Roopa Gururaj Column: ಸದಾ ಧರ್ಮದಲ್ಲಿ ನಡೆದ ಕೌರವ ಸಹೋದರಿ ʼದುಶ್ಯಲಾʼ
ಮಹಾಭಾರತದಲ್ಲಿ ಬರುವ ‘ದುಶ್ಯಲಾ’ ಧೃತರಾಷ್ಟ್ರ ಗಾಂಧಾರಿಯರ 101 ಜನ ಮಕ್ಕಳಲ್ಲಿ ಏಕೈಕ 101ನೇ ಮುದ್ದಿನ ಕುವರಿ. ಮಹಾಭಾರತದ ತೆರೆಮರೆಗೆ ಸರಿದ ಪಾತ್ರಗಳಲ್ಲಿ ಇವಳ ಪಾತ್ರ ವೂ ಒಂದು. ಕೌರವ ಪಾಂಡವರಿಬ್ಬರಿಗೂ ಇವಳು ಏಕೈಕ ಸಹೋದರಿ. ಸುಂದರಿ ದುಶ್ಯಲಾ ಪಿತಾಮಹ ಭೀಷ್ಮರಿಂದ ಸಮರ ಕಲೆಯನ್ನು ಕಲಿತಿದ್ದಳು


ಒಂದೊಳ್ಳೆ ಮಾತು
ಮಹಾಭಾರತದಲ್ಲಿ ಬರುವ ‘ದುಶ್ಯಲಾ’ ಧೃತರಾಷ್ಟ್ರ ಗಾಂಧಾರಿಯರ 101 ಜನ ಮಕ್ಕಳಲ್ಲಿ ಏಕೈಕ 101ನೇ ಮುದ್ದಿನ ಕುವರಿ. ಮಹಾಭಾರತದ ತೆರೆಮರೆಗೆ ಸರಿದ ಪಾತ್ರಗಳಲ್ಲಿ ಇವಳ ಪಾತ್ರವೂ ಒಂದು. ಕೌರವ ಪಾಂಡವರಿಬ್ಬರಿಗೂ ಇವಳು ಏಕೈಕ ಸಹೋದರಿ. ಸುಂದರಿ ದುಶ್ಯಲಾ ಪಿತಾಮಹ ಭೀಷ್ಮರಿಂದ ಸಮರ ಕಲೆಯನ್ನು ಕಲಿತಿದ್ದಳು. ರಾಜಕುಮಾರಿಯಾಗಿ ಅರಮನೆಯ ಸುಖ ಸಂಪತ್ತಿನಲ್ಲಿ ಬೆಳೆದವಳು. ವಿವಾಹದ ನಂತರ ಕಷ್ಟಗಳ ಸರಮಾಲೆ ಯನ್ನೇ ಎದುರಿಸಬೇಕಾಯಿತು.
ಇವಳನ್ನು ಪರಾಕ್ರಮಿ ರಾಜನಾದ ಜಯದ್ರಥನಿಗೆ ಮೂರನೇ ರಾಣಿಯಾಗಿ ವಿವಾಹ ಮಾಡಲಾಯಿತು. ಸಿಂಧುರಾಜ ಗುಣದಲ್ಲಿ ಕಾಮುಕ, ಹುಡುಕು ಸ್ವಭಾವದವನು. ಇಷ್ಟಾ ಗಿಯೂ ದುರ್ಯೋಧನನಿಗೆ ಭಾವನ ಮೇಲೆ ಅತೀವ ಪ್ರೀತಿ. ಏಕೆಂದರೆ ಜಯದ್ರಥನಿಗೆ ಪಾಂಡವರ ಮೇಲೆ ದ್ವೇಷವಿದ್ದು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.
