High Heels Side Effects: ನೀವು ಹೈ ಹೀಲ್ಸ್ ಪ್ರಿಯರೇ? ಹಾಗಾದರೆ ಇದನ್ನು ಓದಲೇಬೇಕು!
ಮಹಿಳೆಯರನ್ನು ಹೆಚ್ಚು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವ, ಇನ್ನಷ್ಟು ಎತ್ತರವಾಗಿಸುವ, ಹಾಕಿದ ಧಿರಿಸುಗಳಲ್ಲಿ ಮಾದಕತೆ ಹೆಚ್ಚಿಸುವ ಅಥವಾ ಇನ್ನೂ ಏನೇನೋ ಕಾರಣಗಳಿಗಾಗಿ ಎತ್ತರದ ಚಪ್ಪಲಿಗಳನ್ನು ತೊಡುವವರ ಸಂಖ್ಯೆ ವ್ಯಾಪಕವಾಗಿದೆ. ಆದರೆ ಇದರಿಂದ ಅಲ್ಪಕಾಲದ ಆರೋಗ್ಯ ತೊಂದರೆಗಳಿಂದ ಹಿಡಿದು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳವರೆಗೆ ಹಲವು ರೀತಿಯವು ಗಂಟು ಬೀಳಬಹುದು.
ಬೆಡಗು-ಬಿನ್ನಾಣಗಳನ್ನು ಉಡುಗೆಯಲ್ಲಿ ಕಾಣಿಸಿದಂತೆಯೆ ತೊಡುಗೆಯಲ್ಲೂ ತೋರಿಸಿಕೊಳ್ಳುವ ಹಂಬಲ ಹಲವರದ್ದಿರುತ್ತದೆ. ಹಾಗೆಂದೇ ಪಾರ್ಟಿ ಟೈಮ್ ಎನ್ನುತ್ತಿದ್ದಂತೆ ಸೂಜಿಮೊನೆಯಂಥ ಹೀಲ್ಸ್ ಇರುವ ಪಾದರಕ್ಷೆಗಳೂ ಸಿದ್ಧವಾಗುತ್ತವೆ(High Heels Side Effects). ಹೈ ಹೀಲ್ಸ್, ಪೆನ್ಸಿಲ್ ಹೀಲ್ಸ್ ತೊಟ್ಟ ತರುಣಿಯರ ಗುಂಪು ಕಾಣುವುದು ಹೊಸದೇನಲ್ಲ. ಒನವು-ವಯ್ಯಾರಗಳಿಗೆ ಇವೆಲ್ಲ ಬೇಕು ಎನಿಸಿದರೂ, ದೀರ್ಘಕಾಲದವರೆಗೆ ಈ ಎತ್ತರದ ಪಾದರಕ್ಷೆಗಳನ್ನು ಧರಿಸಿದಾಗ ಆಗುವ ಅಡ್ಡ ಪರಿಣಾಮಗಳ ಬಗ್ಗೆ ನಮಗೆ ಅರಿವಿದೆಯೇ?
ಮಹಿಳೆಯರನ್ನು ಹೆಚ್ಚು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವ, ಇನ್ನಷ್ಟು ಎತ್ತರವಾಗಿಸುವ, ಹಾಕಿದ ಧಿರಿಸುಗಳಲ್ಲಿ ಮಾದಕತೆ ಹೆಚ್ಚಿಸುವ ಅಥವಾ ಇನ್ನೂ ಏನೇನೋ ಕಾರಣಗಳಿಗಾಗಿ ಎತ್ತರದ ಚಪ್ಪಲಿಗಳನ್ನು ತೊಡುವವರ ಸಂಖ್ಯೆ ವ್ಯಾಪಕವಾಗಿದೆ. ಆದರೆ ಇದರಿಂದ ಅಲ್ಪಕಾಲದ ಆರೋಗ್ಯ ತೊಂದರೆಗಳಿಂದ ಹಿಡಿದು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳವರೆಗೆ ಹಲವು ರೀತಿಯವು ಗಂಟು ಬೀಳಬಹುದು. ಏನವು? ನೋಡೋಣ.
