CM Change Remarks: ಸಿಎಂ ಬದಲಾವಣೆಗೆ ಬೇಡಿಕೆ; ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ ಕೆಪಿಸಿಸಿ ನೋಟಿಸ್
CM Change Remarks: ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಹೇಳಿಕೆ ನೀಡಿದ ಹಿನ್ನೆಲೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್ ನೀಡಲಾಗಿದೆ. ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರೆ ಸಿಎಂ ಬದಲಾಗಬೇಕು ಎಂಬ ಹೇಳಿಕೆ ನೀಡಿದ್ದ ರಾಮನಗರ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ (H. A. Iqbal Hussain) ಅವರಿಗೆ ಕೆಪಿಸಿಸಿ ನೋಟಿಸ್ ನೀಡಿದೆ. ಮುಖ್ಯಮಂತ್ರಿಗಳ ಬದಲಾವಣೆ (CM Change Remarks) ವಿಚಾರವಾಗಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಕಾರಣ ಕೇಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೋಟಿಸ್ ನೀಡಿದ್ದಾರೆ.
ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟೀಸು ನೀಡಲಾಗಿದೆ. ತಾವು ಈ ನೋಟಿಸ್ ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸೂಚಿಸಲಾಗಿದೆ.
ಈ ಸುದ್ದಿಯನ್ನೂ ಓದಿ | CM Siddaramaiah: ನಮ್ಮ ಸರ್ಕಾರ ʼಬಂಡೆʼಯಂತೆ ಐದು ವರ್ಷ ಭದ್ರವಾಗಿರುತ್ತದೆ-ಸಿದ್ದರಾಮಯ್ಯ
ಇಕ್ಬಾಲ್ ಹುಸೇನ್ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಶಾಸಕರ ಜತೆ ಸಭೆ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು. ಅವರು ಪಕ್ಷ ಸಂಘಟನೆ ಮಾಡಿದ್ದು, ಸರ್ಕಾರ ಬರಲು ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ಎಲ್ಲ ಶಾಸಕರು ಬೆಂಬಲ ಕೊಡುತ್ತಾರೆ. ಶಾಸಕರ ಬೆಂಬಲದ ಜತೆಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. ಸಾಕಷ್ಟು ಶಾಸಕರು ಬದಲಾವಣೆ ಬೇಕು ಅಂತಿದ್ದಾರೆ. ನಾನು ಕೈ ಜೋಡಿಸಿದ್ದೇನೆ ಎಂದು ಹೇಳಿದ್ದರು.
ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಕಾಂತ್ರಿ ಅಲ್ಲ ಇದು ಬದಲಾವಣೆ. ಇದು ಸಂಘಟನಕಾರ, ಹೋರಾಟಗಾರನಿಗೆ ಕೊಡುವ ಅವಕಾಶ. ಕಾಂಗ್ರೆಸ್ ಬಿದ್ದು ಬಿಜೆಪಿ ಬಂದರೆ ಕಾಂತ್ರಿ ಅನ್ನುತ್ತೇವೆ. ಇದು ಬದಲಾವಣೆ ಅಷ್ಟೇ ಇದು ಕಾಂತ್ರಿ ಅಲ್ಲ. ಈ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಎರಡೂವರೆ ವರ್ಷ ಸಿಎಂ ಆಗಬೇಕು ಎಂಬುದೇ ನಮ್ಮ ಅಭಿಲಾಷೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದರು.
ಅವಕಾಶ ದೊರೆತಿದ್ದರಿಂದ ಮುಖ್ಯಮಂತ್ರಿಯಾದೆ: ಸಿದ್ದರಾಮಯ್ಯ
ಬೆಂಗಳೂರು, ಜುಲೈ1: ಅವಕಾಶ ದೊರೆತಿದ್ದರಿಂದ ನಾನು ಮುಖ್ಯಮಂತ್ರಿಯಾದೆ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದೆವು. ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ ಬಿ.ಆರ್.ಪಾಟೀಲ್ ಅವರು ಈ ರೀತಿ ಹೇಳಿಕೆ ನೀಡಿರಬಹುದು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿ ಅಮಾನತು ಆದೇಶವನ್ನು ರದ್ದು ಮಾಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ‘ವಾರ್ತಾ ಸೌಧ’ದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ | DK Shivakumar: ಶಾಸಕರ ಜತೆ ಸುರ್ಜೇವಾಲ ಮಾತುಕತೆ; ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದ ಡಿಕೆಶಿ
ಜಾತಿಗಣತಿ ನಡೆಸಲಾಗಿದೆ ಎಂಬ ಚೀಟಿಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಜಾತಿಗಣತಿಯನ್ನು ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದರು.