಕುಂಭದಲ್ಲಿ ಸನಾತನಿಗಳು ಮಾತ್ರವಲ್ಲದೆ, ಅನ್ಯದೇಶ ಗಳಿಂದಲೂ ಗಣನೀಯ ಸಂಖ್ಯೆಯಲ್ಲಿ ಜನರು ಬಂದು ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಕ್ಕೆ ಮುಗಿಬಿದ್ದಿದ್ದು ಇದಕ್ಕೆ ಕಾರಣವೆನ್ನಬಹುದು. ತಾವು ಮೈಗೂಡಿಸಿಕೊಂಡಿದ್ದ ಬಲವಾದ ಧಾರ್ಮಿಕ ನಂಬಿಕೆಯ ಫಲವಾಗಿ ಸನಾತನಿಗಳು ಮಹಾಕುಂಭಕ್ಕೆ ಸ್ವಯಂಪ್ರೇರಣೆಯಿಂದ ಬಂದರು.

ಹಾಗಂತ ಈ ಕುಂಭದಲ್ಲಿ ಭಾಗವಹಿಸಲು ಯಾರಿಗೂ ‘ವೈಯಕ್ತಿಕ’ ಆಹ್ವಾನವೇನೂ ಇರ ಲಿಲ್ಲ; ಆದರೆ ಬಂದವರೆಲ್ಲರೂ ಸ್ವಂತ ಕೈಯಿಂದ ಸಾವಿರಾರು ರುಪಾಯಿ ಖರ್ಚು ಮಾಡಿ ಕೊಂಡು ಬಂದವರೇ ಆಗಿದ್ದರು!

ಮಹಾಕುಂಭಮೇಳವನ್ನು ಮೂರು ಆಯಾಮದಲ್ಲಿ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಮೊದಲನೆಯದಾಗಿ, ಸುನಾಮಿಯ ಅಲೆಯಂತೆ ಹರಿದುಬಂದ ಶ್ರದ್ಧಾಳುಗಳು; ಎರಡನೆ ಯದಾಗಿ, ಕುಂಭಮೇಳದ ನಿರ್ವಹಣೆಯಲ್ಲಿ ಸರಕಾರಿ ಆಡಳಿತ ಯಂತ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ವಹಿಸಿದ ಪಾತ್ರ; ಮೂರನೆಯದಾಗಿ, ವಿಘ್ನ ಸಂತೋಷಿಗಳ ನಕಾರಾತ್ಮ ಕತೆ.

ಮಹಾಕುಂಭಮೇಳಕ್ಕೆ ಬರುವ ಶ್ರದ್ಧಾಳುಗಳಿಗೆ ಬೃಹತ್ ಮಟ್ಟದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಸುಮಾರು 10000 ಎಕರೆ ಪ್ರದೇಶದಲ್ಲಿ ವಿಸ್ತಾರವಾದ ಪಟ್ಟಣದ ನಿರ್ಮಾ ಣ, ಒಂದೂವರೆ ಲಕ್ಷದಷ್ಟು ಟೆಂಟುಗಳು, 15000 ಸಫಾಯಿ ಕರ್ಮಚಾರಿಗಳಿಂದ ನಿರ್ವಹಿಸ ಲ್ಪಡುವ ಒಂದೂವರೆ ಲಕ್ಷ ಹಸಿರು ಶೌಚಾಲಯಗಳು, 1240 ಕಿ.ಮೀ. ಉದ್ದದ ಪೈಪ್‌ ಲೈನ್‌ಗಳು ಮತ್ತು 50000ಕ್ಕೂ ಹೆಚ್ಚು ಕೊಳಾಯಿನೀರಿನ ಸಂಪರ್ಕಗಳು, 20000ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲು ಸ್ಥಳ ಹೀಗೆ ಒಂದಾ ಎರಡಾ? ಸಾಲದೆಂಬಂತೆ, ಸಂಗಮ ಪ್ರದೇಶದ 550 ಚ.ಕಿ.ಮೀ. ವ್ಯಾಪ್ತಿಯಲ್ಲಿನ ರಸ್ತೆಗಳಿಗೆ ‘ಚೆಕ್ಕರ್ ಪ್ಲೇಟ್’ ಎಂದು ಕರೆಯ ಲಾಗುವ ಎರಡೂವರೆ ಲಕ್ಷಕ್ಕೂ ಹೆಚ್ಚು ಕಬ್ಬಿಣದ ಹಲಗೆಗಳನ್ನು ಅಳವಡಿಸಲಾಗಿತ್ತು.

ಕುಂಭಮೇಳಕ್ಕೆ ದೇಶದೆಲ್ಲೆಡೆಯಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದ ರಿಂದ ಪ್ರಯಾಗ್‌ರಾಜ್‌ನ ರಸ್ತೆಗಳೆಲ್ಲಾ ತುಂಬಿ ತುಳುಕುತ್ತಿದ್ದವು. ಬಹುತೇಕರು ತಲೆಯ ಮೇಲೆ ಬಟ್ಟೆ-ಬರೆಗಳ ಮೂಟೆಯನ್ನು ಹೊತ್ತು ಮಕ್ಕಳ ಕೈಹಿಡಿದುಕೊಂಡು ಸಂಗಮದತ್ತ ಸಾಗುತ್ತಿದ್ದ ದೃಶ್ಯದ ವೀಕ್ಷಣೆ ರೋಮಾಂಚಕಾರಿಯಾಗಿತ್ತು. ಸಣ್ಣ ಮಕ್ಕಳನ್ನು ಎತ್ತಿಕೊಂಡು ಬಂದವರು ಕೂಡ 25 ಕಿ.ಮೀ. ಹೆಜ್ಜೆಹಾಕಿ ಸಂಗಮದಲ್ಲಿ ಸ್ನಾನ ಮಾಡಿ ಸಾರ್ಥಕತೆಯನ್ನು ಪಡೆದರು.

ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರೂ ನಡೆಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಪ್ರಯಾಗದ ರಸ್ತೆಗಳಲ್ಲಿ ವಾಹನ ಮಾಯವಾಗಿ ಕೇವಲ ಜನರ ತಲೆಗಳಷ್ಟೇ ತುಂಬಿ ಹೋಗಿದ್ದವು. ಈ ಜನಪ್ರವಾಹವು ಸಂಭ್ರಮದಿಂದ ಸಾಗುತ್ತಿದ್ದಾಗಿನ ಚಿತ್ರ ನನ್ನ ಮನದಲ್ಲಿ ಅಚ್ಚಳಿಯದೆ ಉಳಿಯುವುದು.

ಸಂಗಮದ ಬಳಿ ಶ್ರದ್ಧಾಳುಗಳು ಭಕ್ತಿಪೂರ್ವಕವಾಗಿ ಗಂಗೆಯ ಪೂಜೆಯನ್ನು ಮಾಡಿ ಕುಟುಂಬ ಸಮೇತ ಸ್ನಾನ ಮಾಡುತ್ತಿದ್ದಾಗ ಅವರಲ್ಲಿ ಕಾಣುತ್ತಿದ್ದ ಧನ್ಯತಾ ಭಾವವನ್ನು ವರ್ಣಿಸಲಾಗದು. ನಡೆದುಬಂದ ದಣಿವಿಲ್ಲ, ಜನದಟ್ಟಣೆಯ ಬೇಸರವಿಲ್ಲ. ಅಲ್ಲಿ ಕಂಡಿದ್ದು ಸಂಗಮದಲ್ಲಿ ಸ್ನಾನ ಮಾಡಿದ್ದರ ಸಾರ್ಥಕತೆಯ ಭಾವ ಮಾತ್ರ. ಹಣೆಗೆ ಅರಿಶಿನ, ಶಿವನ ತ್ರಿಶೂಲದ ಚಿಹ್ನೆಯೊಂದಿಗಿನ ಸೆಲ್ಫಿ ಸಂಭ್ರಮದ ದೃಶ್ಯ ಅದ್ಭುತವಾಗಿತ್ತು.