ಬೆನ್ನುನೋವು: ಹೈಹೀಲ್ಸ್ ಅಥವಾ ಪೆನ್ಸಿಲ್ ಹೀಲ್ ಚಪ್ಪಲಿಗಳು ಕಾಲುಗಳಿಗೆ ಅಗತ್ಯವಾದ ಆಧಾರವನ್ನು ಕೊಡುವುದಿಲ್ಲ. ಹಾಗಾಗಿ ದೇಹದ ತೂಕವು, ಕಟಿಯಿಂದ ಕೆಳಭಾಗದಲ್ಲಿ ಬೇಕಾಬಿಟ್ಟಿ ಹಂಚಿಕೆಯಾಗುತ್ತದೆ. ಇದರಿಂದಾಗಿ ಕೆಳಭಾಗದ ಬೆನ್ನಿನಲ್ಲಿ ಉರಿಯೂತ, ನೋವು ಸಹಜ. ಹಾಗಾಗಿ ಸದಾಕಾಲ ಎತ್ತರದ ಚಪ್ಪಲಿ ಮೆಟ್ಟುವವರು ಬೆನ್ನುನೋವಿನಿಂದ ಬಳಲುವುದು ಸಾಮಾನ್ಯ.
ಕಾಲುನೋವು: ಬಿಗಿಯಾದ, ಎತ್ತರದ ಮತ್ತು ಇಡುವಾದ ಚಪ್ಪಲಿಗಳ ರೂಪದಲ್ಲೇ ʻಕಿಲ್ಲಿಂಗ್ ಹೀಲ್ಸ್ʼ ದೊರೆಯುವುದು. ಅದರಲ್ಲೂ ಬೆರಳುಗಳನ್ನು ಬಿಗಿದು ಕಟ್ಟಿದಂತೆ ಇರುವ ಈ ಪಾದರಕ್ಷೆಗಳಿಂದ ಗೆಜ್ಜೆ ಧರಿಸುವ ಕೀಲು, ಪಾದ, ಹಿಮ್ಮಡಿ ಮತ್ತು ಬೆರಳುಗಳಲ್ಲಿ ಚುಚ್ಚಿದಂಥ ನೋವು ಕಾಣುತ್ತದೆ. ಇವೆಲ್ಲವನ್ನೂ ಸಹಿಸಿಕೊಂಡು ಮುಖದಲ್ಲಿ ನಗು ತಂದುಕೊಳ್ಳುವುದು… ಕಷ್ಟ!
ರಕ್ತನಾಳಗಳಲ್ಲಿ ತೊಂದರೆ: ಚಪ್ಪಲಿಗೂ ರಕ್ತನಾಳಗಳಿಗೆ ಎಲ್ಲಿಂದೆಲ್ಲಿಯ ಸಂಬಂಧ ಎಂದು ಭಾವಿಸಬೇಡಿ. ದೇಹಕ್ಕೆ ಇಲ್ಲದಿರುವ ಎತ್ತರವನ್ನು ಕಲ್ಪಿಸುವ ಉದ್ದೇಶದಿಂದ ತಯಾರಾದ ಈ ಚಪ್ಪಲಿಗಳು, ಕಾಲುಗಳನ್ನು ಬಿಗಿಯಾಗಿ ಹಿಡಿಯಬೇಕಾದ್ದು ಅನಿವಾರ್ಯ. ಹಾಗಿಲ್ಲದಿದ್ದರೆ ಪಾದ ಮಡಿಸಿಕೊಂಡು, ಮುಗ್ಗರಿಸಿ ಮುಸುಡಿ ಒಡೆದುಕೊಳ್ಳಬೇಕಾದೀತು. ಆದರೆ ಈ ಅತಿಯಾದ ಬಿಗಿಯೇ ರಕ್ತನಾಳಗಳು ಸಂಕೋಚಗೊಳ್ಳುವಂತೆ ಮಾಡುತ್ತವೆ.
ಬೆನ್ನುಹುರಿ: ಚೂಪಾದ, ಎತ್ತರದ ವಸ್ತುವಿನ ಮೇಲೆ ನಿಲ್ಲುವುದೇ ಕಷ್ಟವಿರುವಾಗ, ಅದನ್ನು ಧರಿಸಿ ನಡೆಯುವುದು ಇನ್ನೂ ದುಸ್ತರ. ಈ ಡೊಂಬರಾಟದಲ್ಲಿ ಅತಿ ಹೆಚ್ಚಿನ ಒತ್ತಡ ಬೀಳುವುದು ಬೆನ್ನು ಹುರಿಯ ಮೇಲೆ. ಬೆನ್ನಿನ ಬಾಗು ತನ್ನ ನೈಸರ್ಗಿಕ ಸ್ವರೂಪವನ್ನು ಕಳೆದುಕೊಂಡು, ವಿರೂಪವಾಗಿ ಬೆನ್ನು ಹುರಿಯ ನೋವು ಕಾಡಬಹುದು.
