ಆರ್ಥಿಕ ಶಕ್ತಿಯ ತವರು ಕಡಲ ತೀರದ ಬಂದರು
ಮೂರು ಭಾಗಗಳಲ್ಲಿ ಕಡಲು, ಒಂದೆಡೆ ಪರ್ವತ ಶ್ರೇಣಿ ಹೊಂದಿ ಪರ್ಯಾಯ ದ್ವೀಪ ಎನಿಸಿಕೊಂಡಿ ರುವ ಭರತ ಖಂಡ ಅರ್ಥಾತ್ ಭಾರತ ದೇಶಕ್ಕೆ ಕಡಲ ತೀರವೇ ದೊಡ್ಡ ಶಕ್ತಿಯಾಗಿದೆ. ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಭಾರತ ದೇಶಕ್ಕೆ ವಿದೇಶಿ ವ್ಯಾಪಾರ ಕ್ಷೇತ್ರಕ್ಕೆ ವಿಪುಲ ಅವಕಾಶಗಳನ್ನು ತೆರೆದಿಟ್ಟಿದೆ. ಜತೆಗೆ ಸಾಗರ ಉತ್ಪನ್ನ ಗಳಿಗೂ ದೊಡ್ಡಮಟ್ಟದ ಅವಕಾಶ ಮಾಡಿಕೊಟ್ಟಿದೆ


ಬಿ.ವಿ.ಮಹೇಶ್ ಚಂದ್ರ
ಮೂರು ಭಾಗಗಳಲ್ಲಿ ಕಡಲು, ಒಂದೆಡೆ ಪರ್ವತ ಶ್ರೇಣಿ ಹೊಂದಿ ಪರ್ಯಾಯ ದ್ವೀಪ ಎನಿಸಿಕೊಂಡಿ ರುವ ಭರತ ಖಂಡ ಅರ್ಥಾತ್ ಭಾರತ ದೇಶಕ್ಕೆ ಕಡಲ ತೀರವೇ ದೊಡ್ಡ ಶಕ್ತಿಯಾಗಿದೆ. ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಭಾರತ ದೇಶಕ್ಕೆ ವಿದೇಶಿ ವ್ಯಾಪಾರ ಕ್ಷೇತ್ರಕ್ಕೆ ವಿಪುಲ ಅವಕಾಶಗಳನ್ನು ತೆರೆದಿಟ್ಟಿದೆ. ಜತೆಗೆ ಸಾಗರ ಉತ್ಪನ್ನ ಗಳಿಗೂ ದೊಡ್ಡಮಟ್ಟದ ಅವಕಾಶ ಮಾಡಿಕೊಟ್ಟಿದೆ. ಮೂರೂ ಬದಿಗಳಲ್ಲಿ 5600 ಕಿ.ಮೀ.ಗಳಷ್ಟು ಉದ್ದವಾಗಿ ಕಡಲ ತೀರವನ್ನು ಹೊಂದಿರುವ ಭಾರತ ಈವರೆಗೆ ದೊಡ್ಡ ಮಟ್ಟದ 13 ಬಂದರು ಗಳನ್ನು ಹೊಂದಿತ್ತು. ಈಗ 14ನೆಯದಾಗಿ ಕೇರಳದ ತಿರುವನಂತಪುರದ ಕಡಲ ತೀರದಲ್ಲಿನ ‘ವಿಳಿಂಜಂ ಅಂತಾರಾಷ್ಟ್ರೀಯ ಬಂದರು’ ಸೇರ್ಪಡೆ ಯಾಗಿದೆ. ಶುಕ್ರವಾರವಷ್ಟೇ ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಗೊಂಡಿದೆ.
ಇದಲ್ಲದೇ, 185 ಸಣ್ಣ ಬಂದರುಗಳು ದೇಶದ ಮೂರೂ ದಿಕ್ಕುಗಳಲ್ಲಿ ಇರುವ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಕಡಲ ಕಿನಾರೆಯಲ್ಲಿ ನೆಲೆಗೊಂಡಿವೆ.