ಬಸ್ಸಿನಲ್ಲಿ ಬಂದಿದ್ದ ಯಾತ್ರಿಕರು ಪ್ರಯಾಗಕ್ಕೆ ಹೋಗುವ ದಾರಿಯುದ್ದಕ್ಕೂ ಬಟ್ಟೆ ಒಗೆದು ಕೊಳ್ಳಲು, ಅಡುಗೆ ಸಿದ್ಧಪಡಿಸಿಕೊಳ್ಳಲು ಸೂಕ್ತ ಜಾಗ ದೊರೆತ ಕೂಡಲೇ ಅಲ್ಲಿಯೇ ಬೀಡು ಬಿಡುತ್ತಿದ್ದರು. ಸರಕಾರಿ ಕಚೇರಿಗಳ ಕಾಂಪೌಂಡುಗಳಲ್ಲೂ ಇದಕ್ಕೆ ಅವಕಾಶ ನೀಡಲಾ ಗಿತ್ತು.

ಅನೇಕ ಸ್ವಯಂಸೇವಾ ಸಂಸ್ಥೆಗಳು ಶ್ರದ್ಧಾಳುಗಳಿಗೆ ರಾತ್ರಿ ಉಳಿಯಲು ಉಚಿತ ವ್ಯವಸ್ಥೆ ಮಾಡಿದ್ದವು, ಊಟ-ತಿಂಡಿ-ಚಹಾ ಕೊಡುವ ಭಂಡಾರಗಳು ಯಥೇಚ್ಛವಾಗಿದ್ದವು. ಹಸಿದು ಹಿಂದಿರುಗಿದವರು ಯಾರೊಬ್ಬರೂ ಇರಲಿಲ್ಲ. ಪ್ರವೀಣ್ ತೊಗಾಡಿಯಾರವರ ‘ಅಹೆಡ್ ಹಿಂದೂ ಪರಿಷದ್’, ಇಸ್ಕಾನ್, ಶಂಕರಮಠ, ತಮಿಳುನಾಡಿನ ಮಠಗಳು, ಅದಾನಿ-ರಿಲ ಯೆನ್ಸ್ ಮುಂತಾದ ಉದ್ದಿಮೆದಾರರು, ಸ್ವಯಂಸೇವಾ ಸಂಸ್ಥೆಗಳು, ಅಖಾಡಗಳ ವತಿಯಿಂದ ದಿನಕ್ಕೆ ಲಕ್ಷಾಂತರ ಜನರಿಗೆ ಊಟ ಸಿಗುತ್ತಿತ್ತು.

ಈ ಮೇಳದ ನಿಜವಾದ ಹೀರೋಗಳೆಂದರೆ, ಉತ್ತರ ಪ್ರದೇಶ ರಾಜ್ಯ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿಗಳು. ಕುಂಭಮೇಳ ಆರಂಭಕ್ಕೆ ಮೂರೂವರೆ ತಿಂಗಳು ಮುನ್ನವೇ ಪೊಲೀಸರು ಕರ್ತವ್ಯನಿರತರಾಗಿದ್ದರು. ಮೇಳವನ್ನು ಯಶಸ್ವಿಯಾಗಿಸಲು ಒಟ್ಟು 75000 ಪೊಲೀಸರು ಪಟ್ಟಿರುವ ಶ್ರಮ ವರ್ಣನೆಗೆ ನಿಲುಕದ್ದು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಪೊಲೀಸರಿಗೆ ‘ಲಾಠಿ ಇಲ್ಲ, ಸೀಟಿ ಮಾತ್ರ’ ಅಂತ ಸ್ಪಷ್ಟ ಸೂಚನೆ ನೀಡಿದ್ದರಂತೆ. ಮೇಳದಲ್ಲಿನ ಯಾತ್ರಾರ್ಥಿಗಳ ಜಮಾವಣೆಯನ್ನು ಮತ್ತು ವಾಹನ ಸಂಚಾರ ದಟ್ಟಣೆಯನ್ನು ಪೊಲೀಸರು ನಿರ್ವಹಿಸಬೇಕಿತ್ತು, ಅವಘಡ, ದೊಂಬಿ, ಗಲಾಟೆಗೆ ಆಸ್ಪದವಿಲ್ಲದಂತೆ ಜನಸಾಗರವನ್ನು ನಿಯಂತ್ರಿಸಬೇಕಾದ ಜವಾಬ್ದಾರಿ ಅವರ ದಾಗಿತ್ತು.

