Maha Kumbh Mela: ಕುಂಭಮೇಳ ಮುಕ್ತಾಯದ ನಂತರವೂ ಪ್ರಯಾಗ್‌ರಾಜ್‌ನಲ್ಲಿ ಭಕ್ತ ಜನ ಪ್ರವಾಹ
Maha Kumbh Mela: ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ತೆರೆ ಬಿದ್ದಿದೆ. ಅದಾಗ್ಯೂ ಪ್ರಯಾಗ್‌ರಾಜ್‌ಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಈ ಬಗ್ಗೆ ಕೆಲವು ಪ್ರವಾಸಿಗರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

Maha Kumbh

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ (Prayagraj)ನಲ್ಲಿ ನಡೆದ ಮಹಾಕುಂಭಮೇಳ (Maha Kumbh) ಸಂಪನ್ನಗೊಂಡಿದೆ. ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ದೇಶ ವಿದೇಶದಿಂದ ಕೋಟ್ಯಂತರ ಯಾತ್ರಿಕರು ಆಗಮಿಸಿ ಪುಣ್ಯ ಸ್ನಾನ ಮಾಡಿದ್ದಾರೆ. ನೂತನ ತಂತ್ರಜ್ಞಾನ, ಸುಧಾರಿತ ವ್ಯವಸ್ಥೆಗೆ ಸಾಕ್ಷಿಯಾಗಿದ್ದ ಕುಂಭಮೇಳಕ್ಕೆ ಶಿವರಾತ್ರಿಯಂದು ಅಂದರೆ ಫೆ. 26ಕ್ಕೆ ತೆರೆ ಬಿದ್ದಿದೆ. ಹಾಗಿದ್ದರೂ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ. ಮಹಾ ಕುಂಭಮೇಳಕ್ಕೆ ಅಧಿಕೃತವಾಗಿ ತೆರೆ ಬಿದ್ದ ಬಳಿಕವೂ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದ ವೇಳೆ ಅಳವಡಿಸಿದ್ದ ಕೆಲವು ಸೌಕರ್ಯಗಳನ್ನು ವರ್ಷವಿಡಿ ಉಳಿಸಿಕೊಳ್ಳಲು ಸಂಗಮ್ ಪ್ರದೇಶದ ಆಡಳಿತ ಮಂಡಳಿ ನಿರ್ಧರಿಸಿದೆ.
ಪ್ರಯಾಗ್‌ರಾಜ್‌ನ ಕುಂಭಮೇಳ ನಡೆಯುತ್ತಿದ್ದಾಗ ಹೆಚ್ಚಿನ ಜನ ಸಂದಣಿ ಕಂಡು ಬಂದಿತ್ತು. ಮಿತಿ ಮೀರಿದ್ದ ಜನಸಂಖ್ಯೆ ಕಂಡು ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ ಹೋಗಬೇಕು ಎಂದುಕೊಂಡಿದ್ದವರು ಈ ನಿರ್ಧಾರದಿಂದ ಹಿಂದೆ ಸರಿದಿದ್ದರು. ಹಾಗಾಗಿ ಕುಂಭಮೇಳ ಮುಕ್ತಾಯದ ನಂತರ ಪ್ರಯಾಗ್‌ರಾಜ್‌ನ ಜನ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಜನ ಸಂದಣಿ ಕಡಿಮೆ ಯಾಗಿಲ್ಲ ಎಂದು ಭೇಟಿ ನೀಡಿರುವ ಕೆಲವು ಪ್ರವಾಸಿಗರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಗಮ್ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಯಾಗ್‌ರಾಜ್‌ನ ಕರ್ನಲ್ ಗಂಜ್ ಪ್ರದೇಶದ ನಿವಾಸಿ ನೀರಜ್ ಕೇಸರಿವಾನಿ ಎಂಬವರು ಈ ಅನುಭವವನ್ನು ಹಂಚಿಕೊಂಡಿದ್ದು, ಅಗಾಧವಾದ ಜನಸಂದಣಿಯಿಂದ ನಾವು ಪ್ರಯಾಗ್‌ರಾಜ್ ಕುಂಭ ಮೇಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈಗ ಇಲ್ಲಿಗೆ ಭೇಟಿ ನೀಡಿದ್ದೇವೆ. ಆದರೂ ಇಲ್ಲಿ ಅದೇ ವಾತಾವರಣ ಇದೆ. ಅದೇ ಸೌಕರ್ಯವನ್ನು ಉಳಿದ್ದು ಖುಷಿ ತರಿಸಿದೆ. ವಿದ್ಯುತ್ ದೀಪದ ಅಲಂಕಾರ, ಕೆಲವು ಸೌಕರ್ಯ ಹಾಗೇ ಉಳಿದಿದ್ದು ಜನ ಸಾಗರವು ಹೆಚ್ಚಿದೆ. ಹಾಗಾಗಿ ಮಹಾ ಕುಂಭಮೇಳದ ಅನುಭವವೇ ಈಗಲೂ ಸಿಗುತ್ತಿದೆ ಎಂದಿದ್ದಾರೆ.
ಮಹಾ ಕುಂಭಮೇಳ ದರ್ಸನ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿ ಧನ್ಯಳಾಗಿದ್ದೇನೆ. ನಾಗಸಾಧುಗಳ ದರ್ಸನ ಮಾತ್ರ ಸಿಕ್ಕಿಲ್ಲ ಎಂಬುದೊಂದೆ ಬೇಸರ ಎಂದು ದೆಹಲಿ ಮೂಲದ ಮಹಿಳೆಯೊಬ್ಬರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ರಯಾಗ್‌ರಾಜ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗುವುದನ್ನು ಗಮನಿಸಿ ಕುಂಭಮೇಳದ ಪ್ರದೇಶದಲ್ಲಿ ಅನೇಕ ಸೌಲಭ್ಯಗಳನ್ನು ವರ್ಷಪೂರ್ತಿ ಉಳಿಸಿಕೊಳ್ಳಲಾಗುವುದು ಎಂದು ಉಸ್ತುವಾರಿ ಅಧಿಕಾರಿ ವಿಜಯ್ ಕಿರಣ್ ಆನಂದ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Kumbh Mela: ಮುಂದಿನ ಕುಂಭಮೇಳ ಎಲ್ಲಿ, ಯಾವಾಗ ನಡೆಯಲಿದೆ?
ಯಾವೆಲ್ಲ ವ್ಯವಸ್ಥೆ ಇರಲಿದೆ?
ಪ್ರಯಾಗ್‌ರಾಜ್‌ನಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ಎಲ್‌ಇಡಿ ಡಿಸೈನರ್ ದೀಪಗಳು ಅಳವಡಿಸಿದ್ದು ಅದನ್ನು ವರ್ಷಪೂರ್ತಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಇಲ್ಲಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ಕೊಠಡಿ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಇತ್ಯಾದಿ ಅಗತ್ಯ ಸೌಕರ್ಯಗಳನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.