ಕೋಲ್ಕತ್ತ ಬಂದರು
ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಕೋಲ್ಕತ್ತ ಬಂದರು (ಶ್ಯಾಮ ಪ್ರಸಾದ್ ಮುಖರ್ಜಿ ಬಂದರು) ನೆಲೆಗೊಂಡಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಬಂದರು ಪುರಾತನ ಎನಿಸಿಕೊಂಡಿದೆ. ಅಲ್ಲದೇ, ನದಿ ಹರಿವಿಗೆ ಮುಖ ಮಾಡಿದ ದೇಶದ ಏಕಮೇವ ಬಂದರು ಎಂಬ ಹಿರಿಮೆಯೂ ಇದಕ್ಕಿದೆ. ಈ ಬಂದರಿನಲ್ಲಿ 2 ಡಾಕ್ ವ್ಯವಸ್ಥೆಗಳಿವೆ. ಪಶ್ಚಿಮ ದಂಡೆಯಲ್ಲಿ ಕೋಲ್ಕತ್ತ ಡಾಕ್ ಸಿಸ್ಟಂ(ಕೆಡಿಎಸ್), ಪೂರ್ವ ಕಿನಾರೆಯಲ್ಲಿ ಹೂಗ್ಲಿ ನದಿ ದಂಡೆಯಲ್ಲಿ ಹಲ್ದಿಯ ಡಾಕ್ ಕಾಂಪ್ಲೆಕ್ಸ್ (ಎಚ್‌ಡಿಸಿ) ಇದೆ.
ಇದನ್ನೂ ಓದಿ: Kiran Upadhyay Column: ಹಾಂಗ್ ಕಾಂಗ್ ನಲ್ಲಿ ಹರಿಶ್ಚಂದ್ರ...!
ಪಾರಾದೀಪ್ ಬಂದರು
ಬಂಗಾಳ ಕೊಲ್ಲಿಗೆ ಮುಖ ಮಾಡಿರುವ ಒಡಿಶಾ ರಾಜ್ಯದಲ್ಲಿ ಈ ಬಂದರು ನೆಲೆಗೊಂಡಿದೆ. ಮಹಾ ನದಿಯ ಹರಿವಿಗೆ ಸೇರಿಕೊಂಡಿದೆ. ದೇಶ ಸ್ವತಂತ್ರವಾದ ಬಳಿಕ ನಿರ್ಮಾಣಗೊಂಡ ಮೊದಲ ಬಂದರು ಎನಿಸಿಕೊಂಡಿದೆ.
ಕೊಚ್ಚಿ ಬಂದರು
ಭಾರತದ ನೈಋತ್ಯ ದಿಕ್ಕಿನಲ್ಲಿ ವಿಲ್ಲಿಂಗ್ಟನ್ ಐಲ್ಯಾಂಡ್‌ನಲ್ಲಿರುವ ಈ ಬಂದರು ಪೂರ್ವ ದಿಕ್ಕು ಮತ್ತು ಪಶ್ವಿಮ ದಿಕ್ಕುಗಳ ಮಧ್ಯಕ್ಕೆ ಬಂದಂತಿದ್ದು, ಎರಡೂ ದಿಸೆಗಳಲ್ಲಿ ವಾಣಿಜ್ಯ ನೌಕೆಗಳ
ಪಯಣಕ್ಕೆ ಅನುಕೂಲಕಾರಿಯಾಗಿದೆ. ದಕ್ಷಿಣ ಭಾರತದಲ್ಲಿನ ಕೃಷಿ ಉತ್ಪನ್ನಗಳು ಮತ್ತು ಕೈಗಾರಿಕೆ ಗಳ ಸಾಮಗ್ರಿ ಗಳನ್ನು ಪೂರ್ವ ಮತ್ತು ಪಶ್ಚಿಮ ದೇಶಗಳಿಗೆ ರವಾನಿಸಲು ಈ ಬಂದರು ಸಹಕಾರಿ ಯಾಗಿದೆ.
ಜವಾಹರಲಾಲ್ ನೆಹರು ಬಂದರು
ಭಾರತದ ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರ ಕಿನಾರೆಯಲ್ಲಿರುವ ಈ ಬಂದರನ್ನು ನವ ಶೇವಾ ಬಂದರು ಎಂದೂ ಕರೆಯಲಾಗುತ್ತದೆ. ದೇಶದಲ್ಲಿನ ಕಂಟೇನರ್‌ಗಳ ಒಟ್ಟು ಸಾಗಣೆಯಲ್ಲಿ ಅರ್ಧ ದಷ್ಟನ್ನು ಇಲ್ಲಿಂದಲೇ ನಿರ್ವಹಿಸಲಾಗುತ್ತಿದೆ. ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ದೇಶದಲ್ಲಿ ಅತ್ಯಂತ ದೊಡ್ಡದು ಎನಿಸಿಕೊಂಡಿದೆ.