ಹೀಗಾಗಿ ಕರ್ತವ್ಯದಿಂದ ಕೊಂಚವೇ ವಿಮುಖವಾಗಿ ಮೈಮರೆಯುವುದಕ್ಕೆ ಅಲ್ಲಿ ಆಸ್ಪದವೇ ಇರಲಿಲ್ಲ. ಯಾವ ಕ್ಷಣದಲ್ಲಿ ಏನು ಆಪತ್ತು ಸಂಭವಿಸುವುದೋ ಎಂಬ ಗ್ರಹಿಕೆಯಲ್ಲೇ ಕಾರ್ಯನಿರ್ವಹಿಸಬೇಕಾದ ನಿರಂತರ ಒತ್ತಡ ಪೊಲೀಸರಿಗಿತ್ತು. ಸ್ವಲ್ಪ ಹೆಚ್ಚು-ಕಮ್ಮಿ ಆದರೂ ಅವರ ಕೆಲಸಕ್ಕೆ ಕುತ್ತು ಬರುತ್ತಿತ್ತು, ಹೀಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕರ್ತವ್ಯ ವನ್ನು ನಿರ್ವಹಿಸುತ್ತಿದ್ದರು.

ಪ್ರಶಂಸಾರ್ಹ ಸಂಗತಿಯೆಂದರೆ, 45 ದಿನಗಳಲ್ಲಿ ಪೊಲೀಸರು ತಮ್ಮ ಲಾಠಿಗೆ ಕೆಲಸವನ್ನೇ ಕೊಡಲಿಲ್ಲ, ಅತಿ ಕ್ಲಿಷ್ಟ ಸಂದರ್ಭದಲ್ಲಿಯೂ ಸಂಯಮದ ವರ್ತನೆ ತೋರುತ್ತಿದ್ದರು. ತಮ್ಮ ಸೌಜನ್ಯಭರಿತ ವರ್ತನೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕುಂಭದಲ್ಲಿ ಕಾಣೆ ಯಾದ 50 ಸಾವಿರ ಜನರನ್ನು ಕೃತಕ ಬುದ್ಧಿಮತ್ತೆ ಬೆಂಬಲಿತ ಕ್ಯಾಮರಾದ ಸಹಾಯದಿಂದ ಅವರ ಮನೆಯವರೊಂದಿಗೆ ಸೇರಿಸಿದ ಈ ಪೊಲೀಸರ ಕಾರ್ಯದಕ್ಷತೆಗೆ ಬೆಲೆಕಟ್ಟಲಾಗದು.

ಇನ್ನು, ಕುಂಭ ಪ್ರದೇಶದ ನೈರ್ಮಲ್ಯ ಕಾಪಾಡುತ್ತಿದ್ದ ಸ್ವಚ್ಛತಾ ಕಾರ್ಮಿಕರ ಸೇವೆಯೂ ಅನನ್ಯವಾಗಿತ್ತು. ಮೇಳದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದ ಒಂದೂವರೆ ಲಕ್ಷ ಶೌಚಾ ಲಯಗಳನ್ನು ಸುಮಾರು 15000 ಸಫಾಯಿ ಕರ್ಮಚಾರಿಗಳು ಪ್ರತಿ ಗಂಟೆಗೊಮ್ಮೆ ಸ್ವಚ್ಛ ಗೊಳಿಸುತ್ತಿದ್ದರು. ಸುಮಾರು 10 ಸಾವಿರ ಎಕರೆ ವ್ಯಾಪ್ತಿಯ ಈ ಪ್ರದೇಶದಲ್ಲಿ ಸ್ವಚ್ಛತೆ ಯನ್ನು ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು.