ಪಾಂಡವರು ದ್ರೌಪತಿ ಜೊತೆ ವನವಾಸದಲ್ಲಿದ್ದಾಗ ಒಮ್ಮೆ ಜಯದ್ರಥ ಪಾಂಡವರು ನೆಲೆಸಿದ್ದ ಕಾಡಿನ ಮಾರ್ಗದಲ್ಲಿ ಬಂದನು. ಅಕಸ್ಮಾತಾಗಿ ಅಲ್ಲಿ ದ್ರೌಪದಿಯನ್ನು ನೋಡಿ ಅವಳ ಸೌಂದರ್ಯಕ್ಕೆ ಮನ ಸೋತು ಅಪಹರಿಸಲು ಪ್ರಯತ್ನಪಟ್ಟಿದ್ದ. ಆದರೆ ಶಕ್ತಿಶಾಲಿ ಯಾದ ಪಾಂಡವರಿಂದ ಸೋತು ಶರಣಾದನು. ತಮ್ಮ ಸಹೋದರಿಯ ಗಂಡ ಎಂದು ಕ್ಷಮಿಸಿ, ಕೊಲ್ಲುವ ಬದಲು ಅವನ ತಲೆಯನ್ನು ಬೋಳಿಸಿ ಅವಮಾನ ಮಾಡಿದ್ದರು.
ಜಯದ್ರಥನು ಈ ಅವಮಾನ ಸಹಿಸಿಕೊಳ್ಳಲಾರದೆ ಪಾಂಡವರ ಮೇಲೆ ಸೇಡು ತೀರಿಸಿ ಕೊಳ್ಳಲು ಅರಣ್ಯಕ್ಕೆ ಹೋಗಿ ಶಿವನ ಕುರಿತು ತಪಸ್ಸು ಮಾಡಿ ಶಿವನಿಂದ ತಾನು ಮಾಡಿದ ಪಾಪಗಳೆನ್ನೆಲ್ಲಾ ಪರಿಹಾರ ಮಾಡಿಕೊಂಡು, ಯುದ್ಧದಲ್ಲಿ ಪಾಂಡವರನ್ನು ತಡೆ ಹಿಡಿಯ ಬಲ್ಲಂಥಾ ವರ ಪಡೆದುಕೊಂಡಿದ್ದ.
ನಂತರ ಕುರುಕ್ಷೇತ್ರಯುದ್ಧ ಪ್ರಾರಂಭವಾದಾಗ ದುರ್ಯೋಧನನ ಪರವಾಗಿ ಯುದ್ಧ ಭೂಮಿಗಿಳಿದನು. ದ್ರೋಣರು ರಚಿಸಿದ ಚಕವ್ಯೂಹದ ಒಳಗೆ ಹೋಗದಂತೆ ಪಾಂಡವರನ್ನು ತಡೆದು ಅರ್ಜುನನ ಮಗ ಅಭಿಮನ್ಯುವಿನ ಸಾವಿಗೆ ಕಾರಣನಾದವನು ಶಿವನವರ ಪಡೆದ ಇದೇ ಜಯದ್ರಥ. ಇದನ್ನು ತಿಳಿದ ಅರ್ಜುನನು ಕೋಪದಿಂದ ಮರುದಿನ ಸೂರ್ಯಸ್ತ ದೊಳಗೆ ಜಯದ್ರಥನನ್ನು ಕೊಂದುಬಿಡುವುದಾಗಿ ಶಪಥ ಮಾಡಿ ಕೃಷ್ಣನ ಸಹಾಯದಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು.
ಈ ಯುದ್ಧದಲ್ಲಿ ಅರ್ಜುನನಿಗೆ ಗೊತ್ತಿಲ್ಲದೆ ದುಶ್ಯಲಾಳ ಮಗ ‘ಸುರದ’ನು ಅವನ ಕೈಯಿಂದ ಹತನಾದನು. ಮಗನ ಸಾವಿನ ಸುದ್ದಿ ತಿಳಿದು ದುಶ್ಯಲಾಳಿಗೆ ಬಹಳ ದುಃಖವಾಯಿತು. ಆ ಸಮಯದಲ್ಲಿ ಅವಳಿಗೆ ಸಾಂತ್ವಾನ ಮಾಡಲು ಕೌರವರು ಪಾಂಡವರು ಇಬ್ಬರೂ ಇರಲಿಲ್ಲ. ಕುರುಕ್ಷೇತ್ರ ಯುದ್ಧಾ ನಂತರ ಹಸ್ತಿನಾಪುರದಲ್ಲಿ ಯುಧಿಷ್ಠಿರ ರಾಜ್ಯಭಾರ ಮಾಡುತ್ತಾ ಅಶ್ವಮೇಧಯಾಗ ಕೈಗೊಂಡನು.