ಮುಂಬೈ ಬಂದರು
ಭಾರತದ ಅತಿ ಪುರಾತನ ಬಂದರುಗಳಲ್ಲಿ ಮುಂಬೈ ಬಂದರು ಕೂಡಾ ಸೇರಿದೆ. ಅತ್ಯಂತ ವಿಶಾಲ ವಾದ ಬಂದರು ಎನಿಸಿಕೊಂಡಿದೆ. ದೇಶದ ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರದಲ್ಲಿರುವ ಈ ಬಂದರು ದೇಶದ ಒಟ್ಟಾರೆ ವಾಣಿಜ್ಯ ಚಟುವಟಿಕೆಗಳಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಕಾಂಡ್ಲಾ ಬಂದರು
ಅಖಂಡ ಭಾರತದಿಂದ ಪಾಕಿಸ್ತಾನ ವಿಭಜನೆಯಾಗಿ ಕರಾಚಿ ಬಂದರು ಹೊಸ ದೇಶದ ಪಾಲಾದ ಬಳಿಕ ಗುಜರಾತ್ ರಾಜ್ಯದಲ್ಲಿ ಅರಬ್ಬಿ ಸಮುದ್ರಕ್ಕೆ ಮುಖ ಮಾಡಿ ಕಾಂಡ್ಲಾ ಬಂದರು ನಿರ್ಮಿಸ ಲಾಗಿದೆ. ಕಚ್ಚಾತೈಲ ಆಮದು ವಹಿವಾಟಿನಲ್ಲಿ ಈ ಬಂದರಿನ ಪಾತ್ರ ಬಹಳ ದೊಡ್ಡದಿದೆ.
ವಿಶಾಖಪಟ್ಟಣಂ ಬಂದರು
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಈ ಕಡಲ ಕಟ್ಟೆಯನ್ನು ವೈಜಾಗ್ ಬಂದರು ಎಂದೂ ಕರೆಯಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಕಾರ್ಗೊ ಶಿಪ್‌ಗಳನ್ನು ದೇಶದ ಪೂರ್ವ ದಿಕ್ಕಿನಲ್ಲಿ ಬಂಗಾಳ ಕೊಲ್ಲಿಗೆ ಸೇರಿಕೊಂಡಿರುವ ಈ ಬಂದರಿನಲ್ಲಿ ನಿರ್ವಹಣೆ ಮಾಡಲಾಗುತ್ತದೆ.
ಚೆನ್ನೈ ಬಂದರು
ಬಂಗಾಳ ಕೊಲ್ಲಿ ಭಾಗದಲ್ಲಿಯೇ ಅತ್ಯಂತ ದೊಡ್ಡ ಬಂದರು ಚೆನ್ನೈನಲ್ಲಿರುವುದಾಗಿದೆ. ದೇಶದಲ್ಲೇ 2ನೇ ಅತ್ಯಂತ ದೊಡ್ಡ ಬಂದರು ಎನಿಸಿಕೊಂಡಿದೆ.
ತೂತ್ತುಕುಡಿ ಬಂದರು
ತಮಿಳುನಾಡಿನ 2ನೇ ಪ್ರಮುಖ ಬಂದರು ತೂತ್ತು ಕುಡಿಯಲ್ಲಿರುವ ವಿ.ಒ.ಚಿದಂಬರನಾರ್ ಬಂದರು. ಗಲ್ಫ್ ಆಫ್ ಮನ್ನಾರ್‌ನಲ್ಲಿರುವ ಈ ಬಂದರು ಅಮೆರಿಕಕ್ಕೆ ಪ್ರತಿವಾರವೂ ಬೃಹತ್ ಹಡಗುಗಳಲ್ಲಿ ಸರಕುಗಳನ್ನು ರವಾನೆ ಮಾಡುತ್ತದೆ. ಹಾಗಾಗಿ ದಕ್ಷಿಣ ಭಾರತದ ಈ ಬಂದರಿಗೆ ವಾಣಿಜ್ಯ ಚಟುವಟಿಕೆ ಯಲ್ಲಿ ಮಹತ್ವದ ಸ್ಥಾನವಿದೆ.