ಅದನ್ನು ಲೋಪವಿಲ್ಲದ ಹಾಗೆ ನಿರ್ವಹಿಸಿದ್ದು ಈ ಕರ್ಮಚಾರಿಗಳು. ಪ್ರಯಾಗ್‌ರಾಜ್ ಗರದ 15 ಲಕ್ಷ ನಿವಾಸಿಗಳನ್ನೂ ಇಲ್ಲಿ ಹೀರೋಗಳೆಂದೇ ಕರೆಯಬೇಕು. ಏಕೆಂದರೆ, ಕುಂಭಮೇಳದ 45 ದಿನಗಳು ಜನನಿಬಿಡತೆ ಮತ್ತು ವಾಹನ ದಟ್ಟಣೆಯ ನಡುವೆ ಕೊಂಚವೂ ಬೇಸರಿಸದೆ ತಮ್ಮ ದೈನಂದಿನ ಕರ್ತವ್ಯಗಳನ್ನು ಅವರು ನಿರ್ವಹಿಸಿಕೊಂಡು ಹೋಗುತ್ತಿದ್ದರು.

ತಮಗಾಗುತ್ತಿದ್ದ ಎಲ್ಲ ರೀತಿಯ ಅನಾನುಕೂಲತೆಗಳನ್ನು ಸಹಿಸಿಕೊಂಡು ಕುಂಭಮೇಳದ ಯಶಸ್ಸಿಗೆ ಸಹಕರಿಸಿದ್ದು ಇವರೇ. ಇನ್ನು ರೈಲ್ವೆ ಇಲಾಖೆಯು ಕಳೆದ ಒಂದು ವರ್ಷದಿಂದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಮತ್ತು ರೈಲು ನಿಲ್ದಾಣಗಳನ್ನು ಉನ್ನತೀ ಕರಿಸಲು 5000 ಕೋಟಿ ರು. ಹಣವನ್ನು ವೆಚ್ಚ ಮಾಡಿತು; ಕುಂಭದ 45 ದಿನಗಳಲ್ಲಿ 16000 ರೈಲುಗಳು ಐದು ಕೋಟಿ ಯಾತ್ರಾರ್ಥಿಗಳನ್ನು ಕರೆತಂದು ಕುಂಭದ ಯಶಸ್ಸಿಗೆ ಮಹತ್ತರ ಕೊಡುಗೆ ನೀಡಿದವು.

45 ದಿನಗಳ ಕುಂಭಮೇಳ ಸಂದರ್ಭವು ಉತ್ತರ ಪ್ರದೇಶದ ಆರ್ಥಿಕತೆಗೆ ಮತ್ತು ಮೂಲ ಸೌಕರ್ಯ ವಲಯಕ್ಕೆ ಗಣನೀಯವಾದ ಕೊಡುಗೆಯನ್ನು ನೀಡಿದೆ. ಕುಂಭಮೇಳದ ಆಚರಣೆಗೆಂದು ಉತ್ತರ ಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರ ವೆಚ್ಚ ಮಾಡಿದ ಹಣ ಕೇವಲ 12 ಸಾವಿರ ಕೋಟಿ ರುಪಾಯಿ, ಆದರೆ ಗಳಿಸಿದ ಅಂದಾಜು ಆದಾಯ 3 ಲಕ್ಷ ಕೋಟಿ ರುಪಾಯಿ. ಕುಂಭಮೇಳದ ಸಂದರ್ಭವನ್ನು ಬಳಸಿಕೊಂಡು ಪ್ರಯಾಗರಾಜ್‌ನಲ್ಲಿ ಹಲ ವಾರು ಶಾಶ್ವತ ಯೋಜನೆಗಳನ್ನು ಕೈಗೊಂಡಿರುವುದು ಗಮನಾರ್ಹ.

ವಿವಿಧ ಉದ್ದಿಮೆದಾರರಿಗೆ ಹಾಗೂ ಸ್ವಯಂ-ಉದ್ಯೋಗಿಗಳಿಗೆ ಈ ಸಂದರ್ಭದಲ್ಲಿ ಆರ್ಥಿಕ ವಾಗಿ ಅತಿ ಹೆಚ್ಚಿನ ಲಾಭವಾಯಿತು. ಭಕ್ತಾದಿಗಳ ಹಣೆಗೆ ತಿಲಕವಿಟ್ಟು ದಿನಕ್ಕೆ ಕನಿಷ್ಠ 60 ಸಾವಿರ ರುಪಾಯಿಯಿಂದ ಗರಿಷ್ಠ ಒಂದೂವರೆ ಲಕ್ಷ ರುಪಾಯಿವರೆಗೆ ಸಂಪಾದನೆ ಮಾಡಿ ದವರಿದ್ದಾರೆ.