ಯಾಗದ ಅಶ್ವವನ್ನು ಬಿಟ್ಟಾಗ ಅದರ ಹಿಂದೆ ಅರ್ಜುನನೇ ಹೊರಟನು. ಯಾಗದ ಕುದುರೆ ಸಿಂಧೂ ರಾಜ್ಯ ಪ್ರವೇಶಿಸಿತು. ಅಲ್ಲಿ ದುಶ್ಯಲಾಳ ಮೊಮ್ಮಗ ಅದನ್ನು ಬಂಧಿಸಿದನು. ದುಶ್ಯಲಾ ಅರ್ಜುನನ ಮೇಲಿನ ಸಿಟ್ಟಿನಿಂದ ಮೊಮ್ಮಗನೊಡನೆ ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದಳು.
ಸಹೋದರಿ ದುಶ್ಯಲಾಳನ್ನು ನೋಡಿದ ಅರ್ಜುನನು ನೀನು ನಮ್ಮೆಲ್ಲರ ಒಬ್ಬಳೇ ಪ್ರೀತಿಯ ತಂಗಿ ನಿನ್ನೊಡನೆ ಯುದ್ಧ ಮಾಡಲು ಬಂದಿಲ್ಲ ಸಹೋದರನಾಗಿ ಬಂದಿದ್ದೇನೆ ಎಂದಾಗ ದುಶ್ಯಲಾ ಅವನ ಮಾತಿಗೆ ಸೋಲದೆ ನೀನು ನನ್ನ ಪತಿ ಹಾಗೂ ಮಗನನ್ನು ಕೊಂದಿರುವೆ ನಾನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಡಿದೆದ್ದಳು. ಆಗ ಅರ್ಜುನ ಆಕೆಗೆ ಕುರು ಕ್ಷೇತ್ರದಲ್ಲಿ ಮೋಸದಿಂದ ತನ್ನ ಮಗ ಅಭಿಮನ್ಯು ಪ್ರಾಣ ಕಳೆದುಕೊಂಡದ್ದನ್ನೂ, ಜಯಾದ್ರತನ ಕುತಂತ್ರ ಎಲ್ಲವನ್ನೂ ವಿವರಿಸಿದನು.
ನಿಜಾಂಶವನ್ನು ಅರಿತ ದುಶ್ಯಲೆ ಅರ್ಜುನನಿಗೆ ಕ್ಷಮಾಪಣೆಯನ್ನು ಕೇಳಿದಳು. ಅರ್ಜುನ ದುಶ್ಯಲೆಯ ಮೊಮ್ಮಗನನ್ನು ಸಿಂಧು ರಾಜ್ಯಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದನು. ಕೌರವ ಸಹೋದರರೆಲ್ಲರೂ ಅಧರ್ಮೀಯರಾಗಿದ್ದರೂ ದುಶ್ಯಲಾ ಎಂದಿಗೂ ಧರ್ಮ ಮಾರ್ಗದಲ್ಲಿ ನಡೆದಳು.
ಮಹಾಭಾರತದಲ್ಲಿ ಇವಳ ಪಾತ್ರ ತೆರೆಮರೆಯಲ್ಲಿದ್ದರೂ ಸಹ ಇಂದಿಗೂ ಜನಮನದಲ್ಲಿ ನೆಲೆಸಿದ್ದಾಳೆ. ಭಾರತದಲ್ಲಿ ಇವಳ ಹೆಸರಿನಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಕೇರಳದ ಒಂದು ದೇವಾಲಯ ಪ್ರಮುಖವಾಗಿದ್ದು ನಿತ್ಯವೂ ಇಲ್ಲಿ ದುಶ್ಯಲೆಗೆ ಪೂಜೆ ಸಲ್ಲುತ್ತದೆ. ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ನಿರ್ಧಾರ ಮಾಡಿದರೆ, ಎಂತಹ ಸಂದರ್ಭದಲ್ಲೂ ಅದನ್ನು ನಿಭಾಯಿಸಬಹುದು ಎನ್ನುವುದಕ್ಕೆ ದುಶ್ಯಲೆಯ ಕಥೆ ಒಳ್ಳೆಯ ಉದಾಹರಣೆ.