ಎಣ್ಣೋರ್ ಬಂದರು
ತಮಿಳುನಾಡಿನ ಮೂರನೇ ಪ್ರಮುಖ ಬಂದರು ‘ಕಾಮರಾಜರ್ ಪೋರ್ಟ್ ಲಿ.’ ಇಲ್ಲಿದೆ. ಇದು ದೇಶದ ಮೊಟ್ಟ ಮೊದಲು ಕಾರ್ಪೊರೇಟ್ ಬಂದರು ಎನಿಸಿಕೊಂಡಿದೆ. ಶೇ.68 ಸರಕಾರದ ಒಡೆತನ, ಉಳಿದ ಶೇ.32 ಷೇರು ಪಾಲು ಖಾಸಗಿ ಒಡೆತನದಲ್ಲಿದೆ. ಸಾರ್ವಜನಿಕ ಕಂಪನಿಯಾಗಿ ನೋಂದಣಿ ಹೊಂದಿದೆ. ಮರ್ಮಗೋವಾ ಬಂದರು ಗೋವಾ ರಾಜ್ಯದಲ್ಲಿರುವ ಈ ಮರ್ಮಗೋವಾ ಬಂದರು ಅರಬ್ಬಿ ಸಮುದ್ರಕ್ಕೆ ತೆರೆದುಕೊಂಡಿದೆ. ಕಬ್ಬಿಣದ ಅದಿರುವ ರಫ್ತು ವಹಿವಾಟಿಗೆ ದೊಡ್ಡ ಕೊಡುಗೆ ಕೊಡು ತ್ತಿದೆ.
ಪೋರ್ಟ್ ಬ್ಲೇರ್ ಬಂದರು
2010ರಲ್ಲಿ ಘೋಷಣೆಯಾದ ಈ ಪೋರ್ಟ್ ಬ್ಲೇರ್ ಬಂದರು ದೇಶದ 13ನೇ ಬಂದರಾಗಿದೆ. ಸೌದಿ ಅರೇಬಿಯ ಮತ್ತು ಸಿಂಗಪುರ ಸಮುದ್ರ ಮಾರ್ಗಕ್ಕೆ ಹಾಗೂ ಅಮೆರಿಕ-ಸಿಂಗಪುರ ಸಮುದ್ರ ಮಾರ್ಗಕ್ಕೆ ಬಹಳ ಸಮೀಪವಾಗಿರುವ ಈ ಬಂದರು ಭಾರತದ ಆಮದು-ರಫ್ತು ವಹಿವಾಟಿನಲ್ಲಿ ಬಹಳಪ್ರಮುಖ ಪಾತ್ರ ವಹಿಸುತ್ತದೆ.
ತಮಿಳುನಾಡು ಗರಿಮೆ
ದೇಶದ ಪೂರ್ವದ ದಿಶೆಯಲ್ಲಿರುವ ತಮಿಳುನಾಡು ರಾಜ್ಯ ದೇಶದಲ್ಲೇ ಅತ್ಯಧಿಕ (3) ಬಂದರು ಗಳನ್ನು ಹೊಂದಿರುವ ಹಿರಿಮೆಗೆ ಪಾತ್ರವಾಗಿದೆ. ತೂತ್ತುಕುಡಿ, ಚೆನ್ನೈ ಮತ್ತು ಎಣ್ಣೋರ್‌ನಲ್ಲಿ ದೊಡ್ಡ ಬಂದರುಗಳಿವೆ. 2ನೇ ಸ್ಥಾನದಲ್ಲಿ ಮಹಾ ರಾಷ್ಟ್ರ ಮತ್ತು ಕೇರಳ ಇವೆ. ಎರಡೂ ರಾಜ್ಯ ಗಳಲ್ಲಿ ತಲಾ ಎರಡು ಬೃಹತ್ ಬಂದರುಗಳು ಇವೆ. ಉಳಿದಂತೆ ಆಂಧ್ರಪ್ರದೇಶ, ಒಡಿಶಾ, ಕರ್ನಾಟಕ, ಗುಜರಾತ್, ಗೋವಾ, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಬೃಹತ್ ಪ್ರಮಾಣದ ವಾಣಿಜ್ಯ ಬಂದರುಗಳಿವೆ.
ನವ ಮಂಗಳೂರು
ಕರ್ನಾಟಕದ ಪಶ್ಚಿಮ ಕಡಲ ತೀರದಲ್ಲಿ ಅರಬ್ಬಿ ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ನವ ಮಂಗಳೂರು ಬಂದರನ್ನು ‘ಸರ್ವ ಋತು ಬಂದರು’ ಎಂದೂ ಕರೆಯಲಾಗುತ್ತದೆ. ಮಂಗಳೂರು ಮಹಾನಗರದ ಪಣಂಬೂರು ಪ್ರದೇಶದಲ್ಲಿ ಗುರುಪುರ ನದಿ ಅರಬ್ಬಿ ಸಮುದ್ರವನ್ನು ಸೇರುವಲ್ಲಿ ಬಂದರು ನಿರ್ಮಾಣಗೊಂಡಿದೆ. ಸಹಜವಾದ ಆಳ ಸಮುದ್ರ ತೀರವನ್ನು ಇದು ಒಳಗೊಂಡಿದೆ.
ವಿಳಿಂಜಂ
ತಿರುವನಂತಪುರ ಜಿಯಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಬಂದರು ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ (ರಫ್ತು -ಆಮದು) ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಸರಕು ಸಾಗಣೆಯಲ್ಲಿ ಭಾರತದ ಪಾತ್ರವನ್ನು ದೊಡ್ಡ ಮಟ್ಟದಲ್ಲಿ ಗುರುತಿಸುವಂತೆ ಮಾಡಲಿದೆ. ಆಳವಾದ ಸಮುದ್ರ ತೀರದ ಈ ಬಂದರನ್ನು ಭಾರತದ ಅತಿದೊಡ್ಡ ಬಂದರು ಎನಿಸಿಕೊಂಡಿದೆ. 2015ರ ಡಿ.5ರಂದು ಬಂದರು ನಿರ್ಮಾಣ ಕಾಮಗಾರಿಗೆ ವಿಳಿಂಜಂ ಪೋರ್ಟ್ ಪ್ರೈ.ಲಿ. ಶಂಕುಸ್ಥಾಪನೆ ಮಾಡಿ 2017ರಲ್ಲಿ ಕಾಮಗಾರಿ ಆರಂಭಿಸಿತು. 2022ರಲ್ಲಿ ಮೊದಲ ಹಂತ ಪೂರ್ಣಗೊಳಿಸಿದೆ. ಬಂದರು ತೀರ ನೈಸರ್ಗಿಕ ವಾಗಿಯೇ 20 ಮೀಟರ್ ಆಳವಾಗಿದೆ. ಸೆಮಿ ಆಟೊಮ್ಯಾಟಿಕ್, ಕೃತಕ ಬುದ್ಧಿಮತ್ತೆ ಆಧರಿಸಿ ನೌಕೆಗಳ ಸಂಚಾರ ನಿರ್ವಹಣೆ ಮಾಡುವ ಸೌಲಭ್ಯವನ್ನೂ ಈ ಬಂದರು ಒಳಗೊಂಡಿದೆ.
8867 ಕೋ
8867 ಕೋಟಿ ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಕೇಂದ್ರ, ರಾಜ್ಯ ಸರಕಾರಗಳು ಹಾಗೂ ಅದಾನಿ ಸಮೂಹದ ಜಂಟಿ ಸಹಭಾಗಿತ್ವದಲ್ಲಿ ‘ಪಿಪಿಪಿ’ ಶೈಲಿಯಲ್ಲಿ 8867 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ತಿರುವನಂತಪುರದ ಕಡಲ ತೀರದಲ್ಲಿರುವ ಈ ವಾಣಿಜ್ಯ ಬಂದರು ಕಂಟೇ ನರ್ ಸಾಗಣೆಗೆ ಪೂರ್ಣ ಮೀಸಲಾದ ದೇಶದ ಮೊದಲ ಬಂದರು ಎನಿಸಿಕೊಂಡಿದೆ. ಪಶ್ಚಿಮ ದಿಕ್ಕಿ ನೆಡೆಗೆ ಮುಖ ಮಾಡಿರುವ ಈ ಬಂದರು ಅರಬ್ ರಾಷ್ಟ್ರಗಳು, ಯೂರೋಪ್ ದೇಶಗಳತ್ತ ಸರಕು ಸಾಗಣೆಗೆ ಶ್ರಮಿಸಲಿದೆ. ವಿಶ್ವದ ಅತ್ಯಂತ ದಟ್ಟಣೆಯ ಸಮುದ್ರ ವ್ಯಾಪಾರ ಮಾರ್ಗವಾದ ಕಡಲಲ್ಲಿ ಈ ಬಂದರು ಇರುವುದರಿಂದ ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ. ಹಾಗಾಗಿಯೇ ಈ ‘ವಿಳಿಂಜಂ’ ಅಂತಾರಾಷ್ಟ್ರೀಯ ಬಂದರನ್ನು ದೇಶದ ಭವಿಷ್ಯದ ಹೆಬ್ಬಾಗಿಲು ಎಂದೇ ಕರೆಯಲಾಗಿದೆ.