ಪ್ರಯಾಗ ನಿವಾಸಿಗಳು ಮನೆಗಳನ್ನು ‘ಹೋಮ್ ಸ್ಟೇ’ ಆಗಿ ಪರಿವರ್ತಿಸಿ ಹಣ ಸಂಪಾದಿಸಿ ದರು. ಕಾಲೇಜು ವಿದ್ಯಾರ್ಥಿಗಳು ಸಂಗಮ ಪ್ರದೇಶಕ್ಕೆ ಬೈಕ್‌ನಲ್ಲಿ ಜನರನ್ನು ಕರೆದೊಯ್ಯುವ ಕೆಲಸ ಕೈಗೊಂಡು, ದಿನಕ್ಕೆ ಕೈತುಂಬಾ ಸಂಪಾದಿಸಿದರು. ಸಚಿನ್ ಎಂಬ ವಿದ್ಯಾರ್ಥಿಯನ್ನು ನಾನು ವಿಚಾರಿಸಿದಾಗ, “ಪರೀಕ್ಷೆಯ ಫೀಸು ಕಟ್ಟಬೇಕಿತ್ತು, ಯಾತ್ರಾರ್ಥಿಗಳನ್ನು ಮೋಟರ್ ಸೈಕಲ್‌ನಲ್ಲಿ ಸಂಗಮಕ್ಕೆ ಕರೆದೊಯ್ದು 2 ಲಕ್ಷ ರು. ಸಂಪಾದಿಸಿರುವೆ" ಎಂದು ಹೆಮ್ಮೆಯಿಂದ ಹೇಳಿದ. ಇಲ್ಲಿ ಬೇವಿನ ಕಡ್ಡಿ ಮಾರಿ 60 ಸಾವಿರ ರು. ಸಂಪಾದಿಸಿದವರೂ ಇದ್ದಾರೆ.

ಮೇಳದ ಪ್ರದೇಶದಲ್ಲಿ ಫುಡ್ ಕೋರ್ಟ್‌ಗಳಿಗೆ ಬೇಡಿಕೆ ಇರಲಿಲ್ಲ, ಕಾರಣ ನೂರಾರು ಕಡೆ ಕರೆಕರೆದು ಉಚಿತವಾಗಿ ಊಟ-ತಿಂಡಿ-ಚಹಾ ಕೊಡುತ್ತಿದ್ದರು, ದುಡ್ಡು ಕೊಟ್ಟು ಖರೀದಿಸು ವವರು ನಗಣ್ಯ ಪ್ರಮಾಣದಲ್ಲಿದ್ದರು. ಹೀಗಾಗಿ ಕರ್ನಾಟಕ ಮೂಲದ ಹೋಟೆಲ್ ಮಾಲೀಕ ರೊಬ್ಬರು ಕುಂಭ ನಗರಿಯಲ್ಲಿ ಹೋಟೆಲ್ ತೆರೆದವರು ಒಂದೇ ವಾರದಲ್ಲಿ ವಾಪಸ್ ಬಂದರು. ಮತ್ತೊಂದು ವಿಶೇಷವೆಂದರೆ, 10 ರುಪಾಯಿಗೆ ಬಿಸಿಬಿಸಿ ಚಹಾವನ್ನು ಮಾರು ತ್ತಿದ್ದವರು, ಬೇಡಿಕೆ ಹೆಚ್ಚಾಗಿದ್ದರೂ ದೇವರ ಸೇವೆಯೆಂದು ಬೆಲೆಯನ್ನು ಮಾತ್ರ ಹೆಚ್ಚಿಸ ಲಿಲ್ಲ. ಬೇಡಿಕೆ ಹೆಚ್ಚಾಯಿತೆಂದು ವಿಮಾನ ಪ್ರಯಾಣದ ದರಗಳನ್ನು ಗಗನಕ್ಕೇರಿಸಿದವರು, ಈ ಬಡ ಚಹಾ ಮಾರಾಟಗಾರರಿಂದ ಪಾಠ ಕಲಿಯಬೇಕು.

(ಮುಂದುವರಿಯುವುದು)

(ಲೇಖಕರು ಬಿಜೆಪಿಯ ವಕ್ತಾರರು)