ರಾಹುಲ್ ದ್ರಾವಿಡ್ರ 6 ಶತಕಗಳ ದಾಖಲೆಯನ್ನು ರಿಷಭ್ ಪಂತ್ ಮುರಿಯಲಿದ್ದಾರೆಂದ ಸಂಜಯ್ ಮಾಂಜ್ರೇಕರ್!
Sanjay Manjrekar on Roshabh Pant: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಶ್ಲಾಘಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್ನಲ್ಲಿ ರಾಹುಲ್ ದ್ರಾವಿಡ್ ಅವರ ಶತಕಗಳ ದಾಖಲೆಯನ್ನು ಪಂತ್ ಮುರಿಯಲಿದ್ದಾರೆಂದು ಅವರು ಭವಿಷ್ಯ ನುಡಿದಿದ್ದಾರೆ.

ರಿಷಭ್ ಪಂತ್ಗೆ ಸಂಜಯ್ ಮಾಂಜ್ರೇಕರ್ ಶ್ಲಾಘನೆ.

ಲೀಡ್ಸ್: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ (IND vs ENG) ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕದ ಸಂಜಯ್ ಮಾಂಜ್ರೇಕರ್ (Sanjay Manjrekar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ರಾಹುಲ್ ದ್ರಾವಿಡ್ ಅವರ ಅತಿ ಹೆಚ್ಚು ಶತಕಗಳ ದಾಖಲೆಯನ್ನು ರಿಷಭ್ ಪಂತ್ ಮುರಿಯಲಿದ್ದಾರೆಂದು ಅವರು ಭವಿಷ್ಯ ನುಡಿದಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಸೋಮವಾರ ದ್ವಿತೀಯ ಇನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ರಿಷಭ್ ಪಂತ್, ಶತಕವನ್ನು ಸಿಡಿಸಿದ್ದರು. ಆ ಮೂಲಕ ಇಂಗ್ಲೆಂಡ್ಗೆ 371 ರನ್ಗಳ ಗುರಿಯನ್ನು ನೀಡಲು ನೆರವು ನೀಡಿದ್ದರು.
ರಿಷಭ್ ಪಂತ್ ಅವರು ಈ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 134 ರನ್ಗಳನ್ನು ಬಾರಿಸಿದ್ದರು ಹಾಗೂ ನಂತರ ದ್ವಿತೀರ ಇನಿಂಗ್ಸ್ನಲ್ಲಿ 118 ರನ್ಗಳನ್ನು ಸಿಡಿಸಿದ್ದರು. ಆ ಮೂಲಕ ಇಂಗ್ಲೆಂಡ್ ನೆಲದಲ್ಲಿ ನಾಲ್ಕನೇ ಟೆಸ್ಟ್ ಶತಕವನ್ನು ಬಾರಿಸಿದ್ದರು. ಆ ಮೂಲಕ ಆಂಗ್ಲರ ನಾಡಿನಲ್ಲಿ ಅತಿ ಹೆಚ್ಚು ಟೆಸ್ಟ್ ಶತಗಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ರಾಹುಲ್ ದ್ರಾವಿಡ್ ಅವರು 6 ಶತಕಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
IND vs ENG: ರಾಹುಲ್ ದ್ರಾವಿಡ್ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್
ರಿಷಭ್ ಪಂತ್ಗೆ ಮಾಂಜ್ರೇಕರ್ ಮೆಚ್ಚುಗೆ
ಮೊದಲನೇ ಟೆಸ್ಟ್ ಪಂದ್ಯದ ನಾಲ್ಲನೇ ದಿನದಾಟದ ಅಂತ್ಯಕ್ಕೆ ಮ್ಯಾಚ್ ಸೆಂಟರ್ ಲೈವ್ನಲ್ಲಿ ಮಾತನಾಡಿದ ಸಂಜಯ್ ಮಾಂಜ್ರೇಕರ್, ರಿಷಭ್ ಪಂತ್ ಅವರನ್ನು ಶ್ಲಾಘಿಸಿದರು. "ರಿಷಭ್ ಪಂತ್ ಅವರ ಎಲ್ಲಾ ಸಾಧನೆಗಳನ್ನು ನೋಡಿದಾಗ, ಮೊದಲು ಮನಸ್ಸಿಗೆ ಬರುವ ಅಂಶವೆಂದರೆ ಅವರನ್ನು ಒಬ್ಬ ಬ್ಯಾಟ್ಸ್ಮನ್ ಎಂದು ಭಾವಿಸುವುದು ಮತ್ತು ಅದು ಅರ್ಥವಾಗುವಂತಹದ್ದೇ. ಏಕೆಂದರೆ ನೀವು ಇಂಗ್ಲೆಂಡ್ನಲ್ಲಿ ಸ್ಪೋಟಕ ಬ್ಯಾಟಿಂಗ್, ಅವಳಿ ಶತಕಗಳನ್ನು ಗಳಿಸುವುದರ ಬಗ್ಗೆ ಮಾತನಾಡುವಾಗ, ಅವರನ್ನು ದಿಲೀಪ್ ವೆಂಗ್ಸರ್ಕಾರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದಂತಕಥೆಗಳೊಂದಿಗೆ ಹೋಲಿಸಲಾಗುತ್ತಿದೆ," ಎಂದು ಹೇಳಿದ್ದಾರೆ.
