ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs PBKS: ಮುಂಬೈ ಇಂಡಿಯನ್ಸ್‌ ವಿರುದ್ದ ಗೆದ್ದು ಅಗ್ರ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್‌!

MI vs PBKS Match Highlights: ಪ್ರಿಯಾಂಶ್‌ ಆರ್ಯ ಹಾಗೂ ಜಾಶ್‌ ಇಂಗ್ಲಿಸ್‌ ಅವರ ಅರ್ಧಶತಕಗಳ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ, ಎದುರಾಳಿ ಮುಂಬೈ ಇಂಡಿಯನ್ಸ್‌ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

MI vs PBKS: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್‌ ಕೊಟ್ಟ ಪಂಜಾಬ್‌ ಕಿಂಗ್ಸ್‌!

ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ 7 ವಿಕೆಟ್‌ ಜಯ.

Profile Ramesh Kote May 26, 2025 11:34 PM

ಜೈಪುರ: ಪ್ರಿಯಾಂಶ್‌ ಆರ್ಯ (62) ಹಾಗೂ ಜಾಶ್‌ ಇಂಗ್ಲಿಸ್‌ (73) ಅವರ ಅರ್ಧಶತಕಗಳ ಬಲದಿಂದ ಪಂಜಾಬ್‌ ಕಿಂಗ್ಸ್‌ (PBKS) ತಂಡ, ಎದುರಾಳಿ ಮುಂಬೈ ಇಂಡಿಯನ್ಸ್‌ (MI) ವಿರುದ್ದ 7 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇನ್ನು ಸೋಲು ಅನುಭವಿಸಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ ನಾಲ್ಕನೇ ಸ್ಥಾನದಲ್ಲಿಯೇ ಇದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಮೇ 29 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಥವಾ ಗುಜರಾತ್‌ ಟೈಟನ್ಸ್‌ ತಂಡಗಳಲ್ಲಿ ಒಂದು ತಂಡದ ವಿರುದ್ದ ಮೊದಲನೇ ಕ್ವಾಲಿಫೈಯರ್‌ ಆಡಲಿದೆ.

ಸೋಮವಾರ ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 185 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ ತಂಡ, ಪ್ರಿಯಾಂಶ್‌ ಆರ್ಯ ಹಾಗೂ ಜಾಶ್‌ ಇಂಗ್ಲಿಸ್‌ ಅವರ ಅರ್ಧಶತಕಗಳ ಬಲದಿಂದ 18.3 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿ 7 ವಿಕೆಟ್‌ಗಳ ಗೆಲುವು ಪಡೆಯಿತು. ಸ್ಪರ್ಧಾತ್ಮಕ ಗುರಿ ನೀಡಿದ್ದರ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ ಬೌಲರ್‌ಗಳು ವೈಫಲ್ಯ ಅನುಭವಿಸಿದರು.

IPL 2025: ಫೈನಲ್‌ ತಲುಪಬಲ್ಲ ಎರಡು ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ!

ಪ್ರಿಯಾಂಶ್‌ ಆರ್ಯ-ಜಾಶ್‌ ಇಂಗ್ಲಿಸ್‌ ಜುಗಲ್‌ಬಂದಿ

ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ ತಂಡ, 34 ರನ್‌ ಇರುವಾಗಲೇ ಒಂದು ವಿಕೆಟ್‌ ಕಳೆದುಕೊಂಡಿತ್ತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಪ್ರಿಯಾಂಶ್‌ ಆರ್ಯ ಹಾಗೂ ಜಾಶ್‌ ಇಂಗ್ಲಿಸ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ಪಂಜಾಬ್‌ ಗೆಲುವಿನಲ್ಲಿ ಮಹತ್ತರ ಕೊಡುಗೆಯನ್ನು ನೀಡಿತು.



ಜಾಶ್‌ ಇಂಗ್ಲಿಸ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜಾಶ್‌ ಇಂಗ್ಲಿಸ್‌ ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 42 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 73 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಪಂಜಾಬ್‌ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ಪ್ರಿಯಾಂಶ್‌ ಆರ್ಯ, 35 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 62 ರನ್‌ಗಳನ್ನು ಕಲೆ ಹಾಕಿದರು.



184 ರನ್‌ ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡ, ಸೂರ್ಯಕುಮಾರ್‌ ಯಾದವ್‌ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ 185 ರನ್‌ಗಳನ್ನು ಗುರಿ ನೀಡಿತ್ತು.



ಸೂರ್ಯಕುಮಾರ್‌ ಯಾದವ್‌ ಅರ್ಧಶತಕ

ಮುಂಬೈ ಇಂಡಿಯನ್ಸ್‌ ಪರ ರಯಾನ್‌ ರಿಕೆಲ್ಟನ್‌ (27), ರೋಹಿತ್‌ ಶರ್ಮಾ (24), ವಿಲ್‌ ಜ್ಯಾಕ್ಸ್‌ (17), ಹಾರ್ದಿಕ್‌ ಪಾಂಡ್ಯ (26) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲವಾದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸೂರ್ಯಕುಮಾರ್‌ ಯಾದವ್‌, ಕೇವಲ 39 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 57 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಮುಂಬೈ ತಂಡ 180ರ ಗಡಿ ದಾಟಲು ನೆರವು ನೀಡಿದ್ದರು. ಪಂಜಾಬ್‌ ಕಿಂಗ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಅರ್ಷದೀಪ್‌ ಸಿಂಗ್‌, ಮಾರ್ಕೊ ಯೆನ್ಸನ್‌ ಹಾಗೂ ವೈಶಾಕ್‌ ವಿಜಯ್‌ಕುಮಾರ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.