ಲಿಗಮೆಂಟ್‌ಗಳು ದುರ್ಬಲ: ನಾವು ಧರಿಸುವ ಪಾದರಕ್ಷೆಗಳು ನಮ್ಮ ಕಾಲಿಗೆ ಹೆಚ್ಚಿನ ಬಲ ನೀಡುವಂತಿರಬೇಕು. ಆದರೆ ಇರುವ ಬಲವನ್ನೆಲ್ಲ ಈ ಹೀಲ್ಸ್‌ಗಳ ಮೇಲೆ ನಿಂತು ನಡೆಯುವುದಕ್ಕೇ ಉಪಯೋಗಿಸಬೇಕಾಗುತ್ತದೆ. ಹಾಗಾಗಿ ಕ್ರಮೇಣ ಕಾಲುಗಳ ಲಿಗಮೆಂಟ್‌ಗಳು ದುರ್ಬಲವಾಗತೊಡಗುತ್ತವೆ. ಕೇವಲ ಅದೊಂದೇ ಅಲ್ಲ, ಉಳಿದೆಲ್ಲ ಸ್ನಾಯುಗಳು ಸಹ ಬಲ ಕಳೆದುಕೊಳ್ಳಬಹುದು.
ಮಂಡಿ ನೋವು: ಇಂಥ ಯಾವುದೇ ಕಾರಣಗಳು ಇಲ್ಲದೆಯೇ ಮಂಡಿ ನೋವಿನ ದೂರುಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಹೀಗಿರುವಾಗ ಸದಾಕಾಲ ಎತ್ತರದ ಹಿಮ್ಮಡಿಯ, ಅವೈಜ್ಞಾನಿಕ ಚಪ್ಪಲಿಗಳು ಮಂಡಿಯ ಸವೆತವನ್ನು ತೀವ್ರಗೊಳಿಸಬಲ್ಲವು. ಆಸ್ಟಿಯೊ ಆರ್ಥರೈಟಿಸ್ ಅವಧಿಗಿಂತಲೂ ಬೇಗನೇ ಬಂದು ಅಮರಿಕೊಳ್ಳಬಹುದು.
ಮೂಳೆ ಮುರಿತ: ಅಭ್ಯಾವಿಲ್ಲದವ ಅಗ್ನಿಹೋತ್ರ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡ ಕಥೆ ಕೇಳಿರಬಹುದು. ಇದೂ ಹಾಗೆಯೆ. ಇಂಥ ಡೊಂಬರಾಟದ ಚಪ್ಪಲಿಗಳನ್ನು ಧರಿಸಿ ನಡೆಯಲು ಹೋಗಿ, ತೊಡರಿಕೊಂಡು ಮುಗ್ಗರಿಸಿ ಬಿದ್ದು ಮೂಳೆ ಮುರಿದುಕೊಂಡವರ ಕಥೆಗಳು ಕಡಿಮೆಯೇನಿಲ್ಲ.
ಇದನ್ನು ಓದಿ: Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!
ಇಷ್ಟಕ್ಕೂ ಚಂದವೆಂಬುದು ನೋಡುವವರ ಕಣ್ಣಲ್ಲಿ ತಾನೇ ಇರುವುದು? ಹಾಗಾಗಿ ಇಂಥ ದುರವಸ್ಥೆಯ ಬಾಹ್ಯ ಸೌಂದರ್ಯದ ಬದಲು, ಎಲ್ಲರನ್ನೂ ಸೆಳೆಯುವ ಆಂತರಿಕ ಸೌಂದರ್ಯದತ್ತ ಗಮನ ನೀಡಿ. ಇದರಿಂದ ಆರೋಗ್ಯ ಸುಧಾರಿಸುತ್ತದೆಯೇ ಹೊರತು ಹಾಳಾಗದು.