"ಆದರೆ, ಇವರು ಕೂಡ ವಿಕೆಟ್ ಕೀಪರ್ ಎಂಬುದು ಇಲ್ಲಿನ ಗಮನಾರ್ಹ ಸಂಗತಿಯಾಗಿದೆ. ಈ ಕಾರಣದಿಂದಲೇ ಇದು ನಂಬಲಾಗದಂತಹ ಸಂಗತಿಯಾಗಿದೆ. ಕುಮಾರ ಸಂಗಕ್ಕಾರ ಅವರಂಥ ಆಟಗಾರರು ಕೂಡ ಅಸಾಧಾರಣ ದಾಖಲೆಯನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ. ಅವರು ರಿಷಭ್ ಪಂತ್ರಂಥ ವಿಕೆಟ್ ಕೀಪರ್ ಆಗಿರಲಿಲ್ಲ," ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.
IND vs ENG: ʻಪಲ್ಟಿ ಹೊಡೆದು ಸಂಭ್ರಮಿಸಿʼ-ರಿಷಭ್ ಪಂತ್ಗೆ ಸುನೀಲ್ ಗವಾಸ್ಕರ್ ಆಗ್ರಹ! ವಿಡಿಯೊ
ದ್ರಾವಿಡ್ ದಾಖಲೆ ಮುರಿಯಲು ಪಂತ್ಗೆ ಅವಕಾಶವಿದೆ
"ನೀವು ಟೆಸ್ಟ್ ಅಂಕಿ ಅಂಶಗಳನ್ನು ನೋಡಿದಾಗ, ಇಂಗ್ಲೆಂಡ್ನಲ್ಲಿ 6 ಶತಕಗಳ ಮೂಲಕ ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಆಗಿದ್ದಾರೆ. ಇದೀಗ ತಕ್ಷಣ ನೀವು ಈ ಪಟ್ಟಿಯಲ್ಲಿ ರಿಷಭ್ ಪಂತ್ ಅವರ ಹೆಸರನ್ನು ನೋಡಲಾಗಿದೆ. ಈ ಕಥೆಯಲ್ಲಿ ಇಬ್ಬರು ರಾಹುಲ್ಗಳು ಇದ್ದಾರೆ. ನೀವು ಕೆಎಲ್ ರಾಹುಲ್ ಅವರನ್ನು ಪಡೆದಿದ್ದೀರಿ ಹಾಗೂ ರಿಷಭ್ ಪಂತ್ ಅವರನ್ನು ಕೂಡ ಹೊಂದಿದ್ದೀರಿ. ಈ ಸರಣಿ ಮುಗಿಯುವ ಹೊತ್ತಿಗೆ ರಿಷಭ್ ಪಂತ್ ಅವರು, ರಾಹುಲ್ ದ್ರಾವಿಡ್ರ (6 ಶತಕ) ದಾಖಲೆಯನ್ನು ಮುರಿಯಬಹುದು. ಈ ಟೆಸ್ಟ್ ಸರಣಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳಿವೆ. ಅದರಂತೆ ಇನ್ನು ಪಂತ್ಗೆ 8 ಇನಿಂಗ್ಸ್ಗಳು ಬಾಕಿ ಇವೆ. ಅವರು ಈಗಾಗಲೇ ಅದ್ಭುತವಾಗಿ ಆರಂಭಿಸಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.